ಜಿರಾಫೆಗಳ ದೇಹದಲ್ಲಿ ಎದ್ದು ಕಾಣಿಸುವುದು ಅವುಗಳ ಎತ್ತರದ ಕುತ್ತಿಗೆಗಳು. ಹಾಗೆಯೇ ಅವುಗಳ ಚರ್ಮದಲ್ಲಿರುವ ಕಲೆಗಳೂ ಎದ್ದು ಕಾಣಿಸುತ್ತವೆ. ಜಿರಾಫೆಗಳ ದೇಹದಲ್ಲಿರುವ ಈ ಚಂದದ ಕಲೆಗಳು ಕೆಲವು ಕಾರಣಗಳಿಗಾಗಿ ಬಹಳ ಮುಖ್ಯ. ಅವೇನು?

ಮೊದಲನೆಯದಾಗಿ, ಈ ಕಲೆಗಳು ವೈರಿಗಳಿಗೆ ಜಿರಾಫೆಗಳ ಸುಳಿವು ತಿಳಿಯದಂತೆ ಮಾಡಲು ಸಹಕರಿಸುತ್ತವೆ. ಜಿರಾಫೆಗಳು ಮರಗಳ ನಡುವೆ ನಿಂತಾಗ ಈ ಕಲೆಗಳಿಂದಾಗಿ ಅವು ತಮ್ಮ ಪರಿಸರದಲ್ಲಿ ಎದ್ದು ಕಾಣಿಸುವುದಿಲ್ಲ - ಮುಖ್ಯವಾಗಿ ಸೂರ್ಯನ ಬೆಳಕು ಮರಗಿಡಗಳ ಕೊಂಬೆಗಳು ಮತ್ತು ಎಲೆಗಳ ನಡುವೆ ತೂರಿಕೊಂಡು ಹೋಗುವಾಗ. ಜೊತೆಗೆ, ಜಿರಾಫೆಗಳ ಇಡೀ ಆಕಾರವನ್ನು ಒಡೆಯಲು ಈ ಕಲೆಗಳು ಕಾರಣವಾಗುತ್ತವೆ. ಇದರಿಂದಾಗಿ, ಕೆಲವೇ ಅಡಿಗಳ ದೂರದಲ್ಲಿ ಇರುವವರಿಗೂ “ಇಲ್ಲೊಂದು ಜಿರಾಫೆ ಇದೆ” ಎಂದು ಗುರುತಿಸುವುದು ಸುಲಭವಲ್ಲ.

ಜಿರಾಫೆಗಳು ವಾಸಿಸುವ ಪ್ರದೇಶಗಳಲ್ಲಿ ಬೆಳೆಯುವ ಮರಗಿಡಗಳಿಗೆ ಅನುಸಾರವಾಗಿ ಅವುಗಳ ದೇಹದ ಕಲೆಗಳ ವಿನ್ಯಾಸ ಇರುತ್ತದೆ ಎಂದು ಮೈಕೆಲ್ ಎಂಬ ಪರಿಣತರು ತಿಳಿಸುತ್ತಾರೆ. ಉದಾಹರಣೆಗೆ, ಆಫ್ರಿಕಾದ ಸವನ್ನಾ ಹುಲ್ಲುಗಾವಲಿನಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಕೇಶಿಯಾ ಮರಗಳ ಕೊಂಬೆರೆಂಬೆಗಳ ವಿನ್ಯಾಸಕ್ಕೆ ಅನುಸಾರವಾಗಿ ಜಿರಾಫೆಗಳ ದೇಹದ ಕಲೆಗಳು ಇರುವುದನ್ನು ಸಂಶೋಧಕರು ಹಲವು ಬಾರಿ ಗಮನಿಸಿದ್ದಾರೆ.

