ಡಿವಿಜಿ ಅವರು ಸ್ವತಃ ಪೂಜೆ-ಪುನಸ್ಕಾರ ಮಾಡುತ್ತಿರಲಿಲ್ಲ ಎಂಬ ವಿಚಾರ ನನಗೆ ಕೇಳಿಬಂತು. ಆದರೆ ದೇವರಲ್ಲಿ ಅವರಿಗೆ ನಂಬಿಕೆ ಇತ್ತಂತೆ. ದೇವರ ಬಗ್ಗೆ ಒಂದು ಪುಸ್ತಕವನ್ನು ಅವರು ಬರೆದಿದ್ದಾರೆ ಎಂದು ನಂತರ ತಿಳಿದುಬಂದಿತು. ಆ ಪುಸ್ತಕವನ್ನು ತೆಗೆದುಕೊಂಡು ಓದುತ್ತಿದ್ದೆ. ಪುಸ್ತಕದ ಹೆಸರು "ದೇವರು — ಒಂದು ವಿಚಾರ ಲಹರಿ". ದೇವರು ಇದ್ದಾನೆಯೇ, ದೇವರೆಂದರೆ ಏನು, ದೇವರೆಂಬ ವಸ್ತು ನಿಜವಾಗಿ ಇರುವುದೇ — ಈ ಪ್ರಶ್ನೆಗಳು ಶತಮಾನಗಳಿಂದ ಮನುಷ್ಯನನ್ನು ಕಾಡುತ್ತಿರುವ ವಿದ್ಯಮಾನ. ಈ ರೀತಿಯ ಪ್ರಶ್ನೆಗಳಿಗೆ ಸರಳವಾಗಿ, ನೇರವಾಗಿ ಉತ್ತರ ಹುಡುಕುತ್ತಿರುವ ಚಿಕ್ಕ ಪ್ರಬಂಧ ಡಿವಿಜಿ ಅವರದು.

1973ರಲ್ಲಿ ಬರೆದಿರುವ ಈ ಪುಸ್ತಕ ನನಗೆ ಅತೀವ ಕುತೂಹಲ ಕೆರಳಿಸಿತು. ಅವರು ಈ ಪುಸ್ತಕವನ್ನು ಬರೆದಾಗ ಬೆಂಗಳೂರಿನ ಸೇಂಟ್ ಮಾರ್ಥಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ. ಹಾಸಿಗೆಯ ಮೇಲಿನಿಂದಲೇ ಈ ಚಿಂತನೆಗಳನ್ನು ಹೇಳಿ ಬರೆಸಿದ್ದಂತೆ. ಬರೆದುಕೊಂಡವರು ಬಿ ಜಿ ಎಲ್ ಸ್ವಾಮಿ, ಎಸ್ ಆರ್ ರಾಮಸ್ವಾಮಿ ಮತ್ತು ಇನ್ನೂ ಹಲವರು. ಈ ವಿಷಯ ಬಹಳ ದಿನಗಳಿಂದ ತಮ್ಮ ಮನಸ್ಸಿನಲ್ಲಿ ಮಿಡಿಯುತ್ತಿದ್ದುದು, ಇದು ನಮ್ಮ ಕಾಲಕ್ಕೆ ಮುಖ್ಯವಾದದ್ದು ಎಂದು ಡಿವಿಜಿ ಹೇಳುತ್ತಾರೆ. ಪುಸ್ತಕ ಮೈಸೂರಿನ ಕಾವ್ಯಾಲಯದ ಪ್ರಕಟಣೆ.

