ಇಲ್ಲಿ ಪ್ರಕಟವಾಗುವ ‘ಜಾನಪದ ಗೀತೆಗಳು’ ಶತಮಾನಗಳಿಂದ ಗ್ರಾಮೀಣ ಜನರ ಬಾಯಿಯಲ್ಲಿ ಹುಟ್ಟಿ, ಹರಡಿ ಬೆಳೆದವುಗಳು ಆಗಿವೆ. ಬಹಳಷ್ಟು ಜಾನಪದ ಗೀತೆಗಳನ್ನು ರಚನೆ ಮಾಡಿದವರು ಯಾರು ಎಂಬುದೇ ನಿಗೂಢ. ಈ ಗೀತೆಗಳಲ್ಲಿರುವ ಸ್ವಾರಸ್ಯ, ಗ್ರಾಮ್ಯ ಭಾಷೆ, ಜೀವನ ಮೊದಲಾದುವುಗಳ ಅರಿವು ಇಂದಿನ ಜನಾಂಗಕ್ಕೂ ಆಗಲಿ ಎನ್ನುವ ಉದ್ದೇಶದಿಂದ ವಿವಿಧ ಮೂಲಗಳಿಂದ ಸಂಗ್ರಹಿಸಿ ಪ್ರಕಟ ಮಾಡುತ್ತಿದ್ದೇವೆ. ಈ ವಾರ ‘ಹರಿಗೋಲ ತೆಪ್ಪ’ ಮತ್ತು ದೇವರು ತರುವುದು ಎನ್ನುವ ಎರಡು ಪುಟ್ಟ ಜಾನಪದ ಗೀತೆಗಳು.
ಹರಿಗೋಲ ತೆಪ್ಪ
ಹಾಕಯ್ಯ ಹರಿಗೋಲ ನೂಕಯ್ಯ ತೆಪ್ಪ
ಜೋಕೇಲಿ ನಮ್ಮ ಕಳುಹಯ್ಯ
ಕನ್ನಂಬಾಡಿ ಗೋಪುರವ ನೋಡಿ ಬರುತೇವೆ
ಜೋಕೇಲಿ ನಮ್ಮ ಕಳುಹಯ್ಯ
ಕನ್ನಂಬಾಡಿಯೊಳಗೆ ಏನೇನೋ ಐಭೋಗ
ಯಾರು ಹೊಂಟಾವರೆ ಸುಳಿಹಂಗೆ । ಕಾಳವ್ವ
ಒಂಟವಳೆ ತಾನೂ ನವಿಲಂಗೆ
ನರಸೀಪುರದಿಂದ ತರಸ್ಯಾರೆ ಬಣ್ಣವ
ಅರಸೀ ಕಾಳಮ್ಮನ ಗುಡಿಯಲ್ಲಿ । ಬಾಗಿಲ್ ಮುಂದೆ
ನಿಲಿಸ್ಯಾರೆ ನೀಲಿ ಕುದುರೆಯ
ಪಟ್ಟಣಕ್ಕೆ ಪಡಸಾಲೆ ಮೈಸೂರ್ಗೆ ಕೈಸಾಲೆ
ಕನ್ನಂಬಾಡೀಲಿ ಕಡು ಚೆಲುವೆ । ಕಾಳವ್ವ
ದೂರದಿಂದ ಕೈಯ ಮುಗಿದೇವು ॥
***
ದೇವರು ತರುವುದು
ಜಯಮಂಗಳಾ ನಿತ್ಯ ಶುಭ ಮಂಗಳಾ
ಕಲ್ಯಾಣಿ ಸುತ್ತ ಮಲ್ಲಿ ಜಾಜಿಯ ಗಿಡ
ಅಂಬಾಡಿ ಮಾವು ಕಿರುನೆಲ್ಲಿ । ತಾಳೋಳ್ಗೆ
ಅಂದ್ಗಾರ ಚೆಲ್ವಯ್ನ ಕೈಧಾರೆ
ಹಳ್ಳದ ಅತ್ಯಿಮರ, ಬೆಲ್ಲ ಬೇವುನಮರ
ಬಿಲ್ಲಂಬೋ ಸಾಗರ ಬಿಳಿಯ ಬೆತ್ತ । ಹಿಡ್ಕಂಡು
ಪಲ್ಲೇಸುತಾಳೆ ಕಲ್ಯಾಣಿ
ಅತ್ತಿಯ ಮರೈ ಸುತ್ತು ಬಾಣವ ಬಿಟ್ಟು
ಎತ್ತಲಾಗ್ ಹೋಗಿದ್ದೆ ಚೆಲ್ವಯ್ಯ । ಮೇಲುಕೋಟೆ
ಕಲ್ಯಾಣಿ ಒಳಗೆ ಐಭೋಗ
ನಲ್ಲಿಯ ಮರಕೆ ಬಿಲ್ಲು ಬಾಣವ ಬಿಟ್ಟು
ಎಲ್ಲಿಗೆ ಹೋಗಿದ್ದೆ ಚೆಲುವಯ್ಯ । ಮೇಲುಕೋಟೆ
ಕಲ್ಯಾಣಿ ಒಳಗೆ ಐಭೋಗ
ಜಯಮಂಗಳಾ ನಿತ್ಯ ಶುಭ ಮಂಗಳಾ
(ಜಾನಪದ ಗೀತೆಗಳು ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!