ಅಗೋಚರ ಹಾಗೂ ಅತೀಂದ್ರಿಯ ಸಂಗತಿಗಳ ಅನಾವರಣ ಎಂಬ ಅಡಿಬರಹವಿರುವ ಜೀವ ದೈವ ಹಾಗೂ ವಿಶ್ವದ ಕುರಿತ ಅಚ್ಚಳಿಯದ ಸಂಗತಿಗಳ ಮನಗಾಣಿಸುವ ಕೃತಿ ಗಿರೀಶ ಶ್ರೀಪಾದ ಮೇವುಂಡಿ ಅವರ 'ತರ್ಕಕ್ಕೆ ನಿಲುಕದ್ದು'. ಇದರ ಬೆನ್ನುಡಿಯ ಸಾಲುಗಳು ನಿಮ್ಮ ಓದಿಗಾಗಿ ಹೀಗಿದೆ:
“ಮನುಷ್ಯನ ಅರಿವಿನ ಮಿತಿಗೆ ಮೀರಿದ ಅಗಾಧತೆ ಹಾಗೂ ರಹಸ್ಯಗಳನ್ನು ಹೊಂದಿರುವ ಈ ಬ್ರಹ್ಮಾಂಡವು ಅನೇಕ ವಿಸ್ಮಯಗಳ ತವರಾಗಿದೆ. ಇಲ್ಲಿ ಕಾಣುತ್ತಿರುವುದೆಲ್ಲ ಅತ್ಯಲ್ಪ ಹಾಗೂ ಕಾಣದೇ ಉಳಿದಿರುವುದೇ ಅತ್ಯಧಿಕ! ಅಧುನಿಕ ಮನುಷ್ಯನು ಇಲ್ಲಿ ತನಗೆ ನಿಲುಕಿದಷ್ಟನ್ನು ಮಾತ್ರ ವಿಜ್ಞಾನವೆಂಬ ದುರ್ಬೀನಿನಲ್ಲಿ ನೋಡುತ್ತಾ ಕಾಲ ಕ್ರಮೇಣ ಇವುಗಳ ರಹಸ್ಯಗಳನ್ನು ಭೇದಿಸುತ್ತಿರುವುದು ಒಂದು ಕಡೆ ಹೆಗ್ಗಳಿಕೆಯ ವಿಷಯವಾದರೆ, ಮತ್ತೊಂದೆಡೆ ವಿಜ್ಞಾನದ ತರ್ಕಕ್ಕೆ ಸಿಗದ ಅನೇಕ ಸಂಗತಿಗಳು ಅವುಗಳ ರಹಸ್ಯವನ್ನು ಬಿಟ್ಟುಕೊಡಲಾರದೆ ಆಧುನಿಕ ವಿಜ್ಞಾನಿಗಳನ್ನು ಸತಾಯಿಸುತ್ತಲೇ ಇವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ವೇದ ಕಾಲದ ಋಷಿ-ಮುನಿಗಳು, ಜ್ಞಾನಿಗಳು ಹಾಗೂ ಸಾಧಕರು ತಮ್ಮ ವಿಶೇಷವಾದ ಸಾಧನೆಗಳಿಂದ ಅತೀಂದ್ರಿಯ ಶಕ್ತಿಗಳನ್ನು ಸಂಪಾದಿಸಿ ಈ ರಹಸ್ಯಗಳನ್ನೆಲ್ಲಾ ಭೇದಿಸಿ ನಿರೂಪಿಸಿದ್ದರೂ ಆಧುನಿಕರಾದ ನಾವು ಕಾಲಾನುಕ್ರಮದಲ್ಲಿ ಈ ಪ್ರಕೃತಿಯೊಂದಿಗಿನ ಸಂಪರ್ಕವನ್ನು ಕಡಿದುಕೊಂಡಿದ್ದರಿಂದ ಈ ಅಗೋಚರ ಸಂಗತಿಗಳಿಂದ ದೂರವಾಗಿ ಕಣ್ಣಿಗೆ ಕಂಡಿದ್ದು ಹಾಗೂ ಅನುಭವಕ್ಕೆ ಬಂದದ್ದು ಮಾತ್ರ ಸತ್ಯವೆಂಬ ಭ್ರಮೆಯಲ್ಲಿದ್ದೇವೆ.
ಆದರೆ ಈ ಅಗಾಧ ಬ್ರಹ್ಮಾಂಡವು ನಮ್ಮ ಬುದ್ದಿಯ ಪರಿಮಿತಿಗೆ ಮೀರಿದ ಅನೇಕ ವಿಸ್ಮಯಗಳನ್ನು ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡಿದೆ. ಹಾಗಾದರೆ ಈ ನಿಗೂಢ ಬ್ರಹ್ಮಾಂಡದಲ್ಲಡಗಿರುವ ರಹಸ್ಯಗಳೆಷ್ಟು? ಇದರ ವಿವಿಧ ಆಯಾಮಗಳಾವುವು? ಮನುಷ್ಯನ ಕಲ್ಪನೆಗೂ ನಿಲುಕದ ಇಲ್ಲಿನ ಅಗೋಚರ ಶಕ್ತಿಗಳಾವುವು? ಈ ನಿಗೂಢ ಶಕ್ತಿಗಳು ಹೇಗೆ ಕೆಲಸಮಾಡುತ್ತವೆ? ಹಾಗೂ ಇವುಗಳನ್ನು ನಾವು ಯಾವ ರೀತಿ ನಮ್ಮೊಳಿತಿಗಾಗಿ ಬಳಸಿಕೊಳ್ಳಬಹುದೆಂಬ ವಿವಿಧ ಕೌತುಕದ ಪ್ರಶ್ನೆಗಳಿಗೆ ಉತ್ತರ ರೂಪದ ಪ್ರಯತ್ನವೇ ಈ 'ತರ್ಕಕ್ಕೆ ನಿಲುಕದ್ದು' ಎಂಬ ಕೃತಿಯ ಸಾರ…”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!