ಮೇವಿಗಾಗಿ ಪಾಚಿ / ಅಂತರಗಂಗೆಯ ಉಪಯೋಗ
ಅಜೋಲಾ ಮೇವಿನ ಬೆಳೆ : ಬ್ಲೂ ಗ್ರೀನ್ ಆಲ್ಗೆ ಅಥವಾ ಪಾಚಿ ಜಾತಿಗೆ ಸೇರಿದ ಅಜೋಲ್ಲಾ ಮೇವಿನ ಬೆಳೆಯು ಅನೇಕ ಪೋಷಕಾಂಶಗಳನ್ನು ಹೊಂದಿದ ನೀರಿನ ಮೇಲೆ ವರ್ಷವಿಡೀ ಬೆಳೆಯಬಹುದಾದ ಮೇವಿನ ಬೆಳೆ. ಭಾರತದಲ್ಲಿ ದೊರೆಯುವ ಅನೇಕ ಅಜೊಲ್ಲಾ ತಳಿಗಳಲ್ಲಿ ಪಿನ್ನಾಟ, ಸಾಲ್ಫೇನಿಯಾ ಕುಟುಂಬಕ್ಕೆ ಸೇರಿದ ತಳಿಗಳನ್ನು ಮೇವಿಗಾಗಿ ಬಳಸುತ್ತಾರೆ. ಇದು ವಾತಾವರಣದ ಸಾರಜನಕವನ್ನು ಹೀರಿಕೊಂಡು ಭೂಮಿಗೆ ಸೇರಿಸುವುದರಿಂದ ಇದನ್ನು ಹೊಲ ಗದ್ದೆಗಳಲ್ಲಿ ಜೈವಿಕ ಗೊಬ್ಬರವಾಗಿ ಸಹ ಉಪಯೋಗಿಸುತ್ತಾರೆ.
ಅಜೊಲ್ಲಾ ಮೇವಿನಲ್ಲಿರುವ ಪೋಷಕಾಂಶಗಳ ವಿವರ :
ಕ್ರ.ಸಂ. ಸಸ್ಯ ಪೋಷಕಾಂಶಗಳು ಶೇ. ಪ್ರಮಾಣ
೧. ನೀರಿನ ಅಂಶ ೯೦ - ೯೨
೨. ಒಟ್ಟು ಘನ ಪದಾರ್ಥ ೮ - ೧೦
೩. ಕಚ್ಚಾ ಸಸಾರಜನಕ (ಘನ ಪದಾರ್ಥದ ಆಧಾರದಲ್ಲಿ) ೨೫-೩೦
೪. ಕ್ಯಾಲ್ಸಿಯಂ, ರಂಜಕ, ಮ್ಯಾಗ್ನೀಸಿಯಂ, ಕಬ್ಬಿಣ, ೧೦-೧೫
೫. ಕೊಬ್ಬು, ಪಿಷ್ಟ ಇತ್ಯಾದಿ.
ಅಜೊಲಾ ಬೆಳೆಯಲು ಅನುಸರಿಸಬೇಕಾದ ಕ್ರಮಗಳು : ಇದರ ಎಲೆ ಹಾಗೂ ಕಾಂಡ ತೀರಾ ಚಿಕ್ಕದಾಗಿದ್ದು ಮಣ್ಣಿನ ರಸಸರ (ಪಿ.ಎಚ್.) ೫.೦ - ೬.೦ ಹಾಗೂ ವಾತಾರರಣದ ಉಷ್ಣತೆ ೨೫-೨೭ ಡಿಗ್ರಿ ಸೆ. ಇದ್ದರೆ ಚೆನ್ನಾಗಿ ಬೆಳೆಯುತ್ತದೆ. ಆದ್ದರಿಂದ ನೆರಳು ಇರುವ ಎತ್ತರದ ಪ್ರದೇಶ, ಇಲ್ಲವೇ ಶೇಡ್ನೆಟ್ ಅಥವಾ ಚಪ್ಪರ ಹಾಕುವುದು ಅವಶ್ಯಕ.
