ದೇಹದ ತೂಕವನ್ನು ಕರಗಿಸಲು ಯೋಚಿಸುವ ಬಹುತೇಕರ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ—"ನಡೆಯಬೇಕೋ ಅಥವಾ ಓಡಬೇಕೋ?" ಎಂಬುದು. ಹೃದಯದ ಆರೋಗ್ಯವನ್ನು ಕಾಪಾಡುವ ಹಾಗೂ ಬೊಜ್ಜು ಕರಗಿಸುವ ವ್ಯಾಯಾಮಗಳಲ್ಲಿ ನಡಿಗೆ ಮತ್ತು ಓಟ ಎರಡೂ ಮುಂಚೂಣಿಯಲ್ಲಿವೆ. ಆದರೆ, ನಿಮ್ಮ ದೇಹಕ್ಕೆ ಇದರಲ್ಲಿ ಯಾವುದು ಹೆಚ್ಚು ಸೂಕ್ತ ಮತ್ತು ಯಾವುದರಿಂದ ತೂಕ ಬೇಗ ಇಳಿಯುತ್ತದೆ ಎಂಬುದನ್ನು ತಿಳಿಯೋಣ.
ಕ್ಯಾಲೊರಿ ಕರಗಿಸುವಲ್ಲಿ ಯಾವುದು ಮುಂದೆ?: ತೂಕ ಇಳಿಸುವ ವಿಚಾರಕ್ಕೆ ಬಂದರೆ ರನ್ನಿಂಗ್ (ಓಟ) ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ. ಇದು ತೀವ್ರವಾದ ವ್ಯಾಯಾಮವಾಗಿರುವುದರಿಂದ ಕಡಿಮೆ ಸಮಯದಲ್ಲಿ ವೇಗವಾಗಿ ಕ್ಯಾಲೊರಿಗಳನ್ನು ಕರಗಿಸುತ್ತದೆ.
ರನ್ನಿಂಗ್ ಮೂಲಕ ೩೦ ನಿಮಿಷಗಳ ಓಟದಿಂದ ಸುಮಾರು ೩೦೦ ಕ್ಯಾಲೊರಿಗಳು ಕರಗುತ್ತವೆ. ವೇಗದ ವಾಕಿಂಗ್ (Brisk Walking) ಮೂಲಕ ಅದೇ 30 ನಿಮಿಷಗಳಲ್ಲಿ ಕೇವಲ ೧೪೦ ರಿಂದ ೧೬೦ ಕ್ಯಾಲೊರಿಗಳು ಮಾತ್ರ ಕರಗಲು ಸಾಧ್ಯ. ಅಂದರೆ, ವಾಕಿಂಗ್ಗೆ ಹೋಲಿಸಿದರೆ ರನ್ನಿಂಗ್ ಮಾಡುವುದರಿಂದ ದುಪ್ಪಟ್ಟು ಕ್ಯಾಲೊರಿಗಳನ್ನು ಸುಲಭವಾಗಿ ಕರಗಿಸಬಹುದು.
ಹಾಗಾದರೆ ವಾಕಿಂಗ್ ಪ್ರಯೋಜನಕಾರಿಯಲ್ಲವೇ? ಖಂಡಿತಾ ಉಪಯುಕ್ತ. ರನ್ನಿಂಗ್ ಮಾಡಲು ಸಾಧ್ಯವಾಗದವರಿಗೆ ವಾಕಿಂಗ್ (ನಡಿಗೆ) ಒಂದು ಅತ್ಯುತ್ತಮ ಮತ್ತು ಸುರಕ್ಷಿತವಾದ ಆಯ್ಕೆ. ಪ್ರತಿದಿನ ೪೫ ರಿಂದ ೬೦ ನಿಮಿಷಗಳ ಕಾಲ ವೇಗವಾಗಿ ಹೆಜ್ಜೆ ಹಾಕುವುದು ದೇಹಕ್ಕೆ ಸಾಕಷ್ಟು ಲಾಭಗಳನ್ನು ನೀಡುತ್ತದೆ.
ಇದರಿಂದಾಗಿ ಹೃದಯದ ಸಾಮರ್ಥ್ಯ ಹೆಚ್ಚುತ್ತದೆ, ಸ್ನಾಯುಗಳು ಬಲಗೊಳ್ಳುತ್ತವೆ, ಮಾನಸಿಕ ಒತ್ತಡ ದೂರವಾಗಿ, ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ನೀವು ಈಗಷ್ಟೇ ವ್ಯಾಯಾಮ ಮಾಡಲು ಆರಂಭಿಸುತ್ತಿದ್ದರೆ, ಮೊದಲ ದಿನವೇ ಓಡಲು ಹೋಗಬೇಡಿ. ತಜ್ಞರ ಪ್ರಕಾರ ತೂಕ ಇಳಿಸಲು ಈ ಕೆಳಗಿನ ಕ್ರಮವನ್ನು ಅನುಸರಿಸುವುದು ಸೂಕ್ತ.
