ಮೇವಿನ ಬೆಳೆಗಳ ಉತ್ಪಾದನೆ, ಶೇಖರಣೆ ಮತ್ತು ಸಂಸ್ಕರಣೆ : ಹಿಂದಿನ ದಿನಗಳಲ್ಲಿ ವರ್ಷಪೂರ್ತಿ ಹಸುಗಳು ಮೇಯಲೆಂದೇ ರೈತರು ತಮ್ಮ ಹಿಡುವಳಿಯಲ್ಲಿ ಸ್ವಲ್ಪ ಜಾಗವನ್ನು ಕಾಯ್ದಿರಿಸುವುದರ ಜೊತೆಗೆ ಊರಿನ ಹುಲ್ಲುಗಾವಲುಗಳು ಮತ್ತು ಗೋಮಾಳಗಳೂ ಸಹ ಇರುತ್ತಿದ್ದವು. ಆದರೆ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಆಹಾರ ಧಾನ್ಯಗಳನ್ನು ಬೆಳೆಯಲು ಕೃಷಿ ಭೂಮಿಯ ಮೇಲೆ ಹೆಚ್ಚುತ್ತಿರುವ ಒತ್ತಡದಿಂದಾಗಿ ಇವುಗಳಾವುದಕ್ಕೂ ಅವಕಾಶವಿಲ್ಲದಾಗಿದ್ದು ಜಾನುವಾರುಗಳ ಉತ್ಪಾದನೆಯಲ್ಲಿ ವಿವಿಧ ಕೊರತೆ ಕಾಣಬರುತ್ತಿದೆ. ಉತ್ಪಾದನೆಯ ಹೆಚ್ಚಳಕ್ಕಾಗಿ ಜಾನುವಾರುಗಳ ತಳಿ ಅಭಿವೃದ್ಧಿಗೆ ವಿಶೇಷ ಗಮನವನ್ನು ಕೊಡುತ್ತಿರುವುದರಿಂದ ಅಧಿಕ ಉತ್ಪಾದನಾ ಸಾಮರ್ಥ್ಯವುಳ್ಳ ಜಾನುವಾರುಗಳು ತಯಾರಾಗುತ್ತಿವೆ. ಅದರಂತೆ ಅವುಗಳಿಗೆ ಬೇಕಾದ ಉತ್ತಮ ಆಹಾರ ಪೂರೈಕೆಯ (ಮೇವಿನ) ಬಗ್ಗೆ ಎಲ್ಲಾ ರೀತಿಯ ಕಾಳಜಿ ವಹಿಸಬೇಕು.

ಜಾನುವಾರುಗಳ ಮೇವು ಪೂರೈಕೆಗಾಗಿ ಹಿಂದಿನಿಂದ ಬಂದಿರುವ ಪದ್ಧತಿಯಲ್ಲಿ ಕೆಲವು ಸೂಕ್ತ ಬದಲಾವಣೆಗಳನ್ನು ತರುವುದರ ಜೊತೆಗೆ ಮೇವಿನ ಬೆಳೆಗಳೆಂದೇ ಅಭಿವೃದ್ಧಿಪಡಿಸಿದ ಹಸಿರು ಮೇವನ್ನು ಬೆಳೆಯುವುದು, ಕೊರತೆಯ ಕಾಲದಲ್ಲಿ ಉಪಯೋಗಿಸಲು ಹೆಚ್ಚುವರಿಯಾಗಿ ಬೆಳೆದ ಮೇವನ್ನು ಶೇಖರಿಸಿಡುವುದು ಮತ್ತು ಸಾಮಾನ್ಯವಾಗಿ ಉಪಯೋಗಿಸುತ್ತಿರುವ ಕಡಿಮೆ ಪೌಷ್ಠಿಕಾಂಶಗಳಿಂದ ಕೂಡಿದ  ಭತ್ತದ ಹುಲ್ಲು, ರಾಗಿ ಹುಲ್ಲು ಹಾಗೂ ಜೋಳದ ದಂಟು ಮುಂತಾದವುಗಳನ್ನು ವಿಶೇಷ ರೀತಿಯಲ್ಲಿ ಸಂಸ್ಕರಿಸಿ ಕೊಡುವುದರಿಂದ ಆಹಾರದಲ್ಲಿ ಸಮತೋಲನೆಯನ್ನು ಸಾಧಿಸಲು ಸಹಾಯವಾಗುತ್ತದೆ.