ಇದನ್ನು ೩ ವಿಧಾನಗಳಲ್ಲಿ ಬೆಳೆಯಬಹುದು : ೧) ಪ್ಲಾಸ್ಟಿಕ್ ಹಾಳೆ ವಿಧಾನ, ೨) ಟ್ಯಾಂಕ್ ವಿಧಾನ, ೩) ಮಡಿ ಮಾಡುವ ವಿಧಾನ.
ಯಾವುದೇ ವಿಧಾನವಾದರೂ ಪ್ರತಿ ದಿನಕ್ಕೆ ಒಂದು ಕೆ.ಜಿ. ಅಜೋಲಾ ಪಡೆಯಲು ೨ ಮೀ. ಉದ್ದ ೧ ಮೀ. ಅಗಲ ಹಾಗೂ ೧ ಅಡಿ ಆಳದ ಗುಂಡಿ ನಿರ್ಮಿಸಿಕೊಳ್ಳಬೇಕು. ಇದಕ್ಕೆ ಪ್ಲಾಸ್ಟಿಕ್ ಹಾಳೆ ಹಾಕಿ ಎಲ್ಲ ಮೂಲೆಗಳನ್ನು ಸಮತಟ್ಟು ಮಾಡಬೇಕು. ಇದರ ಮೇಲೆ ಪುಡಿ ಮಾಡಿದ ಫಲವತ್ತಾದ ೨೦-೨೫ ಕೆ.ಜಿ. ಮಣ್ಣನ್ನು ಹಾಕಿ ಸಮವಾಗಿ ಹರಡಬೇಕು. ನಂತರ ೫ ಕೆ.ಜಿ. ಸಗಣಿ ಹಾಗೂ ೨೦ ಗ್ರಾಂ. ಸೂಪರ್ ಫಾಸ್ಫೇಟ್ ಹಾಗೂ ೫೦ ಗ್ರಾಂ. ಲವಣ ಮಿಶ್ರಣವನ್ನು ೧೦ ಲೀ. ನೀರಿನಲ್ಲಿ ಬೆರೆಸಿ ಗುಂಡಿಯೊಳಗೆ ಸುರಿಯಬೇಕು. ಗುಂಡಿಯಲ್ಲಿ ೫-೮ ಸೆಂ.ಮೀ. ವರೆಗೆ ನೀರು ಹಾಯಿಸಬೇಕು. ನಂತರ ಒಂದು ಬೊಗಸೆಯಾಗುವಷ್ಟು ತಾಜಾ ಹಾಗೂ ಶುದ್ಧವಾದ ಮದರ್ ಕಲ್ಚರ್ ಅಂದರೆ ಬೇರೆ ಕಡೆ ಬೆಳೆದ ಅಜೋಲಾವನ್ನು ಹೊಂಡದಲ್ಲಿ ಹಾಕಬೇಕು. ೧೦-೧೨ ದಿನಗಳಲ್ಲಿ ಅಜೋಲಾ ಮೇವು ಗುಂಡಿಯ ತುಂಬಾ ಬೆಳೆದು ಆಹಾರಕ್ಕೆ ಸಿದ್ಧವಾಗುತ್ತದೆ.