ಮೊದಲ ಹಂತ: ವಾಕಿಂಗ್ನಿಂದ (ನಡಿಗೆ) ಆರಂಭಿಸಿ.
ಎರಡನೇ ಹಂತ: ಕ್ರಮೇಣ ವೇಗವನ್ನು ಹೆಚ್ಚಿಸಿ ಜಾಗಿಂಗ್ (ಅರೆ ನಡಿಗೆ) ರೂಢಿಸಿಕೊಳ್ಳಿ.
ಮೂರನೇ ಹಂತ: ದೇಹ ಸಜ್ಜಾದ ನಂತರ ರನ್ನಿಂಗ್ (ಓಟ) ಮಾಡಲು ಮುಂದಾಗಿ.
ತೂಕವನ್ನು ನಿಯಂತ್ರಣದಲ್ಲಿಡಲು ವಾರಕ್ಕೆ ಕನಿಷ್ಠ ೧೫೦ ನಿಮಿಷಗಳ ಕಾಲ ಮಧ್ಯಮ ನಡಿಗೆ ಅಥವಾ ೭೫ ನಿಮಿಷಗಳ ಕಾಲ ರನ್ನಿಂಗ್ ಮಾಡಬೇಕು.
ಯಾರು ಯಾವುದನ್ನು ಆರಿಸಿಕೊಳ್ಳಬೇಕು?: ಯುವಕರು ಮತ್ತು ಬೇಗ ತೂಕ ಇಳಿಸಬೇಕಾದವರು: ರನ್ನಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಆರಂಭಿಕರು ಮತ್ತು ಕೀಲು ನೋವಿರುವವರು: ವಾಕಿಂಗ್ ಮಾಡುವುದು ಸುರಕ್ಷಿತ.
೫೦ ವರ್ಷ ಮೇಲ್ಪಟ್ಟವರು / ರೋಗಿಗಳಿಗೆ: ವಯಸ್ಸು ೫೦ ದಾಟಿದವರು, ಸಂಧಿವಾತ ಅಥವಾ ಹೃದಯದ ಸಮಸ್ಯೆ ಇರುವವರಿಗೆ ವಾಕಿಂಗ್ ಅತ್ಯಂತ ಸೂಕ್ತ. ಏಕೆಂದರೆ ರನ್ನಿಂಗ್ ಮಾಡುವುದರಿಂದ ಸೊಂಟ ಮತ್ತು ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ನೋವು ಹೆಚ್ಚಾಗಬಹುದು.
ಆದರೆ ಒಂದು ನೆನಪಿರಲಿ, ಕೇವಲ ವ್ಯಾಯಾಮದಿಂದ ತೂಕ ಇಳಿಯಲ್ಲ! ದೇಹದ ತೂಕ ಕಡಿಮೆಯಾಗಲು ಕೇವಲ ಓಟ ಅಥವಾ ನಡಿಗೆಯಷ್ಟೇ ಸಾಲದು. ಇದರ ಜೊತೆಗೆ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ ಬದಲಾಗಬೇಕು. ಕಡಿಮೆ ಕ್ಯಾಲೊರಿ ಇರುವ, ಪೌಷ್ಟಿಕಾಂಶ ಹಾಗೂ ನಾರಿನಂಶ (Fiber) ಹೆಚ್ಚಿರುವ ಸಮತೋಲಿತ ಆಹಾರವನ್ನು ಸೇವಿಸಿದಾಗ ಮಾತ್ರ ತೂಕ ಇಳಿಕೆಯ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು.
ನಿಮಗೆ ವೇಗವಾಗಿ ತೂಕ ಇಳಿಯಬೇಕಿದ್ದರೆ ರನ್ನಿಂಗ್ ಸೂಕ್ತ, ಅದೇ ಯಾವುದೇ ಅಪಾಯವಿಲ್ಲದೆ ನಿಧಾನವಾಗಿ ತೂಕ ಇಳಿಸಿಕೊಳ್ಳಲು ವಾಕಿಂಗ್ ಅತ್ಯುತ್ತಮ. ನಿಮ್ಮ ದೇಹದ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಸರಿಯಾದ ಹಾದಿಯನ್ನು ಆರಿಸಿಕೊಳ್ಳಿ.
(ಆಧಾರ)
ಎ ಐ ಆಧಾರಿತ ಚಿತ್ರ ಬಳಕೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!