DSC00257.JPG

ಹಸಿರು ಮೇವಿನ ಬೆಳೆಗಳು

ಎಲ್ಲಾ ಬೆಳೆಗಳಂತೆಯೇ ಮೇವಿನ ಬೆಳೆಗಳೂ ಸಹ ನೀರು ಚೆನ್ನಾಗಿ ಬಸಿಯುವ ಫಲವತ್ತಾದ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಮೇವಿನ ಇಳುವರಿ ಹಾಗು ಗುಣಮಟ್ಟವು, ಮಣ್ಣಿನ ವಿಧಗಳು ಮತ್ತು ಪೌಷ್ಠಿಕಾಂಶಗಳನ್ನು ಅವಲಂಭಿಸಿರುತ್ತವೆ. ಮಣ್ಣಿನಲ್ಲಿರುವ ತೇವಾಂಶದ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ. ಉತ್ತಮ ಸುಧಾರಿಸಿದ ಮೇವಿನ ಬೆಳೆಗಳನ್ನು ಕೇವಲ ಮಳೆ ಆಧರಿಸಿ ಬೆಳೆಯುವುದರಿಂದ ನಿರೀಕ್ಷಿಸಿದ ಪ್ರಮಾಣದಲ್ಲಿ ಇಳುವರಿ ಬರುವುದಿಲ್ಲ. ಆದ್ದರಿಂದ ನೀರಾವರಿಯ ಅನುಕೂಲತೆಗಳನ್ನು ಹೊಂದುವುದರ ಜೊತೆಗೆ ನಿಗದಿತ ಪ್ರಮಾಣದಲ್ಲಿ ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು. ಭೂಮಿಯ ಫಲವತ್ತತೆ, ನೀರು ಹಿಡಿಯುವ ಶಕ್ತಿಯನ್ನು ತಿಳಿದು ಗೊಬ್ಬರದ ಪ್ರಮಾಣ ಮತ್ತು ನೀರನ್ನು ಬೇಕಾದ ಮಟ್ಟದಲ್ಲಿ ಕೊಡಬೇಕು, ಬಿತ್ತನೆಗೆ ಮೊದಲು ಹದವಾದ ತೇವಾಂಶವಿರದಿದ್ದರೆ ಬೀಜಗಳನ್ನು ಅರ್ಧ ದಿನ ನೆನೆಸಿ ಬಿತ್ತುವುದು ಒಳಿತು. ಅಲ್ಲದೇ ರೈಜೋಬಿಯಮ್ ಬಳಕೆಯಿಂದ ಮೊಳಕೆಯೊಡೆಯುವ ಪ್ರಮಾಣವನ್ನು ಹೆಚ್ಚಿಸಬಹುದು.

ಮೇವಿನ ಬೆಳೆಗಳು ಮತ್ತು ವರ್ಗೀಕರಣ :

೧) ಏಕದಳ ಏಕವಾರ್ಷಿಕ ಬೆಳೆಗಳು : ಮುಸುಕಿನ ಜೋಳ, ಆಫ್ರಿಕನ್ ಟಾಲ್ ಜೋಳ, ಸಜ್ಜೆ ಇತ್ಯಾದಿ.

