ದಾಸ್ಯದಿಂದ ಆಚೆಗೆ

'ದಾಸ್ಯದಿಂದ ಆಚೆಗೆ' (Up From Slavery)- ಅಮೆರಿಕಾ ಸಂಯುಕ್ತ ಸಂಸ್ಥಾನವು ಜನ್ಮ ಕೊಟ್ಟ ಪುರುಷ ಶ್ರೇಷ್ಠನೊಬ್ಬನ ಆತ್ಮಕಥೆ. ಗುಲಾಮನಾಗಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ನಿರಂತರ ದುಡಿಮೆ ಮತ್ತು ದರ್ಶನ ಪ್ರತಿಭೆಯಿಂದ ಕಥೆಯಿದು. ರಾಜಕೀಯ ಅಧಿಕಾರದಿಂದ ದೂರವಿದ್ದರೂ ರಾಜಕೀಯ ನಾಯಕರ ಮೇಲೆ ಅಪಾರ ಪರಿಣಾಮ ಬೀರಿದ, ತನ್ನ ಜನಾಂಗಕ್ಕೆ ಅನ್ಯಾಯವೆಸಗಿದ ಜನರನ್ನು ಮಣಿಸಲು ಅವಕಾಶವಿದ್ದರೂ ಮನುಕುಲದ ಸಮರಸವನ್ನು ಬಯಸಿ ಆ ನಿಟ್ಟಿನಲ್ಲಿ ಹೆಣಗಿದವನ ಕಥೆಯಿದು. ತೋಟದಲ್ಲಿ ದಾಸಿಯಾಗಿದ್ದವಳ ಹೊಟ್ಟೆಯಲ್ಲಿ ತಂದೆ ಯಾರೆಂದು ತಿಳಿಯದೆ ಜನಿಸಿದ ಬೂಕರ್ ಟಿ. ವಾಷಿಂಗ್ಟನ್ ಶಿಕ್ಷಣ ಪಡೆಯಲು ನಡೆಸಿದ ಹೋರಾಟಗಾಥೆಯಿದು. ನಿರಂತರ ಹಸಿವು, ಸಂಕಷ್ಟ, ಅವಮಾನ, ದುಡಿಮೆಗಳ ನಡುವೆಯೇ ಶಿಕ್ಷಣ ಪಡೆದ ಬೂಕರ್ ತನ್ನ ಜನಾಂಗದ ಶಿಕ್ಷಣಕ್ಕಾಗಿ ಬದುಕನ್ನು ಮುಡಿಪಾಗಿಟ್ಟ. ಅವನ ಕಥೆ ಊಹಾತೀತ ಅರ್ಪಣಾ ಮನೋಭಾವ ಮತ್ತು ನಿಸ್ವಾರ್ಥ ಬದುಕಿಗೆ ಸಂಕೇತ. ಮಾನವನ ಕೆಚ್ಚು ಮತ್ತು ಘನತೆಯಲ್ಲಿ ನಂಬಿಕೆಯಿಟ್ಟವರೆಲ್ಲರಿಗೂ ಆತನ ಬದುಕು ಒಂದು ಸ್ಫೂರ್ತಿಯ ಚಿಲುಮೆ. ಬೂಕ‌ರ್ ಟಿ. ವಾಷಿಂಗ್ಟನ್‌ ನಂಥ ನಾಯಕರು ಆರಂಭಿಸಿದ ಆಂದೋಲನದ ಬುನಾದಿಯ ಮೇಲೆ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗುವಂತಾಯಿತು. 'ಅಪ್ ಫ್ರಂ ಸ್ನೇವರಿ' ಕೃತಿಯ ಸ್ವಾರಸ್ಯ ಕೆಡದಂತೆ ಡಾ. ಕೆ. ಪುಟ್ಟಸ್ವಾಮಿ ಕನ್ನಡಕ್ಕೆ ತಂದಿದ್ದಾರೆ.