ಟ್ಯಾಂಕ್ ಅಥವಾ ತೊಟ್ಟಿ ವಿಧಾನದಲ್ಲಿ ಮೇಲೆ ತಿಳಿಸಿದ ಅಳತೆಯ ಶಾಶ್ವತ ತೊಟ್ಟಿಯನ್ನು ನಿರ್ಮಿಸಬಹುದು. ಮಡಿ ವಿಧಾನದಲ್ಲಿ ಹೊಲಗದ್ದೆಗಳಲ್ಲಿ ಮಡಿ ಮಾಡಿ ನೀರು ಹಾಯಿಸಿ ದೊಡ್ಡ ಪ್ರಮಾಣದಲ್ಲಿ ಬೆಳೆಯಬಹುದು. ಕೆಲವರು ಗೋಬರ್ ಗ್ಯಾಸ್ ಟ್ಯಾಂಕ್, ನೀರಿನ ಬಾನಿ ಹಾಗೂ ನಿರು ಕುಡಿಯಲು ಬಳಸುವ ತೊಟ್ಟಿಗಳಲ್ಲಿ ಸಹ ಅಜೋಲಾ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಧಿಕ ಪ್ರಮಾಣದಲ್ಲಿ ಶೀಘ್ರವಾಗಿ ಅಜೋಲಾ ಬೆಳೆಯಲು ತೊಟ್ಟಿಗೆ ವಾರಕ್ಕೊಮ್ಮೆ ೫ ಲೀ. ನೀರಿನಲ್ಲಿ ೧ ಕೆ.ಜಿ. ಸಗಣಿಯನ್ನು ಬೆರೆಸಿ ಹಾಕುತ್ತಿರಬೇಕು. ಅಲ್ಲದೆ ತೊಟ್ಟಿಯ ನೀರನ್ನು ತಿಂಗಳಿಗೊಮ್ಮೆ, ಮಣ್ಣನ್ನು ೬ ತಿಂಗಳಿಗೊಮ್ಮೆ ಬದಲಾಯಿಸಬೇಕು. ಮತ್ತು ಪ್ರತಿ ದಿನ ೨೫ ಭಾಗ ಅಜೋಲಾ ತೆಗೆದರೂ ಮರುದಿನ ಪುನಃ ತೊಟ್ಟಿ ತುಂಬ ಅಜೋಲಾ ಬೆಳೆದಿರುವುದನ್ನು ಗಮನಿಸಬಹುದು. ಪ್ರತಿ ದಿನ ಬೇರೆ ಬೇರೆ ಕಡೆಗಳಿಂದ ಇದನ್ನು ತೆಗೆಯಬೇಕು.
ರಾಸುಗಳಿಗೆ ಅಜೋಲಾ ನೀಡುವ ವಿಧಾನ : ಅಜೋಲಾವನ್ನು ೬ ತಿಂಗಳು ಮೇಲ್ಪಟ್ಟ ಎಲ್ಲಾ ಹಸು, ಎಮ್ಮೆ, ಕುರಿ, ಮೇಕೆ, ಕೋಳಿ ಮೊಲ, ಹಂದಿ ಎಲ್ಲದಕ್ಕೂ ಕೊಡಬಹುದು. ತೊಟ್ಟಿಯಿಂದ ಅಜೋಲಾವನ್ನು ತೆಗೆದು ಚೆನ್ನಾಗಿ ತೊಳೆದು ಪಶುಗಳಿಗೆ ತಿನ್ನಲು ಕೊಡಬೇಕು. ಪಶು ಆಹಾರದೊಂದಿಗೆ ಕೊಡುವುದು ಸೂಕ್ತ. ಆಕಳು – ಎಮ್ಮೆಗೆ ದಿನಕ್ಕೆ ೧-೨ ಕಿಲೋ ಕೊಡಬಹುದು. ೨ ಕಿಲೋಗಿಂತ ಹೆಚ್ಚು ಕೊಟ್ಟರೆ ಅಜೀರ್ಣವಾಗಿ ಹೊಟ್ಟೆ ಉಬ್ಬರಿಸುವ ಸಾಧ್ಯತೆ ಇದೆ.
ಕುದುರೆ ಮಸಾಲೆ, ಓಟ್ಸ್, ಸೋರ್ಗಂ, ಮೆಕ್ಕೆಜೋಳ, ಜೋಳ ಹಾಗೂ ಇನ್ನಿತರ ಮೇವಿನ ಬೆಳೆಗಳಿಂದ ಉತ್ತಮ ಗುಣಮಟ್ಟದ ಒಣಮೇವನ್ನು ಸಿದ್ಧಪಡಿಸಬಹುದಾಗಿದೆ. ಈ ಉದ್ದೇಶಕ್ಕಾಗಿ ಆಯ್ಕೆ ಮಾಡಲಾಗುವ ಮೇವಿನ ಬೆಳೆಯನ್ನು ಅತಿ ಹೆಚ್ಚು ಪೌಷ್ಟಿಕಾಂಶ ದೊರೆಯುವ ಹಂತದಿಂದ ಹೂವು ಬಿಡುವ ಹಂತದಲ್ಲಿ ಕಟಾವುಗೊಳಿಸಬೇಕು. ಕಟಾವುಗೊಳಿಸಲಾದ ಮೇವಿನ ಬೆಳೆಯನ್ನು ೫-೧೦ ಕಿ.ಗ್ರಾಂಗಳಷ್ಟು ತೂಕದ ಕಟ್ಟುಗಳನ್ನಾಗಿ ಮಾಡಿ ಹೂವಿರುವ ತುದಿಯನ್ನು ತಲೆ ಕೆಳಗು ಮಾಡಿ ಬಿಸಿಲಿನಲ್ಲಿ ಒಣಗಿಸಬೇಕು.