೨) ಏಕದಳ ಬಹುವಾರ್ಷಿಕ ಬೆಳೆಗಳು : ಹೈಬ್ರಿಡ್ ನೇಪಿಯರ್, ಎನ್‌ಬಿ ೨೧, ಕೋ-೩, ಗಿನಿ, ಪ್ಯಾರಾ, ರೋಡ್ಸ್, ಬ್ಲೂ ಮತ್ತು ಗ್ರೀನ್ ಪ್ಯಾನಿಕ್ ಇತ್ಯಾದಿ.

೩) ದ್ವಿದಳ ಏಕವಾರ್ಷಿಕ ಬೆಳೆಗಳು ; ಅಲಸಂದೆ, ಅವರೆ, ಹುರುಳಿ, ಹೆಸರು ಇತ್ಯಾದಿ. 

೪) ದ್ವಿದಳ ಬಹುವಾರ್ಷಿಕ ಬೆಳೆಗಳು : ಕುದುರೆ ಮಸಾಲೆ (ಲೂವರ್ಸ್), ವೆಲ್‌ವೆಟ್ ಬೀನ್, ಸರ‍್ಯಾಟ್ರೋ, ಡೆಸ್ಕೋಡಿಯಂ.

೫) ಮೇವಿನ ಮರಗಳು ಮತ್ತು ಪೊದೆಗಳು : ಸುಬಾಬುಲ್-ಚಿಗುರೆ ಸೊಪ್ಪು, ಅಕೇಶಿಯ, ನುಗ್ಗೆ, ಅಲ್ಜೀಜಿಯ, ಡಾಲ್ಪರ್ಜಿಯ, ಆಲ, ದಶರಥ್, ಅಗಸೆ, ಹಾಲವಾಣ, ಗ್ಲಿರಿಸೀಡಿಯ, ಕ್ಯಾಲಿಯಾಂಡ್ರ, ಅರಳಿ, ಅತ್ತಿ ಇತ್ಯಾದಿ. 

೬) ಹುಲ್ಲುಗಾವಲಿನ ಬೆಳೆಗಳು :  ಸಿಂಕ್ರಸ್ ಸೀಲಿಯಾರಿಸ್ (ಕೊಳಕಟ್ಟೆ ಅಂಜನ್), ಸಿರಿಕ್ರಸ್ ಸೆಟಿಜಿರಸ್, ಹರಿಯಾಳಿ (ಗರಿಕೆ-ಸೈನೋಡಾನ್), ಮಾರ್ವೆಲ್ (ಡೈಕ್ಯಾಂತಿಯಂ), ಎರಗ್ರೋಸ್ಟಿಸ್, ಹೆಟರೋಪೋಗಾನ್ (ಕಾಜಿ ಹುಲ್ಲು, ಅಂಚಿ ಹುಲ್ಲು, ಸ್ಪಿಯರ್ ಗ್ರಾಸ್ ಇತ್ಯಾದಿ). 

ಬೇಸಾಯದ ಕ್ರಮಗಳು :

ಏಕದಳ ವಾರ್ಷಿಕ ಬೆಳೆಗಳು : 

DSCN4745.JPG

ಮುಸುಕಿನ ಜೋಳ: ಇದು ಅತಿ ಉತ್ತಮ ಮೇವು. ನಿಗದಿತ ಪ್ರಮಾಣದಲ್ಲಿ ಪ್ರತಿನಿತ್ಯವೂ ಕೊಡುವುದರಿಂದ ಹಾಲು ಕರೆಯುವ, ಅದರಲ್ಲು ಮಿಶ್ರ ತಳಿಯ ಹಸುಗಳಲ್ಲು ಉತಾದನೆ ಗಣನೀಯವಾಗಿ ಹೆಚ್ಚುವುದು. ಇದರ ಜೊತೆಯಲ್ಲಿ ಅಲಸಂದೆಯನ್ನೂ ಮಿಶ್ರಬೆಳೆಯಾಗಿ ಬೆಳೆದರೆ ಹೆಚ್ಚಿನ ಸಮತೋಲನ ಪೌಷ್ಟಿಕಾಂಶಗಳಿಂದ ಕೂಡಿದ ಮೇವನ್ನು ಪಡೆಯಬಹುದು. ಸಾಮಾನ್ಯವಾಗಿ ಮುಕ್ಕಾಲು ಭಾಗ ಮುಸುಕಿನ ಜೋಳ ಹಾಗೂ ಕಾಲು ಭಾಗ ಪ್ರಮಾಣದ ಅಲಸಂದೆ ಬೀಜವನ್ನು ಸೇರಿಸಿ ಬಿತ್ತನೆಗೆ ಉಪಯೋಗಿಸಬಹುದು. 

