ಬೇರುಗಳಿಗೆ ತೊಂದರೆ ಆಗದಿರಲಿ: ಬುಡ ಬಿಡಿಸುವಾಗ ಬೇರುಗಳು ತುಂಡಾಗಬೇಕು, ಬೇರು ತುಂಡಾಗುವುದರಿಂದ ಹೊಸ ಬೇರು ಹುಟ್ಟಿ ಹೆಚ್ಚು ಪೋಷಕಗಳನ್ನು ಬಳಸಿಕೊಳ್ಳುತ್ತದೆ, ಮುಂತಾದ ಕೆಲವು ಮಾಹಿತಿಗಳು ತೀರಾ ಅವೈಜ್ಞಾನಿಕವಾಗಿದೆ. ಬೇರು ತುಂಡಾಗಲೇಬಾರದು. ಕವಲು ಬೇರುಗಳು ತುಂಡಾದರೆ ಮತ್ತೆ ಹುಟ್ಟಿ ಬೆಳೆದು ಪೋಷಕ ಹೀರಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಬೇರುಗಳ ರಕ್ಷಣೆ ಮಾಡಿ ಉಳುಮೆ, ಬುಡ ಬಿಡಿಸುವಿಕೆ ಮಾಡುವುದರಿಂದ ತೊಂದರೆ ಇರುವುದಿಲ್ಲ. ಸಾಮಾನ್ಯವಾಗಿ ತೆಂಗು, ಅಡಿಕೆ ಮುಂತಾದ ಬೆಳೆಗಳ ಬೇರುಗಳು ಮೇಲು ಸ್ಥರದಲ್ಲೇ ಇರುವ ಕಾರಣ ನೆಲದಲ್ಲಿ ೨-೫ ಇಂಚಿಗಿಂತ ಹೆಚ್ಚು ಅಗೆತ ಮಾಡಬಾರದು.
ಬುಡವನ್ನು ಯಾವಾಗ ಬಿಡಿಸಬೇಕು: ಸಸ್ಯಗಳಲ್ಲಿ ಅತ್ಯಧಿಕ ಬೇರಿನ ಬೆಳವಣಿಗೆ ಮಳೆಗಾಲ ಪ್ರಾರಂಭವಾದಾಗಿನಿಂದ ಕೊನೆ ತನಕವೂ ಇರುತ್ತದೆ. ಈ ಸಮಯದಲ್ಲಿ ಬೇರುಗಳು ಮೇಲು ಸ್ಥರದಲ್ಲೇ ಇರುವ ಕಾರಣ ಈ ಸಮಯದಲ್ಲಿ ಬುಡ ಮಾಡುವಾಗ ಬೇರು ತುಂಡಾಗದಂತೆ ಎಚ್ಚರಿಕೆ ವಹಿಸಿ ಅಗೆತ ಮಾಡಬೇಕು. ಈ ಸಮಯದಲ್ಲಿ ಅಗೆತ ಮಾಡದಿರುವುದು ಒಳ್ಳೆಯದು. ಅಗೆತ ಮಾಡಿದಲ್ಲಿ ಮಳೆನೀರು ನಿಂತು ಬೇರಿಗೆ ಉಸಿರಾಟದ ತೊಂದರೆಯೂ ಉಂಟಾಗಬಹುದು. ಮಳೆಗಾಲ ಕಳೆಯುವ ಸಮಯದಲ್ಲಿ ಅಲ್ಪ ಸ್ವಲ್ಪ ಮಳೆ ಬರುತ್ತಿರುವಾಗ ಬುಡ ಬಿಡಿಸುವಿಕೆ, ಅಗೆತ ಮಾಡಿದರೆ ತಕ್ಷಣ ನೀರು ಬಸಿಯುತ್ತದೆ. ನೀರು ಇಂಗುವಿಕೆಗೂ ಅನುಕೂಲವಾಗುತ್ತದೆ. ಹಾಕಿದ ಸೊಪ್ಪು, ಗೊಬ್ಬರ ಕಳಿಯುವಿಕೆಗೆ ಅನುಕೂಲವಾಗುತ್ತದೆ. ಚಳಿಗಾಲದಲ್ಲಿ ಸಸ್ಯದ ಬೇರುಗಳು ಹೆಚ್ಚು ಕ್ರಿಯಾತ್ಮಕವಾಗಿರುವುದಿಲ್ಲ.
