ಮನರೇಗಾ ಯೋಜನೆಗೆ ೨ ದಶಕಗಳ ಬಳಿಕ ತಾರ್ಕಿಕ ಅಂತ್ಯ ಹಾಡಿ, ಅದರ ಜಾಗದಲ್ಲಿ ಕೇಂದ್ರ ಸರಕಾರವು 'ವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜ್ ಗಾರ್ - ಆಜೀವಿಕಾ ಮಿಷನ್-ಗ್ರಾಮೀಣ (ಎಬಿ-ಜಿ ರಾಮ್ ಜಿ) ಯೋಜನೆ ಯನ್ನು ಜಾರಿಗೆ ತಂದಿದೆ. ಹೊಸ ಯೋಜನೆಯು ಗ್ರಾಮೀಣ ಭಾಗದಲ್ಲಿ ಸುಸ್ಥಿರ ಆಸ್ತಿ ಸೃಜನೆ ಮತ್ತು 'ಪಿಎಂ-ಗತಿಶಕ್ತಿ' ಅಡಿಯಲ್ಲಿ ಅಭಿವೃದ್ಧಿಯ ದೂರದೃಷ್ಟಿ ಹೊಂದಿದ್ದರೂ ಸ್ಥಳೀಯ ಮಟ್ಟದ ಅಗತ್ಯಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತಿಲ್ಲ ಎಂಬ ಆತಂಕಗಳು ಈಗ ಎದುರಾಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ರಾಜ್ಯದ ಭೌಗೋಳಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಇನ್ನೂ ೨೫ ಕಾಮಗಾರಿಗಳನ್ನು ಸೇರಿಸುವಂತೆ ಕೇಂದ್ರಕ್ಕೆ ಸಲ್ಲಿಸಿರುವ ಮನವಿಯು ತಾರ್ಕಿಕ ಹಾಗೂ ಅಗತ್ಯ ಕ್ರಮವಾಗಿದೆ.

ಹೊಸ ಯೋಜನೆಯಲ್ಲಿ ಕಾಮಗಾರಿಗಳ ಸಂಖ್ಯೆಯನ್ನು ೨೬೦ ರಿಂದ ೩೧೮ಕ್ಕೆ ಹೆಚ್ಚಿಸಿರುವುದು ಮೇಲ್ನೋಟಕ್ಕೆ ಪ್ರಗತಿಪರ ಹೆಜ್ಜೆಯಾಗಿ ಕಾಣಬಹುದು. ಆದರೆ, ಈ ಬಹುತೇಕ ಕೆಲಸಗಳು ಕಡಿಮೆ ಸಂಖ್ಯೆಯ ಕೂಲಿಕಾರ್ಮಿಕರನ್ನು ಬೇಡುತ್ತವೆ ಎಂಬುದು ವಾಸ್ತವ. ನರೇಗಾ ಯೋಜನೆಯ ಮೂಲ ಉದ್ದೇಶವೇ ಗ್ರಾಮೀಣ ಬಡವರಿಗೆ ಹಸಿವು ಮುಕ್ತ ಬದುಕು ನೀಡುವುದು ಮತ್ತು ದೈಹಿಕ ಶ್ರಮದ ಉದ್ಯೋಗ ಒದಗಿಸುವುದಾಗಿತ್ತು. ಈಗ ಜಿ ರಾಮ್ ಜಿ ಯೋಜನೆಯಡಿ ತಾಂತ್ರಿಕ ಹಾಗೂ ಯಾಂತ್ರೀಕೃತ ಆಸ್ತಿ ಸೃಜನೆಗೆ ಹೆಚ್ಚಿನ ಒತ್ತು ನೀಡಲು ಹೊರಟಿರುವುದರಿಂದ ಉದ್ಯೋಗ ಆಧಾರಿತ ಯೋಜನೆಯನ್ನು ಮೂಲ ಸೌಕರ್ಯ ಯೋಜನೆಯನ್ನಾಗಿ ಪರಿವರ್ತಿಸಿದಂತಾಗುವ ಅಪಾಯವಿದೆ.

