ನಮ್ಮ ದೇಶದಲ್ಲಿನ ಜಾನುವಾರುಗಳ ಹಾಲಿನ ಇಳುವರಿಯ ಮೂಲ ಸಾಮರ್ಥ್ಯದ ಶೇಕಡ ೪೦ರಷ್ಟು ಮಾತ್ರ ಉತ್ಪಾದನೆ ಬರುತ್ತಿದೆ ಎಂಬುದು ಆಶ್ಚರ್ಯಕರವಾದರೂ ಸತ್ಯ! ಇದಕ್ಕೆ ಅಸಮತೋಲಿನ ಮತ್ತು ಅಸಮರ್ಪಕ ಆಹಾರ ನೀಡುವಿಕೆಯೇ ಮುಖ್ಯ ಕಾರಣ.

ಜಾನುವಾರುಗಳ ಸಾಂಪ್ರದಾಯಿಕ ಆಹಾರದಲ್ಲಿ ಭತ್ತದ ಒಣಹುಲ್ಲು, ರಾಗಿ ಹುಲ್ಲು, ಜೋಳದ ದಂಟು (ಕಣಿಕೆ), ಕರಡ ಇತ್ಯಾದಿಗಳು ಪ್ರಮುಖವಾಗಿವೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಅಲ್ಲಲ್ಲಿ ಸಿಗುವ ಯಾವುದೇ ನಿರ್ದಿಷ್ಟ ಜಾತಿಗೆ ಸೇರದ ಹಸಿರು ಹುಲ್ಲು, ಕಾಡುಗಳಲ್ಲಿ ಬೆಳೆಯುವ ವಿವಿಧ ಜಾತಿಯ ಹುಲ್ಲುಗಳು, ಕಬ್ಬಿನ ರವದಿ, ದ್ವಿದಳ ಧಾನ್ಯದ ಹೊಟ್ಟು, ಸೆಣಬು, ರೇಷ್ಮೆ ಸೊಪ್ಪುಗಳನ್ನೂ ಸಹ ಕೆಲವು ಭಾಗಗಳಲ್ಲಿ ಆಹಾರವಾಗಿ ಉಪಯೋಗಿಸುವುದನ್ನು ಕಾಣುತ್ತೇವೆ. ಬೆಳೆಯುವ ಹೈಬ್ರಿಡ್ ಹುಲ್ಲುಗಳಾದ ಗಿನಿ ಹುಲ್ಲು, ಹೈಬ್ರಿಡ್ ನೇಪಿಯರ್, ಮೇವಿನ ಅಲಸಂದೆ ಮುಂತಾದವುಗಳನ್ನು ಬೆಳೆಯುವುದು ಸಹಾ ಇತ್ತೀಚೆಗೆ ಕಂಡುಬರುತ್ತಿದೆ. ಆದರೆ ಇಂತಹ ಹೈನುಗಾರರ ಪ್ರಮಾಣ ಶೇ. ೫ರಷ್ಟು ಮಾತ್ರ.

