ನಿಮಗೆ ಯಾವಾಗಾದರೂ ಹೀಗೆ ಅನ್ನಿಸಿದೆಯಾ? ದುಡ್ಡು ಇದ್ದವರ ಹತ್ತಿರವೇ ಇನ್ನಷ್ಟು ದುಡ್ಡು ಹರಿದು ಬರುವುದು. ಪ್ರೀತಿಸುವವರು ಹೆಚ್ಚಿದ್ದಷ್ಟು ಇನ್ನೂ ಹೆಚ್ಚು ಜನ ಪ್ರೀತಿಸುವರು. ಆಫೀಸಿನಲ್ಲಿ ಒಳ್ಳೆಯ ರೇಟಿಂಗ್ ಇರುವವರಿಗೆ ಬೋನಸ್, ಇನ್ಸೆಂಟಿವ್‌ಗಳು ಇತ್ಯಾದಿ ಎಲ್ಲವೂ ಹೆಚ್ಚು ಸಿಗುವುದು. ಇದು ಸತ್ಯ!

ಇದರ ಬಗ್ಗೆ ಮೊದಲು ಕೂಡ ಬರೆದಿದ್ದೆ. ಆದರೆ ಏನು ಬರೆದಿದ್ದೆ ಅನ್ನೋದು ಈಗ ನೆನಪಿಲ್ಲ. ಹಾ... ಗುರುತ್ವಾಕರ್ಷಣೆಯ ಜೊತೆ ಹೋಲಿಸಿ ಬರೆದಿದ್ದೆ.

ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ.

ಒಮ್ಮೆ ಒಬ್ಬ ಮನುಷ್ಯ ಒಳ್ಳೆಯವನು, ಪ್ರೀತಿಗೆ ಯೋಗ್ಯನು ಅಥವಾ ಇವನನ್ನು ಓಲೈಸಿದರೆ ನಮಗೆ ಲಾಭ ಎಂಬುದು ಗೊತ್ತಾದರೆ, ಜನ ಯಾಂತ್ರಿಕವಾಗಿ ಅವನಿಗೆ ಎಲ್ಲ ಅನುಕೂಲಗಳನ್ನೂ ಮಾಡಿಕೊಡುತ್ತಾರೆ. ಆ ಮನುಷ್ಯ ನಿಜವಾಗಿಯೂ ಆ ಎಲ್ಲ ಅನುಕೂಲಗಳಿಗೆ ಯೋಗ್ಯನೇ ಅಲ್ಲವೇ ಎಂಬುದನ್ನು ಜನ ನಿರ್ಲಕ್ಷಿಸುತ್ತಾರೆ.

ಒಮ್ಮೆ ಒಬ್ಬರನ್ನು ಯೋಗ್ಯ ಅಥವಾ ಅಯೋಗ್ಯ ಎಂದು ನಿರ್ಧರಿಸಿದ ಮೇಲೆ, ಆ ಭಾವನೆಯಿಂದ ಹೊರಬರಲು ಸಮಯ ಬೇಕಾಗುತ್ತದೆ ಅಥವಾ ಯಾವುದಾದರೂ ಒಂದು ಹೊರಗಿನ ಕಾರಣ ಬೇಕಾಗುತ್ತದೆ. ಏನಿದು, ನ್ಯೂಟನ್ ಮಹಾಶಯನ ಮೊದಲನೇ ನಿಯಮ ಅಂತೀರಾ? ಇರಬಹುದು. ವಿಜ್ಞಾನವೆಂದರೆ ಅದು ಕೇವಲ ಪುಸ್ತಕಕ್ಕೆ ಸೀಮಿತವಲ್ಲ; ಎಲ್ಲೆಡೆ ಪ್ರಸ್ತುತವಾಗಿರುತ್ತದೆ.

ಹೊರಜಗತ್ತಿನಲ್ಲಿ, ಅದರಲ್ಲೂ ಆಫೀಸಿನಲ್ಲಿ, ಇಂಥದ್ದನ್ನು ನಾವು ನೋಡಿರುತ್ತೇವೆ. ಒಬ್ಬರು ನಿಸ್ವಾರ್ಥವಾಗಿ ಎಲ್ಲರಿಗೂ ಏನು ಬೇಕೋ ಅದನ್ನು ಮಾಡಿಕೊಡುತ್ತಿರುತ್ತಾರೆ. ಇನ್ನೊಬ್ಬರು ಅಂಥ ಗೋಜಿಗೇ ಹೋಗದೆ ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಕೆಲಸ ಮಾಡುತ್ತಾರೆ. ಆದರೆ, ಮುಖ್ಯ ಅಧಿಕಾರಿಗಳಿಗೆ ಎರಡನೇ ವ್ಯಕ್ತಿಯೇ ಹೆಚ್ಚು ಮುಖ್ಯವಾಗಿಬಿಡುತ್ತಾರೆ. ಬಹುಶಃ ಅವರ ಸ್ವಾರ್ಥದಲ್ಲಿ ಮೇಲಧಿಕಾರಿಗಳಿಗೆ ಅವರೊಬ್ಬ ಸಾಧಕ ಕಾಣಿಸುತ್ತಾನೆ! ಅದರ ಪರಿಣಾಮ - ಅವರಿಗೆ ಎಲ್ಲ ಸವಲತ್ತುಗಳೂ ಸಿಗುತ್ತವೆ, ಹಣವೂ ಸಿಗುತ್ತದೆ. ಇದು ಒಂದು ರೀತಿಯ ಅನ್ಯಾಯವೇ ಆದರೂ, ಇದು ಸತ್ಯ ಮತ್ತು ನಿತ್ಯ.