ಮೇವು ಪೂರ್ಣ ಪ್ರಮಾಣದಲ್ಲಿ ಒಣಗಲು ಸಹಾಯವಾಗುವಂತೆ ಈ ಕಟ್ಟುಗಳನ್ನು ತಿರುಗಿಸುತ್ತಿರಬೇಕು. ಪೂರ್ಣ ಪ್ರಮಾಣದಲ್ಲಿ ಮೇವು ಒಣಗಿದ ಬಳಿಕ ತೇವಾಂಶವಿಲ್ಲದ ಸ್ಥಳದಲ್ಲಿ ಇದೇ ರೂಪದಲ್ಲಿ ಕತ್ತರಿಸಿ ಸಂಗ್ರಹಿಸಿಡಬಹುದು. ಹಸಿರು ಮೇವು ಹೇರಳವಾಗಿ ದೊರಕುವ ಋತುಮಾನದಲ್ಲಿ ಮೇವನ್ನು ಒಣಗಿಸಿದ ಹಸಿಹುಲ್ಲು ಹಾಗು ರಸಮೇವಿನ ರೂದಲ್ಲಿ ಸಂರಕ್ಷಿಸಿಟ್ಟು ಬೇಸಿಗೆ ಕಾಲದಲ್ಲಿ ಹಸಿರು ಮೇವಿಗೆ ಪರ್ಯಾಯವಾಗಿ ಬಳಸಬಹುದು.
ರಸಮೇವು (ಸೈಲೇಜ್) : ಗಾಳಿಯಾಡದೇ ಶೇಖರಿಸಿಟ್ಟ ಹಸಿರು ಮೇವಿಗೆ ರಸಮೇವು ಎನ್ನುವರು. ರಸಮೇವಿನಲ್ಲಿ ತೇವಾಂಶ ಮತ್ತು ಪೋಷಕಾಂಶಗಳು ನಾಶವಾಗಿರುವುದಿಲ್ಲ. ಮೇವನ್ನು ಚಿಕ್ಕ ಚಿಕ್ಕ (ಅರ್ಥ ಇಂಚು) ತುಂಡುಗಳಾಗಿ ಕತ್ತರಿಸಿ ಗಾಳಿಯಾಡದಂತೆ ತುಳಿದು ತುಂಬಿ ಶೇಖರಿಸಿಟ್ಟರೆ ಸರಮೇವು ತಯಾರಾಗುತ್ತದೆ. ಅಧಿಕ ಪ್ರಮಾಣದಲ್ಲಿ ಹಸಿರು ಮೇವು ಲಭ್ಯವಿದ್ದಾಗ ಈ ವಿಧಾನವನ್ನು ಅನುಸರಿಸಿ ಮೇವನ್ನು ಬೇಸಿಗೆ ಕಾಲದಲ್ಲಿ ಅಥವಾ ಮೇವಿನ ಅಭಾವವಿದ್ದಾಗ ಬಳಸಬಹುದು.