ಡಿವಿಜಿ ಅವರು ಈ ಸ್ಥಿತಿಯಲ್ಲಿದ್ದಾಗ ಖಂಡಿತವಾಗಿ ಮತಪ್ರಚಾರ ಮಾಡಲು ಹೋದಂತೆ ಕಾಣುವುದಿಲ್ಲ. ಅವರು ಯಾವ ಸಂಪ್ರದಾಯದ ಪರವಾಗಿಯೂ ವಾದ ಮಾಡಿದಂತೆ ಕಾಣುತ್ತಿಲ್ಲ. ದೇವರ ಕಲ್ಪನೆಯನ್ನು ವಿವೇಕದಿಂದ, ವೇದಾಂತದ ಬೆಳಕಿನಲ್ಲಿ, ಆದರೆ ಆಧುನಿಕ ಮನಸ್ಸಿಗೆ ನಿಲುಕುವ ಭಾಷೆಯಲ್ಲಿ ಪರಿಶೀಲಿಸುವ ಒಂದು ವಿಚಾರ ತರಂಗವೇ ಇದಾಗಿದೆ.

ಪ್ರಕೃತಿಯನ್ನೇ ದೇವರೆಂದು ಕಾಣುವ ಹಲವು ಸಂಪ್ರದಾಯಗಳಲ್ಲಿ ಪ್ರಕೃತಿಯನ್ನು ಒಂದು ಚೈತನ್ಯದಂತೆ ಕಾಣುತ್ತಾರೆ. ಪ್ರಕೃತಿ ನಮಗೆ ಚೈತನ್ಯ ಕೊಡುತ್ತದೆ; ಪ್ರಕೃತಿಯ ನಡುವೆ ನಮ್ಮ ಚೈತನ್ಯವು ಮೊಳಗುತ್ತದೆ. ಡಿವಿಜಿ ಅವರ ವಿಚಾರ ಕೂಡ ಇದಕ್ಕೆ ಹೊಂದಿಕೊಂಡಂತಿದೆ. ದೇವರು ಚೈತನ್ಯ ಅಥವಾ ಶಕ್ತಿ. ದೇವರ ಮಹಿಮೆಗೆ ಒಳಪಡದ ವಸ್ತು ಈ ಪ್ರಪಂಚದಲ್ಲಿ ಪ್ರಕೃತಿಯಲ್ಲಾಗಲಿ, ಮನುಷ್ಯನಲ್ಲಾಗಲಿ ಯಾವುದೂ ಇಲ್ಲ ಎನ್ನುತ್ತಾರೆ. ಇದನ್ನೇ ಪ್ರಕೃತಿಗೆ ಹೋಲಿಸಿ ನೋಡಿದರೆ — ಪ್ರಕೃತಿಯ ಒಡನಾಟಕ್ಕೆ ಒಳಪಡದ ವಸ್ತು ಈ ಪ್ರಪಂಚದಲ್ಲಿ ಎಲ್ಲೂ ಇಲ್ಲ.

ಜಗತ್ತಿನ ಸೃಷ್ಟಿಯ ಚೈತನ್ಯ ಯಾವುದು? ಲಯಗಳಿಗೆ ಕಾರಣವಾದದ್ದು ಯಾವುದು? ಎಲ್ಲಿಯ ತೈತ್ತಿರೀಯ ಉಪನಿಷತ್ತು, ಎಲ್ಲಿಯ ಫ್ರೆಂಚ್ ತತ್ವಜ್ಞಾನಿ ಡೆಕಾರ್ಟ್! (Descartes) ಡೆಕಾರ್ಟ್ ಅವರ ಪ್ರಸಿದ್ಧ ಮಾತು — "ಕೊಜಿಟೋ ಎರ್ಗೋ ಸಮ್" / "Cogito, ergo sum", ಅಂದರೆ "ನಾನು ವಿಚಾರ ಮಾಡುತ್ತಿದ್ದೇನೆ, ಆದ್ದರಿಂದ ನಾನಿದ್ದೇನೆ" ಎಂಬಂತೆ ಅರ್ಥ ಬರುವ ವಾಕ್ಯ. ಇವೆರಡನ್ನೂ ಅವರು ಜೊತೆಗಿಟ್ಟು ವಾದ ಮಾಡುತ್ತಾರೆ. ತಾನು ಇರುವುದು ದೇವರು ಇದ್ದರೆ ಮಾತ್ರ; ದೇವರಿಲ್ಲದಿದ್ದರೆ ತಾನು ಕೂಡ ಇಲ್ಲ ಎಂಬುದು ಉಪನಿಷತ್ತಿನ ಮತ — ಎಂಬುದು ಅವರ ವಿಚಾರ. ಡಿವಿಜಿ ಅವರ ಪ್ರಕಾರ ದೇವರನ್ನು ಒಪ್ಪುವುದು ಮೂಢನಂಬಿಕೆ ಅಲ್ಲ, ಅದೊಂದು ವಿಚಾರಪೂರ್ಣ ನಿಲುವು.

