ಬಯಲು ಸೀಮೆಯ ಮೇ ತಿಂಗಳು ಅತಿ ಹೆಚ್ಚು ಒಣ ವಾತಾವರಣ ಇರುವ ಕಾಲ. ಬೋರ್ವೆಲ್‌ಗಳು ಒಣಗುತ್ತಿದ್ದು, ರೈತರು ತಮ್ಮ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹತಾಶೆಯಿಂದ ಟ್ಯಾಂಕರ್‌ಗಳ ಮೂಲಕ ನೀರು ಬಿಡಿಸುತ್ತಿದ್ದಾರೆ. ಆದರೆ, ನಮ್ಮ ಕೃಷಿ ವಿಧಾನ ಭಿನ್ನವಾದದ್ದು. ನಾವು ಸ್ಥಳೀಯ ಹಾಗೂ ಕಡಿಮೆ ನೀರು ಬಯಸುವ ಮರ-ಗಿಡಗಳನ್ನು ಬೆಳೆಸಲು ಮತ್ತು ವೃದ್ಧಿ ಮಾಡಲು ಪ್ರಯತ್ನಿಸುತ್ತಿದ್ದೇವೆ.

ನಮ್ಮ ತೋಟದಲ್ಲಿ ಅಗ್ನಿಮಂಥ, ಅಶ್ವಗಂಧ, ಶಲ್ಲಕೀ, ನುಗ್ಗೆ, ಬೆಟ್ಟದನೆಲ್ಲಿ, ಮಾವು, ಸೀಮೆ ಹುಣಸೆ ಮುಂತಾದ ಗಿಡ-ಮರಗಳನ್ನು ನೆಟ್ಟಿದ್ದೇವೆ. ಬೇಲಿಯೊಳಗೆ ಬಾರೆ ಹಣ್ಣಿನ ಮರಗಳನ್ನು ನೋಡಿ ಗ್ರಾಮಸ್ಥರು, "ಇದು ಬಯಲಿನ ಕಡೆ ಹೋದರೆ ಬೇಕಾದಷ್ಟು ಸಿಗುತ್ತದೆ, ಮುಳ್ಳಿನ ಗಿಡ! ಇಲ್ಲಿ ಯಾಕೆ ಹಾಕಿಕೊಂಡಿರಿ?" ಎಂದು ಕೇಳಿದ್ದಿದೆ. ಜನಪದದಲ್ಲಿ 'ಮೊಲದ ಕೋಡು' ಎಂದೇ ಗುರುತಿಸಲಾಗುವ 'ಕರಲುಮಾ ಫಿಂಬ್ರಿಯಾಟ' ಅಥವಾ 'ಕರಲುಮಾ ಎಂಬಲಾಟ' ಗಿಡಗಳು ಹಾಗೂ ಅಲೋವೆರಾವನ್ನು ನೋಡಿಯೂ ಜನ ಹೀಗೆಯೇ ಕೇಳುತ್ತಾರೆ. ಇವೆಲ್ಲದರ ಜೊತೆಗೆ, ನಮ್ಮ ದೇಶದ್ದಲ್ಲದಿದ್ದರೂ ಒಣ ಹವೆಯಲ್ಲಿ ಚೆನ್ನಾಗಿ ಬಾಳಬಲ್ಲ ಕೆಲವು ಅರೋಮ್ಯಾಟಿಕ್ ಸಸ್ಯಗಳನ್ನು ಹಾಗೂ ನಮ್ಮ ದೇಶದ್ದೇ ಆದ ಲಾವಂಚವನ್ನು ಸಹಸ್ರಾರು ಸಂಖ್ಯೆಯಲ್ಲಿ ನೆಟ್ಟಿದ್ದೇವೆ.