ಈ ಕೃತಿಯ ಅನುವಾದಕರಾದ ಡಾ. ಕೆ.ಪುಟ್ಟಸ್ವಾಮಿ ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ… “ಕಪ್ಪು ಮನುಜರ ವಿಮೋಚನೆಯ ಆಧುನಿಕ ಇತಿಹಾಸದಲ್ಲಿ ಬೂಕರ್ ಟಿ. ವಾಷಿಂಗ್ಟನ್‌‌ನ ಬದುಕು ವಿಶಿಷ್ಟವಾದದ್ದು. ಆತ ಇತರ ಹೋರಾಟಗಾರರಂತೆ ಬೀದಿಗಿಳಿದು, ಭಾಷಣದ ಮೂಲಕ ಪ್ರೇರೇಪಿಸಿ ಜನಚಳವಳಿಯನ್ನು ಹುಟ್ಟುಹಾಕಿದವನಲ್ಲ. ಅಲ್ಲದೆ ಏಕಾಂಗಿಯಾಗಿ ಹೋರಾಡಿ ಸೆರೆವಾಸ ಅನುಭವಿಸಿದವನಲ್ಲ. ಬದಲು ಕಪ್ಪುಜನರ ಬದುಕಲ್ಲಿ ರಚನಾತ್ಮಕ ಬದಲಾವಣೆ ತರಲು ಶಿಕ್ಷಣ ಮತ್ತು ಉದ್ಯೋಗಗಳ ಮೂಲಕ ಸಾಧ್ಯವೆಂದು ಅಚಲವಾಗಿ ನಂಬಿ ಗುರಿಸಾಧಿಸಿದ ಮಹಾನ್ ಸಾಹಸಿ. ದುಸ್ಸಾಧ್ಯವಾದ ಕನಸುಗಳ ಬೆನ್ನು ಹತ್ತದೆ, ಬಿಳಿಯರೊಡನೆ ತಲೆಯೆತ್ತಿ ನಿಲ್ಲುವ ಕಪ್ಪುಜನರ ಸ್ವಾವಲಂಬಿ ಬದುಕಿಗೆ ಅಗತ್ಯವಾದ ಮಾರ್ಗವನ್ನು ತೆರೆದ ಮಹಾನ್ ವ್ಯಕ್ತಿ. ಕರಿಯರ ಉದ್ಧಾರದಲ್ಲಿ ಬಿಳಿಯರ ಕಲ್ಯಾಣವಿರುವುದನ್ನು ಬಿಳಿಯರಿಗೆ ಮನದಟ್ಟು ಮಾಡಿದ ದಾರ್ಶನಿಕ. ಹಾಗಾಗಿ ಬೂಕರ್‌ನ ವ್ಯಕ್ತಿತ್ವಕ್ಕೆ ಕರಿಯರು ಮಾತ್ರವಲ್ಲ ಬಿಳಿಯರೂ ಕೃತಜ್ಞರಾಗಿದ್ದಾರೆ. ಕರಿಯರಿಗೆ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಕಲಿಸಿ ಅವರು ವಿವಿಧ ಕಸುಬುಗಳಲ್ಲಿ ಪರಿಣಿತರಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಂತಾಯಿತು. ಅವರಿಗೆ ವಾಣಿಜ್ಯ ವ್ಯವಹಾರದ ಪಟ್ಟುಗಳು ಕರಗತವಾದವು. ಉದ್ಯಮಶೀಲತೆ ಬೆಳೆಯಿತು. ಅವರ ಶ್ರಮ ನಾನಾ ವಸ್ತುಗಳ ಆಕಾರ ತಾಳಿ ಬಿಳಿಯರ ಮನೆ, ಹೊಲಗದ್ದೆ ಸೇರಿದವು. ಕರಿಯರ ಹಾಜರಿ ಮತ್ತು ಪಾಲುದಾರಿಕೆ ಬಿಳಿಯರ ಬದುಕಿನಲ್ಲಿ ಬೆರೆತು ಜನಾಂಗೀಯ ಸಾಮರಸ್ಯ ಬೆಳೆಯಲು ಅದು ಬುನಾದಿ ಹಾಕಿತು. ಎಲ್ಲಕ್ಕಿಂತ ಮುಖ್ಯವಾಗಿ ಕರಿಯರ ಈ ಪ್ರಯತ್ನಗಳಿಂದ ಹೆಚ್ಚಿದ ಅಮೆರಿಕದ ಸಂಪತ್ತಿನಲ್ಲಿ ಅವರ ಮಾಲೀಕತ್ವವೂ ದಾಖಲಾಯಿತು.

