೨. ಏಕದಳ ಬಹುವಾರ್ಷಿಕ ಬೆಳೆಗಳು :

ಹೈಬ್ರೀಡ್ ನೇಪಿಯರ್ : ಇದು ಅತ್ಯಧಿಕ ಇಳುವರಿ ನೀಡುವ ಮೇವಿನ ಬೆಳೆ. ಸುಮಾರು ೧೦-೧೨ ಅಡಿ ಎತ್ತರ ಬೆಳೆಯಬಲ್ಲದು. ಸರಿಯಾದ ಪೋಷಣೆ ಮಾಡಿದಲ್ಲಿ ೪ರಿಂದ ೫ ವರ್ಷಗಳವರೆಗೆ ಬೆಳೆ ಪಡೆಯಬಹುದು. ಪ್ರತಿ ಎಕರೆಗೆ ೮ ರಿಂದ ೧೦ ಸಾವಿರ ಬೇರುಗಳು (ಎರಡು ಕಣ್ಣುಗಳಿರುವ ಕಾಂಡದ ತುಂಡುಗಳು) ಬೇಕಾಗಿದ್ದು ಸಾಲಿನಿಂದ ಸಾಲಿಗೆ ಮತ್ತು ಬೇರಿನಿಂದ ಬೇರಿಗೆ ಕ್ರಮವಾಗಿ ೩ ಹಾಗೂ ೨ ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಸಿದ್ಧಗೊಳಿಸಬೇಕು. ನಂತರ ೨೫ರಿಂದ ೩೦ ಗಾಡಿ (೧೨ರಿಂದ ೧೫ ಟನ್) ಸಾವಯವ ಗೊಬ್ಬರ ಕೊಟ್ಟು ನೀರು ಹಾಯಿಸುವುದು. ನಂತರ ಬಿತ್ತನೆಯ ಹದವನ್ನು ನೋಡಿ ಪ್ರತಿ ಹೆಕ್ಟೇರ್ ಒಂದಕ್ಕೆ ೫೦ ಕೆ.ಜಿ. ಸಾರಜನಕ, ೨೫ ಕೆ.ಜಿ. ರಂಜಕ ಮತ್ತು ೨೫ ಕೆ.ಜಿ. ಪೊಟಾಷನ್ನು ಕೊಟ್ಟು ಹಂಟೆ ಹೊಡೆದು ಮಣ್ಣಿನಲ್ಲಿ ಸೇರಿಸಿ ೩ ಅಡಿ ೨ ಅಡಿ ಅಂತರದಲ್ಲಿ ನಾಡಿ ಮಾಡುವುದು. ನಾಟಿ ಮಡಿದ ನಂತರ ತೆಳುವಾಗಿ ನೀರು ಹಾಯಿಸುವುದರಿಂದ ಕಾಂಡ ಮೊಳಕೆಯೊಡೆಯುವುದಕ್ಕೆ ಸಹಕಾರಿಯಾಗುವುದು. ನಂತರ ಹದವರಿತು ೧೦ರಿಂದ ೧೪ ದಿನಗಳಿಗೊಮ್ಮೆ ನೀರು ಕೊಡುವುದು. ಮೊದಲ ಕೊಯಿಲನ್ನು ನಾಟಿ ಮಾಡಿದ ೭೫ರಿಂದ ೮೫ ದಿನಗಳಲ್ಲೂ ನಂತರ ಪ್ರತಿ ೪೫ ದಿನಗಳಿಗೊಮ್ಮೆ ಪಡೆಯಬಹುದು.

hybrid napier bajra grass.jpg

ಪ್ರತಿ ಕಟಾವಿನ ನಂತರವೂ ಪ್ರತಿ ಹೆಕ್ಟೇರ್ ಒಂದಕ್ಕೆ ೨೫ ಕೆ.ಜಿ. ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು. ಈ ರೀತಿ ಮಾಡುವುದರಿಂದ ವರ್ಷದಲ್ಲಿ ಅಂದಾಜು ೬೦-೭೦ ಟನ್ ಹಸಿರು ಮೇವು ಹಾಗೂ ನಂತರದ ಕಟಾವಿನಲ್ಲಿ ೪೦-೪೫ ಟನ್ ಮೇವನ್ನು ಪಡೆಯಬಹುದು. ಪ್ರತಿ ಕಟಾವಿನ ನಂತರವು ಕಳೆ ನಿಯಂತ್ರಣಕ್ಕಾಗಿ ಎರಡೂ ಸಾಲಿನಲ್ಲಿ (ಅಡ್ಡ ಹಾಗು ಉದ್ದ) ಎಡೆ ಕುಂಟೆ ಹೊಡೆಯುವುದು ಸೂಕ್ತ. ಎನ್.ಬಿ-೨೧, ಕೋ-೩, ಕೋ-೪, ಮುಖ್ಯವಾಗಿ ಈ ಹುಲ್ಲಿನ ತಳಿಗಳು ಒಂದು ಸಾರಿ ನಾಟಿ ಮಾಡಿದ ನಂತರ ೪ ರಿಂದ ೫ ವರ್ಷಗಳವರೆಗೆ ಬೆಳೆ ಪಡೆಯಬಹುದು.