ಬೆಳೆಯುತ್ತಿರುವ ಜಿರಾಫೆಗಳ ಉಳಿವಿಗೆ ದೇಹದ ಕಲೆಗಳು ಬಹಳ ಮುಖ್ಯ. ಯಾಕೆಂದರೆ, ಅವು ಬದುಕಿ ಉಳಿಯಬೇಕಾದರೆ, ತಮ್ಮ ಸುಳಿವು ಸಿಂಹ, ಹುಲಿ ಇತ್ಯಾದಿ ವೈರಿಗಳಿಗೆ ಕಾಣಿಸದಂತೆ ಇರುವುದು ಬಹಳ ಅಗತ್ಯ. 2018ರ ಒಂದು ಅಧ್ಯಯನದ ಅನುಸಾರ, ಎಳೆಯ ಜಿರಾಫೆಗಳ ಉಳಿವಿನ ದರ ಮತ್ತು ದೊಡ್ಡ ಹಾಗೂ ಹೆಚ್ಚು ವೃತ್ತಾಕಾರದ ಕಲೆಗಳ ನಡುವೆ ನೇರ ಸಂಬಂಧ ಕಂಡು ಬಂತು. ಇದಕ್ಕೆ ಕಾರಣ ಜಿರಾಫೆಗಳ ಸುಳಿವು ವೈರಿ ಪ್ರಾಣಿಗಳಿಗೆ ಸಿಗದಿರುವಂತೆ ಮಾಡಲು ಕಲೆಗಳ ಈ ವಿನ್ಯಾಸ ಹೆಚ್ಚು ಸಹಕಾರಿ ಎಂಬುದು ಸಂಶೋಧಕರ ಅಭಿಪ್ರಾಯ. ಇದೇ ಅಧ್ಯಯನದಿಂದ ತಾಯಿ ಮತ್ತು “ಕರು” ಜಿರಾಫೆಗಳ ದೇಹದ ಕಲೆಗಳ ವಿನ್ಯಾಸ ಒಂದೇ ರೀತಿ ಇರುತ್ತದೆ ಎಂಬುದೂ ತಿಳಿದು ಬಂತು. ಇದು, ಜಿರಾಫೆಗಳ ದೇಹದ ಕಲೆಗಳ ಕೆಲವು ಗುಣಲಕ್ಷಣಗಳು ಅನುವಂಶಿಕ ಎಂಬುದನ್ನು ಸೂಚಿಸುತ್ತದೆ.

ಜಿರಾಫೆಗಳ ದೇಹದ ಕಲೆಗಳ ಇನ್ನೊಂದು ಮುಖ್ಯ ಕೆಲಸ ದೇಶದ ಉಷ್ಣತೆಯನ್ನು ನಿಯಂತ್ರಿಸುವುದು. ಭೂಮಿಯ ಅತ್ಯಂತ ಬಿಸಿ ವಾತಾವರಣದ ಪ್ರದೇಶಗಳಲ್ಲಿ ವಾಸ ಮಾಡುವ ಜಿರಾಫೆಗಳಲ್ಲಿ ಬೆವರು ಮೂಡುವುದಿಲ್ಲ. ಹಾಗಿರುವಾಗ ಅವು ತಮ್ಮ ದೇಹದ ಉಷ್ಣತೆಯನ್ನು ಹೇಗೆ ನಿಯಂತ್ರಿಸುತ್ತವೆ? ತಮ್ಮ ದೇಹದ ಕಲೆಗಳ ಮೂಲಕ!

ಜಿರಾಫೆಗಳ ದೇಹದ ಪ್ರತಿಯೊಂದು ಕಲೆಯ ಒಳಭಾಗದಲ್ಲಿ ರಕ್ತನಾಳಗಳ ಒತ್ತೊತ್ತಾದ ಜಾಲ ಇರುತ್ತದೆ. “ಒಂದು ಜಿರಾಫೆ ತನ್ನ ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಬೇಕೆಂದು ಬಯಸಿದಾಗ, ಅಲ್ಲಿನ ರಕ್ತನಾಳಗಳು ದೊಡ್ಡದಾಗಿ, ಅಲ್ಲಿಗೆ ಹೆಚ್ಚು ರಕ್ತ ಹರಿದು ಬರುತ್ತದೆ” ಎಂದು ಮೈಕೆಲ್ ತಿಳಿಸುತ್ತಾರೆ. ಈ ರಕ್ತವು ಜಿರಾಫೆಯ ಚರ್ಮಕ್ಕೆ ಹತ್ತಿರವಾಗಿ ಹರಿಯುವಾಗ ಉಷ್ಣತೆಯನ್ನು ಬಿಡುಗಡೆ ಮಾಡುತ್ತದೆ. “ಬಿಸಿ ವಾತಾವರಣದಲ್ಲಿರುವ ಜಿರಾಫೆಗಳ ಉಷ್ಣತಾ ಫೋಟೋಗ್ರಾಫುಗಳು ಇದನ್ನು ಖಚಿತ ಪಡಿಸುತ್ತವೆ” ಎನ್ನುತ್ತಾರೆ ಮೈಕೆಲ್. ಯಾಕೆಂದರೆ, ಗಾಢವಾಗಿ ಕಾಣಿಸುವ ಕಲೆಗಳು ಸುತ್ತಲಿನ ಚರ್ಮಕ್ಕಿಂತ ಹೆಚ್ಚು ಬಿಸಿಯಾಗಿರುತ್ತವೆ ಎಂಬುದನ್ನು ಫೋಟೋಗ್ರಾಫುಗಳು ತೋರಿಸುತ್ತವೆ.