ಇದು ಸಾಮಾನ್ಯವಾಗಿ ರೂಢಿಯಲ್ಲಿರುವ ಆತ್ಮಕಥೆಗಳಂತಲ್ಲ. ಬೂಕರ್ ಟಿ. ವಾಷಿಂಗ್ಟನ್ ತಾನು ಸಾಯುವುದಕ್ಕೆ ಹದಿನೈದು ವರ್ಷಗಳ ಮೊದಲೇ ಬರೆದ ಆತ್ಮಕತೆ. ಹಾಗಾಗಿ ಇದು ಅಪೂರ್ಣ. ಆದರೆ ಒಬ್ಬ ಬಡ ಗುಲಾಮರ ಕುಟುಂಬದಲ್ಲಿ ಜನಿಸಿ ಕಲಿಯಲೇಬೇಕು ಎಂಬ ಹಂಬಲದಿಂದ ಹಠ ಹಿಡಿದು ಕಲಿತು, ತನ್ನ ಸಮುದಾಯದ ಹತ್ತು ಮಿಲಿಯನ್ ಜನರಿಗೆ ನಾಯಕನಾಗಿ ಅವರ ಬದುಕಿಗೆ ದಾರಿದೀಪ ತೋರಿದ ಪವಾಡದಂತಹ ಕತೆ. ಮುರುಕು ಗುಡಿಸಿಲಿನಲ್ಲಿ ಜನಿಸಿ ಅಮೆರಿಕದ ಉಜ್ವಲ ನಾಯಕರ ಸಾಲಿನಲ್ಲಿ ನಿಲ್ಲುವ ಹಂತವನ್ನೇರಿ ಸಾಧನೆಗೈದ ಕತೆ ಈ ಕತೆಯ ನಾಯಕನ ಬದುಕಿನ ಮುಖ್ಯ ಘಟ್ಟಗಳ ವಿವರಗಳು ಇಲ್ಲಿವೆ. ಬಾಲ್ಯದ ದಾರಿದ್ರ, ಗುಲಾಮರ ಕುಟುಂಬದ ಸಂಕಷ್ಟಗಳು. ಅಂತರ್ಯುದ್ಧದ ನೆನಪುಗಳು, ವಿಮೋಚನಾ ಘೋಷಣೆಯ ತರುವಾಯ ಪಲ್ಲಟವಾದ ಬದುಕು. ಶಿಕ್ಷಣ ಕಲಿಯಲು ನಡೆಸಿದ ಹೋರಾಟ, ಪಡೆದ ಅನುಭವಗಳ ಮೂಲಕ ಕರಿಯ ಸಮುದಾಯದ ಉದ್ಧಾರಕ್ಕೆ ಪಟ್ಟ ಶ್ರಮ, ತನ್ನ ಶ್ರಮದ ಹಾದಿಯಲ್ಲಿ ಎದುರಾದ ಸಂಕಷ್ಟದ ಗಳಿಗೆಗಳು, ಸುಖದ ಚಿಲುಮೆಗಳೆಲ್ಲವುಗಳ ವಿವರಗಳಿವೆ. ಇಡೀ ನಿರೂಪಣೆಯಲ್ಲಿ ಎಲ್ಲೂ ಯಾರನ್ನೂ ದ್ವೇಷಿಸದ, ತನ್ನ ಜನಾಂಗದ ಬಗ್ಗೆ ಅಪಾರ ಅಭಿಮಾನವಿರುವ ಕರುಣಾಸಾಗರದ ಆತ್ಮವೊಂದು ಪಿಸುಗುಟ್ಟಿದಂತೆ ಕೇಳಿಸುತ್ತದೆ.”

ಬೂಕರ್ ಟಿ ವಾಷಿಂಗ್ಟನ್ ಬಗ್ಗೆ ಹೇಳುವುದಾದರೆ ಅಮೆರಿಕ ಸಂಸ್ಥಾನದ ವರ್ಜೀನಿಯಾ ಪ್ರಾಂತ್ಯದ ತೋಟದ ಗುಲಾಮರ ಕುಟುಂಬದಲ್ಲಿ ೧೮೫೬ರಲ್ಲಿ ಬೂಕ‌ರ್ ಟ್ಯಾಲಿಯಫೆರೊ ವಾಷಿಂಗ್ಟನ್ ಹುಟ್ಟಿದ್ದು, ದಾರಿದ್ರ ಮತ್ತು ಗುಲಾಮಗಿರಿ ಆತನ ಶಿಕ್ಷಣಕ್ಕೆ ಕಂಟಕವಾದವು. ಆದರೂ ಸಾವಿರಾರು ಮೈಲು ದೂರ ಪ್ರಯಾಣಿಸಿ ಹ್ಯಾಂಗ್ಟನ್ ವಿಶ್ವವಿದ್ಯಾಲಯದಲ್ಲಿ (೧೮೭೫) ಶಿಕ್ಷಣ ಪಡೆದ ಸಾಹಸಿ. ಗುಲಾಮನಾಗಿ ಹುಟ್ಟಿ ಮಾಡಿದ ಸಾಧನೆ ಕುತೂಹಲ ಮತ್ತು ರೋಮಾಂಚನದ ಗಾಥೆ.