ಗಿನಿ ಹುಲ್ಲು : ನೀರಾವರಿ ಆಶ್ರಯದಲ್ಲಿ ಬೆಳೆಯಲು ಉತ್ತಮವಾಗಿದ್ದು ಮಳೆ ಆಧಾರಿತ ಬೆಳೆಯಾಗಿಯೂ ಸಹ ಬೆಳೆಯಬಹುದು. ಕಡಿಮೆ ಗುಣಮಟ್ಟದ ಭೂಮಿಯಲ್ಲಿ ಬೆಳೆಯಬಹುದಾಗಿದ್ದರೂ ಒಳ್ಳೆಯ ಹೆಚ್ಚು ಫಲವತ್ತಾದ ಭೂಮಿಯಲ್ಲಿ ಹೆಚ್ಚಿನ ಇಳುವರಿ ಬರುವುದು. ನೀರು ನಿಲ್ಲುವ ಹಾಗೂ ಜೌಗು ಪ್ರದೇಶಗಳಲ್ಲಿ ಈ ಬೆಳೆ ಸರಿಯಾಗಿ ಬರುವುದಿಲ್ಲ. ರಿವರ್ಸ್ಡೇಲ್, ಹೆಮಿಲ್ ಮತ್ತು ಮ್ಯಾಕುನಿ ಮುಖ್ಯವಾದ ಗಿನಿ ಜಾತಿಯ ಮೇವಿನ ತಳಿಗಳು.

ಪ್ರತಿ ಎಕರೆಗೆ ೧೪ರಿಂದ ೧೫ ಸಾವಿರ ಬೇರುಗಳು ಬೇಕಾಗಿದ್ದು ೨ x ೨ ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಅಥವಾ ೨-೩ ಕೆ.ಜಿ. ಬೀಜವನ್ನು ಸಹ ಬಿತ್ತನೆಗೆ ಉಪಯೋಗಿಸಬಹುದು. ನಾಟಿಯ ಮೊದಲು ೧೨ರಿಂದ ೧೫ ಟನ್ (೨೫ರಿಂದ ೩೦ ಗಾಡಿ) ಸಾವಯವ ಗೊಬ್ಬರ ಹಾಗೂ  ೬೦ ಕೆ.ಜಿ. ಸಾರಜನಕ, ೨೫ ಕೆ.ಜಿ. ರಂಜಕ ಮತ್ತು ೨೫ ಕೆ.ಜಿ. ಪೊಟಾಷನ್ನು ಕೊಡಬೇಕು ಪ್ರತಿ ಕಟಾವಿನ ನಂತರ ೩೫ ಕೆ.ಜಿ. ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.

ಮೊದಲ ಕಟಾವಿನ ಹಾಗೂ ೨ರಿಂದ ೨ ಕಟಾವಿಗೊಮ್ಮೆ ಎಡೆ ಕುಂಟೆ ಹೊಡೆದು ಕಳೆ ನಿಯಂತ್ರಿಸಬೇಕು. ಮೊದಲ ಕಟಾವನ್ನು ನಾಟಿ ಮಾಡಿದ ೫೦ರಿಂದ ೬೦ ದಿಗಳಲ್ಲೂ ನಂತರದ ಕಟಾವನ್ನು ಪ್ರತಿ ೪೦ರಿಂದ ೪೫ ದಿನಗಳಲ್ಲೂ ಪಡೆಯಬಹುದು. ಭೂಮಿಯ ಫಲವತ್ತತೆಯ ಮೇರೆಗೆ ಪ್ರತಿ ಹೆಕ್ಟೇರಿನಲ್ಲಿ ವರ್ಷವೊಂದಕ್ಕೆ ೨೦ರಿಂದ ೨೫ ಟನ್ ಹಸಿರು ಮೇವು ಪಡೆಯಬಹುದು.

