ಕೆಲವು ವಿಷಯಗಳು ಸ್ವಂತ ಅನುಭವಕ್ಕೆ ಬರುವ ಮೊದಲು ತಾರ್ಕಿಕ ಅನಿಸುವುದಿಲ್ಲ.
ನಮ್ಮ ಅಪ್ಪ-ತಾತಂದಿರ ಕಾಲದಲ್ಲಿ ವಿಧಿಯಿಲ್ಲದೆ ಕಾಲ್ನಡಿಗೆಯಲ್ಲಿ ಓಡಾಡುತ್ತಿದ್ದರು. ಸ್ಥಿತಿ ಸ್ವಲ್ಪ ಸುಧಾರಿಸಿದ ಮೇಲೆ ಸೈಕಲ್ ಏರಿ ತಮ್ಮ ಸಂಚಾರ ನಡೆಸುತ್ತಿದ್ದರು. ನಮ್ಮ ಕಾಲಕ್ಕೆ ಆಗಲೇ ಲೂನಾ, ಸ್ಕೂಟರ್, ಕೈನೆಟಿಕ್ ಹೋಂಡಾಗಳು ಸಾಮಾನ್ಯವಾಗಿದ್ದವು. ನಾನು ಬಹುಶಃ PUC ಇಂದಲೇ ಲೂನಾ ಹತ್ತಿದೆ. ಮುಂದೆ ಇಂಜಿನಿಯರಿಂಗ್ ದಿನಗಳು ಕೈನೆಟಿಕ್ ಹೋಂಡಾ ಮೇಲೆ ಕಳೆದವು.
ಮುಂದೆ ಕಾಲ ಕಳೆದಂತೆ ಒಬ್ಬ ಸಂಬಂಧಿಕರ ಬಳಿ ಟ್ರೆಡ್ಮಿಲ್ ಇದೆ, ಎಂದು ಗೊತ್ತಾದಾಗ, “ನಾನು ಏಕೆ ತೆಗೆದುಕೊಳ್ಳಬಾರದು?” ಅನಿಸಿತು.
ಅಪ್ಪ ಡಯಾಬಿಟಿಕ್. ಅವರಿಗೂ ನಡೆಯಲು ಅನುಕೂಲ. ನಾನೂ ಮನೆಯಲ್ಲೇ ವಾಕಿಂಗ್, ರನ್ನಿಂಗ್ ಮಾಡಬಹುದು ಎಂದುಕೊಂಡೆ.
ಆ ಸಂಬಂಧಿಕ ನನ್ನ ಚಿಕ್ಕಮ್ಮನ ಅಳಿಯ. ಅವರೇ ಹೇಳಿದರು, “ಈಗ ನಾನು ಟ್ರೆಡ್ಮಿಲ್ ಅಷ್ಟಾಗಿ ಉಪಯೋಗಿಸುವುದಿಲ್ಲ.”
ನನ್ನ ಚಿಕ್ಕಮ್ಮನ ಮಗಳು ಹೇಳಿದ ಪ್ರಕಾರ, ಅದು ಆಗಲೇ ಬಟ್ಟೆ ಒಣಗಿಸುವ ಸ್ಟ್ಯಾಂಡ್ ಆಗಿ ಉಪಯೋಗವಾಗುತ್ತಿತ್ತು.
“ನಾನು ಹಾಗೆ ಮಾಡೋದಿಲ್ಲ” ಎಂಬ ಭರವಸೆ ನನಗಿತ್ತು.
ಕೊಂಡುಕೊಂಡೆ.
ಕೆಲವು ದಿನ ಉಪಯೋಗವೂ ಆಯಿತು. ಆದರೆ ಸ್ವಲ್ಪ ವರ್ಷಗಳ ನಂತರ ಅದರ ನಿಜವಾದ ಉಪಯೋಗ ಬದಲಾಗತೊಡಗಿತು. ಬಟ್ಟೆಗಳು ತಾವಾಗಿಯೇ ಅದರ ಮೇಲೆ ಬಂದು ಬೀಳತೊಡಗಿದವು.
ಇನ್ನು ಸೈಕಲ್ ವಿಷಯಕ್ಕೆ ಬಂದರೆ, ಅದು ನನ್ನ ಗೆಳೆಯ ರಾಹುಲ್ ಕೊಡುಗೆ. ಅಂದರೆ ಸೈಕಲ್ಗೆ ದುಡ್ಡು ಹಾಕಿದ್ದು ನಾನೇ, ಆದರೆ ಅದನ್ನು ತೆಗೆದುಕೊಂಡು ಉಪಯೋಗಿಸುವಂತೆ ಮಾಡಿದ ಕೀರ್ತಿ ರಾಹುಲ್ಗೆ.
