ಜಾನುವಾರು ಮೇವಾಗಿ ಅಡಿಕೆ ಹಾಳೆ ಹಾಗೂ ಸೋಗೆಗಳ ಉಪಯೋಗ : ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಅಡಿಕೆ ಒಂದು ಮುಖ್ಯ ಬೆಳೆಯಾಗಿದೆ ಅಡಿಕೆ ಮರದಿಂದ ತನ್ನಿಂತಾನೇ ಉದುರುವ ಎಲೆಯು ಹಾಳೆ ಮತ್ತು ಸೋಗೆ ಎಂಬ ಎರಡು ಭಾಗಗಳನ್ನು ಹೊಂದಿರುತ್ತದೆ. ಇದರಲ್ಲಿ ಹಸಿ ಅಡಿಕೆ ಹಾಳೆಯನ್ನು ಪ್ಲಾಸ್ಟಿಕಿನಂತಿರುವ ಅದರ ಮೇಲ್ಪದರ ತೆಗೆದು ಜಾನುವಾರು ಆಹಾರವಾಗಿ ಕೆಲವು ರೈತರು ಬಹಳ ವರ್ಷಗಳಿಂದ ಬಳಸುತ್ತಿದ್ದಾರೆ. ಒಣ ಅಡಿಕೆ ಹಾಳೆ ಹಾಗೂ ಸೋಗೆ ಎಲೆಗಳನ್ನೂ ಸಹ ಬಳಸಬಹುದು ಎನ್ನುವುದು ಇದಕ್ಕೆ ಹೊಸ ಸೇರ್ಪಡೆ.

ಹಸಿ ಅಡಿಕೆ ಹಾಳೆ ಅಥವಾ ಹಸಿ ಸೋಗೆ ಎಲೆಗಳಿಗಿಂತ ಅಡಿಕೆ ಹಾಳೆಗಳನ್ನು ಒಣಗಿಸಿ ತುಂಡಾಗಿ ಕತ್ತರಿಸಿ ಕೊಡುವುದು ಹಾಗೂ ಸೋಗೆಯನ್ನು ಅದರ ಮಧ್ಯದ ದಿಂಡಿನಿಂದ ಬೇರ್ಪಡಿಸಿ ಹಸಿರು ಹಳದಿ ಬಣ್ಣವಿರುವ ಎಲೆಗಳನ್ನು ಮೇವಾಗಿ ಬಳಸುವುದು ಸೂಕ್ತ.

ಅಡಿಕೆ ಹಾಳೆ ಹಾಗೂ ಸೋಗೆಯಲ್ಲಿ ಶೇ. ೨೫-೩೦ರಷ್ಟು ನಾರಿನ ಅಂಶ ಶೇ. ೩-೪ರಷ್ಟು ಪ್ರೊಟೀನ್ ಹಾಗೂ ಅಧಿಕ ಪ್ರಮಾಣದ ಸುಣ್ಣ, ಗಂಧಕ ಹಾಗೂ ತಾಮ್ರದ ಅಂಶಗಳು ಇರುತ್ತವೆ. ಭತ್ತದ ಹುಲ್ಲಿಗೆ ಹೋಲಿಸಿದರೆ ಅಧಿಕವಾಗಿದೆ. ಅಲ್ಲದೇ ಭತ್ತದ ಹುಲ್ಲಿಗಿಂತ ಕಡಿಮೆ ಪ್ರಮಾಣದಲ್ಲಿರುವುದು ಅಡಿಕೆ ಹಾಳೆ ಹಾಗೂ ಸೋಗೆಗಳು ಭತ್ತದ ಹುಲ್ಲಿಗಿಂತ ಉತ್ತಮ ಆಹಾರ ಎನ್ನುವುದನ್ನು ಸಾಬೀತುಪಡಿಸುತ್ತದೆ. ಜೊತೆಗೆ ಭತ್ತದ ಹುಲ್ಲಿನಲ್ಲಿರುವ ಅನಪೇಕ್ಷಣೀಯ ಅಂಶವಾದ ಅಕ್ಸಾಲಿಕ್ ಆಮ್ಲವು ಇವುಗಳಲ್ಲಿರುವುದಿಲ್ಲ. ಅಡಿಕೆ ಹಾಳೆ ಹಾಗೂ ಸೋಗೆಯು ಯಾವುದೇ ಖರ್ಚಿಲ್ಲದೆಯೇ ದೊರೆಯುವ ಮೇವಾಗಿದೆ.