ಮೇವಿನ ಬೆಳೆಯಲ್ಲಿ ಕ್ರಿಮಿನಾಶಕಗಳ ಸಿಂಪಡಣೆ ಅಪೇಕ್ಷಣೀಯವಲ್ಲ. ಆದ್ದರಿಂದ ಅತಿ ಅವಶ್ಯಕವೆನಿಸಿದ ಕಡೆ ಬೀಜೋಪಚಾರವನ್ನು ಮಾಡಿದ ನಂತರ ಬಿತ್ತನೆ ಮಾಡುವುದು ಒಳ್ಳೆಯದು. ಒಂದು ವೇಳೆ ಕ್ರಿಮಿನಾಶಕಗಳನ್ನು ಉಪಯೋಗಿಸಲೇ ಬೇಕಾದ ಸಂದರ್ಭಗಳಲ್ಲಿ ಕ್ರಿಮಿನಾಶಕಗಳನ್ನು ಉಪಯೋಗಿಸಿದ ಹದಿನೈದು ದಿನಗಳ ವರೆಗೆ ಈ ಮೇವನ್ನು ದನಗಳಿಗೆ ಕೊಡಬಾರದು.

DSCN1251.JPG

ಮೇವಿಗಾಗಿ ಆಫ್ರಿಕನ್ ಟಾಲ್ ಮತ್ತು ಹೆಸರುಘಟ್ಟ ಟಾಲ್ ತಳಿಗಳು ಮುಖ್ಯವಾದವುಗಳು. ಇವುಗಳಲ್ಲದೆ ಹೈಬ್ರಿಡ್ ಗಂಗಾ-೨, ಗಂಗಾ ಸಫೇದ್ ತಳಿಗಳನ್ನು ಯಪಯೋಗಿಸಬಹುದಾಗಿದ್ದು ಈ ಬೆಳೆಯನ್ನು ವರ್ಷದ ಎಲ್ಲಾ ಕಾಲಗಳಲ್ಲೂ ಬೆಳೆಯಬಹುದು. 

ಎಕರೆ ಒಂದಕ್ಕೆ ೨೦ರಿಂದ ೨೫ ಕೆ.ಜಿ. ಬಿತ್ತನೆ ಬೀಜ ಬೇಕಾಗಿದ್ದು, ಒಂದು ಅಡಿ ಅಂತರದ ಸಾಲಿನಲ್ಲಿ ಕೂರಿಗೆ (ಸಡ್ಡೆ)ಯಿಂದ  ಬಿತ್ತಬೇಕು. ಬಿತ್ತನೆಗೆ ಮೊದಲು ೧೦ರಿಂದ ೧೨ ಟನ್ ಸಾವಯವ ಗೊಬ್ಬರವನ್ನು ಕೊಡಬೇಕು. ನಂತರ ೩೦ ಕೆ.ಜಿ. ಸಾರಜನಕ, ೧೫ ಕೆ.ಜಿ ರಂಜಕ ಹಾಗೂ ೧೫ ಕೆ.ಜಿ. ಪೊಟಾಷನ್ನು ಕೊಡುವುದು ಒಳ್ಳೆಯದು. ಅಲ್ಲದೆ ೩೦ ದಿನಗಳ ನಂತರ ಮೇಲುಗೊಬ್ಬರವಾಗಿ ೨೫ ಕೆ.ಜಿ. ಸಾರಜನಕವನ್ನು ಕೊಡಬೇಕು. ರಾಸಾಯನಿಕ ಗೊಬ್ಬರಗಳ ಪೈಕಿ ಬರೀ ಸಾರಜನಕವನ್ನು ಮಾತ್ರ ಕೊಡುವುದರಿಂದ ಕ್ರಮೇಣ ಇಳುವರಿ ಕಡಿಮೆಯಾಗುವುದು. ಆದ್ದರಿಂದ ಅವಶ್ಯಕ ಪೋಷಕಾಂಶಗಳನ್ನು ಸಹ ಕೊಡುವುದು ಅಗತ್ಯ.