ಈಗ ಪರಿಶೀಲನಾ ಹಂತದಲ್ಲಿರುವ ಮಸಾಯಿ ಜಿರಾಫೆಗಳ ಕುರಿತಾದ ಇನ್ನೊಂದು ಅಧ್ಯಯನದ ವರದಿಯೂ ಈ ಸಂಗತಿಯನ್ನು ಪುಷ್ಟೀಕರಿಸುತ್ತದೆ. ಅಂದರೆ, ಜಿರಾಫೆಗಳ ದೇಹದ ಉಷ್ಣತೆಯ ನಿಯಂತ್ರಣದಲ್ಲಿ ಕಲೆಗಳು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು. ಆ ಅಧ್ಯಯನದ ಅನುಸಾರ, ಚಳಿಯ ವಾತಾವರಣದಲ್ಲಿ ದೇಹದ ದೊಡ್ಡ ಕಲೆಗಳಿಂದ ಜಿರಾಫೆಗಳಿಗೆ ಅನುಕೂಲ. ಯಾಕೆಂದರೆ, ಆ ಕಲೆಗಳ ಒಳ ಭಾಗದಲ್ಲಿರುವ ರಕ್ತ ನಾಳಗಳು, ಚಳಿಯಿದ್ದಾಗ ಸಂಕುಚಿತಗೊಂಡು ದೇಹದ ಉಷ್ಣತೆ ಉಳಿಸಿಕೊಳ್ಳಲು ಸಹಕಾರಿ. ಇದಕ್ಕೆ ಹೋಲಿಸಿದಾಗ, ಜಿರಾಫೆಗಳ ದೇಹದ ಸಣ್ಣ ಕಲೆಗಳಿಂದ ಬಿಸಿ ವಾತಾವರಣದಲ್ಲಿ ಹೆಚ್ಚು ಅನುಕೂಲ. ಕಾರಣ: ದೊಡ್ಡ ಮತ್ತು ಗಾಢ ಕಲೆಗಳು ಸೂರ್ಯನ ಶಾಖವನ್ನು ಹೆಚ್ಚು ಹೀರುತ್ತವೆ.

ಇವೆಲ್ಲದರ ಜೊತೆಗೆ, 2022ರಲ್ಲಿ ಪ್ರಕಟವಾಗಿರುವ ಮತ್ತೊಂದು ಅಧ್ಯಯನದ ಅನುಸಾರ, ದೇಹದ ಕಲೆಗಳು ತಮ್ಮ ಆಕಾರ, ಅಳತೆ ಮತ್ತು ಓರಿಯೆಂಟೇಷನ್ ಮೂಲಕ ಜಿರಾಫೆಗಳಿಗೆ ತಮ್ಮದೇ ಗುಂಪಿನ ಇತರ ಜಿರಾಫೆಗಳನ್ನು ಗುರುತಿಸಲಿಕ್ಕೂ ಸಹಾಯ ಮಾಡುತ್ತವೆ. ಜಿರಾಫೆಗಳ ಚರ್ಮದ ಕಲೆಗಳ ಬಗ್ಗೆ ನಮಗೆ ತಿಳಿಯದ ಎಷ್ಟೆಲ್ಲ ಸಂಗತಿಗಳಿವೆ, ಅಲ್ಲವೇ?

ಜಿರಾಫೆ ಫೋಟೋ ಕೃಪೆ: ಅಡೋಬ್.ಕೋಮ್ ವೆಬ್-ಸೈಟ್