ಅಡಿಕೆ ಹಾಳೆಯನ್ನು ೪-೫ ದಿನ ಒಣಗಿಸಿ ಚೂರು ಚೂರು ಮಾಡಿ ಅಥವಾ ಪುಡಿ ಮಾಡಿ ಒಣ ಮೇವಿನಂತೆ ಅಥವಾ ಪಶು ಆಹಾರದ ಜೊತೆಗೆ ಸೇರಿಸಿ ಕೂಡ ಕೊಡಬಹುದು. ಈ ಕಾರಣಕ್ಕೆಂದೇ ಈಗ ಹಾಳೆ ಪುಡಿ ಮಾಡುವ ಯಂತ್ರಗಳು ಲಭ್ಯವಿದೆ.  ಅದೇ ರೀತಿ ಸೋಗೆಯನ್ನು ನಡುವಿನ ದಿಂಡಿನಿಂದ ಬೇರ್ಪಡಿಸಿ ಹಸಿರು ಹಳದಿ ಬಣ್ಣವಿರುವಾಗ ತುಂಡುಗಳಾಗಿ ಕತ್ತರಿಸಿ ನೀಡಬಹುದು ಅಲ್ಲದೇ ಇವೆರಡರ ತುಂಡುಗಳಿಗೆ ಶೇ ೨ರ ಯೂರಿಯಾ ಸಂಸ್ಕರಣೆ ಕೂಡ ಮಾಡಿ ಉಪಯೋಗಿಸಬಹುದು. ಅಡಿಕೆ ಹಾಳೆ ಪುಡಿಯನ್ನು ಗಾಳಿಯಾಡದ ಚೀಲಗಳಲ್ಲಿ ಸಂಗ್ರಹಿಸಿದರೆ ೨ ತಿಂಗಳ ವರೆಗೆ ಕೆಡದಂತೆ ಇಡಬಹುದು ಇದನ್ನು ದಿನಕ್ಕೆ ೫-೧೦ ಕಿ.ಗ್ರಾಂ. ವರೆಗೆ ನೀಡಬಹುದು.

ಮರದಿಂದ ಭೂಮಿಗೆ ಬಿದ್ದ ಹಸಿ ಹಾಳೆಯಲ್ಲಿ ಪ್ಲಾಸ್ಟಿಕ್ ರೀತಿಯ ಪದರವಿರುತ್ತದೆ. ಇದು ಅಜೀರ್ಣತೆ ಉಂಟು ಮಾಡುತ್ತದೆ. ಇದನ್ನು ೪-೫ ದಿನ ಬಿಸಿಲಿನಲ್ಲಿ ಒಣಗಿಸುವುದರಿಂದ ಈ ಪದರ ಕರಗುವುದರಿಂದ ಜೀರ್ಣಕ್ರಿಯೆಯಲ್ಲಿ ಸಮಸ್ಯೆಯಾಗುವುದಿಲ್ಲ. ಅಲ್ಲದೆ ಅಡಿಕೆ ಹಾಳೆಗೆ ಶಿಲೀಂಧ್ರ ತಗಲುವ ಸಂಭವವಿದೆ. ಈ ಬಗ್ಗೆ ಎಚ್ಚರ ವಹಿಸಬೇಕು

ಪಶು ಆಹಾರವಾಗಿ ಹಲಸು : ಹಸಿದು ಹಲಸು ಉಂಡು ಮಾವು ಎನ್ನುವುದು ಜನಪ್ರಿಯ ಗಾದೆ. ಈ ಮಾತು ನಮಗೆ ಮಾತ್ರವಲ್ಲ ಜಾನುವಾರುಗಳಿಗೂ ಅನ್ವಯಿಸುತ್ತದೆ. ಹೌದು ಹಸಿದ ಹೊಟ್ಟೆಗೆ ಹಲಸು ಹುಲುಸಾದ ಆಹಾರ ಎನ್ನುತ್ತದೆ. ಇತ್ತೀಚಿನ ಸಂಶೋಧನಾ ವರದಿಯಂತೆ  ಹಲಸಿನಲ್ಲಿರುವ ಪ್ರೊಟೀನ್ ಪ್ರಮಾಣ ಎಷ್ಟು ಗೊತ್ತೇ? ಶೇ ೨೬ರಷ್ಟು! ಅಂತೆಯೇ ಇದನ್ನು ಜಾನುವಾರುಗಳಿಗೆ ಕೊಡುವ ದುಬಾರಿ ಹಿಂಡಿ ಮಿಶ್ರಣಕ್ಕೆ ಪರ್ಯಾಯವಾಗಿ ನೀಡಬಹುದು. ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಲಕ್ಕೆ ಮುನ್ನ ಯಥೇಚ್ಛವಾಗಿ ಸಿಗುವ ಹಲಸನ್ನು ಸಂಗ್ರಹಿಸಿ ಒಣಗಿಸಿ ಜಾನುವಾರುಗಳಿಗೆ ಆಹಾರವಾಗಿ ನೀಡಬಹುದು.

ಹಣ್ಣಾಗುವ ಮೊದಲೇ ಮರದಿಂದ ಕಿತ್ತು ಸಣ್ಣದಾಗಿ ತುಂಡರಿಸಿ ೧೦-೧೨ ದಿನಗಳ ವರೆಗೆ ಪ್ರಖರ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಜಾನುವಾರುಗಳ ಆಹಾರದಲ್ಲಿ ಮಿಶ್ರಣ ಮಾಡಿ ಪ್ರತಿ ದಿನ ೧-೨ ಕೆ.ಜಿ .ವರೆಗೆ ನೀಡಬಹುದು ಪುಡಿ ಮಾಡಲು ಗ್ರಾಮೀಣ ಭಾಗದಲ್ಲಿರುವ ರೋಲರ್‌ಗಳಿಂದ ಪುಡಿ ಮಾಡಬುದು. ಇಲ್ಲವೇ ಮಲೆನಾಡಿನಲ್ಲಿ ಸಿಗುವ ತೆಂಗಿನ ಹೆಡೆಪೆಂಡಿಗಳಿಂದಲೂ ಚೆನ್ನಾಗಿ ಜಜ್ಜಿ ಪುಡಿಗೊಳಿಸಬಹುದು. ಹಲಸು ಹುಡಿ ಮಾಡಲು ಪಲ್ವರೈಜರ್ ಮಾದರಿಯ ಯಂತ್ರಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ.

