೪. ದ್ವಿದಳ ಬಹುವಾರ್ಷಿಕ ಬೆಳೆಗಳು :
ಅ. ಕುದುರೆ ಮಸಾಲೆ (ಲೂಸರ್ನ್) : ನೀರಾವರಿ ಆಶ್ರಯದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲವನ್ನು ಹೊರತುಪಡಿಸಿ ವರ್ಷದ ಎಲ್ಲಾ ಕಾಲದಲ್ಲಿಯೂ ಒಳ್ಳೆಯ ಇಳುವರಿ ಬರುತ್ತದೆ. ಎಲ್ಲಾ ಜಾನುವಾರುಗಳೂ ಇದನ್ನು ಇಷ್ಟಪಟ್ಟು ತಿನ್ನುತ್ತವೆ. ಪೌಷ್ಟಿಕಾಂಶಗಳ ಆಗರವಾಗಿರುವ ಇದನ್ನು ಮೇವುಗಳ ರಾಜ ಎಂದು ಕರೆಯಬಹುದು.
ಶೀತವಲಯದ ವಾತಾವರಣದಲ್ಲಿ ಈ ಮೇವು ಚೆನ್ನಾಗಿ ಬೆಳೆಯುತ್ತದೆ. ಪಂಜಾಬ್-೦, ಸಿರಸ್-೯, ಆನಂದ-೨, ಟಿ-೯ ಮತ್ತು ಪಂಜಾಬ್-೯ ಉತ್ತಮ ತಳಿಗಳು. ಉತ್ತಮವಾಗಿ ಭೂಮಿಯನ್ನು ತಯಾರಿಸುವುದು ಅತಿ ಅವಶ್ಯಕ. ಅಕ್ಟೋಬರ್ ಕೊನೆಯಿಂದ ನವೆಂಬರ್ ಮೊದಲ ವಾರ ಬಿತ್ತನೆಗೆ ಬಹಳ ಯೋಗ್ಯ. ರೈಜೋಬಿಯಂದ ಬೀಜೋಚಾರ ಮಾಡಿ ಬಿತ್ತುವುದು ಒಳ್ಳೆಯದು. ಬೀಜವನ್ನು ಆಳಕ್ಕೆ ಬೀಳದಂತೆ ೧ ಅಡಿ ಅಂತರದ ಸಾಲಿನಲ್ಲಿ ಬಿತ್ತಬೇಕು. ಬಿತ್ತುವಾಗ ಭೂಮಿಯಲ್ಲಿನ ತೇವಾಂಶವನ್ನು ಸರಿಯಾಗಿ ನೋಡಿ ಬಿತ್ತಬೇಕು. ಬಿತ್ತನೆಗೆ ಮೊದಲು ಎಕರೆಗೆ ೧೨ರಿಂದ ೧೪ ಟನ್ ಸಾವಯವ ಗೊಬ್ಬರ, ೧೫ ಕೆ.ಜಿ. ಸಾರಜನಕ, ೪೦ ಕೆ.ಜಿ. ರಂಜಕ ಮತ್ತು ೪೦ ಕೆ.ಜಿ. ಪೊಟಾಷನ್ನು ಕೊಡಬೇಕು. ಪ್ರಾರಂಭಿಕವಾಗಿ ೪೦ ಕೆ.ಜಿ. ರಂಜಕವನ್ನು ಕೊಟ್ಟು ನಂತರದ ವರ್ಷಗಳಲ್ಲಿ ಸಾಲಿನ ಇಕ್ಕೆಲಗಳಲ್ಲೂ ಸಾಲು ಗುಳಿಯನ್ನು ಮಾಡಿ ಅದರಲ್ಲಿ ೩೦ ಕೆ.