ಇನ್ನು ಪಶು ಆಹಾರ ಅಥವಾ ಹಿಂಡಿ ಮಿಶ್ರಣದ ವಿಷಯಕ್ಕೆ ಬಂದರೆ, ಪಶು ಆಹಾರದಲ್ಲಿ ಮುಖ್ಯವಾಗಿ ಮೆಕ್ಕೆ ಜೋಳದ ನುಚ್ಚು, ಅಕ್ಕಿ ತೌಡು, ಗೋದಿ ಬೂಸಾ, ಹತ್ತಿ ಹಿಂಡಿ, ಶೇಂಗಾ ಹಿಂಡಿ ಮಿಶ್ರಣಗಳನ್ನು ಉಪಯೋಗಿಸುವುದು ಸಾಮಾನ್ಯ. ಆದರೆ ಇದರಲ್ಲೂ ಸಮತೋಲನ ಆಹಾರದ ಕಲ್ಪನೆ ಕಂಡು ಬರದಿರುವುದು ವಿಷಾದಕರ. ಇನ್ನೂ ಕೆಲವರು ದ್ವಿದಳ ಧಾನ್ಯದ ನುಚ್ಚು, ಏಕದಳ ಧಾನ್ಯದ ನುಚ್ಚು ಇತ್ಯಾದಿಗಳನ್ನೂ ಉಯೋಗಿಸುತ್ತಾರೆ. ಮೂಕ ಪ್ರಾಣಿಗಳು ವಿಧಿಯಿಲ್ಲದೇ ಯಜಮಾನ ನೀಡಿದ ಆಹಾರಕ್ಕೆ ಹೊಂದಿಕೊಳ್ಳುತ್ತವೆ. `ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ” ಸರಿಯಾದೀತೇ? ತಜ್ಞರು ನಿಗದಿಪಡಿಸಿದ ಪ್ರಮಾಣದಲ್ಲಿರುವ ನೀರು, ಕಾಬೋಹೈಡ್ರೇಟ್, ಪ್ರೊಟೀನ್, ಕೊಬ್ಬು, ಲವಣಾಂಶಗಳೂ ಹಾಗೂ ಜೀವಸತ್ವಗಳನ್ನು ಹೊಂದಿದ ಸಮತೋಲನ ಪಶು ಆಹಾರದ ಕಲ್ಪನೆಗೆ ಪೂರಕವಾಗುವ ಮಾಹಿತಿಗಳನ್ನು ತಿಳಿದುಕೊಳ್ಳೋಣ.

DSCN4803.JPG

೧. ನೀರು : ನೀರು ಎಲ್ಲಾ ತರಹದ ಜೀವ ಕ್ರಿಯೆಗಳಿಗೆ ಅತಿ ಅವಶ್ಯಕ. ಪಚನಕ್ರಿಯೆ, ರಕ್ತ ಪರಿಚಲನೆ, ಹಾಲು ಉತ್ಪಾದನೆ, ದೇಹದ ತಾಪಮಾನ ನಿಯಂತ್ರಣ, ಒಟ್ಟಾರೆ ದೇಹದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಮೂಲವೇ ನೀರು.

ರಾಸುಗಳಿಗೆ ದಿನಕ್ಕೆ ೩-೪ ಬಾರಿ ಶುದ್ಧ ನೀರು ಕುಡಿಸುವುದು ತೀರಾ ಅವಶ್ಯಕವಾಗಿದೆ. ಸುಮಾರು ೪೦೦ ಕೆ.ಜಿ. ದೇಹ ತೂಕದ ರಾಸುಗಳಿಗೆ ದಿನಕ್ಕೆ ೭೫-೧೦೦ ಲೀಟರು ಕುಡಿಯುವ ನೀರು ಬೇಕು. ಹಾಲು ಕೊಡುವ, ಒಣ ಮೇವು ತಿನ್ನುವ ರಾಸುಗಳಿಗೆ ಹಾಗೂ ಬೇಸಿಗೆ ಕಾಲದಲ್ಲಿ ಇದರ ಅವಶ್ಯಕತೆ ಇನ್ನೂ ಹೆಚ್ಚು. ಸೇವಿಸಿದ ಆಹಾರದ ೩ ಪಟ್ಟು ನೀರು ಅವಶ್ಯಕ. ಒಂದು ಲೀಟರ್ ಹಾಲು ಉತ್ಪಾದನೆಯಾಗಲು ರಾಸುವೊಂದು ೧೦ ಲೀಟರ್ ನೀರು ಕುಡಿಯಬೇಕಾಗುತ್ತದೆ. ಆದ್ದರಿಂದ ಹೆಚ್ಚು ನೀರು ಕುಡಿಸಿ, ಹೆಚ್ಚು ಹಾಲು ಉತ್ಪಾದಿಸಬಹುದು.