ದಪ್ಪದಂಟಿನ ಜೋಳ ಮತ್ತು ಮುಸುಕಿನ ಜೋಳ ರಸಮೇವಿಗೆ ಸೂಕ್ತವಾದ ಬೆಳೆಗಳು. ಹೈಬ್ರಿಡ್ ನೇಪಿಯರ್ ಅಥವಾ ಗಿನಿ ಹುಲ್ಲನ್ನು ಸಹಾ ರಸಮೇವಿಗೆ ಬಳಸಬಹುದು. ರಸಮೇವನ್ನು ಗುಂಡಿಗಳಲ್ಲೂ, ಟ್ರೆಂಚ್ಗಳಲ್ಲೂ, ಬಂಕರ್ಗಳಲ್ಲು ಮತ್ತು ಟವರ್ಗಳಲ್ಲಿಯೂ ತಯಾರಿಸಬಹುದು. ಸಾಧಾರಣವಾಗಿ ಅವಶ್ಯಕತೆಯ ಆಧಾರದ ಮೇಲೆ ಗುಂಡಿಗಳಲ್ಲಿ ತಯಾರಿಸುವುದು ಸುಲಭ ಕ್ರಮ. ಮಳೆಯ ನೀರು ಒಳಗೆ ನುಗ್ಗದ ಜಾಗದಲ್ಲಿ ಗುಂಡಿಗಳನ್ನು ತೆಗೆಯಬೇಕು. ಈ ಗುಂಡಿಗಳು ಗುಂಡಾಗಿ ಅಥವಾ ಚೌಕಾಕಾರದ್ದಾಗಿರಬಹುದು. ಗುಂಡಿಯ ಅಳತೆಯನ್ನು ಮೇವು ಕೊರತೆಯ ಕಾಲ ಲಭ್ಯವಿರುವಾಗ ಮೇವಿನ ಪ್ರಮಾಣ ಮತ್ತು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ನಿರ್ಧರಿಸಬೇಕು. ಗುಂಡಿಯ ಆಳ ೪ ಅಡಿಗಳಿಗಿಂತ ಕಡಿಮೆ ಹಾಗು ೧೦ ಅಡಿಗಳಿಗಿಂತ ಹೆಚ್ಚಾಗಿಯೂ ಇರಬಾರದು. ಒಂದು ಘನ ಅಡಿ ಜಾಗದಲ್ಲಿ ಅಂದಾಜು ೨೦ ಕೆ.ಜಿ. ಕತ್ತರಿಸಿದ ಹಸಿರು ಮೇವನ್ನು ಶೇಖರಿಸಬಹುದು. ಅದರಂತೆ ಗುಂಡಿಯ ಅಳತೆಯನ್ನು ನಿಗದಿಪಡಿಸಬೇಕು ಈ ರೀತಿಯ ಗುಂಡಿಯ ಒಳಭಾಗವನ್ನು ಕಲ್ಲಿನಿಂದಾಗಲೀ ಅಥವಾ ಸಿಮೆಂಟಿನಿಂದಾಗಲೀ ಪ್ಲಾಸ್ಟರ್ ಮಾಡಬೇಕು. ಆದರೆ ಈ ರೀತಿ ಮಾಡುವುದು ಸ್ವಲ್ಪ ದುಬಾರಿಯಾಗುವುದರಿಂದ ಕಚ್ಚಾ ಗುಂಡಿಗಳಲ್ಲಿ ಸಹಿತ ರಸಮೇವನ್ನು ತಯಾರಿಸಬಹುದು. ಕಚ್ಚಾ ಗುಂಡಿಯ ತಳ ಮತ್ತು ಪಕ್ಕಗಳಿಗೆ ಸಗಣಿ ಲೇಪವನ್ನು ಮಾಡಿ ಆರಲು ಬಿಟ್ಟು ನಂತರ ಒಳಗೆ ಎಲ್ಲಾ ಕಡೆಗೂ ಒಣಗಿದ ಹೆಚ್ಚುವರಿ ಮೇವನ್ನಾಗಲೀ ಇಲ್ಲವೇ ಹಸಿರು ಮೇವನ್ನಾಗಲಿ ತೆಳುವಾಗಿ ಹಾಸಬೇಕು.
ರಸಮೇವು ತಯಾರಿಕೆಯ ವಿವಿಧ ಹಂತಗಳು :
೧. ಮೇವಿನಲ್ಲಿ ಸುಮಾರು ಶೇ. ೭೦ರಷ್ಟು ತೇವಾಂಶವಿರುವಾಗ ಹಾಗೂ ಮುಸುಕಿನ ಜೋಳವಾದಲ್ಲಿ ತೆನೆಯಲ್ಲಿ ಹಾಲ್ಗಾಳಾದಾಗ ಕೊಯ್ಲು ಮಾಡುವುದು.