ನಾವು ಸಣ್ಣವರಿದ್ದಾಗ ಈ ರೀತಿಯ ಹಲವು ಪ್ರಶ್ನೆಗಳು ನಮ್ಮನ್ನು ಕಾಡಿದ್ದುಂಟು. ಅಪ್ಪನ ಅಬ್ಬರದ ದೇವರ ಪೂಜೆ ನಮಗೆ "ದೇವರು ನಿಜವಾಗಲೂ ಇದ್ದಾನೆಯೇ" ಎಂಬುದನ್ನು ಚಿಂತಿಸುವಂತೆ ಮಾಡುತ್ತಿತ್ತು. ಎಷ್ಟೋ ಬಾರಿ ಕಷ್ಟಗಳಲ್ಲಿ ಸಿಲುಕಿ ಮೇಲೇಳದಂತೆ ಆದಾಗ ಕೂಡ "ದೇವರು ಇದ್ದಾನೆಯೇ?” ಎನಿಸುತ್ತಿತ್ತು. ದೇವರನ್ನು ನೆನೆಸಿಕೊಂಡರೆ ಎಲ್ಲವೂ ಸುಗಮ ಎಂಬ ಸುಲಭದ ದಾರಿಯನ್ನು ನಮಗೆ ಹೇಳಿಕೊಟ್ಟಿದ್ದು, ನಾವೂ ದೇವರ ಕುರಿತಾಗಿ ಒಂದು ಪ್ರಯೋಗ ಮಾಡುವಂತೆ ಮಾಡುತ್ತಿತ್ತು. ನಾವು ದೇವರಲ್ಲಿ ಅದೆಷ್ಟು ಬಾರಿ ಕೇಳಿಕೊಂಡಿದ್ದಿಲ್ಲ? “ದೇವರೇ, ಹೇಗಾದರೂ ಮಾಡಿ ಅಪ್ಪನಿಗೆ ಸ್ವಲ್ಪ ದುಡ್ಡು ಬರುವಂತೆ ಮಾಡು; ನನಗೆ ಕಾಲೇಜಿನಲ್ಲಿ ಫೀಸ್ ಕಟ್ಟಲು ದುಡ್ಡಿಲ್ಲ" ಎಂದು ದೇವರನ್ನು ಪ್ರಾರ್ಥಿಸಿದ್ದು ನನಗೆ ನೆನಪಿದೆ. ಆದರೆ ಒಂದು ಸಮಯದಲ್ಲಿ ದೇವರ ಕುರಿತಾದ ನಂಬಿಕೆ ನನಗೆ ಇರಲಿಲ್ಲ. ಪ್ರತಿ ಹೆಜ್ಜೆಯೂ ಕಷ್ಟ, ಪ್ರತಿದಿನವೂ ಕಷ್ಟ ಎಂಬಂತಾದಾಗ, ಅಧ್ಯಾತ್ಮ-ತತ್ವಜ್ಞಾನದ ಅರಿವಿಲ್ಲದಿದ್ದಾಗ, ದೇವರ ಕುರಿತಾಗಿ ನಂಬುವುದು ಬಹಳ ಕಷ್ಟ. ದೇವರು ಇದ್ದಲ್ಲಿ ಅವನು ಯಾಕೆ ನಮಗೆ ಕಷ್ಟ ಕೊಡುತ್ತಾನೆ? ಅವನು ನಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆಯೇ? ಎಂದೆಲ್ಲ ಅನಿಸತೊಡಗುತ್ತದೆ. ಕರ್ಮದ ನಂಟು, ಧರ್ಮದ ಅರ್ಥ — ಇವೆಲ್ಲ ತಿಳಿಯುವಷ್ಟರಲ್ಲಿ, ಅಥವಾ ಅರ್ಥೈಸಿಕೊಳ್ಳಲು ಹೋಗುವಷ್ಟರಲ್ಲಿ, 10-20 ವರ್ಷಗಳೇ ಕಳೆದುಹೋಗಿರುತ್ತವೆ.