ಮಣ್ಣಿನ ಹದವನ್ನು ಅರಿತು ೧೦ರಿಂದ ೧೫ ದಿನಗಳಿಗೊಮ್ಮೆ ನೀರು ಕೊಡಬೇಕು. ಸಾಲು ಕಂಡ ನಂತರ ೨-೩ ಸಾರಿ ಎಡೆ ಕುಂಟೆ ಹೊಡೆದು ಕಳೆಯನ್ನು  ನಿಯಂತ್ರಿಸಬೇಕು. ಬಿತ್ತನೆಯ ನಂತರ ೭೦-೭೫ ದಿನಗಳಲ್ಲಿ ತೆನೆಯಲ್ಲಿ ಹಾಲ್ ಗಳಾದಾಗ ಕಟಾವು ಮಾಡಬೇಕು. ಎಳೆಯ ಗಿಡಗಳಲ್ಲಿ ತೀವ್ರ ವಿಷವಿರುವುದರಿಂದ ಆಗ ತಿನ್ನಿಸಬಾರದು. ಪ್ರತಿ ಹೆಕ್ಟೇರ್‌ನಲ್ಲಿ ೨೦ರಂದ ೨೫ ಟನ್ ಹಸಿರು ಮೇವನ್ನು ಪಡೆಯಬಹುದು. 

ಜೋಳ : ಹಿಂದಿನಿಂದಲೂ ದನಗಳಿಗಾಗಿಯೇ ಈ ಮೇವನ್ನು ಹೊಲಗಳ ಸಾಲಿನಲ್ಲಿ ಹಾಗೂ ಪ್ರತ್ಯೇಕವಾದ ಸೀಮಿತ ಪ್ರದೇಶಗಳಲ್ಲದೆ ತೆಂಗಿನ ತೋಟ ಮುಂತಾದ ಕಡೆ ಮರಗಳ ಮಧ್ಯದಲ್ಲಿ ಅಂತರ ಬೆಳೆಯಾಗಿಯೂ ಸಹ ಬೆಳೆಯಲಾಗುತ್ತಿದೆ. ಸಾಧಾರಣವಾಗಿ ಇದನ್ನು ಮುಂಗಾರು ಬೆಳೆಯಾಗಿ ಬೆಳೆಯುತ್ತಿದ್ದು, ಒಂದೆರಡು ಹದ ಮಳೆ ಬರುತ್ತಿದ್ದಂತೆಯೇ ಚೆನ್ನಾಗಿ ತಯಾರು ಮಾಡಿದ ಭೂಮಿಯಲ್ಲಿ ಪ್ರತಿ ಎಕರೆ ಒಂದಕ್ಕೆ ೧೫ ಕೆ.ಜಿ.ಯಂತೆ ಒಂದು ಅಡಿ ಅಂತರದಲ್ಲಿ ಕೂರಿಗೆಯಿಂದ ಬಿತ್ತಬೇಕು. ಈ ಬೆಳೆಯನ್ನು ಸಾಲಿನಲ್ಲಿ ಅಲ್ಲದೆ ಒಟ್ಟಾಗಿ ಚೆಲ್ಲುವುದರಿಂದಲೂ ಸಹ ಬೆಳೆಯುವ ರೂಢಿಯಿದ್ದು ಸಾಲಿನಲ್ಲಿ ಬೆಳೆ ಉತ್ತಮವಾಗಿರುತ್ತದೆ.