೨. ಕಾರ್ಬೋಹೈಡ್ರೇಟ್ಸ್ (ಶರ್ಕರಪಿಷ್ಠಗಳು) : ದಿನನಿತ್ಯದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ದೇಹದ ತಾಪಮಾನದ ನಿಯಂತ್ರಣ, ದೇಹದ ಬೆಳವಣಿಗೆ, ಹಾಲು ಉತ್ಪಾದನೆಯಂತಹ ಕ್ರಿಯೆಗಳಿಗೆ ಶರ್ಕರಪಿಷ್ಠಗಳು ಬೇಕು. ಇದರ ಕೊರತೆಯುಂಟಾದಾಗ ಈ ಎಲ್ಲಾ ಕ್ರಿಯೆಗಳಲ್ಲಿ ಏರುಪೇರುಗಳಾಗಿ ಪ್ರೊಟೀನ್ ಹಾಗೂ ಕೊಬ್ಬಿನಿಂದ ಶಕ್ತಿ ಬಳಕೆಯಾಗಿ ದೇಹ ಕ್ಷೀಣಿಸುತ್ತದೆ. ಸಸ್ಯಮೂಲದ ಎಲ್ಲ ಮೇವು ಹಾಗೂ ಪದಾರ್ಥಗಳು ಮುಸುಕಿನ ಜೋಳ, ಜೋಳ, ಆಗಿ, ತೌಡು, ಅಕ್ಕಿನುಚ್ಚು ಇತ್ಯಾದಿಗಳಲ್ಲಿ ಶರ್ಕರಪಿಷ್ಠಗಳು ಹೇರಳವಾಗಿರುತ್ತವೆ.

೩. ಸಸಾರಜನಕ (ಪ್ರೊಟೀನ್) : ದೇಹದ ಪ್ರತಿಯೊಂದು ಜೀವಕೋಶಕ್ಕೂ ಇದರ ಅವಶ್ಯಕತೆ ಇದೆ. ಮಾಂಸಖಂಡಗಳ ಬೆಳವಣಿಗೆ, ಜೀವಕ್ರಿಯೆ, ಉತ್ಪಾದನೆಗೂ ಪ್ರೊಟೀನ್ ಬೇಕು. ಇದರ ಕೊರತೆಯಿಂದಾಗಿ ಜೀವಕ್ರಿಯೆ ಕುಂಠಿತಗೊಂಡು ರೋಗಕ್ಕೆ ತುತ್ತಾಗುತ್ತದೆ. ಎಣ್ಣೆಕಾಳು, ಹಿಂಡಿ, ದ್ವಿದಳ ಧಾನ್ಯಗಳು ತೌಡು, ಮೀನಿನ ಪುಡಿ ಇತ್ಯಾದಿಗಳಲ್ಲಿ ಪ್ರೊಟೀನ್ ಅಂಶ ಅಧಿಕವಾಗಿರುತ್ತದೆ.

೪. ಕೊಬ್ಬು (ಫ್ಯಾಟ್) : ಇದು ಅಧಿಕ ಪ್ರಮಾಣದಲ್ಲಿ ಶಕ್ತಿ ಹೊಂದಿರುವ ಆಹಾರ ಘಟಕವಾಗಿದ್ದು ದೇಹದಲ್ಲಿ ಶೇಖರಣೆಯಾಗಿ ದೇಹಕ್ಕೆ ಅವಶ್ಯಕತೆ ಇದ್ದಾಗ ಉಯೋಗಿಸಲ್ಪಡುತ್ತದೆ. ಶರ್ಕರಪಿಷ್ಠಗಳಿಗಿಂತ ಎರಡೂವರೆ ಪಟ್ಟು ಹೆಚ್ಚಿನ ಶಕ್ತಿ ಒದಗಿಸುತ್ತದೆ. ಆಹಾರದಲ್ಲಿ ಕೊಬ್ಬಿನ ಕೊರತೆಯಾದಾಗ ಬಡಕಲು ದೇಹ, ಕುಗ್ಗಿದ ಬೆಳವಣಿಗೆ, ಚರ್ಮರೋಗ ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ. ಹಿಂಡಿ, ದ್ವಿದಳ ಧಾನ್ಯಗಳು, ತೌಡು, ಮೀನಿನ ಪುಡಿ ಇತ್ಯಾದಿಗಳನ್ನು ಆಹಾರದಲ್ಲಿ ನೀಡುವುದರಿಂದ ಈ ಕೊರತೆ ನಿವಾರಿಸಬಹುದು.

