ಅಸಂಪ್ರದಾಯಿಕ ಮೇವಿನ ಮೂಲಗಳು : ಲಭ್ಯತೆಯ ಮೇರೆಗೆ ಬಾಳೆ ಎಲೆ, ಬಾಳೆ ದಿಂಡು, ಹೊಂಬಾಳೆ, ಅಡಿಕೆ ಹಾಳೆ ಇತ್ಯಾದಿಗಳನ್ನು ಚಿಕ್ಕದಾಗಿ ಕತ್ತರಿಸಿ ದಿನನ್ಕೆ ೪-೫ ಕೆ.ಜಿ.ವರೆಗೆ ರಾಸುಗಳಿಗೆ ಮೇವಾಗಿ ನೀಡಬಹುದು. ಇತ್ತೀಚೆಗೆ ಒಣ ಅಡಿಕೆ ಹಾಳೆಗಳನ್ನು ಪುಡಿ ಪುಡಿ ಮಾಡಿ ಪಶು ಆಹಾರದಲ್ಲಿ ಸೇರಿಸಿ ಕೊಡುವ ವಿಧಾನ ಕೂಡಾ ಪ್ರಚಾರ ಪಡೆಯುತ್ತಿದೆ.

ಹುಣಸೆ ಬೀಜ ಕೂಡ ಒಂದು ಉತ್ತಮ ಪಶು ಆಹಾರ. ಇದನ್ನು ನೀರಿನಲ್ಲಿ ನೆನೆಸಿ ನಂತರ ಚೆನ್ನಾಗಿ ಒಣಗಿಸಿ ಕೆಂಪು ಬಣ್ಣದ ಸಿಪ್ಪೆ ತೆಗೆದು ಪುಡಿ ಮಾಡಿ ಉಪಯೋಗಿಸಬೇಕು. ಹೀಗೆ ಮಾಡುವುದರಿಂದ ಬೀಜದಲ್ಲಿರುವ ಟ್ಯಾನಿನ್ ಎಂಬ ವಿಷಾಂಶವು ಕಡಿಮೆಯಾಗುತ್ತದೆ. ಪಶು ಆಹಾರದ ಶೇ ೨೦ರವರೆಗೆ ಇದನ್ನು ಉಪಯೋಗಿಸಬಹುದು.

ಮಾವಿನ ಓಟೆಯನ್ನು ಒಣಗಿಸಿ ಪುಡಿ ಮಾಡಿ ಪಶು ಆಹಾರದಲ್ಲಿ ಶೇ ೨೦ರ ವರೆಗೆ ನೀಡಬಹುದು. ಕೆಲವು ಪ್ರದೇಶಗಳಲ್ಲಿ ದ್ವಿದಳ ಧಾನ್ಯದ ಹೊಟ್ಟನ್ನು ಜಾನುವಾರುಗಳಿಗೆ ಕೊಡುತ್ತಾರೆ. ಅದರಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಅಂಶವಿರುತ್ತದೆ.

ಕರಾವಳಿಯಲ್ಲಿ ಹಾಗೂ ಮದ್ಯ ತಯಾರಿಕಾ ಕೇಂದ್ರದಲ್ಲಿ ಸಿಗುವ ಬಾರ್ಲಿ ಸಿಪ್ಪೆ ಜಾನುವಾರುಗಳಿಗೆ ಉತ್ತಮ ಆಹಾರ. ಇದರಲ್ಲಿ ಕಾರ್ಬೊಹೈಡ್ರೇಟ್ ಅಧಿಕವಾಗಿರುತ್ತದೆ. ಆದರೆ ಅತಿಯಾದ ತೇವಾಂಶವಿರುವ ಬಾರ್ಲಿ ಸಿಪ್ಪೆಯಲ್ಲಿ ಶಿಲೀಂಧ್ರ ಬೆಳವಣಿಗೆಯಾಗುತ್ತದೆ. ಇದು ಜಾನುವಾರುಗಳಿಗೆ ಮಾರಕವಾಗಬಹುದು.

