‘ಅಂಕಲ್, ನಿಮಿಂದ ಒಂದು ಸಹಾಯ ಬೇಕಿತ್ತು’. ಕಾಂಪೌಂಡ್ ಗೇಟಿನ ಬಳಿ ನೇಹಾ ಕೇಳಿದಾಗ ನಾನು ಗಿಡಗಳಿಗೆ ನೀರು ಹಾಕುತ್ತಿದ್ದೆ.
'ಹೇಳಮ್ಮ, ಏನದು?'
'ಮುಂದಿನ ವಾರ ವಿಯೆಟ್ನಾಂ ಹೋಗ್ತಿದ್ದೀವಿ. ನಮ್ಮ ಟೈಗರ್ ನಿಮ್ಮ ಜೊತೆ ಬಿಟ್ಟು ಹೋಗೋಣ ಅಂತ. ಆಗಬಹುದೇ ಅಂಕಲ್ ?' ಟೈಗರ್ ನನ್ನನ್ನು ನೋಡಿ ಬಾಲ ಅಲ್ಲಾಡಿಸಿದ.
`ನೇಹಾ, ಟೈಗರ್ ನನಗೇನೂ ಹೊಸಬನಲ್ಲ, ಆದರೆ ನನಗೆ ನಾಯಿಗಳನ್ನು ನೋಡಿಕೊಂಡು ಅಭ್ಯಾಸವಿಲ್ಲವಲ್ಲ'
'ಒಂದು ವಾರ ಟೈಮ್ ಇದೆಯಲ್ಲ, ಅಂಕಲ್ ಇಂದಿನಿಂದಲೇ ರಾತ್ರಿ ನಿಮ್ಮ ಮನೆಯಲ್ಲೇ ಮಲಗಿಸುತ್ತೇವೆ. ನಿಮ್ಮ ಕಾಂಪೌಂಡ್ ನಲ್ಲೇ ಓಡಾಡಿಸುತ್ತೇವೆ. ಅಭ್ಯಾಸ ಆಗತ್ತೆ. ವರಿ ಮಾಡಬೇಡಿ.'
'ಹೋದ ವರ್ಷ ಹೀಗೆ ರಜೆಯಲ್ಲಿ ಹೋದಾಗ ಅದ್ಯಾವುದೋ ಕೇರ್‌ಟೇಕರ್ ಹತ್ತಿರ ಬಿಟ್ಟು ಹೋಗಿದ್ದೀರಿ, ಅಲ್ಲವಾ?'
'ಹೌದು ಅಂಕಲ್, ಆದರೆ ಈಗ ಅವನು ಊರಿನಲಿಲ್ಲ, ಬಿಸ್ಸೆಸ್ ಸರಿಯಾಗಿ ನಡೀಲಿಲ್ಲವಂತೆ. ಮುಚ್ಚಿಬಿಟ್ಟ ಜೊತೆಗೆ, ಹೋದ ಸಾರಿ ಅವನು ಟೈಗರ್ ನ ಚೆನ್ನಾಗಿ ನೋಡಿಕೊಂಡಿರಲಿಲ್ಲ. ನಿದ್ದೆ ಮಾತ್ರೆ ತಿನ್ನಿಸಿ ಮಲಗಿಸುತ್ತಿದ್ದ ಅಂತ ಆಮೇಲೆ ಗೊತ್ತಾಯಿತು.'
'ಆಯಿತು, ಹಾಗಾದರೆ ನನಗೂ ನಾಲ್ಕು ಪ್ಯಾಕೆಟ್ ನಿದ್ದೆ ಮಾತ್ರೆ ತಂದುಕೊಡು. ಟೈಗರ್ ಜೊತೆ ನಾನೂ ಆರಾಮಾಗಿ ಮಲಗ್ತಿನಿ.'
'ಹಹಹ... ಒಳ್ಳೆ ಜೋಕ್ ಅಂಕಲ್’
ಅಂದುಕೊಂಡಿದ್ದಕ್ಕಿಂತ ಟೈಗರ್ ನನಗೆ ಚೆನ್ನಾಗಿ ಹೊಂದಿಕೊಂಡ. ಎಲ್ಲಿ ಒಂದ ಮಾಡೋದು, ಎಲ್ಲಿ ಕಕ್ಕ ಮಾಡೋದು ಅನ್ನೋದನ್ನೆಲ್ಲಾ ಅವಳು ಮೊದಲೇ ಚೆನ್ನಾಗಿ ಹೇಳಿಕೊಟ್ಟಿದ್ದಳು.
ನಾನೂ ಒಬ್ಬನೇ. ಒಟ್ಟಿಗೆ ಊಟ ಮಾಡುತ್ತಿದ್ದೆವು. ಬೆಳಗ್ಗೆ-ಸಂಜೆ ಪಾರ್ಕಿನಲ್ಲಿ ಓಡಾಡಿಸಿಕೊಂಡು ಬರುತ್ತಿದ್ದೆ. ರಾತ್ರಿ ಮುದುರಿಕೊಂಡು ಚೆನ್ನಾಗಿ ನಿದ್ದೆ ಮಾಡುತ್ತಿದ್ದ
ಹದಿನೈದು ದಿನ ಕಳೆದದ್ದು ಗೊತ್ತಾಗಲೇ ಇಲ್ಲ ಅಂದು ರಾತ್ರಿ ಜಿಟಿಜಿಟಿ ಮಳೆ ಬೀಳುತ್ತಿತ್ತು. ಹನ್ನೊಂದರ ಸುಮಾರಿಗೆ ಮನೆಯ ಮುಂದೆ ಟ್ಯಾಕ್ಸಿ ಬಂದು ನಿಂತ ಸದ್ದಾಯಿತು.
'ಟ್ರಿಪ್ ಚೆನ್ನಾಗಿ ಆಯಿತೇ ನೇಹಾ?' ಅಂದೆ.
‘ಸೂಪರ್ ಆಗಿತ್ತು ಅಂಕಲ್’ ಅಂದಳು.
'ಟೈಗರ್ ಮಲಗಿದ್ದಾನೆ. ನಾಳೆ ಬೆಳಗ್ಗೆ ಬಂದು ಕರ್ಕೊಂಡು ಹೋಗಿ.”
ಒಳಗೆ ಬಂದು ಟೈಗರ್ ಕಡೆ ನೋಡಿದೆ. ಗೊರಕೆ ಹೊಡೀತಿದ್ದ.
ನಿದ್ದೆ ಮಾತ್ರೆ...!
-ಗಿರಿಧರ್ ಖಾಸನೀಸ್
(ಸಂಗ್ರಹ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!