ಕಾಡಾಗುತ್ತಿರುವ ಕೃಷಿ ಭೂಮಿ

ಇಂತಹ ಅತಿ ಒಣ ವಾತಾವರಣದಲ್ಲೂ ಕೃಷಿ ಭೂಮಿಯಲ್ಲಿರುವ ನನ್ನ ರೂಮಿನ ಸುತ್ತ ಸಾಕಷ್ಟು ಹಸಿರು ತುಂಬಿ ಕಾಡಿನಂತಾಗಿದೆ. "ಅಡವಿಗೆ ನೀರೆರೆದವರು ಯಾರು?" ಎಂಬಂತೆ, ಕೃಷಿ ಭೂಮಿ ಕಾಡಿನಂತಾಗುತ್ತಿದ್ದ ಹಾಗೆ ಅದಕ್ಕೆ ಕೊಡಬೇಕಾದ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ನಮ್ಮಲ್ಲಿ ಈಗ ನಾವು ಕೊಡುವ ನೀರಿನ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡಿದ್ದೇವೆ. ಗಿಡಗಳು ಮರಗಳಾದ ಮೇಲೆ ನೀರು ಕೊಡುವ ಅವಶ್ಯಕತೆಯೇ ಇರುವುದಿಲ್ಲ. ಬೇಸಿಗೆಯಲ್ಲಿ ಇವು ಸ್ವಲ್ಪ ಒಣಗಿದಂತೆ ಕಂಡರೂ, ಮಳೆ ಬಂದ ನಂತರ ಮತ್ತೆ ಎಲೆಗಳು ಚಿಗುರಿ ಹಸಿರಾಗುತ್ತವೆ. ಇದರಲ್ಲಿ ಎಷ್ಟೋ ಗಿಡಗಳು ಈಗಾಗಲೇ ವಸಂತ ಮಾಸಕ್ಕೆ ಅರಳಿ ಚಿಗುರಿವೆ. ಕೆಳಗೆ, ಮಣ್ಣಿನ ಮೇಲೆ ಎಲೆಗಳ ಹಾಸು (mulching) ಇದ್ದರಂತೂ ಗಿಡಗಳು ಹಸಿರಾಗಿ ಉಳಿಯುತ್ತವೆ.

ನನ್ನ ಜಮೀನನ್ನು ಕೊಂಡಾಗ, ಮುಂಚಿನ ಮಾಲೀಕರು ಈಗಾಗಲೇ ಸಾಕಷ್ಟು ಗಿಡಗಳನ್ನು ಹಾಕಿದ್ದರು. ಅವುಗಳನ್ನು ನಾವು ತೆಗೆಯದೆ, ಉಳಿಸಿಕೊಳ್ಳಲು ಡ್ರಿಪ್ ನೀರಾವರಿ (Drip irrigation) ವ್ಯವಸ್ಥೆ ಮಾಡಿಕೊಂಡೆವು. ನಾವು ಮಣ್ಣಿನ ಮೇಲೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ನಮ್ಮ ಜಾಗವನ್ನು ಹಲವು ಝೋನ್‌ಗಳಾಗಿ ವಿಂಗಡಿಸಿದ್ದೇವೆ.ಅದರಲ್ಲಿ ಕೆಲವನ್ನು ಇಲ್ಲಿ ಸಚಿತ್ರ ಹಾಕಿರುವೆ (ಡ್ರೋನ್ ಬಳಸಿ ತೆಗೆದ ಚಿತ್ರಗಳು).

lemon-grass-stretch.jpg

ಒಣ ವಲಯ (Dry Zone): ಚಿತ್ರ ೧ - ಇದು ಲೆಮನ್ ಗ್ರಾಸ್ ಮತ್ತು ಒಣ ಪ್ರದೇಶದಲ್ಲಿ ಬೆಳೆಯುವ ಗಿಡಗಳ ವಲಯ. ಬೇಸಿಗೆಯಲ್ಲಿ ಇದು ಸಂಪೂರ್ಣವಾಗಿ ಒಣಗಿ ಹೋಗುತ್ತದೆ. ಆದರೆ ಇಲ್ಲಿ ನಮಗೆ ಕಳೆ ತೆಗೆಯುವ ಸಮಸ್ಯೆ ಇಲ್ಲ. ಏಕೆಂದರೆ ಕಳೆಯ ಜಾಗದಲ್ಲಿ ನಮಗೆ ಬೇಕಿರುವ ಅಶ್ವಗಂಧದಂತಹ ಗಿಡಗಳು ತಾನಾಗಿಯೇ ಬರುತ್ತಿವೆ. ಪ್ರಾಯಶಃ ಹಕ್ಕಿಗಳು ತಿಂದು ಹಾಕುವ ಪಿಕ್ಕಿಗಳಿಂದಾಗಿ ಇಡೀ ತೋಟದಲ್ಲಿ ಅಶ್ವಗಂಧದ ಸಸಿಗಳು ತಾನಾಗಿಯೇ ತಲೆ ಎತ್ತುತ್ತಿವೆ. ಹಕ್ಕಿಗಳಿಗಾಗಿ ನಾವು ಎಲ್ಲೆಡೆ ಮಡಿಕೆಯ ತಟ್ಟೆಗಳಲ್ಲಿ ನೀರು ಇಟ್ಟಿರುವೆವು. ಆಗಾಗ ಮುಂಗಸಿಗಳು ಕೂಡ ಬಂದು ಅದರಲ್ಲಿ ನೀರು ಕುಡಿದು ಹೋಗುತ್ತವೆ.

medicinal-plants.jpg

ಔಷಧೀಯ ಸಸ್ಯಗಳು: ಚಿತ್ರ ೨ - ಇನ್ನು ಕೆಲವು ತೋಟಗಳಲ್ಲಿ ಕಳೆ ಎಂದು ಪರಿಗಣಿಸಲಾಗುವ 'ಅಟ್ಟಿಗೆ ಸೊಪ್ಪು' ಅಥವಾ 'ಜಯಂತಿ ಗಿಡ'ವನ್ನು (ಇದನ್ನು ತೀಕೆ ಗಿಡ ಅಥವಾ ಗಬ್ಬು ಸಣ್ಣ ಶಾವಂತಿ ಎಂದೂ ಕರೆಯುತ್ತಾರೆ) ನಾನು ತೆಗೆಯದಂತೆ ನೋಡಿಕೊಂಡಿದ್ದೇನೆ. ಗಾಯವಾದಾಗ ಇದರ ಎಲೆಗಳನ್ನು ಜಜ್ಜಿ ಹಚ್ಚಿದರೆ ಗಾಯ ಬೇಗ ಮಾಯುವುದಲ್ಲದೆ, ಗಾಯದ ಕಲೆ ಕೂಡ ಉಳಿಯುವುದಿಲ್ಲ. ಹಾಗಾಗಿ ಇದನ್ನು ಕಳೆ ಎಂದು ಪರಿಗಣಿಸದೆ ಹಾಗೇ ಬಿಟ್ಟಿದ್ದೇವೆ.

aromatic-plants.jpg

ಅತಿ ಒಣ ಪ್ರದೇಶ: ಚಿತ್ರ - ೩ ಅತ್ಯಂತ ಒಣಕಲಾಗಿರುವ ಜಾಗವು ಅರೋಮ್ಯಾಟಿಕ್ ಗಿಡಗಳು, ಬೋರೆಹಣ್ಣು ಹಾಗೂ ಕಮರ ಮರಗಳಿಗೆ ಮನೆಯಾಗಿದೆ. ಕಮರದ ಗಿಡಗಳನ್ನು ಚೌಕಾಕಾರವಾಗಿ ನೆಟ್ಟಿದ್ದೇನೆ. ಅವು ದೊಡ್ಡದಾಗಿ ಬೆಳೆದ ಮೇಲೆ ಆ ಮರಗಳಿಗೆ ಕಟ್ಟಿಗೆ ಕಟ್ಟಿ ಒಂದು ರೂಮಿನಂತೆ ಮಾಡಿ, ಮಕ್ಕಳು ಹತ್ತಿ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಬಹುದು.

ಜಲ ಮರುಪೂರಣ ಮತ್ತು ತರಕಾರಿ ತೋಟ

ಮಳೆನೀರು ಸಂಪೂರ್ಣವಾಗಿ ನಮ್ಮ ಜಮೀನಿನಲ್ಲಿ ಇಂಗಿ ಹೋಗಲು ಅಲ್ಲಲ್ಲಿ ಪುಟ್ಟ ಗುಂಡಿಗಳನ್ನು ಮಾಡಿಸಿ, ಸುತ್ತಲೂ ಲಾವಂಚ ಹಾಕಿದ್ದೇವೆ. ಮಳೆನೀರು ಹರಿದರೆ ಈ ಗುಂಡಿಗಳಿಗೆ ಹೋಗುತ್ತದೆ. ಈ ಗುಂಡಿಗಳ ಬಳಿ ಹಾಕಿರುವ ಬಿದಿರು ಚೆನ್ನಾಗಿ ಬೆಳೆದಿದೆ.

