ತಮಿಳು ಚಿತ್ರರಂಗದ ಪ್ರಸಿದ್ಧ ನಟ ಜೋಸೆಫ್ ವಿಜಯ್ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಘಟಾನುಘಟಿ ದ್ರಾವಿಡ ಪಕ್ಷಗಳನ್ನೆಲ್ಲಾ ಹಿಂದಿಕ್ಕಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು ದೇಶಾದ್ಯಂತ ಅಚ್ಚರಿಗೇನೋ ಕಾರಣವಾಗಿದೆ. ಚುನಾವಣಾ ಫಲಿತಾಂಶದ ನಂತರ ತಮಿಳುನಾಡಿನಲ್ಲಿ ಸರ್ಕಾರ ರಚನೆ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಗಳು ಕೂಡ ಹೊಸದೊಂದು ಬಗೆಯ ಚರ್ಚೆಗೆ ಕಾರಣವಾಗಿವೆ. ೨೩೪ ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ೧೦೮ ಸ್ಥಾನಗಳನ್ನು ಗೆದ್ದಿದೆ. ವಿಜಯ್ ಅವರು ೨ ಸ್ಥಾನಗಳಲ್ಲಿ ಸ್ಪರ್ಧಿಸಿ, ಒಂದಕ್ಕೆ ರಾಜೀನಾಮೆ ನೀಡಿರುವುದರಿಂದ ಅವರ ಪಕ್ಷದ ಬಲ ೧೦೭ಕ್ಕೆ, ವಿಧಾನಸಭೆಯ ಒಟ್ಟು ಬಲ ೨೩೩ಕ್ಕೆ ಕುಸಿದಿದೆ. ಹೀಗಾಗಿ ಬಹುಮತ ಸಾಬೀತಿಗೆ ೧೧೭ ಸ್ಥಾನಗಳು ಬೇಕು. ವಿಜಯ್ ಅವರ ಪಕ್ಷಕ್ಕೆ ಐವರು ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ ಬೆಂಬಲಿಸಿರುವ ಕಾರಣ ಆ ಮೈತ್ರಿಯ ಬಲ ೧೧೨ಕ್ಕೇರಿಕೆಯಾಗಿದೆ. ಇನ್ನೂ ಐದು ಸ್ಥಾನಗಳ ಕೊರತೆ ಇದೆ. ಅತಿದೊಡ್ಡ ಪಕ್ಷವಾಗಿರುವ ಕಾರಣ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದರೂ ರಾಜ್ಯಪಾಲರು ಸಂಖ್ಯಾಬಲ ತೋರಿಸುವಂತೆ ಕೇಳುತ್ತಿದ್ದಾರೆ. ಹೀಗಾಗಿ ಸರ್ಕಾರ ರಚನೆ ಪ್ರಕ್ರಿಯೆಗೆ ಅಲ್ಲಿ ತೊಡಕಾಗಿದೆ. ಇಲ್ಲಿ ಎದ್ದಿರುವ ಪ್ರಶ್ನೆ ಎಂದರೆ, ರಾಜ್ಯಪಾಲರು ರಾಜಭವನದಲೇ ಸಂಖ್ಯಾಬಲ ತೋರಿಸಲು ಹೇಳಬಹುದೇ? ಸರ್ಕಾರಗಳು ಬಹುಮತ ಸಾಬೀತು ಪಡಿಸಬೇಕಿರುವುದು ಸದನದಲ್ಲೇ ಹೊರತು ರಾಜಭವನಗಳಲ್ಲಿ ಅಲ್ಲ ಎಂದು ಎಸ್.ಆರ್. ಬೊಮ್ಮಾಯಿ ಅವರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ೧೯೯೬ರಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾದಾಗ ಅತಿದೊಡ್ಡ ಪಕ್ಷ ಬಿಜೆಪಿಯನ್ನು ಮುನ್ನಡೆಸುತ್ತಿದ್ದ ಕಾರಣಕ್ಕೆ ವಾಜಪೇಯಿ ಅವರಿಗೇ ಅಂದಿನ ರಾಷ್ಟ್ರಪತಿಗಳು ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದರು. ಆನಂತರ ಅವರು ಬಹುಮತ ಸಾಬೀತುಪಡಿಸಲಿಲ್ಲ, ಅದು ಬೇರೆ ಮಾತು. ೨೦೧೮ರಲ್ಲೂ ಕರ್ನಾಟಕದಲ್ಲೂ ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೇ ಯಡಿಯೂರಪ್ಪ ಅವರು ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆಗೆ ಅವಕಾಶ ಪಡೆದಿದ್ದರು.

ಆದರೆ ಇದೀಗ ತಮಿಳುನಾಡಿನಲ್ಲಿ ವಿಜಯ್ ಅವರಿಗೆ ಸರ್ಕಾರ ರಚನೆಗೆ ಮುನ್ನವೇ ರಾಜ್ಯಪಾಲರು ಸಂಖ್ಯಾಬಲ ಇರುವ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಅವಕಾಶ ನೀಡುವ ವಿಷಯದಲ್ಲಿ ಕಾನೂನು ಪಾಲನೆ ಜತೆಗೆ ರಾಜ್ಯಪಾಲರು ತಮ್ಮ ವಿವೇಚನೆಯನ್ನೂ ಬಳಸಲು ಅವಕಾಶವಿದೆ. ಹೀಗಾಗಿ ವಿಜಯ್ ಪ್ರಕರಣ ಹಲವು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿರುವುದಂತೂ ಸುಳ್ಳಲ್ಲ. ತಮಿಳುನಾಡಿನಲ್ಲಿ ಈ ಬಿಕ್ಕಟ್ಟು ಸುಗಮವಾಗಿ ಬಗೆಹರಿಯಲಿ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೮-೦೫-೨೦೨೬

ಚಿತ್ರ ಕೃಪೆ: ದಿ ಪಯೋನೀರ್ ಜಾಲತಾಣ