ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಇ ಮಾದಕ ವಸ್ತು ಉತ್ಪಾದನೆ, ಮಾರಾಟ, ಬಳಕೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇವುಗಳ ಮೇಲೆ ಕಡಿವಾಣ ಹೇರಲು 'ಆಪರೇಷನ್ ರೈಸ್' ಮತ್ತು 'ಬೇಡ ಬ್ರೋ' ಎಂಬ ಎರಡು ಅಭಿಯಾನಕ್ಕೆ ಚಾಲನೆ ನೀಡಿದೆ. ಮಾದಕ ವಸ್ತುಗಳ ಸಾಗಣೆ, ಬಳಕೆ ತಡೆಯಲು ರಾಜ್ಯದ ಗೃಹ ಇಲಾಖೆ ರೂಪಿಸಿರುವ ಈ ಅಭಿಯಾನ ಯಶಸ್ವಿಯಾಗಿ ಮಾದಕ ವಸ್ತು ಬಳಕೆ ಮುಕ್ತ ಸಮಾಜ ರಚನೆಗೆ ಪೋಷಕರು, ಸಂಘ ಸಂಸ್ಥೆಗಳು, ಯುವಸಮೂಹ ಕೈಜೋಡಿಸಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಬಹು ಅಗತ್ಯ.

ಆಪರೇಷನ್ ರೈಸ್ ಡ್ರಗ್ಸ್ ಮಾರಾಟ, ಮಾದಕ ವ್ಯಸನವನ್ನು ಸಮಗ್ರ, ಸಂಘಟಿತ ಮತ್ತು ಸಮನ್ವಯದ ಕಾರ್ಯತಂತ್ರದ ಮೂಲಕ ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶ ಹೊಂದಿದ್ದರೆ, ಮಾದಕ ವಸ್ತು ಸೇವನೆ ಮತ್ತು ಸಾಗಣೆ ವಿರುದ್ದ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು 'ಬೇಡ ಬ್ರೋ’ ಅಭಿಯಾನ ಆರಂಭಿಸಲಾಗುತ್ತಿದೆ. 

ಕಳೆದ ವರ್ಷ ರಾಜ್ಯದಲ್ಲಿ ಮಾದಕ ವಸ್ತು ಸಾಗಣೆ, ಬಳಕೆಯ ಅಂದಾಜು ಹತ್ತು ಸಾವಿರ ಪ್ರಕರಣ ದಾಖಲಾಗಿದ್ದು ೨೦೦ ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ೨೦೨೬ರ ಈವರೆಗೆ ೬೫೦೦ಕ್ಕೂ ಹೆಚ್ಚು ಕೇಸು ದಾಖಲಿಸಿ ೧೮೫ ಕೋಟಿ ರು. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಇದು ಸರ್ಕಾರದ ಕಠಿಣ ಕಾನೂನು ಕ್ರಮ, ತಪಾಸಣಾ ಕ್ರಮಗಳ ಹೊರತಾಗಿಯೂ ರಾಜ್ಯಕ್ಕೆ ಡ್ರಗ್ಸ್ ಪೂರೈಕೆಗೆ ಕಡಿವಾಣ ಬೀಳುತ್ತಿಲ್ಲ ಎಂಬುದನ್ನು ತೋರಿಸಿದೆ. ಸದ್ಯ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗುವ ಬಹುತೇಕ ಮಾದಕ ವಸ್ತು ಏರ್‌ಪೋರ್ಟ್ ಮೂಲಕ ತರಲಾಗಿದ್ದು ಮತ್ತು ಮಾರಾಟದ ವೇಳೆ ಸಿಕ್ಕಿಬಿದ್ದಿದ್ದು. ಇನ್ನು ರಸ್ತೆ, ಜಲ ಮಾರ್ಗಗಳ ಮೂಲಕ ಸರಬರಾಜು ಆಗುತ್ತಿರುವ ಪ್ರಮಾಣದ ನಿಖರ ಅಂದಾಜಿಲ್ಲ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಪಾನ್ ಮಸಾಲಾ ಮತ್ತು ಗುಟ್ಕಾಗಳಲ್ಲಿಯೂ ಸ್ವತಃ ಕಂಪನಿಗಳ ಮಾಲೀಕರೇ ಡ್ರಗ್ ಬೆರೆಸುತ್ತಿರುವ, ಫೋನ್ ಮಾಡಿದರೆ ಮನೆಗೆ ಡ್ರಗ್ಸ್ ಪೂರೈಕೆ ಮಾಡುವ ಜಾಲಗಳು ದೊಡ್ಡಮಟ್ಟದಲ್ಲಿ ಸಕ್ರಿಯವಾಗಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪರ್ಯಾಯ ಮಾರ್ಗಗಳ ಮೂಲಕವೂ ಮಾದಕ ವಸ್ತುಗಳ ಬಳಕೆ ಮೇಲೆ ನಿಯಂತ್ರಣದತ್ತ ಸರ್ಕಾರ ಹೆಜ್ಜೆ ಇಟ್ಟಿರುವುದು ಮಹತ್ವದ ಬೆಳವಣಿಗೆ. ಎಳೆ ವಯಸ್ಸಿನಲ್ಲೇ ಮಕ್ಕಳು ಇಂಥ ದುಶ್ಚಟದತ್ತ ಹೆಜ್ಜೆ ಇಟ್ಟರೆ ಒಂದಿಡೀ ತಲೆಮಾರೇ ನಮ್ಮ ಕೈತಪ್ಪಿದಂತೆ. ಇಂಥ ಯತ್ನಗಳ ನಡುವೆ ವಿದೇಶಿ ಶಕ್ತಿಗಳ ಕೈವಾಡವನ್ನೂ ತಳ್ಳಿಹಾಕುವಂತಿಲ್ಲ. ಹೀಗಾಗಿ ಇದರ ಕಡಿವಾಣಕ್ಕೆ ಸರ್ಕಾರ ಇಟ್ಟ ಹೆಜ್ಜೆ ಎಲ್ಲರೂ ಕೈ ಜೋಡಿಸಬೇಕು

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೨-೦೭-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