ಜಿ. ರಂಜಕವನ್ನು ಸಾಧಾರಣವಾಗಿ ಅಕ್ಟೋಬರ್ ತಿಂಗಳ ಕೂಳೆ ಬೆಳೆಯಲ್ಲಿ ಕೊಡುವುದು. ಕೂಳೆ ಬೆಳೆಗೆ ಸಾರಜನಕ ಅವಶ್ಯಕತೆ ಇರುವುದಿಲ್ಲ. ಒಂದು ತಿಂಗಳ ಬಿತ್ತನೆಯ ನಂತರ ಮೊದಲ ನೀರನ್ನು ಕೊಟ್ಟು ನಂತರ ೧೦ರಿಂದ ೧೫ ದಿನಗಳಿಗೊಮ್ಮೆ ಕೊಡಬೇಕು. ಮೊದಲ ಕಟಾವು ಅಂದಾಜು ೨ರಿಂದ ೨.೫ ತಿಂಗಳಿಗೆ ಬರುತ್ತದೆ. ನಂತರ ಪ್ರತಿ ೨೫ರಿಂದ ೩೦ ದಿವಸಗಳಿಗೊಮ್ಮೆ ಕಟಾವು ಮಾಡಬಹುದು. ಮೊದಲ ವರ್ಷದಲ್ಲಿ ಇಳುವರಿ ಕಡಿಮೆ. ಆದರೆ ನಂತರದ ವರ್ಷಗಳಲ್ಲಿ ಪ್ರತಿ ಎಕರೆಗೆ ೪೦-೫೦ ಟನ್ ಹೆಚ್ಚು ಇಳುವರಿ ಮೇವನ್ನು ಪಡೆಯಬಹುದು.
ಕಳೆಯ ನಿಯಂತ್ರಣ ಬಳ ಮುಖ್ಯ. ಕೈಕಳೆ ಮತ್ತು ಹಂಟೆ ಹೊಡೆಯುವುದರಿಂದ ನಿಯಂತ್ರಿಸಬೇಕು. ಮಲೆನಾಡಿನಲ್ಲಿ ಈ ಬೆಳೆಯನ್ನು ಬೆಳೆಯುವುದು ಕಷ್ಟ. ಅಲ್ಲಿನ ವಾತಾವರಣಕ್ಕೆ ಇದು ಹುಲುಸಾಗಿ ಬೆಳೆಯುವುದಿಲ್ಲ.
ಆ. ಸ್ಟೆಲೋಸಾಂತಸ್ : ಈ ಬೆಳೆ ನೀರು ನಿಲ್ಲುವ ಹಾಗೂ ಜೌಗು ಪ್ರದೇಶಗಳಲ್ಲಿ ಸರಿಯಾಗಿ ಬೆಳೆಯುವುದಿಲ್ಲ. ಆದರೆ ಎಲ್ಲ ರೀತಿಯ ಮಣ್ಣಿನಲ್ಲಿ ಹಾಗೂ ಉಷ್ಣ ಮತ್ತು ಅರೆ ಉಷ್ಣ ವಲಯದ ಎಲ್ಲಾ ಪ್ರದೇಶಗಳಲ್ಲಿಯೂ ಬೆಳೆಯುತ್ತದೆ.
ಇದರಲ್ಲಿ ಹಮಾಟ, ಗಿನಿಯೆನ್ಸಿ, ಗ್ರಹಾಂ ಮತ್ತು ಕುಕ್ ಮುಖ್ಯವಾದ ತಳಿಗಳು. ಸ್ಥಳೀಯವಾಗಿ ಮರಳು ಮಿಶ್ರಿತ ಕೆಂಪು ಮಣ್ಣಿನ ಹುಲ್ಲುಗಾವಲು ಇರುವ ನಮ್ಮ ರಾಜ್ಯದ ಕೆಲವು ಅಮೃತಮಹಲ್ ಕಾವಲುಗಳು ಮತ್ತು ಇನ್ನಿತರ ಇಂತಹುದೇ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ನಮ್ಮ ದೇಶಕ್ಕೆ ಸೂಕ್ತವಾದ ಪ್ರೂಟಿಕೋಸ ಎಂಬ ತಳಿಯನ್ನೂ ಸಹ ಗುರುತಿಸಲಾಗಿದೆ.