೨. ಈ ರೀತಿಯ ಕೊಯ್ದ ಮೇವನ್ನು ಒಂದರಿಂದ ಒಂದೂವರೆ ಇಂಚು ಇರುವಂತೆ ಮೇವು ಕತ್ತರಿಸುವ ಯಂತ್ರದ ಸಹಾಯದಿಂದ ಕತ್ತರಿಸಬೇಕು.
೩. ಈ ಮೇವನ್ನು ರಸಮೇವಾಗಿ ತಯಾರಿಸಿದ ಗುಂಡಿಗಳಲ್ಲಿ ಬೀಳುವಂತೆಯೇ ಕತ್ತರಿಸುವುದು ಉತ್ತಮ. ನಂತರ ಕತ್ತರಿಸಿದ ಮೇವನ್ನು ಸಮವಾಗಿ ಹರಡುವುದು. ಇದಕ್ಕೆ ಮೊದಲು ಗುಂಡಿಯಲ್ಲಿ ತೆಳುವಾಗಿ ಉಪ್ಪನ್ನು ಸಿಂಪಡಿಸುವುದು ಉತ್ತಮ. ನಂತರ ಕತ್ತರಿಸಿದ ಮೇವಿನ ಮೇಲೆ ತೆಳುವಾಗಿ ಶೇ.೧ರ ಪ್ರಮಾಣದಲ್ಲಿ ಮೇವು ಕತ್ತರಿಸುತ್ತಿದ್ದಂತೆ ಪ್ರತಿ ಪದರಗಳ ಮೇಲೂ ಉಪ್ಪನ್ನು ಸಿಂಪಡಿಸಿ.
೪. ಕತ್ತರಿಸಿದ ತುಂಬಿದ ಮೇವನ್ನು ಕಾಲಲ್ಲಿ ತುಳಿದು ಅದುಮಿ ಗಾಳಿಯಾಡಂತೆ ಮಾಡಬೇಕು. ಇದು ಬಹಳ ಮುಖ್ಯ.
೫. ಈ ರೀತಿ ಗುಂಡಿಯಿಂದ ಸುಮಾರು ೩ ಅಡಿಗೂ ಎತ್ತರವಿರುವಂತೆ ಮೇವನ್ನು ತುಂಬಿ ನಂತರ ಮೇಲುಭಾಗದಲ್ಲಿ ಒಣ ಮೇವಿನಿಂದಾಗಲಿ ಅಥವಾ ಕತ್ತರಿಸಿದ ಉದ್ದನೆಯ ಹಸಿ ಮೇವಿನಿಂದಾಗಲಿ ಮುಚ್ಚುವುದು. ನಂತರ ಪಾಲಿಥೀನ್ ಹಾಳೆಯನ್ನು ಉಪಯೋಗಿಸಿ ಪೂರ್ಣವಾಗಿ ಮುಚ್ಚಿ ಮೇಲೆ ತೂಕಕ್ಕಾಗಿ ಕೆಲವು ದಿಂಡು ಕಲ್ಲುಗಳನ್ನು ಹೇರಬೇಕು. ಇಲ್ಲದಿದ್ದಲ್ಲಿ ಮೇವಿನ ಮೇಲೆ ಒಂದು ಅಡಿಗೂ ಹೆಚ್ಚು ಪ್ರಮಾಣದಲ್ಲಿ ಮಣ್ಣನ್ನು ಹರಡಿ ಚೆನ್ನಾಗಿ ತುಳಿದು ಬಡಿದು ನಂತರ ಸಗಣಿಯಿಂದ ಸಾರಿಸುವುದು ನೀರು ಒಳಹೋಗದಂತೆ ಇಳಿಜಾರು ರೀತಿಯಲ್ಲಿ ಗುಂಡಿಯನ್ನು ಮುಚ್ಚುವುದು ಬಹಳ ಮುಖ್ಯ.
೬. ಮುಚ್ಚಿದ ಮೇವಿನ ಗುಂಡಿಯಲ್ಲಿ ಒಂದೆರಡು ವಾರದಲ್ಲಿ ಮೇವು ಕುಸಿದು ಅಲ್ಲಲ್ಲಿ ಬಿರುಕುಗಳೂ ಬರುತ್ತದೆ. ಈ ರೀತಿಯ ಬಿರುಕನ್ನು ಮತ್ತೆ ಸ್ವಲ್ಪ ಮಣ್ಣನ್ನು ಹಾಕಿ ಮುಚ್ಚುವುದು.