ಬಿತ್ತನೆಗೆ ಮೊದಲು ಪ್ರತಿ ಎಕರೆ ಒಂದಕ್ಕೆ ೧೦ರಿಂದ ೧೨ ಟನ್ (೨೦ರಿಂದ ೨೫ ಗಾಡಿ) ಸಾವಯವ ಗೊಬ್ಬರ, ೩೦ ಕೆ.ಜಿ. ಸಾರಜನ ಕ, ೧೫ ಕೆ.ಜಿ. ರಂಜಕ ಹಾಗೂ ೧೫ ಕೆ.ಜಿ. ಪೊಟಾಷನ್ನು ಮತ್ತು ಒಂದು ಕೆ.ಜಿ. ಜಿಂಕ್ ಸಲ್ಫೇಟನ್ನೂ ಹಾಕಬೇಕು. ಬಿತ್ತನೆಯಾದ ೪೫ ದಿನಗಳ ಮೇಲೆ ಮೇಲುಗೊಬ್ಬರಗವಾಗಿ ೨೦ ಕೆ.ಜಿ. ಸಾರಜನಕವನ್ನು ಕೊಡಬೇಕು. ಪ್ರತಿ ಹೆಕ್ಟೇರ್‌ನಲ್ಲಿ ೧೫ರಿಂದ ೨೦ ಟನ್ ಹಸಿರು ಮೇವನ್ನು ಪಡೆಯಬಬುದು. ಶೇ. ೫೦ಕ್ಕು ಹೆಚ್ಚು ಭಾಗದಲ್ಲಿ ತೆನೆ ಬಂದಾಗ ೬೦ರಿಂದ ೭೦ ದಿನಗಳಲ್ಲಿ ಮೇವನ್ನು ಕಟಾವು ಮಾಡಬೇಕು. ಬಹಳ ಮುಖ್ಯಾವಾದ ವಿಚಾರವೆಂದರೆ ಕೆಲವು ವಿಧದ ಹಾಗೂ ಸ್ಥಳೀಯ ಜೋಗಳನ್ನು ತೆನೆ ಬರುವ ಮೊದಲೇ ದನಗಳಿಗೆ ಕೊಟ್ಟರೆ  ಹೈಡ್ರೋಸಯಾನಿಕ್ ಆಸಿಡ್ ವಿಷದ ಮತ್ತೇರಿ ದನಗಳು ಸಾಯುತ್ತವೆ. ಹಾಗಾಗಿ ತೆನೆ ಬಂದ ನಂತರವೇ ಕಟಾವು ಮಾಡಬೇಕು. ಹದವರಿತು ೧೦ರಿಂದ ೧೫ ದಿನಗಳಿಗೊಮ್ಮೆ ಅಂತರದಲ್ಲಿ ನೀರು ಕೊಡಬೇಕು. ಚೆನ್ನಾಗಿ ಸಾಲುಗಳು ಕಂಡ ನಂತರ ೨-೩ ಎಡೆ ಕುಂಟೆಯನ್ನು ಹೊಡೆದು ಕಳೆ ನಿಯಂತ್ರಿಸಬೇಕು.