ಉಳುಮೆ ಮಾಡಿ ಉತ್ತಮ ಬೀಜದ ಸಮತಳವನ್ನು (ಸೀಡ್ ಬೆಡ್) ತಯಾರು ಮಾಡಬೇಕು. ಬೀಜವನ್ನು ಒಂದು ಸೆಂಟಿಮೀಟರಿಗಿಂತ ಹೆಚ್ಚಿನ ಆಳಕ್ಕೆ ಬೀಳದಂತೆ ಬಿತ್ತಿ ಅದನ್ನು ಮುಳ್ಳು ಹೊಡೆದು ಅಥವಾ ಹಲಗೆ ಹೊಡೆದು ಭೂಮಿಯನ್ನು ಯೋಗ್ಯ ರೀತಿಯಲ್ಲಿ ಹದವಾಗಿ ಮುಚ್ಚುವುದು ಅವಶ್ಯಕ. ಮಣ್ಣಿನಲ್ಲಿನ ತೇವಾಂಶ ಬಿತ್ತನೆಗೆ ಬಳ ಮುಖ್ಯ. ಪ್ರತ್ಯೇಕವಾಗಿ ಬೆಳೆಯಬೇಕಾದ ಸಂದರ್ಭದಲ್ಲಿ ರೈಜೋಬಿಯಂ ಬೀಜೋಪಚಾರ ಮಾಡಬೇಕು. ಆದರೆ ಇತರ ಹುಲ್ಲಿನ ಮಧ್ಯೆ ಚೆಲ್ಲುವುದರ ಮೂಲಕ ಬಿತ್ತಿದಾಗ ಬೀಜೋಪಚಾರದ ಅಗತ್ಯತೆ ಇರುವುದಿಲ್ಲ.
ಪ್ರತಿ ಹೆಕ್ಟೇರ್ ಒಂದಕ್ಕೆ ಕನಿಷ್ಟ ೨೦ ಕೆ.ಜಿ. ರಂಜಕ ಅವಶ್ಯಕತೆ ಇರುತ್ತದೆ. ಸಾಲಿನಲ್ಲಿ ಬಿತ್ತುವಾಗ ಒಂದೂವರೆಯಿಂದ ಎರಡು ಅಡಿ ಅಂತರದಲ್ಲಿ ಬಿತ್ತಬೇಕು. ಸಾಲಿನ ಮಧ್ಯದಲ್ಲಿ ಹರತೆ ಹೊಡೆಯುವುದರಿಂದ ಕಳೆಯನ್ನು ನಿಯಂತ್ರಿಸಬೇಕು. ಆದರೆ ಕೈನಿಂದ ಕಳೆ ತೆಗೆಯುವುದು ಹೆಚ್ಚು ಫಲಕಾರಿ. ಬಿತ್ತನೆಯದ ಒಂದು ತಿಂಗಳ ನಂತರ ತಿಂಗಳಿಗೊಮ್ಮೆ ಕಳೆ ತೆಗೆಯಬೇಕು.
ಮೇವಿನ ಮರಗಳು ಹಾಗೂ ಪೊದೆಗಳು : ಪ್ರೊಟೀನ್ ಅಂಶ ಹೆಚ್ಚು ಇರುವ ಆಹಾರ ಪದಾರ್ಥಗಳೆಂದರೆ ದ್ವಿದಳ ಧಾನ್ಯದ ಕಾಳುಗಳು, ಮತ್ತು ಸೊಪ್ಪು, ಎಣ್ಣೆಕಾಳಿನ ಹಿಂಡಿಗಳು, ಮರದ ಸೊಪ್ಪುಗಳು ಇತ್ಯಾದಿ. ದ್ವಿದಳ ಧಾನ್ಯಗಳು ಬಲು ದುಬಾರಿ. ಮಾನವನ ಆಹಾರದಲ್ಲಿಯೇ ದ್ವಿದಳ ಧಾನ್ಯಗಳನ್ನು ಬಳಸಲು ಹಿಂದುಮುಂದು ನೋಡಬೇಕಾದ ಈ ಸಂದರ್ಭದಲ್ಲಿ ಜಾನುವಾರುಗಳಿಗೆ ಇದನ್ನು ಯಥೇಚ್ಛವಾಗಿ ನೀಡಲು ಹೇಗೆ ಸಾಧ್ಯ ? ಎಣ್ಣೇಕಾಳುಗಳ ಹಿಂಡಿಯ ಬೆಲೆಯೂ ಗಗನಕ್ಕೇರಿದೆ. ಈ ಕಾರಣದಿಂದ ಮಾರುಕಟ್ಟೆಯಲ್ಲಿ ಪಶು ಆಹಾರದ ದರ ದಿನಂಪ್ರತಿ ಹೆಚ್ಚುತ್ತಲೇ ಇದೆ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಪ್ರೊಟೀನ್ ಪೂರೈಸುವ ಸುಲಭ ಮಾರ್ಗವೇ ಈ ಮೇವಿನ ಗಿಡಮರಗಳನ್ನು ಬೆಳೆಯುವುದು.
