ಚೆನ್ನಾಗಿ ಫಸಲು ಕೊಡುತ್ತಿದ್ದ ತೆಂಗಿನಮರಗಳು ಕಾಲಕ್ರಮೇಣ ಕಾಯಿ ಬಿಡುವುದು ಕಡಿಮೆ ಮಾಡುತ್ತವೆ. ಇದಕ್ಕೆ ನಾನಾ ಕಾರಣಗಳು ಇರಬಹುದಾದರೂ ಪ್ರಮುಖವಾದ ಒಂದು ಕಾರಣ, ನಾವು ನೀಡುವ ಗೊಬ್ಬರ ಮರಕ್ಕೆ ಸರಿಯಾಗಿ ಸಿಗುತ್ತಿಲ್ಲ. ಪ್ರತೀ ಮರಕ್ಕೆ ಇಂತಿಷ್ಟೇ ನೀರು, ಗೊಬ್ಬರ, ಲವಣಾಂಶದ ಅಗತ್ಯ ಇದೆ. ಈ ನಡುವೆ ತೆಂಗಿನ ಮರಗಳಿಗೆ ವಿಪರೀತ ಕೀಟಬಾಧೆ. ಚೆನ್ನಾಗಿ ಕಾಯಿಯಾದದ್ದು ಬಲಿಯದೇ ಬಿದ್ದುಹೋಗುತ್ತದೆ. ಪ್ರಸ್ತುತ ತೆಂಗಿನ ಕಾಯಿಗೆ, ಎಳನೀರಿಗೆ ಮತ್ತು ತೆಂಗಿನ ಎಣ್ಣೆಗೆ ಉತ್ತಮ ಧಾರಣೆ ಇರುವುದರಿಂದ ಓರ್ವ ಕೃಷಿಕನಿಗೆ ತಾನು ಬೆಳೆದ ಮರಗಳಲ್ಲಿ ಉತ್ತಮ ಫಸಲು ಸಿಗದೇ ಹೋದರೆ ಆತನಿಗೆ ನೋವಾಗುವುದು ಸಹಜ. 

ಸಸ್ಯಗಳ ಬುಡವನ್ನು ಬಿಡಿಸಿ ಗೊಬ್ಬರ ಮುಂತಾದವುಗಳನ್ನು ಕೊಡುವುದು ನಮ್ಮಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಕೃಷಿ ಕ್ರಮ. ಬುಡ ಮಾಡುವುದು ಎಂದರೆ ಮತ್ತೇನಲ್ಲ. ನಾವು ಕೊಡುವ ಗೊಬ್ಬರ, ಸಾವಯವ ತ್ಯಾಜ್ಯಗಳು ಸಸ್ಯಗಳ ಬುಡದಲ್ಲೇ ಇದ್ದು, ಅದು ಬೇರಿಗೆ ಲಭ್ಯವಾಗಲಿ, ಅದು ತೊಳೆದು ಹೋಗದಿರಲಿ ಎಂಬುದು. ಬುಡ ಭಾಗದಲ್ಲಿ ಬೇರು ಇರುತ್ತದೆ. ಈ ಬೇರುಗಳ ಪಕ್ಕದಲ್ಲಿ ಗೊಬ್ಬರ ಪೂರೈಕೆ ಮಾಡಿದಾಗ ಅದು ನೇರವಾಗಿ ಸಸ್ಯಗಳಿಗೆ ಲಭ್ಯವಾಗುತ್ತದೆ ಎಂಬುದು ಇಲ್ಲಿ ನಂಬಿಕೆ. ಇದರಿಂದ ಬೇರುಗಳಿಗೆ ಸರಿಯಾದ ಪೋಷಕಾಂಶಗಳು ತ್ವರಿತವಾಗಿ ಲಭ್ಯವಾಗಿ ಸಸ್ಯ ಬೇಗನೇ ಹಾಗೂ ಉತ್ತಮವಾಗಿ ಫಲಕೊಡುತ್ತದೆ.