ವಿಶೇಷವಾಗಿ ಕರ್ನಾಟಕದ, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲ ಅಥವಾ ಕೃಷಿ ರಹಿತ ದಿನಗಳಲ್ಲಿ ಒಮ್ಮೆಗೆ ಸಾವಿರಾರು ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ದೊಡ್ಡ ಮಟ್ಟದ ಮಾನವ ಶ್ರಮ ಬೇಡುವ ಅರಣ್ಯದಂಚಿನ ಕಂದಕ ನಿರ್ಮಾಣ, ಹೊಲಗಳ ಬದು ನಿರ್ಮಾಣ ಅಥವಾ ಕೆರೆಗಳ ಹೂಳೆತ್ತುವಿಕೆಯಂತಹ ಸಾಂಪ್ರದಾಯಿಕ ಕಾಮಗಾರಿಗಳು ಲಕ್ಷಾಂತರ ಜನರಿಗೆ ಆಸರೆಯಾಗುತ್ತಿದ್ದವು. ಹೊಸ ಯೋಜನೆಯಲ್ಲಿ ಇಂತಹ ಕೆಲವು ಕಾಮಗಾರಿಗಳನ್ನು ಕೈಬಿಟ್ಟಿರುವುದು ಅಥವಾ ಸೀಮಿತಗೊಳಿಸಿರುವುದು ಗ್ರಾಮೀಣ ಗುಳೇಯನ್ನು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯ ಸರಕಾರವು ಪ್ರಸ್ತಾವಿಸಿರುವ ೨೫ ಕಾಮಗಾರಿಗಳ ಪಟ್ಟಿಯಲ್ಲಿ ಬಸವ, ಅಂಬೇಡ್ಕರ್, ದೇವರಾಜ ಅರಸು ವಸತಿ ಯೋಜನೆಗಳು, ಗ್ರಾಮೀಣ ಆಟದ ಮೈದಾನಗಳು, ಕುಡಿಯುವ ನೀರಿನ ಬಾವಿ ಹಾಗೂ ಕೃಷಿ ಹೊಂಡಗಳ ನಿರ್ವಹಣೆಯಂತಹ ಅತ್ಯಗತ್ಯ ಕೆಲಸಗಳಿವೆ. ಇವು ಕೇವಲ ಉದ್ಯೋಗ ಸೃಷ್ಟಿಯಷ್ಟೇ ಅಲ್ಲದೇ, ಗ್ರಾಮೀಣ ಮೂಲಸೌಕರ್ಯ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಶಕ್ತಿ ಹೊಂದಿವೆ. ಕೃಷಿ ಚಟುವಟಿಕೆಯ ಸಮಯದಲ್ಲಿ ಯೋಜನೆಗೆ ೬೦ ದಿನಗಳ ವಿರಾಮ ಇರುವುದರಿಂದ ಕೃಷಿ ಬಿತ್ತನೆ ಮತ್ತು ಕೊಯ್ಲು ಕೆಲಸಗಳನ್ನು ಇದಕ್ಕೆ ಸೇರಿಸಲು ಕೇಂದ್ರ ಹಿಂಜರಿಯುತ್ತಿರುವುದು ಸಹಜ. ಆದರೂ ಸ್ಥಳೀಯ ಹವಾಮಾನ ವೈಪರೀತ್ಯಗಳ ಸಂದರ್ಭದಲ್ಲಿ ಈ ನಿಯಮಗಳು ಸಡಿಲಗೊಳ್ಳಬೇಕಾದ ಅಗತ್ಯವಿದೆ.

ವಿಕಸಿತ ಭಾರತದ ಗುರಿ ಕೇವಲ ಭವ್ಯವಾದ ಕಟ್ಟಡ ಅಥವಾ ರಸ್ತೆಗಳ ನಿರ್ಮಾಣದಲ್ಲಷ್ಟೇ ಇಲ್ಲ ಅದು ದೇಶದ ಕಟ್ಟಕಡೆಯ ಹಳ್ಳಿಯ ಬಡವನ ಹೊಟ್ಟೆ ತುಂಬಿಸುವುದರಲ್ಲೂ ಇದೆ. ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಗೌರವ ನೀಡಿ, ಕರ್ನಾಟಕ ಸರಕಾರದ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು. ಆ ಮೂಲಕ ಹೊಸ 'ಜಿ ರಾಮ್ ಜಿ’ ಯೋಜನೆ ಕೇವಲ ಅಂಕಿ-ಅಂಶಗಳ ವಿಕಸನವಾಗದೆ ನಿಜವಾದ ಅರ್ಥದಲ್ಲಿ ಗ್ರಾಮೀಣ ಉದ್ಯೋಗದ ಗ್ಯಾರಂಟಿಯಾಗಬೇಕಿದೆ

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೪-೦೭-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