ಎಷ್ಟು ದೂರದಲ್ಲಿ ಬುಡ ಬಿಡಿಸಬೇಕು: ಅಡಿಕೆ ಸಸಿಯ ಪೋಷಕಾಂಶ ಹೀರುವ ಬೇರುಗಳು ಬುಡ ಭಾಗದಿಂದ ೧ ಮೀ ದೂರದಲ್ಲಿ ಇರುತ್ತವೆ. ಕಾಂಡದ ಬುಡ ಭಾಗದಲ್ಲಿರುವ ಬೇರುಗಳು ಪೋಷಕಾಂಶ ಹೀರುವ ಬೇರುಗಳಾಗಿರುವುದಿಲ್ಲ. ಆದ ಕಾರಣ ಕಾಂಡದ ಬುಡ ಭಾಗ ೧ ಮೀ ಅಥವಾ ೨.೫ ಅಡಿ ಬಿಟ್ಟು ನಂತರದದ ಸ್ಥಳವನ್ನು ಅಗೆತ ಮಾಡಬಹುದು. ಅಗೆತ ಮಾಡುವಾಗ ಮೇಲೆ ಹೇಳಿದಂತೆ ೨-೪ ಇಂಚು ಮಾತ್ರ ಮಣ್ಣನ್ನು ಸರಿಸಿ, ಆ ಪಾತ್ರೆಯೊಳಕ್ಕೆ ಗೊಬ್ಬರವನ್ನು ಹಾಕಿ ಅದೇ ಮಣ್ಣಿನಿಂದ ಮುಚ್ಚಬೇಕು. ಹೀಗೆ ಮಾಡಿದರೆ ಮಾತ್ರ ಗೊಬ್ಬರ ಸಸ್ಯಗಳಿಗೆ ಲಭ್ಯವಾಗುತ್ತದೆ.
ತೆಂಗಿನ ಮರದ ಬುಡ ಬಿಡಿಸುವಾಗ ಮರದ ಕ್ರಿಯಾತ್ಮಕ ಹೀರುವ ಬೇರುಗಳು ಎಷ್ಟು ದೂರದಲ್ಲಿ ಇರುತ್ತವೆ ಎಂಬುದನ್ನು ಗಮನಿಸಿ ಅಗೆತ ಮಾಡಬೇಕು. ಅಧ್ಯಯನಗಳ ಪ್ರಕಾರ ಬುಡ ಭಾಗದ ೨.೫ ಮೀ. ದೂರದ ತನಕ ಕವಲು ಬೇರುಗಳ ಸಂಖ್ಯೆ ಕಡಿಮೆ. ಆ ಭಾಗವನ್ನು ಮುಟ್ಟದೆ ನಂತರದ ಭಾಗವನ್ನು ಸುಮಾರು ೧ ಮೀ ಅಗಲಕ್ಕೆ ೩-೫ ಇಂಚು ತನಕ ಕೆರೆದು ಆ ಭಾಗಕ್ಕೆ ಸೊಪ್ಪು, ಗೊಬ್ಬರ ಹಾಕಿ ಮಣ್ಣು ಮುಚ್ಚಬೇಕು.
ವರ್ಷ ವರ್ಷವೂ ಬುಡ ಬಿಡಿಸಿ ಗೊಬ್ಬರ ಹಾಕುವುದು ಸಮಂಜಸವಲ್ಲ. ಬುಡ ಆಗೆದು ಗೊಬ್ಬರ ಕೊಡುವುದನ್ನು ೩-೪ ವರ್ಷಗಳಿಗೊಮ್ಮೆ ಮಾಡಿದರೆ ಸಾಕು. ಪ್ರತೀ ವರ್ಷ ಗೊಬ್ಬರ ಕೊಡುವಾಗ ಬುಡ ಭಾಗವನ್ನು ಬರೇ ೧-೨ ಇಂಚು ಸರಿಸಿ ಅಲ್ಲಿಗೆ ಹಾಕಿ ನಂತರ ಮುಚ್ಚಬೇಕು. ತೆಂಗಿನ ಮರದಿಂದ ೩ ಮೀಟರು ದೂರದಲ್ಲಿ ಬುಡ ಮಾಡಿ ಗೊಬ್ಬರ ಕೊಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ನಮ್ಮ ಹೆಚ್ಚಿನ ರೈತರು ಮರದ ಕಾಂಡದ ಬುಡಕ್ಕೆ ಗೊಬ್ಬರವನ್ನು ಹಾಕುತ್ತಾರೆ. ಇದು ಸೂಕ್ತ ವಿಧಾನವಲ್ಲ.