ಇರಲಿ, ಡಿವಿಜಿ ಅವರ ಪುಸ್ತಕಕ್ಕೆ ವಾಪಸ್ ಬರೋಣ. ಡಿವಿಜಿ ಅವರು ವಿಜ್ಞಾನ ಮತ್ತು ಆಸ್ತಿಕತೆ, ದೇವರೆಂದರೇನು ಎಂಬುದರ ಬಗ್ಗೆ ಪ್ರಸ್ತಾವನೆಯಲ್ಲಿ ಮಾತನಾಡಿದ್ದಾರೆ. ಇನ್ನು ಉಪನಿಷತ್ತಿನಲ್ಲಿ ಏನಿದೆ? ಅದರ ಉಪದೇಶ ಏನು? ಎಂಬುದು ಈ ಪುಸ್ತಕದಲ್ಲಿದೆ. ದೇವರ ಸ್ವರೂಪ ಏನು ಎಂಬುದನ್ನು ಶ್ವೇತಾಶ್ವತರ ಉಪನಿಷತ್ತಿನ ಒಂದು ಮಂತ್ರವನ್ನು ಪದಪದವಾಗಿ ಬಿಡಿಸಿ ಹೇಳಲು ಹೊರಟಿದ್ದಾರೆ. "ದೇವರಿಗೆ ನಿಶ್ಚಿತ ರೂಪವಿಲ್ಲ, ಎಲ್ಲ ರೂಪಗಳೂ ಅವನವೇ" ಎಂದು ಅವರು ಬರೆಯುವಾಗ ನನಗೆ ದೇವರಿಗೂ ಪ್ರಕೃತಿಗೂ ವ್ಯತ್ಯಾಸವಿಲ್ಲ ಎಂದು ಅನಿಸಿದ್ದುಂಟು. ದೇವರು ಪರಿಪೂರ್ಣನಾದರೆ ಅವನು ಜಗತ್ತನ್ನೇಕೆ ಸೃಷ್ಟಿಸಿದ? ಏನು ಅವನ ಲೀಲೆ? ಆಸ್ತಿಕತೆ ಇರುವುದರಿಂದ ನಮ್ಮ ಜೀವನದಲ್ಲಿ ಏನು ಉಪಯೋಗವಾದೀತು? ಆಸ್ತಿಕತೆ ಬೇಕೆ? ಕರ್ಮದ ನಿಯಮ, ದೇವರು ಕೊಟ್ಟ ಮೂರು ಕೆಲಸಗಳು, ವಿಶ್ವ ವ್ಯವಸ್ಥೆ — ಇವನ್ನೆಲ್ಲ ಚರ್ಚಿಸುತ್ತಾರೆ. ಇನ್ನು ಎಲ್ಲ ಮತಗಳಲ್ಲಿರುವ ಸಾಮಾನ್ಯ ಅಂಶಗಳ ಕುರಿತಾಗಿಯೂ ಡಿವಿಜಿ ಪುಸ್ತಕದಲ್ಲಿ ಹೇಳಿದ್ದಾರೆ. ಮತದ್ವೇಷ ಯಾಕೆ ಮಾಡಬಾರದು ಎಂಬುದರ ಕುರಿತಾಗಿಯೂ ಮಾತನಾಡಿದ್ದಾರೆ. ಪವಾಡಗಳು ಹಾಗೂ ಪವಾಡಪುರುಷರ ಬಗ್ಗೆ — ಅಧ್ಯಾತ್ಮ ಚಿಂತನೆ ಮಾಡುವವರು ನಂಬಿ ನಡೆಯುವುದು ಬಹಳ ಕಷ್ಟ; ಡಿವಿಜಿ ಅವರು ಪವಾಡಗಳ ಬಗ್ಗೆ ವಿವೇಕದ ನೋಟ ಬೀರಿದ್ದಾರೆ. ಒಂಬತ್ತು ಅಂಶಗಳಲ್ಲಿ ಇಡೀ ಪ್ರಬಂಧದ ಸಾರವನ್ನು ಹಿಡಿದಿಟ್ಟು ವಿಚಾರ ಲಹರಿಯನ್ನು ಮುಕ್ತಾಯ ಮಾಡಿದ್ದಾರೆ.