ಸೈಕಲ್ ಉಪಯೋಗ ಮಾಡಲಿಲ್ಲ ಎಂದಲ್ಲ. ನಾನು ಮೊದಲು ಊಹಿಸಲಾರದಷ್ಟು ದೂರ ಸೈಕಲ್ ಮೇಲೆ ಕ್ರಮಿಸಿದೆ. ಒಂದು ಹಂತದಲ್ಲಿ ನನ್ನ ಸೈಕಲ್ ಓಡಿದಷ್ಟು ನನ್ನ ಕಾರ್ ಕೂಡ ಓಡಿರಲಿಲ್ಲ.
ಮುಂದೆ ಬೆನ್ನು ಕೈಕೊಟ್ಟಾಗ ಸೈಕಲ್ ಮೂಲೆ ಸೇರಿತು.
ಇಂದಿಗೂ ನವರಾತ್ರಿಯಲ್ಲಿ ವಾಹನ ಪೂಜೆಗೊಳ್ಳುತ್ತದೆ. ದಿನವೂ ಕೈಬೀಸಿ ಕರೆಯುತ್ತದೆ. ಆದರೆ ಅದನ್ನು ಹತ್ತಿ ತಿಂಗಳುಗಳೇ ಕಳೆದಿವೆ.
ಪುಸ್ತಕ ತಂದು ಪೂರ್ತಿ ಮಾಡದೆ ಇಡುವುದು ನನ್ನ ಹಳೆಯ ಹವ್ಯಾಸ.
ಒಂದು ದಿನ ಕಿಂಡಲ್ ಬಗ್ಗೆ ಕೇಳಿದೆ. ಇನ್ನೇನು, ಖರೀದಿ ಮಾಡೇ ಬಿಟ್ಟೆ.
ಒಂದು ಕಿಂಡಲ್ ಇದ್ದರೆ ನೂರಾರು ಪುಸ್ತಕಗಳನ್ನು ಅರೆಬರೆ ಓದಬಹುದು. ಕೆಲವು ಪುಸ್ತಕಗಳು Kindle Unlimitedನಲ್ಲಿ ಉಚಿತವಾಗಿಯೂ ಸಿಗುತ್ತಿದ್ದವು.
ಪುಸ್ತಕ ಕೊಂಡೆ. ಓದಿದೆ.
ಆದರೆ ಒಂದು ಬಾಧೆ ಇತ್ತು.
ಆ ಕಿಂಡಲ್ನಲ್ಲಿ ಕತ್ತಲಲ್ಲಿ ಓದಲು ಆಗುತ್ತಿರಲಿಲ್ಲ. ಅದಕ್ಕಾಗಿ ಒಂದು USB ಲೈಟ್ ಖರೀದಿಸಿದೆ. ಆಮೇಲೆ ಬ್ಯಾಕ್ಲೈಟ್ ಇರುವ ಮತ್ತೊಂದು ಕಿಂಡಲ್ ಕೂಡ ಕೊಂಡೆ.
ಈ ಕಿಂಡಲ್ ರಾತ್ರಿಯಲ್ಲೂ, ಬಿಸಿಲಲ್ಲೂ ಆರಾಮಾಗಿ ಓದಬಹುದಿತ್ತು.
ಓದಿದೆ.
ಕಾಲಕ್ರಮೇಣ ಅದೂ ಮೂಲೆ ಸೇರಿತು.
ಈ ಮೂರು ವಸ್ತುಗಳ ಗತಿ ಏನಾಗುತ್ತದೆ ಎಂದು ನನಗೆ ಮೊದಲೇ ಗೊತ್ತಿರಲಿಲ್ಲ ಎಂದೇನಲ್ಲ. ಅವುಗಳ ಉಪಯೋಗವೂ ಗೊತ್ತಿತ್ತು. ಆದರೂ ಸ್ವಂತ ಅನುಭವ ಆಗುವವರೆಗೆ ಅದರ ಅರ್ಥ ಅಷ್ಟು ಆಳವಾಗಿ ಅರ್ಥವಾಗಿರಲಿಲ್ಲ.
ಬಹುಶಃ ಬದುಕಿನಲ್ಲೂ ಹೀಗೆಯೇ.
ಕೆಲವು ವಿಷಯಗಳನ್ನು ಯಾರೋ ಹೇಳಿದರೆ ಅರ್ಥವಾಗುವುದಿಲ್ಲ. ಸ್ವತಃ ಅನುಭವಿಸಬೇಕು. ಆಗ ಮಾತ್ರ ಅದರ ಬೆಲೆ, ಅದರ ಮಿತಿ ಎರಡೂ ಗೊತ್ತಾಗುತ್ತವೆ.
ಈ ಮೂರರಲ್ಲಿ ಎರಡು ಇನ್ನೂ ನನ್ನ ಬಳಿಯೇ ಇವೆ.
ಟ್ರೆಡ್ಮಿಲ್ ಮಾತ್ರ ಇನ್ನೊಬ್ಬ ಸಂಬಂಧಿಕರ ಮನೆ ಸೇರಿದೆ.
ಬಹುಶಃ ಈಗ ಅದು ಅವರ ಮನೆಯಲ್ಲಿ ಬಟ್ಟೆ ಒಣಗಿಸುತ್ತಿರಬಹುದು!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!