DSCN1236.JPG

ಇತರ ಮೇವಿನ ಮೂಲಗಳು : ಉತ್ತರ ಕರ್ನಾಟಕದಲ್ಲಿ ಬಿಳಿ ಜೋಳದ ಕಣಿಕೆ ಜಾನುವಾರುಗಳ ಮುಖ್ಯ ಆಹಾರವಾಗಿ ಉಪಯೋಗಿಸಲ್ಪಡುತ್ತದೆ. ದ್ವಿದಳ ಧಾನ್ಯದ ಸಿಪ್ಪೆ ಅಥವಾ ಹೊಟ್ಟು ಸಹ ಉಪಯೋಗಿಸುತ್ತಾರೆ. ನೀರಾವರಿ ಇರುವ ಕೆಲವು ಜಿಲ್ಲೆಗಳ ರೈತರು ಕಬ್ಬಿನಸಿಪ್ಪೆಯನ್ನು ಮೇವಾಗಿ ಉಪಯೋಗಿಸುವ ವಾಡಿಕೆ ಇದೆ ಇವೆಲ್ಲ ಒಣ ಭತ್ತದ ಹುಲ್ಲಿಗಿಂತ ಅಧಿಕ ಪೋಷಕಾಂಶಗಳನ್ನ ಹೊಂದಿದ ಮೇವುಗಳು. ಇಂತಹ ಮೇವಿಗೆ ಪೌಷ್ಟೀಕರಣ ಮಾಡಿದರೆ ಇವುಗಳ ಗುಣಮಟ್ಟವನ್ನು ಇನ್ನೂ ಹೆಚ್ಚಿಸಬಹುದು. ಕಾಡಿನಲ್ಲಿ ದೊರೆಯುವ ಕೆಲವು ದ್ವಿದಳ ಬಳ್ಳಿಸಸ್ಯಗಳು, ಹೆಬ್ಬಲಸಿನ ಹಣ್ಣು ಎಲೆ, ಹಣ್ಣು, ಅನನಾಸಿನ ಗರಿ  ದಾಸವಾಳದ ಸೊಪ್ಪು, ನರೆ ಬಳ್ಳಿಗಳೂ ಸಹ ಉತ್ತಮ ಮೇವಿನ ಮೂಲಗಳು.

ಜಾನುವಾರುಗಳನ್ನು ಸಾಕುವುದು ಕಷ್ಟವಲ್ಲ. ಅದರ ಹೊಟ್ಟೆ ತುಂಬಿಸುವುದೇ ಕಷ್ಟ. ಪಶು ಆಹಾರವನ್ನು ಅಂಗಡಿಯಿಂದ ತಂದು ಕೊಡಬಹುದು. ಆದರೆ  ಮೇವು ? ಇದೇ ಕಷ್ಟದ ಕೆಲಸ. ಇದನ್ನು ಒಟ್ಟು ಕೂಡಿಸುವುದು ಹೈನುಗಾರರ ಜಾಣ್ಮೆ. ನಿರಂತರ ಸ್ವಲ್ಪ ಸ್ವಲ್ಪವೇ ತಿನ್ನಿಸಿದರೆ ಹಸುರು ಸೊಪ್ಪುಗಳೂ ಸಹ ಮೇವು ಆಗಬಲ್ಲುದು. ಇದು ನಾವು ಅಭ್ಯಾಸ ಮಾಡುವುದರಲ್ಲಿದೆ. ಈ ಲೇಖನದಲ್ಲಿ  ಪಶು ವೈದ್ಯರಾದ ಗಣೇಶ ಎಂ ಹೆಗಡೆ, ಎನ್ ಬಿ ಶ್ರೀಧರ, ಮತ್ತು ನಾಗರಾಜ ಕೆ ಎಂ ಇವರು ಪಶು ಆಹಾರ ಹೇಗಿರಬೇಕು? ಯಾವುದಿರಬೇಕು ಎಂದು ತಳಮಟ್ಟದ ಹೈನುಗಾರರಿಗೂ ಅನುಕೂಲವಾಗುವಂತೆ  ತಿಳಿಸಿದ್ದಾರೆ. ಅವರಿಗೆ ಕೃತಜ್ಞತೆಗಳು.

(ಮುಗಿಯಿತು)

ಚಿತ್ರಗಳು ಮತ್ತು ಮಾಹಿತಿ: ರಾಧಾಕೃಷ್ಣ ಹೊಳ್ಳ