೭. ಈ ರೀತಿ ಮುಚ್ಚಿನ ಮೇವು ಗುಂಡಿಯಲ್ಲಿ ಸೂಕ್ಷ್ಮಜೀವಾಣುಗಳು ಮೇವಿನಲ್ಲಿ ಇರುವ ಪಿಷ್ಟ ಪದಾರ್ಥಗಳನ್ನು ಉಪಯೋಗಿಸಿಕೊಂಡು ಲ್ಯಾಕ್ಟಿಕ್ ಆಮ್ಲದ ಉತ್ಪತ್ತಿ ಮಾಡುತ್ತವೆ. ಈ ರೀತಿ ಉತ್ಪತ್ತಿಯಾದ ಲ್ಯಾಕ್ಟಿಕ್ ಆಮ್ಲವು ಮೇವನ್ನು ಕೆಡದಂತೆ ಕಾಪಾಡುವುದು. ಮೇವನ್ನು ಚೆನ್ನಾಗಿ ದಮ್ಮಸ್ಸು ಮಾಡದೇ ಗಾಳಿ ಆಡಲು ಬಿಟ್ಟರೆ ಮೇವು ಕೆಡುತ್ತದೆ.
೮. ರಸಮೇವು ತಯಾರಿಸಿದ ಎರಡು ತಿಂಗಳ ನಂತರ ಮೇವನ್ನು ಒಂದು ಕಡೆಯಿಂದ ಹೊರ ತೆಗೆದು ಉಪಯೋಗಿಸಬಹುದು. ಪದರ ಪದರವಾಗಿ ಒಂದು ಪಕ್ಕದಲ್ಲಿ ಮೇಲಿನಿಂದ ಕೆಳಗಿನ ವರೆಗೂ ಮೇವನ್ನು ತೆಗೆಯಬೇಕೇ ಹೊರತು ಎಲ್ಲವನ್ನೂ ಒಮ್ಮೆಗೇ ತೆಗೆದು ಗಾಳಿಗೆ ಇಡಬಾರದು. ಗುಂಡಿಯ ಮೇಲೆ ಹಾಕಿರುವ ಮಣ್ಣಿನಲ್ಲಿ ಮೇಲಿನ ಸ್ವಲ್ಪ ಭಾಗಗವನ್ನು ತೆರೆದು ತಳದವರೆಗೂ ರಸಮೇವನ್ನು ಹೊರ ತೆಗೆದುಕೊಳ್ಳಬೇಕು. ಒಳ್ಳೇಯ ರಸಮೇವು ಬೇಲದ ಹಣ್ಣಿನ ವಾಸನೆ ಬರುವುದಲ್ಲದೆ ಚಿನ್ನದ ಹಳದಿ ಬಣ್ಣದಿಂದ ಕೂಡಿರುತ್ತದೆ.
೯. ರಸಮೇವಿಗಾಗಿ ಉಪಯೋಗಿಸಿದ ಹಸಿರು ಮೇವು ಹೆಚ್ಚು ಬತ್ತಿ ಹೋಗಿದ್ದರೆ ಕಾಕಂಬಿಯನ್ನು ನೀರಿನಲ್ಲಿ ಕದಡಿ ಶೇ. ೫ರಿಂದ ೧೦ರ ಪ್ರಮಾಣದಲ್ಲಿ ಉಪಯೋಗಿಸಬಹುದು. ಶೇ.೧ರ ಪ್ರಮಾಣದ ಉಪ್ಪಿನ ಉಪಯೋಗದಿಂದ ಲ್ಯಾಕ್ಟಿಕ್ ಆಮ್ಲದ ಉತ್ಪತ್ತಿ ಚೆನ್ನಾಗಿ ಆಗಿ ಗುಣಮಟ್ಟದ ರಸಮೇವನ್ನು ಪಡೆಯಬಹುದು.
(ಇನ್ನೂ ಇದೆ)
ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!