ಒಂದು ಅಡಿಕೆ ಮರದ ಗರಿಯ ಉದ್ದ ಎಷ್ಟು ಇರುತ್ತದೆಯೋ ಆ ತನಕ ಅದರ ಬೇರಿನ ಬೆಳವಣಿಗೆ ಇರುತ್ತದೆ ಎನ್ನುತ್ತಾರೆ. ಮಣ್ಣಿನ ಸಡಿಲತೆಯ ಮೇಲೆ ಅದು ಇನ್ನೂ ಹೆಚ್ಚು ದೂರ ಹೋಗುತ್ತದೆ. ಅದೇ ರೀತಿಯಲ್ಲಿ ತೆಂಗಿನ ಮರವೂ ಸಹ. ಕನಿಷ್ಟ ೫ ಮೀಟರ್ ತನಕ ಇದರ ಬೇರು ಇರುತ್ತದೆ. ಸಾಧ್ಯವಾದಷ್ಟು ಬುಡ ಭಾಗವನ್ನು ಬಿಟ್ಟು ಪೊಷಕಗಳನ್ನು ಕೊಟ್ಟಲ್ಲಿ ಅನುಕೂಲ. ರಾಸಾಯನಿಕ ಗೊಬ್ಬರಗಳನ್ನೂ ಸಹ ಆಹಾರ ಸ್ವೀಕರಿಸುವ ಬೇರುಗಳಿರುವಲ್ಲಿಯೇ ಕೊಡಬೇಕು.
ಯಾವುದೇ ಮರವಿರಲಿ, ಗಿಡವಿರಲಿ ಸೂಕ್ತವಾದ ನಿರ್ವಹಣೆ ಇರಲೇ ಬೇಕು. ಬೇಸಿಗೆಯಲ್ಲಿ ಅಗತ್ಯಕ್ಕೆ ತಕ್ಕಂತೆ ನೀರು ನೀಡಲೇಬೇಕು. ಇಲ್ಲವಾದಲ್ಲಿ ಗಿಡ ಒಣಗಿ ಸೊರಗಿ ಹೋಗುತ್ತದೆ. ಒಮ್ಮೆ ಗಿಡಕ್ಕೆ ಬೇಕಾದಷ್ಟು ಪೋಷಕಾಂಶಗಳು ಸಿಗದೇ ಹೋದರೆ ಭವಿಷ್ಯದಲ್ಲಿ ನೀವು ಎಷ್ಟೇ ಮುತುವರ್ಜಿಯಿಂದ ಅದನ್ನು ನೋಡಿಕೊಂಡರೂ ಅದು ಮೊದಲಿನಂತೆ ಫಲ ಕೊಡುವ ಸಾಧ್ಯತೆ ಕಡಿಮೆ. ಈ ಕಾರಣಕ್ಕೇ ಪ್ರಮುಖವಾಗಿ ತೆಂಗಿನ ಮರಗಳಿಗೆ ನಿಯಮಿಯವಾಗಿ ಗೊಬ್ಬರ, ನೀರು ನೀಡುತ್ತಲೇ ಇರಬೇಕು. ಬುಡದ ಸುತ್ತಲು ಅನವಶ್ಯಕ ತ್ಯಾಜ್ಯಗಳು (ಮಣ್ಣಿನಲ್ಲಿ ಕರಗದ) ಇದ್ದಲ್ಲಿ ಅವುಗಳನ್ನು ತೆಗೆಯಬೇಕು. ಪರಿಣಿತರಿಂದಲೇ ತೆಂಗಿನ ಮರದ ಬುಡ ಬಿಡಿಸಬೇಕು. ಸರಿಯಾದ ಪ್ರಮಾಣದ ಗೊಬ್ಬರ ಹಾಕಬೇಕು. ಆಗ ಮಾತ್ರ ಉತ್ತಮ ಫಸಲು ಕಾಣಲು ಸಾಧ್ಯ.
ಚಿತ್ರ ಹಾಗೂ ಮಾಹಿತಿ: ರಾಧಾಕೃಷ್ಣ ಹೊಳ್ಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!