DSCN5219.JPG

೩. ದ್ವಿದಳ ಏಕವಾರ್ಷಿಕ ಬೆಳೆಗಳು :

ಅಲಸಂದೆ : ಇದು ಸಾಮಾನ್ಯವಾಗಿ ನೀರಾವರಿ ಆಶ್ರಯದಲ್ಲಿ ಬೆಳೆಯಲು ಶಿಫಾರಸ್ಸು ಮಾಡಲಾಗಿರುವ ಬೆಳೆ. ಮುಸುಕಿನ ಜೋಳ ಮತ್ತು ಜೋಳದೊಂದಿಗೆ ಬೆಳೆಯುವುದರಿಂದ ಇಳುವರಿಯನ್ನು ಹೆಚ್ಚಿಸುವುದೇ ಅಲ್ಲದೆ ಏಕದಳ ಮೇವಿನ ಪೌಷ್ಟೀಕರಣವನ್ನೂ ಹೆಚ್ಚಿಸುವುದು. ಹಾಲಿನ ಇಳುವರಿ ಏಕಪ್ರಕಾರವಾಗಿರಲು ಹಾಲು ಕರೆಯುವ ಹಸು ಮತ್ತು ಎಮ್ಮೆಗಳಿಗೆ ಈ ಮೇವನ್ನು ಕೊಡುವುದು ಅಪೇಕ್ಷಣೀಯ.

ನೀರು ಬಸಿದು ಹೋಗುವ ಫಲವತ್ತಾದ ಎರೆಮಣ್ಣು ಈ ಬೆಳೆಗೆ ಉತ್ತಮ. ರಷಿಯನ್ ಜೈಂಟ್ ಮತ್ತು ಇ.ಸಿ. -೪೨೧೬ಗಳು ಮೇವಿಗಾಗಿಯೇ ಅಭಿವೃದ್ಧಿಪಡಿಸಿರುವ ತಳಿಗಳು. ಮಳೆ ಆಧರಿತ ಪ್ರದೇಶದಲ್ಲಿ ಮುಂಗಾರು ಪ್ರಾರಂಭವಾದಾಗ ಮತ್ತು ನೀರಾವರಿ ಆಶ್ರಯದಲ್ಲಿ ವರ್ಷದ ಯಾವ ಸಮಯದಲ್ಲಿ ಬೇಕಾದರೂ ಬೆಳೆಯಬಹುದು. ಬೇಸಿಗೆಯಲ್ಲಿ ಪ್ರತಿ ಎರಡು ವಾರಗಳಿಗೊಮ್ಮೆ ಭೂಮಿಯ ಹದ ನೋಡಿ ನೀರು ಕೊಡಬೇಕು. ಸಾಮಾನ್ಯವಾಗಿ ಪ್ರತಿ ಬೆಳೆ ಒಂದಕ್ಕೆ ೪ರಿಂದ ೫ ಬಾರಿ ನೀರು ಕೊಡಬೇಕಾಗುತ್ತದೆ.

DSCN5569.JPG

ಪ್ರತಿ ಎಕರೆಗೆ ೧೫ ಕಿ.ಗ್ರಾಂ. ಬೀಜವನ್ನು ಒಂದು ಅಡಿ ಅಂತರದಲ್ಲಿ ಕೂರಿಗೆಯಿಂದ ಬಿತ್ತಬೇಕು. ಮುಸುಕಿನ ಜೋಳದೊಂದಿಗೆ ಬಿತ್ತಿದಲ್ಲಿ ಕಾಲು ಭಾಗ ಬೀಜ ಸಾಕು. ಪ್ರತಿ ಎಕರೆಗೆ ೧೦ರಿಂದ ೧೨ ಟನ್ (೧೦ರಿಂದ ೧೨ ಗಾಡಿ) ಸಾವಯವ ಗೊಬ್ಬರ, ೧೦ ಕೆ.ಜಿ. ಸಾರಜನಕ, ೨೫ ಕೆ.ಜಿ. ರಂಜಕ ಮತ್ತು ೨೫ ಕೆ.ಜಿ. ಪೊಟಾಷ್ ಅವಶ್ಯಕ. ಭೂಮಿಯಲ್ಲಿ ಸಾರಜನಕ ಕೊರತೆ ಇದ್ದಾಗ ಮಾತ್ರ ಪ್ರಾರಂಭಿಕವಾಗಿ ಸಾರಜನಕವನ್ನು ಕೊಡಬೇಕು. ಪೈರು ಕಾಣಿಸಿದ ನಂತರ ೧ರಿಂದ ೨ ಬಾರಿ ಕಳೆ ನಿಯಂತ್ರಿಸಬೇಕು. ಬಿತ್ತನೆಯ ೫೫ ದಿನಗಳ ನಂತರ ಅಥವಾ ಸೇ. ೫೦ ಭಾಗ ಹೂವಾದಾಗ ಒಂದೆರಡು ಕಟಾವಿನಿಂದ ಪ್ರತಿ ಎಕರೆಗೆ ೧೦ರಿಂದ ೧೨ ಟನ್ ಹಸಿರು ಮೇವನ್ನು ಪಡೆಯಬಹುದು.

(ಇನ್ನೂ ಇದೆ)

ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