ಹಿಂದೆ ಪೋಷಕಾಂಶ ಎಂದರೆ ಕೊಟ್ಟಿಗೆ ಗೊಬ್ಬರ ಮಾತ್ರವೇ ಆಗಿತ್ತು. ೧-೨ ಬುಟ್ಟಿ ಲೆಕ್ಕದಲ್ಲಿ ಸಸ್ಯದ ಬುಡ ಭಾಗಕ್ಕೆ ಅದನ್ನು ಹಾಕುವಾಗ, ಅದು ಬುಡ ಭಾಗದಲ್ಲಿ ಇರಲು ಸ್ಥಳಾವಕಾಶ ಬೇಕಾಗುತ್ತಿತ್ತು. ಆ ಅವಕಾಶ ಮಾಡಿಕೊಡುವುದಕ್ಕಾಗಿಯೇ ಬುಡ ಭಾಗವನ್ನು ಸ್ವಲ್ಪ ಆಳಕ್ಕೆ ಅಗೆದು ಅಲ್ಲಿಗೆ ಗೊಬ್ಬರವನ್ನು ಹಾಕುತ್ತಿದ್ದರು. ಕ್ರಮೇಣ ಬೆಳೆ ಪೋಷಕಗಳ ಸಾಲಿಗೆ ರಾಸಾಯನಿಕ ಗೊಬ್ಬರಗಳು ಬಂದವು. ಆಗಲೂ ಬುಡ ಭಾಗವನ್ನು ಸ್ವಲ್ಪ ಬಿಡಿಸಿಯೇ ಗೊಬ್ಬರವನ್ನು ಕೊಡುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾ ಬಂದಿದ್ದಾರೆ. ಕಾರಣ ಮಣ್ಣಿನಲ್ಲಿ ಈ ಗೊಬ್ಬರಗಳು ವಿಲೀನವಾಗಿ ಕರಗಿ, ಆವೀಕರಣದ ಮೂಲಕ ನಷ್ಟವಾಗದೆ ಸಸ್ಯಗಳಿಗೆ ದೊರೆಯಬೇಕು ಎಂಬ ಕಾರಣಕ್ಕೆ.

ಬುಡ ಬಿಡಿಸುವ ವಿಚಾರದಲ್ಲಿ ಈಗೀಗ ಕೆಲವು ಜಿಜ್ಞಾಸೆಗಳು ಇವೆ. ಕೆಲವರು ಬುಡ ಬಿಡಿಸಬಾರದು ಎನ್ನುತ್ತಾರೆ. ಇನ್ನು ಕೆಲವರು ಬುಡ ಬಿಡಿಸಿ ಹಾಕಿದರೆ ಒಳ್ಳೆಯದು ಎನ್ನುತ್ತಾರೆ. ಈ ಎರಡೂ ವಿಚಾರಗಳೂ ತಪ್ಪಲ್ಲ. ಬುಡ ಬಿಡಿಸದೇ ಗೊಬ್ಬರವನ್ನು ಪೂರೈಕೆ ಮಾಡಿದರೂ ತೊಂದರೆ ಏನೂ ಇಲ್ಲ. ಬಿಡಿಸಿ ಹಾಕಿದರೂ ತೊಂದರೆ ಇಲ್ಲ. ಇಲ್ಲಿ ಗಮನಿಸಬೇಕಾದುದು ಬುಡ ಬಿಡಿಸುವುದಾದರೆ ಎಷ್ಟು ಬಿಡಿಸಬೇಕು ಮತ್ತು ಹೇಗೆ ಬಿಡಿಸಬೇಕು ಎಂಬುದು.

