ದೊಂಬೀರಾಯನ ದುರ್ಗ

ಲೇಖಕ ಗಂಗಾಧರ ಕರೀಕೆರೆ ಅವರ ʻದೊಂಬೀರಾಯನ ದುರ್ಗʼ ಕಾದಂಬರಿಯು ಅರೆಮಲೆನಾಡ ಪ್ರದೇಶದಲ್ಲಿ ನಡೆವ ಕಾಲ್ಪನಿಕ ಸನ್ನಿವೇಶಗಳ ಕಥೆಯಾಗಿದೆ. ಇಡೀ ಕಥೆ ಕೇವಲ ೩೬ ಗಂಟೆಗಳಲ್ಲಿ ಮುಗಿದು ಹೋಗುವುದು ಇಲ್ಲಿನ ವಿಶೇಷ ಎನ್ನುವ ನುಡಿಗಳನ್ನು ಕೃತಿಯ ಲೇಖಕರ ಮುನ್ನುಡಿ ಸಾಲುಗಳು ನಿಮ್ಮ ಓದಿಗಾಗಿ…  

“ಹೇಗೆ ಯುವಕ ಯುವತಿಯರು ಕನ್ನಡಿಯ ಹಂಗು ತೊರೆಯುವುದಿಲ್ಲವೋ ಹಾಗೆ ಸಹೃದಯಿ ಓದುಗರು ಮುನ್ನುಡಿಯ ಹಂಗು ತೊರೆಯುವುದಿಲ್ಲ! ಯೌವನವನ್ನು ಹಿಡಿದಿಡಲು ಕನ್ನಡಿಯು ನೆಪ; ಪುಸ್ತಕವ ಹಿಡಿದಿಡಲು ಮುನ್ನುಡಿಯು ನೆಪ.

ಕವಿತೆ, ಕಥೆ, ಕಾದಂಬರಿ ಎಲ್ಲವಕ್ಕೂ ಬೇಕು ಮುನ್ನುಡಿ. ಮುನ್ನುಡಿ ಎಂದರೇನು? ಆಯಾ ಕೃತಿಗೆ ಹಿಡಿದ ಕನ್ನಡಿಯೇನು? ಆಹುದೆಂದರೆ ಆಹುದು. ಇಲ್ಲವೆಂದರೆ ಇಲ್ಲ ! ಏಕೆಂದರೆ ಸಹೃದಯಿ ಓದುಗನೇ ತೆಗೆದುಕೊಳ್ಳುವನು ತೀರ್ಮಾನವೆಲ್ಲ. ಎಲ್ಲ ಪ್ರಕಾರಗಳ ಸಾಹಿತ್ಯಕ್ಕೂ ಅದರದ್ದೇ ಆದ ಓದುಗ ವೃಂದವಿದೆ. ಹಲಕೆಲವು ಲೇಖಕರಿಗೆ ಅವರದ್ದೇ ಆದ ಓದುಗರ ವೃಂದ ಇರುವುದೂ ಉಂಟು. ಒಟ್ಟಾರೆ ಕನ್ನಡಿಗರು ಬಿಡದಿದ್ದರೆ ಸಾಕು ಸಾಹಿತ್ಯದ ನಂಟು!

ಕವಿಯು ತಾನೇ ರಚಿಸಿದ ಪದ್ಯವ ತಾನೇ ಓದಿ ವಿಮರ್ಶಿಸುವಂತೆ ತನ್ನ ಕಥೆಯನ್ನು ಎಲ್ಲರಿಗೂ ಓದಿ ಹೇಳುವಂತೆ, ನನ್ನ ಕಾದಂಬರಿಗೆ ನಾನೇ ಬರೆಯುತ್ತಿರುವೆ ಮುನ್ನುಡಿ.

ಕಾದಂಬರಿಗೆ ಪ್ರವೇಶ ಪಡೆಯಲು ಆಸರೆ ಮುನ್ನುಡಿ. ಇದು ನೋಡಿ ದೊಂಬೀರಾಯನ ದುರ್ಗ ಇದೊಂದು ಕಾದಂಬರಿ. ಇದರ ಕೇಂದ್ರ ದೊಂಬೀರಾಯನದುರ್ಗ ಎಂಬ ಒಂದು ಅರೆಮಲೆನಾಡ ಪ್ರದೇಶ. ಕಾಲ್ಪನಿಕ ಎನ್ನುವುದು ಸೂಕ್ತ. ಇಡೀ ಕಥೆ ಕೇವಲ ೩೬ ಗಂಟೆಗಳಲ್ಲಿ ಮುಗಿದು ಹೋಗುವುದು ಇಲ್ಲಿನ ವಿಶೇಷ, ತನ್ಮೂಲಕ ಕಾದಂಬರಿಯೂ ತನ್ನ ವೇಗವನ್ನು ಹೆಚ್ಚಿಸಿಕೊಂಡಿರುವುದು ಓದುಗರ ಗಮನಕ್ಕೆ ಬಾರದೇ ಇರದು.