ಆಯಾ ಪ್ರದೇಶ ಹಾಗೂ ಆಯಾ ಋತುಗಳಿಗನುಸಾರವಾಗಿ ಬೆಳೆದ ಗಡ್ಡೆ ಗೆಣಸುಗಳನ್ನು ಜಾನುವಾರುಗಳಿಗೆ ಕೊಡಬಹುದು ಉದಾ : ಸಿಹಿ ಗೆಣಸು ಮರಗೆಣಸು, ಕೆಸುವಿನ ಗಡ್ಡೆ, ಸುವರ್ಣಗಡ್ಡೆ, ಕ್ಯಾಬೇಜ್, ಹೂಕೋಸು, ಎಲೆಕೋಸು, ಬದನೆ, ಕುಂಬಳ, ತೊಂಡೆ ಇತ್ಯಾದಿಗಳನ್ನು ಸಣ್ಣಗೆ ಕೊಚ್ಚಿ ದಿನಕ್ಕೆ ೩-೪ ಕೆಜಿ ವರೆಗೆ ಜಾನುವಾರುಗಳಿಗೆ ಕೊಡಬಹುದು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಜಾನುವಾರುಗಳಿಗೆ ಯಾವುದೇ ತರದ ಹೊಸ ಆಹಾರವನ್ನು ನೀಡುವಾಗ ಮೊದಲಿಗೆ ಸ್ವಲ್ಪ ಸ್ವಲ್ಪವೇ ಹಾಕಿ ರೂಢಿ ಮಾಡಿಸಿದ ನಂತರವೇ ಹೆಚ್ಚಿನ ಪ್ರಮಾಣದಲ್ಲಿ ಕೊಡಬೇಕು. ಒಮ್ಮೆಲೇ ಹೆಚ್ಚ ಪ್ರಮಾಣದಲ್ಲಿ ನೀಡಬಾರದು

ಮೇವಿನ ಪೌಷ್ಠೀಕರಣ :

ಒಣಮೇವಿನ ಪೌಷ್ಠೀಕರಣ : ಸರಳ ಸುಲಭ ನವೀನ ಪದ್ಧತಿ :  ಜಾನುವಾರುಗಳ ಪೋಷಣೆ ಹಾಗೂ ಉತ್ಪಾದನೆಗೆ ಮೇವು (ಒಣ ಮತ್ತು ಹಸಿ) ಹಾಗೂ ಪಶು ಆಹಾರ ಬಹುಮಖ್ಯ. ಆದರೆ ವರ್ಷದ ಎಲ್ಲಾ ದಿನಗಳಲ್ಲಿ ಹಸಿರು ಮೇವು ಪೂರೈಸುವುದು ಕಷ್ಟಸಾಧ್ಯ. ಹಾಗಾಗಿ ವರ್ಷದ ಬಹುಪಾಲು ದಿನಗಳಲ್ಲಿ ಭತ್ತದ ಒಣ ಹುಲ್ಲು, ರಾಗಿ ಹುಲ್ಲು, ಜೋಳದ ದಂಟು, ಮೆಕ್ಕೆಜೋಳದ ತೆನೆಯ ಸಿಪ್ಪೆ, ಕಬ್ಬಿನ ರವದಿ, ಕರಡ ಇತ್ಯಾದಿಗಳನ್ನು ಕೊಡುವುದುಂಟು ಒಣ ಹುಲ್ಲಿನ ಕೇವಲ ೩% ಪ್ರೊಟೀನ್ ಅಂಶವಿದ್ದು ಸೆಲ್ಯುಲೋಸ್ ಹಾಗೂ ಲಿಗ್ನಿನ್ ವಸ್ತುಗಳಿಂದ ಗಡುಸಾಗಿರುವುದರಿಂದ ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದಾಗಿ ೪೦-೫೦% ಮೇವು ಜೀರ್ಣವಾಗದೇ ನಿಷ್ಪ್ರಯೋಜಕವಾಗುತ್ತದೆ. ಒಣಮೇವನ್ನು ಪೌಷ್ಟೀಕರಿಸುವ ವಿಶಿಷ್ಟ ಪದ್ಧತಿ ಅನುಸರಿಸಿದರೆ ಈ ನಷ್ಟವನ್ನು ತಡೆಯಬಹುದು.