ನಮ್ಮ ತರಕಾರಿ ತೋಟದ ಪಟ್ಟಿಗಳ ನಡುವೆ ಅಳಲೆ ಮರ, ರಾಸನ, ಅಮಟೆ ಮರ ಮತ್ತು ಹಲವು ಔಷಧಿ ಗಿಡಗಳಿವೆ. ಡ್ರೋನ್ ಮೂಲಕ ಎತ್ತರದಿಂದ ತೆಗೆದ ಚಿತ್ರಗಳಾದ್ದರಿಂದ ಕೆಲವೊಂದು ಗಿಡಗಳನ್ನು ಗುರುತು ಹಿಡಿಯುವುದು ಕಷ್ಟವಾಗಬಹುದು. ಆದರೂ ಇದು ಬೇಸಿಗೆಯಲ್ಲೂ ಸಾಕಷ್ಟು ಹಸಿರಾಗಿಯೇ ಇದೆ. ಇಲ್ಲಿ ನಾವು ಬದನೆ ಮುಂತಾದ ತರಕಾರಿಗಳನ್ನು ಬೆಳೆಯುತ್ತೇವೆ. ತರಕಾರಿಗಳನ್ನು ಬೆಳೆಯಲು ಸ್ವಲ್ಪ ನೆರಳಿನ ಅವಶ್ಯಕತೆ ಇದ್ದಾಗ, ಚಪ್ಪರ ಹಾಕಿ ಬಳ್ಳಿಗಳನ್ನು ಹಬ್ಬಿಸುವ ಪ್ರಯತ್ನ ಮಾಡಿರುವೆವು.

4-th-picture.jpg


ಗೊಬ್ಬರ ಮತ್ತು ರೈಸ್ಡ್ ಬೆಡ್ ವ್ಯವಸ್ಥೆ: ಚಿತ್ರ ೪ ರಲ್ಲಿ ಮೇಲಿನ ಬಲ ಭಾಗದಲ್ಲಿ ಕಾಣುವಂತೆ ತೋಟದ ಹಲವು ಜಾಗಗಳಲ್ಲಿ ಎಲೆಯ ಗೊಬ್ಬರದ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪ್ರತಿಯೊಂದು ಗಿಡದಿಂದ ಕಿತ್ತ ಹಸಿ ಎಲೆಗಳನ್ನು ಮತ್ತು ಒಣಗಿದ ಎಲೆಗಳನ್ನು ಇಲ್ಲಿ ತಂದು ಬೆರೆಸುತ್ತೇವೆ. ಇದೇ ಚಿತ್ರದಲ್ಲಿ ಮತ್ತೊಂದು ಭಾಗದಲ್ಲಿ ಇಟ್ಟಿಗೆಗಳನ್ನು ಜೋಡಿಸಿ ಮಾಡಿದ 'ಸೊಪ್ಪಿನ ರೈಸ್ಡ್ ಬೆಡ್' (Raised bed) ಇದೆ. ಇದರಲ್ಲಿ ಸೊಪ್ಪುಗಳನ್ನು ಬೆಳೆದುಕೊಳ್ಳುತ್ತೇವೆ. ನಡುನಡುವೆ ಸಾಕಷ್ಟು ತರಕಾರಿ ಸಸ್ಯಗಳು ಹಾಗೂ ದ್ರಾಕ್ಷಿ ಗಿಡಗಳನ್ನು ಹಾಕಿದ್ದೇವೆ.

ಸಂಪೂರ್ಣ ಜಮೀನಿನಲ್ಲಿ ಅಲ್ಲಲ್ಲಿ ಗೋಡಂಬಿ, ಪೇರಳೆ, ಸೀತಾಫಲ, ಮೋಸಂಬಿ, ಮಾವು ಮುಂತಾದ ಹಲವು ಹಣ್ಣಿನ ಗಿಡಗಳು ಸಮೃದ್ಧವಾಗಿ ಬೆಳೆಯುತ್ತಿವೆ.