ಸುಬಾಬುಲ್, ಕ್ಯಾಲಿಯಾಂಡ್ರಾ, ಗ್ಲಿರಿಸಿಡಿಯಾ, ಹಾಲವಾಣ, ಹಿಪ್ಪುನೇರಳೆ (ರೇಷ್ಮೆ), ಇತ್ಯಾದಿ ಮರ/ಪೊದೆಗಳನ್ನು ಮನೆಯ ಸುತ್ತಮುತ್ತ ಬೆಳೆದು ಅವುಗಳ ಸೊಪ್ನು ಪ್ರತಿ ದಿನ ರಾಸುವೊಂದಕ್ಕೆ ೪-೫ ಕೆ.ಜಿ. ನೀಡಬಹುದು. ಈ ರೀತಿ ಬೆಳೆಸಿದ ಸೊಪ್ಪು ಏಕದಳ ಹಸಿರು ಮೇವಿನ ಜೊತೆಗೆ ಕೊಡಬಹುದು. ಒಟ್ಟೂ ಹಸಿರು ಮೇವಿನ ಕಾಲು ಭಾಗದಷ್ಟು ಮರದ ಮತ್ತು ದ್ವಿದಳ ಧಾನ್ಯದ ಸೊಪ್ಪನ್ನು ಕೊಡಬೇಕು.
ಮೇವಿನ ಮರಗಳ ಬೇಸಾಯ ಕ್ರಮ : ಕಡಿಮೆ ಫಲವತ್ತಾದ ಭೂಮಿಯಲ್ಲಿಯೂ ಸಹ ಇವನ್ನು ಬೆಳೆಯಬಹುದು. ಇವುಗಳ ಎಲೆ ಮತ್ತು ಕೊಂಬೆಗಳು ಮೃದುವಾಗಿದ್ದು ವರ್ಷ ಪೂರ್ತಿ ಹಸಿರು ಮೇವನ್ನು ನೀಡುತ್ತವೆ. ಇದು ಅಧಿಕ ಸಸಾರಜನಕ ಮತ್ತು ಪಿಷ್ಟವನ್ನು ಹೊಂದಿರುತ್ತದೆ. ವಿವಿಧ ರೀತಿಯ ಮಣ್ಣು ಮತ್ತು ವಾತಾವರಣದಲ್ಲಿ ಸಹ ಬೆಳೆಯುತ್ತವೆ.
ಮರದ ಬೀಜಗಳನ್ನು ೧ ಮೀಟರ್ ಸಾಲು ಗುಳಿಗಳನ್ನು ಮಾಡಿ ಬಿತ್ತಬಹುದು. ಪ್ರತಿ ಹೆಕ್ಟೇರ್ ಒಂದಕ್ಕೆ ೪ರಿಂದ ೧೦ ಕೆ.ಜಿ. ಬೀಜ ಬೇಕಾಗುವುದು. ಬಿತ್ತನೆಗೆ ಮೊದಲು ಬೀಜವನ್ನು ಅರ್ಧ ದಿನ ನೆನೆಸಬೇಕು. ಬಿತ್ತುವ ಮೊದಲು ರೈಜೋಬಿಯಂ ಬೀಜೋಪಚಾರ ಮಾಡಿದರೆ ಒಳ್ಳೆಯದು. ಬದುಗಳಲ್ಲಿ ಬೆಳೆಯುವುದಾದರೆ ೫ ಮೀ. ಅಂತರದಲ್ಲಿ ಸಸಿ ನೆಡಬೇಕು.