೫. ಲವಣಾಂಶಗಳು (ಖನಿಜಾಂಶಗಳು) : ಪಚನಕ್ರಿಯೆ, ಸೇವಿಸಿದ ಆಹಾರ ರಕ್ತಕ್ಕೆ ಸೇರಲು, ಬೆಳವಣಿಗೆಗೆ, ಉತ್ಪಾದನೆ ಹಾಗೂ ಸಂತಾನೋತ್ಪತ್ತಿ ಕ್ರಿಯೆಗಳಿಗೆ ಇದರ ಅವಶ್ಯಕತೆ ಇದೆ. ಕ್ಯಾಲ್ಸಿಯಂ, ರಂಜಕ, ಮ್ಯಾಗ್ನೇಸಿಯಂ, ತಾಮ್ರ, ಜಿಂಕ್, ಕಬ್ಬಿಣ, ಕೊಬಾಲ್ಟ್ ಇತ್ಯಾದಿ ಲವಣಗಳು ಅವಶ್ಯವಾಗಿ ಬೇಕು. ಇವುಗಳ ಕೊರತೆಯಿಂದ ಈ ಎಲ್ಲಾ ಕ್ರಿಯೆಗಳು ಕುಂಠಿತಗೊಳ್ಳುತ್ತವೆ. ಹಸಿರು ಮೇವು, ಎಣ್ಣೆಕಾಳು ಹಿಂಡಿಯಲ್ಲಿ ಲವಣಾಂಶಗಳು ಹೇರಳವಾಗಿವೆ.

೬. ಅನ್ನಾಂಗ (ವಿಟಾಮಿನ್‌ಗಳು) : ಅನ್ನಾಂಗ ಎ, ಡಿ, ಇ, ಕೆ, ಸಿ ಹಾಗೂ ಬಿ ಕಾಂಪ್ಲೆಕ್ಸ್ ಸಮೂಹದ ಬಿ೧, ಬಿ೬ ಹಾಗೂ ಬಿ೧೨ ಪ್ರಮುಖವಾಗಿವೆ. ಸಾಮಾನ್ಯವಾಗಿ ವಿಟಾಮಿನ್ ಎ ಹಾಗೂ ಡಿ೩ ಕೊರತೆ ಕಂಡುಬರುತ್ತದೆ. ಕುರುಡುತನ, ಕುಂಠಿತ ಬೆಳವಣಿಗೆ, ಮೂಳೆಗೆ ಸಂಬಂಧಿಸಿದ ಹಾಗೂ ಸಂತಾನೋತ್ಪತ್ತಿಯ ತೊಂದರೆಗಳನ್ನು ಕಾಣಬಹುದು. ಅನ್ನಾಂಗ ಸಿ, ಕೆ ಹಾಗೂ ಬಿ-ಕಾಂಪ್ಲೆಕ್ಸ್ ಗಳು ರಾಸುಗಳ ಹೊಟ್ಟೆಯಲ್ಲಿರುವ ಸೂಕ್ಷ್ಮಾಣು ಜೀವಿಗಳಿಂದ ಉತ್ತತ್ತಿಯಾಗುತ್ತದೆ. ಆದರೆ ಅನ್ನಾಂಗ ಎ, ಡಿ ಹಾಗೂ ಇ ಗಳನ್ನು ಆಹಾರದಲ್ಲಿ ಸೇರಿಸಬೇಕು. ಹಸಿರು ಮೇವು ಹಾಗೂ ಸಮತೋಲಿತ ಆಹಾರದಲ್ಲಿ ಇವು ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