DSCN1267.JPG

ಓಟ್ಸ್ : ಇದು ಸೀಮಿತ ನೀರಾವರಿ ಆಶ್ರಯದಲ್ಲಿ ಮುಖ್ಯವಾಗಿ ಚಳಿಗಾಲದಲ್ಲಿ ಬೆಳೆಯುವ ಮೇವಿನ ಬೆಳೆ. ಮರಳು ಮಿಶ್ರಿತ ಎರೆ ಮಣ್ಣಿನಲ್ಲಿ ಹುಲುಸಾಗಿ ಬೆಳೆಯುತ್ತದೆ. ಕ್ಷಾರ ಮತ್ತು ಜೌಗು ಪ್ರದೇಶದಲ್ಲಿ ಬರುವುದಿಲ್ಲ. ವೆಸ್ಟನ್ ೧೧, ಬ್ರಂಕರ್ ೧೦, ಎಸ್.ಒ.ಎಸ್., ಸಿ೨೯, ಆಲ್ಜೀರಿಯನ್, ಹೆಚ್.ಎಫ್.ಓ. ೧೧೪ ಮತ್ತು ಕೆಂಟ್ ಜಾತಿಯ ವಿವಿಧ ತಳಿಗಳಿದ್ದು ಕೆಂಟ್ ಜಾತಿ ನೀರಾವರಿ ಆಶ್ರಯದಲ್ಲಿಯೂ ಸಹ ಬೆಳೆಯಲು ಯೋಗ್ಯವಾಗಿದ್ದು ಇದರಿಂದ ಕೂಳೆ ಬೆಳೆಯನ್ನು ಸಹ ಪಡೆಯಬಹುದು. ಇಳುವರಿಯ ಪ್ರಮಾಣವು ತಳಿಯಿಂದ ತಳಿಗೆ ಬೇರೆಯಾಗಿದ್ದು ಸಾಧಾರಣವಾಗಿ ೬೦ರಿಂದ ೬೫ ದಿನಗಳ ಬಿತ್ತನೆಯ ನಂತರ ಪ್ರತಿ ಹೆಕ್ಟೇರಿನಲ್ಲಿ ೪೦ರಿಂದ ೫೦ ಟನ್ ಹಸಿರು ಮೇವನ್ನು ಪಡೆಯಬಹುದು. ಪ್ರತಿ ಹೆಕ್ಟೇರು (ಎರಡೂವರೆ ಎಕರೆ) ಒಂದಕ್ಕೆ ೭೫ರಿಂದ ೧೦೦ ಕೆ.ಜಿ. ಬೀಜವನ್ನು ಒಂದು ಅಡಿ ಅಂತದ ಸಾಲಿನಲ್ಲಿ ಸಾಧಾರಣವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬಿತ್ತಬೇಕು. ಪ್ರತಿ ಹೆಕ್ಟೇರು ಒಂದಕ್ಕೆ ೧೦೦ ಕೆ.ಜಿ. ಸಾಜರನಕ ಬೇಕಾಗಿದ್ದು, ಅರ್ಧದಷ್ಟು ಬಿತ್ತನೆಯ ಸಮಯದಲ್ಲೂ ಇನ್ನುಳಿದ ಅರ್ಧವನ್ನು ಮೊದಲು ನೀರು ಹಾಯಿಸಿದ ನಂತರ ಕೊಡಬೇಕು. ಬಹು ಕಟಾವಿನ ಬೆಳೆಯನ್ನು ಮೊದಲ ಕಟಾವಿನ ನಂತರ ಎರಡನೇ ಬಾರಿ ಸಾರಜನಕ ಕೊಡಬೇಕು. ಬಿತ್ತನೆಯ ಮೊದಲಿನದೂ ಸೇರಿದಂತೆ ೩ರಿಂದ ೪ ಸಾರಿ ನೀರು ಕೊಟ್ಟರೆ ಸಾಕು. ಉಳಿದ ಬೆಳೆಯಂತೆಯೇ ಕಳೆ ನಿಯಂತ್ರಿಸಬೇಕು. ಮೇವಿಗಾಗಿ ಬೆಳೆಯನ್ನು ಕಟಾವು ಮಾಡದಿದ್ದರೆ ಪ್ರತಿ ಹೆಕ್ಟೇರಿನಲ್ಲಿ ಅಂದಾಜು ೨೦ ಕ್ವಿಂಟಾಲ್ ಬೀಜ ಉತ್ಪಾದಿಸಬಹುದು.

(ಇನ್ನೂ ಇದೆ)

ಚಿತ್ರ ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