ಒಂದು ಕ್ವಿಂಟಾಲ್ ಪೌಷ್ಟೀಕರಣಕ್ಕೆ ಬೇಕಾದ ಸಾಮಗ್ರಿಗಳು :

ಒಣ ಮೇವು - ೧೦೦ ಕೆ.ಜಿ

ಯೂರಿಯಾ - ೨ ಕೆ.ಜಿ

ಟ್ವೀನ್ -೫೦ ೧೦೦ ಮಿ.ಲೀ

ಎಂಜೈಮ್ ಪೌಡರ್ - ೫೦೦ ಗ್ರಾಂ ಮಾರುಕಟ್ಟೆಯಲ್ಲಿ ಲಭ್ಯ

ನೀರು - ೩೦ ಲೀಟರ್

ಸಂಸ್ಕರಿಸುವ ವಿಧಾನ : ಒಂದು ಬಕೇಟಿನಲ್ಲಿ ೩೦ ಲೀಟರ್ ನೀರನ್ನು ತೆಗೆದುಕೊಳ್ಳಿ. ಇದಕ್ಕೆ  ೨ ಕೆ.ಜಿ ಯೂರಿಯ ಗೊಬ್ಬರ, ೧೦೦ ಮಿ.ಲೀ. ಟ್ವೀನ್-೮೦ ಹಾಗೂ ೫೦೦ ಗ್ರಾಂ. ಎಂಜೈಮ್ ಪೌಡರನ್ನು ನೀರಿಗೆ ಸೇರಿಸಿ ಚೆನ್ನಾಗಿ ಕಲಕಿ ದ್ರಾವಣ ತಯಾರು ಮಾಡಿಕೊಳ್ಳಿ. ಸಂಸ್ಕರಿಸಬೇಕಾದ ಒಂದು ಕ್ವಿಂಟಾಲ್ ಒಣ ಮೇವನ್ನು ನೆರಳಿರುವ ಕಡೆ ಸಿಮೆಂಟ್ ನೆಲ ಅಥವಾ ಮಣ್ಣಿನಗಟ್ಟಿ ನೆಲದಲ್ಲಿ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಿರಿ. ಹೀಗೆ ಹರಡಿದ ಹುಲ್ಲಿನ ಮೇಲೆ ತಯಾರಿಸಿಟ್ಟ ದ್ರಾವಣ ಅರ್ಧದಷ್ಟನ್ನು ಜರ್ಜರಿ ಕ್ಯಾನ್ ಅಥವಾ ಜರಡಿ ಸಹಾಯದಿಂದ ಎಲ್ಲ ಕಡೆಗೂ ಸಮಾನಾಗಿ ಸಿಂಪಡಿಸಿರಿ. ನಂತರ ಹುಲ್ಲನ್ನು ಮತ್ತೊಂದು ಮಗ್ಗುಲಿಗೆ ತಿರುವಿ ಹಾಕಿ ಉಳಿದ ದ್ರಾವಣವನ್ನು ಎಲ್ಲ ಕಡೆಗೂ ಸಿಂಪಡಿಸಿ ಅರ್ಧ ಗಂಟೆಯಲ್ಲಿ ಈ ಸಂಸ್ಕರಿಸಿದ ಮೇವು ಜಾನುವಾರುಗಳಿಗೆ ನೀಡಲು ಸಿದ್ಧ. ಈ ರೀತಿ ತಯಾರಿಸಿದ ಮೇವನ್ನು ೮ ತಾಸುಗಳ ಒಳಗೆ ರಾಸುಗಳಿಗೆ ನೀಡಿದರೆ ಹೆಚ್ಚು ಪ್ರಯೋಜನವಾಗುತ್ತದೆ. ಆ ನಂತರ ಕೂಡ ಈ ಮೇವನ್ನು ರಾಸುಗಳಿಗೆ ನೀಡಿದರೆ ಯಾವುದೇ ತೊಂದರೆಯಿಲ್ಲ. ಬೂಷ್ಟು ಬಂದಿರಬಾರದು ಅಷ್ಟೆ. ಒಂದು ರಾಸಿನ ಒಂದು ದಿನಕ್ಕೆ ೧೦ ಕೆ.ಜಿಯಷ್ಟು ಸಂಸ್ಕರಿತ ಮೇವನ್ನು ನೀಡಬಹುದು.

ಸಂಸ್ಕರಿತ ಮೇವಿನ ಪ್ರಯೋಜನಗಳು :

೧. ಈ ವಿಧಾನವು ಸರಳ, ಸುಲಭವಾಗಿದ್ದು ಸಂಸ್ಕರಿಸಿದ ಅರ್ಧ ತಾಸಿನಲ್ಲಿ ರಾಸುಗಳಿಗೆ ಮೇವು ನೀಡಬಹುದು.

