ಬೆಳಗಿನ ಜಾವಕ್ಕೆ

ಬೆಳಗಿನ ಜಾವಕ್ಕೆ

ಮೂಡಲ ಕೆಂಪಾದಾಗ

ಸ್ವಾಮಿ ಮೂಡಿ ಬರುವಾಗ

ಆಡ್ಯಾಡಿ ಅಳುತಾನ ಜೋ ಜೋ ॥


ಕಂಚೀನ ಬಟ್ಟಲಾಗೆ 

ಮಿಂಚೆಣ್ಣೆ ಬಿಟ್ಟಗೊಂಡು

ತೀಡಿ ತೀಡಿ ಹಚ್ಚುವಾಗ

ಆಡ್ಯಾಡಿ ಅಳುತಾನ ಜೋ ಜೋ ॥


ಬೆಳ್ಳಿಯ ಹಂಡೇಗೆ

ಬಂಗಾರ ಗಿಂಡಿ ಹಾಕಿ

ತುಂಬಿ ತುಂಬಿ ಹೊಯ್ಯುವಾಗ

ನಿಮಿ ನಿಮಿರಿ ಅಳುತಾನ ಜೋ ಜೋ ॥


ಕುಂಚಿಗೆ ಕುಲಾಯಿ

ಗೊಂಚಲ ಬಿಡಿಮುತ್ತು

ಚಂದಕ್ಕೆ ಕಟ್ಟುವಾಗ

ಗುಂಜಿ ಗುಂಜಿ ಅಳುತಾನ ಜೋ ಜೋ ॥


ಸಕ್ಕರೆ ಪಾಯಸ

ಬಟ್ಟಲಾಗಿಟ್ಟುಕೊಂಡು

ತುತ್ತುಮಾಡಿ ಕೊಡುವಾಗ

ಬಿಟ್ಟು ಬಿಟ್ಟು ಅಳುತಾನ ಜೋ ಜೋ ॥


ಬಂಗಾರ್ದ ತೊಟ್ಲೀಗೆ

ಬೆಳ್ಳಿ ಜೋಡೆಳೆ ಹಗ್ಗ 

ಬೀಸಿ ಬೀಸಿ ತೂಗುವಾಗ

ಬಿಕ್ಕಿ ಬಿಕ್ಕಿ ಅಳುತಾನ ಜೋ ಜೋ ॥


ಜೋಜೋ ಜೋಜೋ ಜೋಜೋ

ಜೋಜೋ ಜೋಜೋ ಜೋಜೋ ॥

(‘ಜಾನಪದ ಗೀತೆಗಳು’ ಸಂಗ್ರಹಿತ)