ಇದರಿಂದ ಏನೂ ಬದಲಾವಣೆ ಸಾಧ್ಯವೇ ಇಲ್ಲವೇ? ಇದೆ!

ನಿಮ್ಮ ಕಾಲ ಬರುವವರೆಗೆ ಕಾಯಬೇಕು. ಜೊತೆಗೆ, ನೀವು ಏನು ಮಾಡುತ್ತಿದ್ದೀರಿ ಎಂಬುದು ಜನರಿಗೆ ಗೊತ್ತಾಗುವಂತೆ ಮಾಡಬೇಕು.

ನಿಮ್ಮನ್ನು ಕಣ್ಣೆತ್ತಿಯೂ ಜನ ನೋಡುತ್ತಿಲ್ಲವಲ್ಲ, ಆಗ ಅವರಿಗೆ ನಿಮ್ಮ ಕೆಲಸದ ಮಹತ್ವವನ್ನು ಹೇಗೆ ಅರ್ಥಮಾಡಿಸಬೇಕು ಅಂತೀರಾ? ಚಿಂತೆ ಬಿಡಿ.

ಮೊದಲು ನಿಮ್ಮ ಕೆಲಸ ಉಪಯುಕ್ತವಾಗಿದೆಯೋ ಇಲ್ಲವೋ ಎಂಬುದನ್ನು ನೋಡಿ. ಕೆಲಸದಿಂದ ನಿಮಗೆ ಹೆಸರು ಬರದೇ ಇರಬಹುದು. ಆದರೆ, ನೀವು ಮಾಡುತ್ತಿರುವ ಕೆಲಸವೇ ಉಪಯೋಗಕ್ಕೆ ಬರುತ್ತಿದೆಯೋ ಇಲ್ಲವೋ ಎಂಬುದು ನಿಮಗೇ ಗೊತ್ತಿಲ್ಲದಿದ್ದರೆ ಏನೂ ಮಾಡಲಾಗುವುದಿಲ್ಲ.

ಉಪಯುಕ್ತತೆ ಇದೆ ಎಂದಾದರೆ ಅದನ್ನು ತೋರಿಸಿಕೊಳ್ಳಿ. ಆಗಲೂ ಜನರಿಗೆ ಅರ್ಥವಾಗದಿದ್ದರೆ, ನಿಮ್ಮಲ್ಲಿ ಒಂದು ಮುಖ್ಯ ಕಲೆಯ ಕೊರತೆ ಇದೆ ಎಂದು ಅರ್ಥ ಮಾಡಿಕೊಳ್ಳಿ. ಮಾಡಿದ ಕೆಲಸವನ್ನು ಹೇಗೆ ಪ್ರೆಸೆಂಟ್ ಮಾಡಬೇಕು ಅನ್ನುವುದೂ ಒಂದು ಕಲೆ. ಬೆಳವಣಿಗೆಯನ್ನು ಬಯಸುವವರು ಅದನ್ನು ಕಲಿಯಲೇಬೇಕು.

ಇನ್ನು ಕೊನೆಯ ಉಪಾಯವೆಂದರೆ ಕಾಣೆಯಾಗಿಬಿಡಿ!

ನಿಮ್ಮ ಕೆಲಸ ಜನರಿಗೆ ಕಾಣಿಸುತ್ತಿದೆ, ಆದರೆ ನೀವು ಕಾಣಿಸುತ್ತಿಲ್ಲವಲ್ಲವೇ? ಹಾಗಿದ್ದರೆ ನೀವು ಮಾಡುವುದನ್ನು ನಿಲ್ಲಿಸಿ. ಎಷ್ಟೋ ಸಲ ಆಗ ಜನರಿಗೆ ಗೊತ್ತಾಗುವುದು, ಇಷ್ಟು ದಿನ ಯಾರು ಕೆಲಸ ಮಾಡುತ್ತಿದ್ದರು ಅನ್ನೋದು!

ಆಗಲೂ ಗೊತ್ತಾಗದಿದ್ದರೆ, ನೀವು ಒಂದು ಕೆಟ್ಟ ಪ್ರದೇಶದಲ್ಲಿ ಇದ್ದೀರಿ ಅನ್ನೋದನ್ನು ಅರ್ಥಮಾಡಿಕೊಳ್ಳಿ. ಅಲ್ಲಿಂದ ಜಾಗ ಖಾಲಿ ಮಾಡಿ!