ಹಸ್ತಪ್ರತಿ ಓದಿದ ಮತ್ತು ಬರೆಯುವಾಗ ಜೊತೆಗಿದ್ದು ಆಲಿಸಿದ ಗೆಳೆಯರು ಅನೇಕರು ಹೇಳಿದ್ದು: “ಒಳ್ಳೆಯ ಸಿನಿಮಾ ಸ್ಕ್ರಿಪ್ಟ್ ತರ ಇದೆ. ಏನ್ ಸಾರ್. ವಿವರಣೆಗಳನ್ನೇ ಕೊಟ್ಟಿಲ್ಲ" ಅಂದರೆ ಪ್ರಕೃತಿಯ ವಿವರಣೆಗಳನ್ನು ಪಾತ್ರಧಾರಿಗಳ ವೇಷಭೂಷಣ ಇತ್ಯಾದಿ ವಿವರಣೆಗಳನ್ನು ಕೊಡಲಿಲ್ಲವೆಂಬುದು ಒಬ್ಬರ ಅಂಬೋಣ. "ಹೆಸರೇ ಅದ್ಭುತವಾಗಿದೆ ಸರ್ ಪ್ರಕಟಣೆ ಮಾಡಿಬಿಡಿ" ಎಂದು ತ್ವರೆ ಮಾಡಿದವರು ಹಲವರು. ತೇಜಸ್ವಿಯವರ ಹಲವು ಪಾತ್ರಗಳನ್ನು ನೆನಪಿಸುತ್ತದೆ ಎಂದು ನನ್ನನ್ನು ರೋಮಾಂಚನಗೊಳಿಸಿದವರು ಮತ್ತು ಕೆಲವರು. ಓದುಗ ಮಹಾಶಯರೇ ತಮಗೆ ಆ ರೀತಿ ಏನಾದರೂ ಅನ್ನಿಸಿದರೆ ನನಗೆ ಪತ್ರ ಬರೆದು ತಿಳಿಸಿ ಕೃರ್ತಾರ್ಥನಾಗುತ್ತೇನೆ.

ಹೌದು ಹೆಚ್ಚು ಹೇಳಿದರೆ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆಗೆ ಸರಿಹೋಗುತ್ತದೆ. ಏನೂ ಹೇಳದಿದ್ದರೆ ಹೇಳಿಕೊಳ್ಳುವಂತಹದ್ದೇನು ಇರಲಾರದು ಎಂಬ ಭಾವನೆಯು ನಿಮಗೆ ಬಂದುಬಿಡುತ್ತದೆ. ಹೆತ್ತ ಕೂಸನ್ನು ತಮ್ಮ ಮಡಿಲಿಗೆ ದತ್ತಕವಾಗಿ ನೀಡುತ್ತಿದ್ದೇನೆ: ಅದು ಹೆಗ್ಗಣವೋ ಚಿಗರೆಯೋ ನೀವೇ ಪರಿಭಾವಿಸಿ.

ಇನ್ನು ಬರವಣಿಗೆ ಶೈಲಿಯ ಬಗ್ಗೆ ಕೆಲವರೆಂದರೂ 'ತಮಗೆ ಬರವಣಿಗೆ ಸಿದ್ಧಿಸಿದೆ. ಸಿದ್ದಿಸುತ್ತಲೇ ಇದೆ ಮುಂದುವರಿಸಿ' ಎಂದು. ಇನ್ನೊಬ್ಬ ಮಿತ್ರರು "ಅಮೆಚೂರ್ ಆಗಿದೆ ಅಂದರು. ಸದ್ಯ ನನಗೆ ದಿಗಿಲಾಯಿತು. ಮತ್ತೊಮ್ಮೆ ಮಗದೊಮ್ಮೆ ಕೇಳಿಸಿಕೊಂಡೆ "ಇಮ್ಮೆಚೂರ್" ಎನ್ನಲಿಲ್ಲವಲ್ಲ ಎಂದಷ್ಟು ಸಂತೋಷವಾಯಿತು.

ಎಂ. ಕೆ. ಇಂದಿರಾ ಕಾದಂಬರಿ ಲೋಕದ ಮಿನುಗುತ್ತಾರೆ. ಅವರು ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದ್ದು ೫೦ ರ ನಂತರವಂತೆ.. ನಾನು ನನ್ನ ಮೊದಲ ಕಾದಂಬರಿಯನ್ನು ಬರೆದು ಬಿಡುಗಡೆ ಮಾಡುತ್ತಿರುವುದು ಅರವತ್ತರ ನಂತರ. ಇವೆಲ್ಲ ಕೇವಲ ಕಾಕತಾಳಿಯವಾದ ವಿಚಾರಗಳಷ್ಟೇ..

ನಾನಂತೂ ವಿಶೇಷವಾದ ಉಮೇದನ್ನೇ ಇಟ್ಟುಕೊಂಡಿದ್ದೇನೆ. ಇನ್ನೂ ಮುಂದುವರಿದು ಇದರ ಮತ್ತೊಂದು, ಮಗದೊಂದು ಭಾಗಗಳನ್ನು ಬರೆದು ಬೆಳೆಸಬೇಕೆಂದೂ, ತಮಗೆ ನೀಡಬೇಕೆಂದೂ ಅಂದುಕೊಂಡಿದ್ದೇನೆ. ಕಾದಂಬರಿಯ ಕೊನೆಯಲ್ಲಿ ಅದರ ಸೂಚನೆಯನ್ನು ತಾವು ಕಾಣಬಹುದು. ಹೆಚ್ಚೇನು ಹೇಳಲಾರೆ ನಾನು ಹೊಸಬ: ನೀವು ಹಳಬರು ಎಂತದ್ದೇ ಸಾಹಿತ್ಯ ಪ್ರಕಾರವನ್ನು ಓದಿ ಆರಗಿಸಿಕೊಳ್ಳುವ, ತೀರ್ಪು ಕೊಟ್ಟುಬಿಡುವ ಸಹೃದಯಿಗಳು. ಕಾದಂಬರಿ ನಿಮ್ಮ ಕೈಯಲ್ಲಿದೆ; ಅದನ್ನ ತೆರೆದೂ ಇಟ್ಟುಕೊಂಡಿದ್ದೀರಿ! ಓದುವ ಖುಷಿ ನಿಮ್ಮದಾಗಲಿ”

(ಸಂಗ್ರಹಿತ)