ಒಬ್ಬ ಕಲಾವಿದ ತನ್ನ ಕುಂಚದಿಂದ ಒಂದು ಚಿತ್ರ ಬರೆದನು. ಜನರು ಆ ಚಿತ್ರದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲದಿಂದ, ಅವನು ಚಿತ್ರವನ್ನು ಒಂದು ಮೇಜಿನ ಮೇಲೆ ಇಟ್ಟು ಪಕ್ಕದಲ್ಲಿ ಒಂದು ಚೀಟಿ ಬರೆದನು:

“ತುಂಬಾ ಇಷ್ಟದಿಂದ ಈ ಚಿತ್ರವನ್ನು ಬರೆದಿದ್ದೇನೆ. ಇದರಲ್ಲಿ ಏನಾದರೂ ತಪ್ಪು ಅಥವಾ ಕೊರತೆ ಕಂಡರೆ ಇಲ್ಲಿರುವ ಪೆನ್‌ನಿಂದ ಗುರುತು ಮಾಡಿ.”

ಸಂಜೆ ಬಂದು ನೋಡಿದಾಗ, ಚಿತ್ರದ ತುಂಬಾ ಗುರುತುಗಳೇ ತುಂಬಿದ್ದವು. ಅದನ್ನು ನೋಡಿ ಅವನು ತುಂಬಾ ನೊಂದು ತನ್ನ ಗುರುವಿನ ಬಳಿಗೆ ಹೋಗಿ, “ಗುರುಗಳೇ, ನಾನು ಒಳ್ಳೆಯ ಕಲಾವಿದನಾಗಲಿಲ್ಲ” ಎಂದು ಚಿತ್ರ ತೋರಿಸಿದ.

ಗುರು ಮಂದಹಾಸ ಬೀರಿ ಹೇಳಿದರು: “ಈ ಚಿತ್ರವನ್ನು ಮತ್ತೆ ಬರೆ. ಆದರೆ ಈ ಬಾರಿ ಹೀಗೆ ಬರೆ:

‘ಈ ಚಿತ್ರದಲ್ಲಿ ಏನಾದರೂ ಕೊರತೆ ಕಂಡರೆ, ಇಲ್ಲಿರುವ ಕುಂಚ ಮತ್ತು ಬಣ್ಣಗಳನ್ನು ಬಳಸಿ ಅದನ್ನು ತಿದ್ದಿ.’”

ಮರುದಿನ ಶಿಷ್ಯನಿಗೆ ಆಶ್ಚರ್ಯ ಕಾದಿತ್ತು. ಚಿತ್ರ ಹೇಗಿತ್ತೋ ಹಾಗೆಯೇ ಇತ್ತು; ಯಾರೂ ಯಾವುದನ್ನೂ ತಿದ್ದಿರಲಿಲ್ಲ.

ತಪ್ಪುಗಳನ್ನು ಎತ್ತಿ ತೋರಿಸುವವರು ಅನೇಕರಿರುತ್ತಾರೆ; ಆದರೆ ಅವನ್ನು ತಿದ್ದಲು ಬೇಕಾದ ಜ್ಞಾನ, ನಿಪುಣತೆ ಮತ್ತು ಹೊಣೆಗಾರಿಕೆ ಹೊಂದಿರುವವರು ವಿರಳ.

ಇಂದಿನ ಸಾಮಾಜಿಕ ಜಾಲತಾಣಗಳ (WhatsApp Status/Reels) ಯುಗದಲ್ಲಿ ಸುಮ್ಮನೆ ಕುಳಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು ಲಕ್ಷಾಂತರ ಜನ ಸಿಗುತ್ತಾರೆ, ಆದರೆ ನಿಜವಾದ ಬದಲಾವಣೆ ತರಲು ಶ್ರಮಿಸುವವರು ಯಾರೂ ಇಲ್ಲ!

ಇಂದು ಒಂದಿಬ್ಬರ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬಂದ ಒಂದು ವೀಡಿಯೊ ನೋಡಿದಾಗ ಈ ಕಥೆ ನೆನಪಾಯಿತು. ಅದಕ್ಕೇ ಇದನ್ನು ಬರೆಯಬೇಕೆನಿಸಿತು.