ಇದೊಂದು ವಿಭಿನ್ನ ಶೈಲಿಯ ಪತ್ತೇದಾರಿ ಕಾದಂಬರಿ. ದೆವ್ವಗಳಿಂದ ನಡೆಯುವ ಸರಣಿ ಕೊಲೆಗಳನ್ನು ಭೇದಿಸುವ ಒಬ್ಬ ದೃಷ್ಟಿಹೀನ ಹುಡುಗಿಯ ಕಥೆ ಈ ಕಾದಂಬರಿಯ ಕಥಾ ವಸ್ತು. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಬಾ ಹ ರಮಾಕುಮಾರಿ. ಇವರು ತಮ್ಮ ಮುನ್ನುಡಿಯಲ್ಲಿ ಹೇಳಿದ ಮಾಹಿತಿಯ ಸಾರಂಶ ಇಲ್ಲಿದೆ…
“ದೃಷ್ಟಿ ಇಲ್ಲದ ಪತ್ತೇದಾರಿ'. ಇದೊಂದು ಕಾಲ್ಪನಿಕ ಕೃತಿ ಎಂದು ಕಾದಂಬರಿಕಾರರೇ ಹೇಳಿಕೊಂಡಿದ್ದಾರೆ. ಮೇಲುನೋಟಕ್ಕೆ ಅತಿಮಾನುಷ ಎಂಬಂತೆ ತೋರುತ್ತದೆ. ಒಬ್ಬ ದೃಷ್ಟಿಹೀನ ಹುಡುಗಿಯು ದೆವ್ವಗಳಿಂದ ನಡೆಯುವ ಸರಣಿ ಕೊಲೆಗಳನ್ನು ಭೇದಿಸುವ ಕ್ರಮ ವಿಧಿ, ವಿಧಾನ ಕುತೂಹಲಕಾರಿ. ಕೇವಲ ಸ್ಪರ್ಶ ಮತ್ತು ವಾಸನೆಯಿಂದ ಪ್ರತಿಯೊಂದನ್ನೂ ಊಹಿಸುವ, ಕಲ್ಪಿಸುವ ಆ ಮೂಲಕ ಗುರುತಿಸುವೆ ಸಾಮರ್ಥ್ಯವನ್ನು ಕಾದಂಬರಿಯ ನಾಯಕಿಯಲ್ಲಿ ತುಂಬುವ concept ಇವರಿಗೆ ಹೇಗೆ ಬಂತು? ಅದರ ನಿಗೂಢತೆಗೆ ಚಕಿತರಾಗುವ ಸರದಿ ಓದುಗರದಾಗುತ್ತದೆ.
ಈ ಕಾದಂಬರಿಯ ನಾಯಕಿ ನಯನಾ ಒಬ್ಬ ದೃಷ್ಟಿಹೀನ ಹುಡುಗಿ. ದೃಷ್ಟಿಹೀನತೆ ಒಂದು ದೌರ್ಬಲ್ಯ ಅಲ್ಲ ಎನ್ನುವುದನ್ನು ನಿರೂಪಿಸುವಂತೆ ಅವಳ ವ್ಯಕ್ತಿತ್ವ ಬೆಳೆಯುತ್ತಾ ಹೋಗುತ್ತದೆ. ನಾನು ಎನ್ನುತ್ತಾ ಆಕೆಯ ಮಾತುಗಳು ಕಾದಂಬರಿಯನ್ನು ಬೆಳೆಸುತ್ತಾನೆ. ಪ್ರತಿಯೊಂದು ಗಹನ-ನಿಗೂಢ. ನಯನಾಳ ತಂದೆಯ ನಿಗೂಢ ಸಾವಿನ ಸುತ್ತ ಹೆಣೆದುಕೊಳ್ಳುವ ಹಂದರ. ಅದನ್ನು ಬೇಧಿಸಲು ಯತ್ನಿಸುವ ಮಗಳು ನಯನಾ ದೃಷ್ಟಿಯೇ ಇಲ್ಲದಿದ್ದರೂ ಸತತ ಪ್ರಯತ್ನದಿಂದ ಸಂಕೇತಗಳು, ಸ್ಪರ್ಶ ಆಲಿಸುವಿಕೆ ಮತ್ತು ಅಲ್ಪಾಸಾನಿಕ್ ಎಮಿಟರ್ಗಳ ಶಬ್ದಗಳ ಮುಖಾಂತರವೇ ಸತ್ಯವನ್ನು ಅನಾವರಣಗೊಳಿಸಿಕೊಂಡವಳು.
'ಅವರು ನನ್ನನ್ನು ಕೊಂದರು. ನನ್ನ ಶವವನ್ನು ಹುಡುಕು. ಕರ್ಮಗಳನ್ನು ಮಾಡು, ಆತ್ಮಕ್ಕೆ ಶಾಂತಿ ನೀಡು' ಎನ್ನುತ್ತದೆ. ಆ ಆತ್ಮ ಎಲ್ಲರನ್ನೂ, ನಿಮ್ಮನ್ನೂ ಕೊಲ್ಲುತ್ತದೆ ಎಂದು ಹೇಳಿದಾಗ, ಪತ್ತೇದಾರಿಕೆ ಮುಂದುವರೆಯುತ್ತದೆ. ಎಲ್ಲ ಶತೃಸ್ವರೂಪಗಳನ್ನು ಅತೀಂದ್ರಿಯ ಶಕ್ತಿ ಮೂಲಕವೇ ಎಲ್ಲರನ್ನೂ ನಾಶ ಮಾಡಿದ ಶಕ್ತಿ ಯಾವುದೆಂದು ಕೊನೆವರೆಗೂ ಅರಿವಾಗುವುದೇ ಇಲ್ಲ. ಕುತೂಹಲ ಮತ್ತು ಸಂಕೀರ್ಣ ರೀತಿಯಲ್ಲಿ ಕಥೆ ಮುಂದುವರೆಯುತ್ತಾ ಹೋಗುತ್ತದೆ.”
ಮೊದಲ ಪುಟದಿಂದ ಕುತೂಹಲವನ್ನು ಕೆರಳಿಸುತ್ತಾ ಹೋಗುವ ಸಾಗರ್ ಹೆಚ್ ಪಿ ಇವರ ಈ ಕಾದಂಬರಿಯನ್ನು ಅವರು ತಮ್ಮ ತಂದೆ ಪ್ರಕಾಶ್ ಎನ್ ಮತ್ತು ತಮ್ಮ ತಾಯಿ ಚಂದಿಕಾ ಎಂ ಅವರಿಗೆ ಅರ್ಪಣೆ ಮಾಡಿದ್ದಾರೆ. ೭೫ ಪುಟಗಳ ಈ ಪುಟ್ಟ ಕಾದಂಬರಿಯು ಸಣ್ಣದಾದ ರೋಚಕ ಓದಿಗೆ ಅನುಕೂಲ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!