ಮತ ಎಂಬುದು ಇವತ್ತಿನ ದಿನ ಜಗಳ ತರುತ್ತದೆ. ಅದು ಜಗಳ ತರಕೂಡದು. "ಮತ" ಎಂಬ ಪದದ ಮೂಲಾರ್ಥವೇ ಅಭಿಪ್ರಾಯ ಅಥವಾ ನಂಬಿಕೆ ಎಂಬುದು. ದೇವರ ಬಗ್ಗೆ ಆಯಾ ಜನ ಕಟ್ಟಿಕೊಂಡ ಅಭಿಪ್ರಾಯವೇ ಮತ ಎಂದಾಗುತ್ತದೆ. ಹೀಗಾಗಿ ಮತದ ವಿಚಾರವಾಗಿ ಜಗಳ ಸಲ್ಲದು. ಎಲ್ಲ ಮತಗಳನ್ನೂ ತಿಳಿದು, ಎಲ್ಲರ ಅಭಿಪ್ರಾಯವನ್ನೂ ತಿಳಿದುಕೊಂಡು, ತನ್ನ ಸ್ವಂತದ ಅಭಿಪ್ರಾಯ ಮಾಡಿಕೊಳ್ಳುವವನೇ ಬುದ್ಧಿವಂತನಾಗುತ್ತಾನೆ. ಎಲ್ಲ ಮತಗಳಲ್ಲೂ ಒಂದಲ್ಲ ಒಂದು ಪಾಸಿಟಿವ್ ವಿಷಯವನ್ನು ನೀವು ಕಂಡೇ ಕಾಣುತ್ತೀರಿ.

ಶ್ವೇತಾಶ್ವತರ ಉಪನಿಷತ್ತಿನಲ್ಲಿ ಒಂದು ಮಂತ್ರ:

"ಏಕೋ ದೇವಃ ಸರ್ವಭೂತೇಷು ಗೂಢಃ ಸರ್ವವ್ಯಾಪೀ ಸರ್ವಭೂತಾಂತರಾತ್ಮಾ |
ಕರ್ಮಾಧ್ಯಕ್ಷಃ ಸರ್ವಭೂತಾಧಿವಾಸಃ ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ ||"

ಇಲ್ಲಿ ದೇವರ ಸ್ವರೂಪವನ್ನು ವಿವರಿಸಲಾಗಿದೆ. ಡಿವಿಜಿ ಇದನ್ನು ಬಿಡಿಸಿ ಹೇಳಿರುವ ಚಿತ್ರಣ ಹೀಗಿದೆ: ದೇವರು ಒಬ್ಬನೇ. ದೇವ ಎಂದರೆ ಪ್ರಕಾಶಿಸುವವನು, ತೇಜಸ್ಸು ಎಂದರ್ಥ. ಅವನು ಎಲ್ಲ ಜೀವಿಗಳಲ್ಲಿಯೂ ರಹಸ್ಯವಾಗಿ ಅಡಗಿಕೊಂಡಿದ್ದಾನೆ. ಅವನು ಎಲ್ಲೆಡೆಯೂ ಹರಡಿಕೊಂಡಿದ್ದಾನೆ — ಬೆಳಕಿನಂತೆ, ಮಹಿಮೆಯಂತೆ. ಅವನು ಎಲ್ಲ ಜೀವಿಗಳ ಒಳಗಿನ ಆತ್ಮರೂಪ. ಎಲ್ಲರ ಕೆಲಸಗಳ ಮೇಲ್ವಿಚಾರಣೆ ನಡೆಸುವ ಮೇಲಾಧಿಕಾರಿ ಅವನು. ಎಲ್ಲ ಪ್ರಾಣಿಗಳ ಒಳಗೂ ವಾಸಿಸುವ ಚೈತನ್ಯ ಕೂಡ ಅವನೇ. ತಾನೂ ಜಗತ್ತಿನ ಭಾಗವಾಗಿಯೂ, ಬಿಡುಗಡೆಯಿಂದ ಜಗತ್ತನ್ನು ನೋಡಿಕೊಂಡಿರುವ ನಿಸ್ಸಂಗ ಸಾಕ್ಷಿ. ಎಲ್ಲ ಜೀವಿಗಳ ಮನೋಬುದ್ಧಿಗಳಿಗೆ ಮೂಲಶಕ್ತಿ ಅವನು; ಎಲ್ಲವನ್ನೂ ಪ್ರೇರಿಸುವ ಶಕ್ತಿ ಕೂಡ ಅವನೇ. ಅವನು "ಕೇವಲ" — ಅಂದರೆ ತಾನೇ ತಾನಾಗಿ, ಸ್ವಂತ ಸ್ವಂತಿಕೆಯಲ್ಲಿ, ಯಾರ ಹಂಗಿಲ್ಲದೆಯೂ ಇರುವಂತಹ ಶಕ್ತಿ. ಅವನು ನಿರ್ಗುಣ — ಅಂದರೆ ನಮ್ಮ ಅಳತೆಗೆ ಸಿಗದವನು; ನಮ್ಮ ಗುಣಗಳಿಂದ ಅವನ ಗುಣಗಳನ್ನು ಅಳೆಯಲು ಸಾಧ್ಯವೇ ಇಲ್ಲ. ಅವನು ಗೂಢನಾದವನು, ಎಂಬ ಅರ್ಥದಲ್ಲಿ.

ಇಷ್ಟೆಲ್ಲ ಓದುತ್ತಿರುವಾಗ, ಡಿವಿಜಿ ಅವರ ಈ ಪುಟ್ಟ ಪ್ರಬಂಧ ಆಳವಾದ, ವ್ಯಾಪಕವಾದ ತತ್ವ ಎಂದು ನಿಮಗೆ ಅನಿಸಲು ಶುರುವಾಗುತ್ತದೆ. ದೇವರಿಗೆ ನಿಶ್ಚಿತ ರೂಪವಿಲ್ಲ ಎಂಬ ವಿಷಯವಾಗಿ ಹೇಳುವಾಗ — ಯಾರು ಯಾವ ದೇವರನ್ನಾದರೂ ಪೂಜಿಸಬಹುದು, ಅಥವಾ ದೇವರನ್ನು ಪೂಜಿಸದೆಯೂ ಇರಬಹುದು ಎಂಬ ವಿಷಯದ ಬಗ್ಗೆ ಪ್ರಸ್ತಾಪವಿದೆ. ಗೀತೆಯ "ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ" — "ಯಾರು ಯಾವ ರೂಪದಲ್ಲಿ ನನ್ನನ್ನು ಪೂಜಿಸುತ್ತಾರೋ, ಅವರಿಗೆ ಆ ರೂಪದಲ್ಲೇ ನಾನು ಒಲಿಯುತ್ತೇನೆ" ಎಂಬ ಮಾತನ್ನು ಇವರು ನೆನಪು ಮಾಡಿಕೊಡುವಾಗ — "ಹೌದಲ್ಲ, ಯಾವುದೇ ಮತದಲ್ಲೂ ದೇವರ ಬಗ್ಗೆ ಶ್ರದ್ಧೆಯಿಂದ ಪೂಜಿಸುವವರಿಗೆ ಒಳಿತಾಗುತ್ತದಲ್ಲ, ಇದು ಸರಿಯೇ ಇದೆ" ಎಂದು ನಿಮಗೆ ಅನಿಸದೆ ಇರದು. ನಮ್ಮ ಸಂಪ್ರದಾಯ ಹಾಗೂ ವೇದಾಂತ ತೀರ ಕಟ್ಟುನಿಟ್ಟಿನದೆಂದು ಅನಿಸಿದವರಿಗೆ, ಇದನ್ನು ಓದುವಾಗ — ನಮ್ಮ ದೇಶದ ಸನಾತನ ಧರ್ಮದ ಆಲೋಚನೆ, ಅಲ್ಲಿ ತೋರಿಸಿರುವ ದಾರಿ ಎಷ್ಟು ಮುಕ್ತವಾದದ್ದು ಎಂದು ಅನಿಸದೆ ಇರದು.