ಗುಲಾಮಗಿರಿಯಿಂದ ವಿಮೋಚನೆ ಪಡೆದ ಸಮುದಾಯವು ಹೊಸ ಬದುಕು ರೂಪಿಸಿಕೊಳ್ಳುವ ಸಂಕಷ್ಟಗಳ ಕಾಲದಲ್ಲಿ ಬಿಳಿಯರು ಮತ್ತು ಆಪ್ರೋ ಅಮೆರಿಕನ್ನರ ನಡುವಣ ಬಾಂಧವ್ಯ ಸುಧಾರಣೆಗೆ ಶ್ರಮಿಸಿದರು. ಅಲಬಾಮದ ಟಸ್ಕೆಜೀ ಎಂಬ ಸ್ಥಳದಲ್ಲಿ ಪಾಳುಬಿದ್ದ ಕೋಳಿಗೂಡು ಮತ್ತು ಬೀಳುಬಿದ್ದ ಚರ್ಚಿನಲ್ಲಿ ಕಲಿಕೆ ಮತ್ತು ದುಡಿಮೆಯ ಶಿಕ್ಷಣ ಆರಂಭಿಸಿದ ವಾಷಿಂಗ್ಟನ್, ಟಸ್ಕೆಜಿ ಸಂಸ್ಥೆಯನ್ನು ಅಮೆರಿಕದ ಪ್ರಸಿದ್ಧ ವಿದ್ಯಾ ಸಂಸ್ಥೆಯಾಗಿ ರೂಪಿಸಿದರು. ಕರಿಯರ ರಾಜಕೀಯ ಹೋರಾಟಗಳಲ್ಲಿ ನಾಯಕತ್ವ ವಹಿಸಿ, ದಾನಿಗಳು, ಸಮಾಜಸುಧಾರಕರು, ರಾಜಕೀಯ ಧುರೀಣರ ಸಂಪರ್ಕ ಸಾಧಿಸಿ ಕರಿಯರ ಏಳಿಗೆಗೆ ಶ್ರಮಿಸಿದರು. ಅಮೆರಿಕದ ಅಧ್ಯಕ್ಷರಿಂದ ಭೋಜನಕೂಟಕ್ಕೆ ಆಹ್ವಾನ ಪಡೆದು ಅತಿಥಿಯಾಗಿ ಶ್ವೇತಭವನ ಪ್ರವೇಶಿಸಿದ ಮೊದಲ ಕರಿಯ ನಾಯಕರೆನಿಸಿದರು.

ಶಿಕ್ಷಣ, ಉದ್ಯಮಶೀಲತೆ, ಬದುಕು ಇತ್ಯಾದಿ ವಿಷಯಗಳ ಬಗ್ಗೆ ಹದಿನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ೧೯೦೧ರಲ್ಲಿ ಪ್ರಕಟವಾದ ಅವರ ಆತ್ಮಕತೆ ‘Up from Slavery’ ಅಪಾರ ಜನಪ್ರಿಯತೆ ಪಡೆದ ಕೃತಿ. ಶಿಕ್ಷಕರಾಗಿ, ಲೇಖಕರಾಗಿ, ಪ್ರಭಾವಿ ಭಾಷಣಕಾರರಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ, ಅಮೆರಿಕದ ಅಧ್ಯಕ್ಷರ ಸಲಹೆಗಾರರಾಗಿ ದಣಿವರಿಯದೆ ದುಡಿದ ವಾಷಿಂಗ್ಟನ್ ತಮ್ಮ ೫೯ನೆಯ ವರ್ಷದಲ್ಲಿ ನಿಧನರಾದವರು (೧೯೧೫). ಅವರು ಮನ್ನಡೆಸಿದ ಕರಿಯರ ಮತದಾನದ ಹಕ್ಕುಗಳ ಹೋರಾಟ ೧೯೬೪ರಲ್ಲಿ ಫಲ ಕಂಡಿತು. ಅವರು ಸ್ಥಾಪಿಸಿದ ಟಸ್ಕೆಜಿ ಸಂಸ್ಥೆ ಇಂದು ಅಮೆರಿಕದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲೊಂದಾಗಿದೆ. ಬೂಕರ್ ಅವರ ಹೋರಾಟದ ಬದುಕು ಎಲ್ಲರಿಗೂ ಪ್ರೇರಣಾದಾಯಕವಾಗಿರುವುದರಿಂದ ಇಂದಿನ ಯುವ ಜನಾಂಗ ಅವಶ್ಯವಾಗಿ ಈ ಕೃತಿಯನ್ನು ಓದಬೇಕು.