DSCN8839.JPG

ಹೈನುಗಾರಿಕೆಯ ಸದೃಢ ಹಾಗೂ ನಿರಂತರ ಪ್ರಗತಿ ಹೊಂದಿ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ರಾಸುಗಳಿಗೆ ನೀಡುವ ಆಹಾರ ಸಮರ್ಪಕವಾಗಿರಬೇಕು. ಹೈನು ದನಗಳಿಗೆ ನೀಡುವ ಆಹಾರಕ್ಕೆ ಹಾಲಿನ ಒಟ್ಟೂ ಉತ್ಪಾದನಾ ವೆಚ್ಚದ ಶೇ. ೭೦ರಷ್ಟು ಖರ್ಚಾಗುತ್ತದೆ. ಈ ವೆಚ್ಚವನ್ನು ಕಡಿಮೆ ಮಾಡಿದಷ್ಟೂ ಆದಾಯ ಅಧಿಕವಾಗುತ್ತದೆ. ಹೈನುಗಾರಿಕೆ ಆರಂಭಿಸುವ ಮುನ್ನ ರಾಸುಗಳಿಗೆ ಹಸಿರು ಮೇವು ಬೆಳೆಯುವುದು ಅತಿ ಮುಖ್ಯ. ಏಕದಳ ಮೇವುಗಳು ಅಧಿಕ ಪ್ರಮಾಣದ ಕಾರ್ಬೋಹೈಡ್ರೇಟುಗಳ ಮೂಲವಾದರೆ ದ್ವಿದಳ ಮೇವು ಅಧಿಕ ಸಸಾರಜನಕ ಹಾಗೂ ಕೊಬ್ಬು ಒದಗಿಸುತ್ತದೆ.

ಆದರೆ ಹೈನುಗಾರಿಕೆಯಲ್ಲಿ ತೊಡಗಿದವರಲ್ಲಿ ಬಹುಪಾಲು ಜನರು ಸಣ್ಣ ಅಥವಾ ಅತೀ ಸಣ್ಣ ರೈತರು ಮತ್ತು ಭೂರಹಿತ ಕೃಷಿ ಕಾರ್ಮಿಕರು. ಇವರೆಲ್ಲ ಹಸಿರು ಮೇವು ಬೆಳೆಯುವುದು ಕಷ್ಟ. ಈ ಸಮುದಾಯಕ್ಕೆ ಏನಾದರೂ ಪರ್ಯಾಯಗಳಿಲ್ಲವೇ? ಎನ್ನುವುದು ಸಾಮಾನ್ಯರ ಪ್ರಶ್ನೆ. ಇವರು ನಿರಾಶರಾಗಬೇಕಿಲ್ಲ. ಮನಸ್ಸಿದ್ದರೆ ಮಾರ್ಗ ಖಂಡಿತಾ ಇದೆ.

ಮೇವಿನ ಮರಗಳನ್ನು ಬೆಳೆಸುವುದರ ಮೂಲಕ, ಇತ್ತೀಚಿನ ದಿನಗಳಲ್ಲಿ ಗಮನ ಸೆಳೆದ ಅಜೊಲ್ಲಾ ಉತ್ಪಾದನೆ, ಸರಳ ನವೀನ ತಂತ್ರಜ್ಞಾನದಿಂದ ಹೊರಹೊಮ್ಮಿದ ಒಣಮೇವಿನ ಪೌಷ್ಟೀಕರಣ ಇತ್ಯಾದಿ ಕ್ರಮಗಳಿಂದ ರಾಸುಗಳ ಹೊಟ್ಟೆ ತುಂಬಿಸಿ ಅಧಿಕ ಉತ್ಪಾದನೆ ಪಡೆಯಬಹುದು. ಪಶು ಆಹಾರದಲ್ಲಿ ನಿರ್ದಿಷ್ಟ ಪ್ರಮಾಣದ ಸಸಾರಜನ (ಪ್ರೊಟೀನ್), ಶರ್ಕರಪಿಷ್ಠಗಳು (ಕಾರ್ಬೋಹೈಡ್ರೇಟ್), ಕೊಬ್ಬು, ಖನಿಜಾಂಶ ಹಾಗೂ ಜೀವಸತ್ವ (ವಿಟಾಮಿನ್) ಗಳು ಇರಬೇಕು. ಸಾಕಷ್ಟು ಪ್ರಮಾಣದ ಶುದ್ಧವಾದ ಕುಡಿಯುವ ನೀರು ಕೊಡುವುದು ಸಹಾ ಅತಿ ಮುಖ್ಯ. ಇವುಗಳನ್ನು ಹೇಗೆ ಬೆಳೆಯಬಹುದೆಂದು ತಿಳಿದುಕೊಳ್ಳೋಣ.

(ಇನ್ನೂ ಇದೆ)

ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