ಇನ್ನು ಆಸ್ತಿಕತೆಯಿಂದ — ಇದು ಯಾವ ಮತದ ದೇವರಾದರೂ ಸೈ — ಧೈರ್ಯ, ನ್ಯಾಯವಾಗಿ ಒಳ್ಳೆಯ ನಡವಳಿಕೆ, ಕೆಟ್ಟದ್ದನ್ನು ಮಾಡದೆ ಇರುವಂತೆ ಕರೆದುಕೊಂಡು ಹೋಗುವ ದಿವ್ಯ ಮಾರ್ಗ — ಇವೆಲ್ಲವೂ ಪ್ರಯೋಜನಗಳಾಗಿ ಬರುತ್ತವೆ ಎಂಬ ವಿಚಾರ ಪ್ರಸ್ತಾಪವಾಗಿದೆ. ಹಾಗೆ ನೋಡಿದರೆ ಎಲ್ಲ ಮತಧರ್ಮಗಳಲ್ಲೂ ಎರಡು ಭಾಗಗಳಿವೆ — ತತ್ವ ಮತ್ತು ಆಚಾರ. ಆಚಾರಗಳು ಎಷ್ಟೇ ರೀತಿಯದ್ದಾದರೂ, ಬಹುತೇಕ ಮತಗಳ ತಿರುಳಿನ ತತ್ವ ಒಂದೇ ಎಂದು ತೋರಿಸುತ್ತಾರೆ. ಎಲ್ಲ ಮತಗಳೂ ದೇವರ ಇರುವಿಕೆಯನ್ನು ಒಪ್ಪುತ್ತವೆ; ದೇವರೇ ಜಗತ್ತಿನ ಕರ್ತೃ, ಜಗನ್ನಿಯಾಮಕ ಎಂದು ನಂಬುತ್ತವೆ; ಪುಣ್ಯ-ಪಾಪ ಉಂಟೆಂದೂ, ಒಳ್ಳೆಯ ನಡವಳಿಕೆಯೇ ಸಮಾಜ ಮರ್ಯಾದೆ ಎಂದೂ ಒಪ್ಪುತ್ತವೆ. ಹೀಗಾಗಿ ದೇವರ ಕುರಿತಾಗಿ ಬರುವ ಪ್ರಶ್ನೆಗಳಿಗೆ ಯುವಕರು, ಹೊಸ ಪೀಳಿಗೆಯ ಜನರು ಡಿವಿಜಿ ಅವರ ಈ ಪುಸ್ತಕದಿಂದ ದಾರಿ ಕಂಡುಕೊಳ್ಳಬಹುದಾಗಿದೆ. ಈ ಪುಸ್ತಕವನ್ನು ಜೆನ್ ಝಿ ಮಕ್ಕಳಿಗಾಗಿ ಹೊಸ ಸ್ವರೂಪದಲ್ಲಿ ತರಬೇಕಾದ ಅವಶ್ಯಕತೆ ಇದೆ.