DSCN4291.JPG

ಬುಡ ಬಿಡಿಸಬೇಕೇ - ಬೇಡವೇ?: ಬುಡ ಬಿಡಿಸದೇ ಮರ/ ಸಸಿಯ ಬುಡಕ್ಕೆ ಸಾವಯವ ತ್ಯಾಜ್ಯಗಳಾದ ಸೊಪ್ಪು ತರಗೆಲೆ, ಕೊಟ್ಟಿಗೆ ಗೊಬ್ಬರ, ಪ್ರಾಣಿಜನ್ಯ ಗೊಬ್ಬರಗಳನ್ನು ಹಾಕಿದರೆ ಅದು ಮೇಲೆ ಮೇಲೆ ಬಿದ್ದು ಬುಡ ಭಾಗ ಏರಿಕೆಯಾಗುತ್ತದೆ. ಅದು ಮಳೆಗಾಲದಲ್ಲಿ ತೇವಾಂಶ ದೊರೆತಾಗ ಸ್ವಲ್ಪ ಸ್ವಲ್ಪ ವಿಘಟನೆಯಾಗುತ್ತಾ ಮಣ್ಣಿನಲ್ಲಿ ವಿಲೀನವಾಗುತ್ತದೆ. ತೇವಾಂಶ ಇಲ್ಲದ ಸಮಯದಲ್ಲಿ ಅದು ಒಣಗಿಕೊಂಡೇ ಇರುತ್ತದೆ. ಕಳಿಯುವಿಕೆಗೆ ಅವಕಾಶ ಇದ್ದರೆ ಅದರ ಲಭ್ಯತೆ ತ್ವರಿತವಾಗಿ, ಉತ್ತಮವಾಗಿರುತ್ತದೆ.

ಬುಡ ಬಿಡಿಸಿ ಗೊಬ್ಬರವನ್ನು ಕೊಟ್ಟು ಅದರ ಮೇಲೆ ಮಣ್ಣುಹಾಕಿ ಮುಚ್ಚಿದಾಗ ಮಣ್ಣಿನ ಸಂಪರ್ಕ ಮತ್ತು ಅಗತ್ಯ ತೇವಾಂಶ ಲಭ್ಯವಾಗಿ ಸಾವಯವ ಗೊಬ್ಬರಗಳ ಕಳಿಯುವಿಕೆ ಸ್ವಲ್ಪ ತ್ವರಿತವಾಗಿರುತ್ತದೆ. ಕಳಿಯುವಿಕೆ ತ್ವರಿತವಾದಷ್ಟು ಲಭ್ಯತೆ ಹೆಚ್ಚು ಇರುತ್ತದೆ. ಮಣ್ಣಿನ ಸಂಪರ್ಕದಲ್ಲಿ ಸಾವಯವ ವಸ್ತುಗಳ ಕಳಿಯುವಿಕೆ (Decomposing) ಹೆಚ್ಚಿನ ಪ್ರಮಾಣದಲ್ಲಿರುತ್ತದೆ.  ಬುಡ ಕೆರೆದು ಗೊಬ್ಬರ ಕೊಡುವುದು ಹೆಚ್ಚು ಉತ್ತಮ ಫಲಿತಾಂಶವನ್ನು ಕೊಡುತ್ತದೆ.

ಬಯಲು ನಾಡಿನ ರೈತರು ಬುಡಭಾಗವನ್ನು ಉಳುಮೆ ಮಡುತ್ತಾರೆ. ಇದು ಮೇಲು ಸ್ಥರದ ೩-೫ ಇಂಚು ಮಣ್ಣನ್ನು ಒಕ್ಕಣೆ ಮಾಡುತ್ತದೆ. ಇದು ಅಲ್ಲಿಯ ಹವಾಗುಣಕ್ಕೆ ಸರಿ ಹೊಂದುತ್ತದೆ. ಅಲ್ಲಿ ಮಳೆ ಕಡಿಮೆಯಾದ ಕಾರಣ ಒಕ್ಕಣೆ ಮಾಡಿದಾಗ ಮಳೆ ನೀರು ಮಣ್ಣಿಗೆ ಇಳಿಯುತ್ತದೆ. ಇದು ಬಿಟ್ಟರೆ ಬೇರೆ ಅನುಕೂಲತೆ ಇರುವುದಿಲ್ಲ.

(ಇನ್ನೂ ಇದೆ)

ಚಿತ್ರ ಹಾಗೂ ಮಾಹಿತಿ: ರಾಧಾಕೃಷ್ಣ ಹೊಳ್ಳ