ಪ್ರತಿ ಹೆಕ್ಟೇರ್ ಒಂದಕ್ಕೆ ೨೫ ಟನ್ ಸಾವಯವ ಗೊಬ್ಬರ ಮತ್ತು ೫೦ ಕೆ.ಜಿ. ರಂಜಕವನ್ನು ಮಣ್ಣಿನಲ್ಲಿ ಸೇರಿಸಬೇಕು. ನಂತರ ನಾಟಿ ಮಾಡುವಾಗ ೨೫ ಕೆ.ಜಿ. ಸಾರಜನಕವನ್ನು ಕೊಡುವುದು. ಭೂಮಿಯನ್ನು ಎರಡು ವರ್ಷಗಳಿಗೊಮ್ಮೆಯಾದರೂ ಸಾಲಿನಲ್ಲಿ ಉಳುಮೆ ಮಾಡಿ ೪೦ ಕೆ.ಜಿ. ರಂಜಕವನ್ನು ಮುಂಗಾರು ಪ್ರಾರಂಭವಾಗುವ ಮೊದಲು ಕೊಡುವುದರಿಂದ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯ. ಪ್ರಾರಂಭದಲ್ಲಿ ನಿಧಾನವಾಗಿ ಬೆಳೆಯುವುದರಿಂದ ಕಳೆಯನ್ನು ನಿಯಂತ್ರಿಸಬೇಕು. ಮೊದಲ ಕಟಾವನ್ನು ಗಿಡಗಳು ೩ರಿಂದ ೪ ಅಡಿ ಬೆಳೆದಾಗ ಮಾಡಬೇಕು. ನಂತರದ ಕಟಾವನ್ನು ಮಳೆಗಾಲದಲ್ಲಿ ೪೦ ದಿವಸಗಳ ಅಂತರದಲ್ಲಿ, ಚಳಿಗಾಲದಲ್ಲಿ ೬೦ ದಿನಗಳ ಅಂತರದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ೫೦ ದಿನಗಳ ಅಂತರದಲ್ಲಿ ಮಾಡಬೇಕು. ಉತ್ತಮ ಇಳುವರಿಗಾಗಿ ೩೦ ದಿನಗಳ ಅಂತರದಲ್ಲಿ ಭೂಮಿಯನ್ನು ಹದವನ್ನು ನೋಡಿ ನೀರು ಕೊಡುವುದು ಅಪೇಕ್ಷಣೀಯ. ಇದರಿಂದ ಪ್ರತಿ ವರ್ಷದಲ್ಲಿ ಪ್ರತಿ ಹೆಕ್ಟೇರಿಗೆ ೫೦ರಿಂದ ೬೦ ಟನ್ ಹಸಿರು ಮೇವನ್ನು ಪಡೆಯಬಹುದು.
ಮೇವಿನ ಮರದ ಬೀಜಗಳು ದೊರೆಯುವ ಸ್ಥಳಗಳು : ಕೇಂದ್ರೀಯ ಬೀಜೋತ್ಪಾದನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು, ಕೃಷಿ ಹಾಗೂ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ವಿಸ್ತರಣಾ ವಿಭಾಗಗಳಲ್ಲಿ ಅಲ್ಲದೇ ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಹಾಲು ಒಕ್ಕೂಟಗಳಲ್ಲಿ ಬೀಜಗಳು ಲಭ್ಯವಿರುತ್ತವೆ. ಬೈಫ್ ಸಂಸ್ಥೆ, ತಿಪಟೂರು ಹಾಗೂ ಮಾರುತಿ ಸೀಡ್ಸ್ ಕಾರ್ಪೊರೇಶನ್ ಹೆಬ್ಬಾಳ, ಬೆಂಗಳೂರು ಇಲ್ಲಿ ವಿಚಾರಿಸಿ ವಿವಿಧ ಬೀಜಗಳನ್ನು ಪಡೆಯಬಹುದು.
(ಇನ್ನೂ ಇದೆ)
ಚಿತ್ರಗಳು ಮತ್ತು ಮಾಹಿತಿ: ರಾಧಾಕೃಷ್ಣ ಹೊಳ್ಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!