ದೇವರ ಹೆಸರಿನಲ್ಲಿ ಹೇಳಲಾಗುವ ಪವಾಡಗಳಿಗೆ ಪ್ರತ್ಯಕ್ಷ ಸಾಕ್ಷಿ ಸಿಗುವುದು ಕಷ್ಟ ಎಂದು ಡಿವಿಜಿ ಅವರು ಹೇಳುವಾಗ, ಅವರು ಇತರ ವಿಷಯಗಳನ್ನು ಹೇಳಿದ ರೀತಿ ನಮಗೆ ಬಹಳ ಹತ್ತಿರವಾಗುತ್ತದೆ. ಡಿವಿಜಿ ಅವರು ಸೂರ್ಯೋದಯ, ಸೂರ್ಯಾಸ್ತ, ಜೀವಿಗಳ ಹುಟ್ಟು-ಸಾವು, ರಾತ್ರಿ-ಹಗಲಿನ ನಿಚ್ಚಳ ಕ್ರಮ — ಇವುಗಳನ್ನೇ ದೊಡ್ಡ ಪವಾಡಗಳೆಂದು ಕಾಣುತ್ತಾರೆ. ಪ್ರಕೃತಿಯೇ ಪವಾಡವಲ್ಲವೇ? ಇಷ್ಟೊಂದು ಕಾಂಪ್ಲೆಕ್ಸ್ ಸಿಸ್ಟಮ್ ಪ್ರತಿನಿತ್ಯ ಚಾಚೂ ತಪ್ಪದೆ ನಡೆಯುತ್ತಿದೆ ಎಂದರೆ ಅದು ಪವಾಡವೇ ಹೌದು.

ಡಿವಿಜಿ ಅವರ ಬಗ್ಗೆ ನಾನು ಓದುತ್ತಾ ಹೋದಷ್ಟೂ ಅವರ ಕುರಿತಾದ ಗೌರವ ಹೆಚ್ಚಾಗುತ್ತಿತ್ತು. ಅವರು ಬರೆದಿರುವ ಪುಸ್ತಕಗಳನ್ನು ಓದುತ್ತಿರುವಾಗ ಆ ಗೌರವ ಮತ್ತಷ್ಟು ಹೆಚ್ಚುತ್ತಾ ಹೋಗುತ್ತದೆ. ಡಿವಿಜಿ ಅವರ ಪುಸ್ತಕಗಳು ಖಂಡಿತವಾಗಿ ಮನಸ್ಸಿಗೆ ಸಮಾಧಾನವನ್ನು ಕೊಡುವಂತಹವು. ಇವರ ಮಂಕುತಿಮ್ಮನ ಕಗ್ಗವನ್ನು ಈಗಲೂ ನನ್ನ ಕೈಗೆ ಸಿಗುವಂತೆ ಇಟ್ಟುಕೊಂಡಿರುತ್ತೇನೆ. ಕಷ್ಟಗಳ ಮಳೆ ಸುರಿದಾಗ ಇವರು ನಮ್ಮನ್ನು ಗಟ್ಟಿಯಾದ ಕಲ್ಲಾಗುವಂತೆ, ಬೆಟ್ಟದಡಿಯ ಹುಲ್ಲಾಗುವಂತೆ ಮಾಡುತ್ತಾರೆ. ಹೆಮ್ಮರ ಉರುಳಿದಾಗ ಹಳೆಬೇರಿನಿಂದ ಹೊಸ ಚಿಗುರು ಮೂಡುವಂತೆ, ನಮ್ಮ ಜೀವನವೂ ಹೊಸ ಚಿಗುರಾಗುತ್ತದೆ. ಡಿವಿಜಿ ಅವರ ಬರಹಗಳು, ತತ್ವ ಮತ್ತು ಮಾತುಗಳು ನಮಗೆ ಸದಾಕಾಲ ದಾರಿದೀಪ ಆಗುತ್ತವೆ. ಕನ್ನಡಿಗರಿಗೆ ಇದು ಅತ್ಯಂತ ಅಮೂಲ್ಯವಾದ ಆಸ್ತಿ.