೨ ಸಂಸ್ಕರಿತ ಮೇವು ನೀಡುವುದರಿಂದ ಹಸಿ ಮೇವು ಹಾಗೂ ಹಿಂಡಿ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

೩. ಮೇವು ರುಚಿಕರವಾಗಿರುವುದರಿಂದ ರಾಸುಗಳು ಹಾಕಿದ ಮೇವನ್ನು ಸಂಪೂರ್ಣ ತಿನ್ನುತ್ತವೆ. ಜೀರ್ಣಕ್ರಿಯೆ ೧೦-೧೫% ಹೆಚ್ಚಾಗುತ್ತದೆ.

೪. ಸಂಸ್ಕರಿಸಿದ ಹುಲ್ಲಿನಲ್ಲಿ ಪ್ರೊಟೀನ್ ಪ್ರಮಾಣ ೩% ರಿಂದ ೮% ವರೆಗೆ ಹೆಚ್ಚಾಗುತ್ತದೆ. ಅಲ್ಲದೆ ಅಧಿಕ ಗ್ಲುಕೋಸ್, ಲ್ಯಾಕ್ಟೋಸ್ ಹಾಗೂ ಕೊಬ್ಬಿನ ಆಮ್ಲಗಳು ಉತ್ಪತ್ತಿಯಾಗುವುದರಿಂದ ಹಾಲಿನ ಉತ್ಪಾದನೆ ಅಧಿಕವಾಗುತ್ತದೆ.

ಸಮತೋಲಿತ ಪಶು ಆಹಾರ : ಜಾನುವಾರು ಆಹಾರದಲ್ಲಿ ಸಮತೋಲಿತ ಪಶು ಆಹಾರದ ಪಾತ್ರ ಬಹು ಮುಖ್ಯವಾದುದು. ಅಧಿಕ ಹಾಲುಕೊಡುವ ರಾಸುಗಳಿಗಂತೂ ಇದು ಅತ್ಯಾವಶ್ಯಕ. ವಿವಿಧ ಆಹಾರಾಂಶಗಳನ್ನು ತಜ್ಞರ ಶಿಫಾರಸ್ಸಿನಂತೆ ಸೇರಿಸಿ ಪಶು ಆಹಾರ ತಯಾರಿಸುತ್ತಾರೆ. ಮನೆಯಲ್ಲೂ ಸಹ ಇದನ್ನು ತಯಾರಿಸಬಹುದು. ಇದರ ತಯಾರಿಕೆಗೆ ಏಕದಳ ಧಾನ್ಯಗಳಾದ ಮೆಕ್ಕೆಜೋಳ, ರಾಗಿ, ನವಣೆ ದ್ವಿದಳ ಧಾನ್ಯದ ಮೂಲಗಳಾದ ಶೇಂಗಾ ಹಿಂಡಿ, ಹತ್ತಿ ಹಿಂಡಿ, ಸೋಯಾ ಕುಸುಬೆ, ಎಳ್ಳು, ಸೂರ್ಯಕಾಂತಿ ಹಿಂಡಿ ಇತ್ಯಾದಿಗಳ ಜೊತೆಗೆ ಲವಣ ಮಿಶ್ರಣ, ಉಪ್ಪು ಅವಶ್ಯ. ಈ ಆಹಾರದಲ್ಲಿ ಸಸಾರಜನದ ಪ್ರಮಾಣ ೧೬-೨% ಇರುತ್ತದೆ. ಸಾಮಾನ್ಯ ಪಶು ಆಹಾರ ಮಾದರಿಯಲ್ಲಿ ಶೇ. ೨೫-೩೦ ಶರ್ಕರ ಪಿಷ್ಟ ಮೂಲದ ಆಹಾರ ಪದಾರ್ಥಗಳು ಶೇ ೨೫-೩೦ರಷ್ಟು ಪ್ರೊಟೀನ್ ಮೂಲದ ಆಹಾರ ಪದಾರ್ಥಗಳು ಹಾಗೂ ಶೇ ೨೫-೩೦ರಷ್ಟು  ಮಿಶ್ರಣವಿರುತ್ತದೆ. ಅಲ್ಲದೆ ಶೇ. ೨ರಷ್ಟು ಉಪ್ಪು, ಶೇ. ೨ರಷ್ಟು ಯೂರಿಯಾ ಬೆರೆಸಬಹುದು.

(ಇನ್ನೂ ಇದೆ)

ಚಿತ್ರಗಳು ಮತ್ತು ಮಾಹಿತಿ: ರಾಧಾಕೃಷ್ಣ ಹೊಳ್ಳ