ಕನ್ನಡದಲ್ಲಿ ಪ್ರಕಟವಾಗಿರುವ ವೈದ್ಯಕೀಯ ವಿಜ್ಞಾನದ ಪುಸ್ತಕಗಳು ವಿರಳ. ಅವುಗಳಲ್ಲಿ ಅಪರೂಪದ ಪುಸ್ತಕ: “ನನ್ನರಿವಿನ ನೇಪಥ್ಯದಲ್ಲಿ”. ಯಾಕೆಂದರೆ, ಲೇಖಕರಾದ ಡಾ. ರಾಧಾರಮೇಶ ಅವರು ವೈದ್ಯರಾಗಿ ತಮ್ಮ ಹಲವು ವರುಷಗಳ ಅನುಭವದಲ್ಲಿ ಕಂಡ, ತಾವು ಭಾಗಿಯಾದ ಹಲವು ಪ್ರಕರಣಗಳನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಯ ವಿವಿಧ ಮಗ್ಗಲುಗಳನ್ನು ದಾಖಲಿಸಿ, ಯಶಸ್ಸುಗಳನ್ನು ಮಾತ್ರವಲ್ಲ, ತಪ್ಪುಗಳು ಹೇಗೆ ಆಗುತ್ತವೆ ಎಂಬುದನ್ನೂ ತಿಳಿಸಿದ್ದಾರೆ.
ಈ ಪುಸ್ತಕ 26 ವರುಷಗಳ ಮುಂಚೆ ಪ್ರಕಟವಾದಾಗಲೇ ಖರೀದಿಸಿ ಓದಿದ್ದೆ. ವೈದ್ಯಕೀಯ ಚಿಕಿತ್ಸೆ, ವೈದ್ಯರು ಹಾಗೂ ಶುಶ್ರೂಷಕರ ಪಾತ್ರಗಳ ಕುರಿತಾದ ಹಲವಾರು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಆ ಓದು ನನಗೆ ನೆರವಾಗಿತ್ತು. ಇತ್ತೀಚೆಗೆ ಹಿರಿಯ ನಾಗರಿಕನಾಗಿ ಇದನ್ನು ಪುನಃ ಓದಿದಾಗ, ಇದರ ಪ್ರಕರಣಗಳನ್ನು ಹೊಸ ಬೆಳಕಿನಲ್ಲಿ ಕಾಣಲು ಸಾಧ್ಯವಾಯಿತು.
ಇದರ ಹದಿನಾರು ಅಧ್ಯಾಯಗಳೂ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಮೊದಲ ಅಧ್ಯಾಯ “ಕಾದಿರುವೆ ಪವಾಡದ ನಿರೀಕ್ಷೆಯಲಿ…” ರಾಧಾರಮೇಶರ ಮನೆ ಕೆಲಸದಾಕೆ ಗಂಗಮ್ಮ, ತನ್ನ ಎಂಟು ತಿಂಗಳ ಮೊಮ್ಮಗುವನ್ನು ಕಂಕುಳಲ್ಲೆತ್ತಿಕೊಂಡು ಆತಂಕದಿಂದ ಧಾವಿಸಿ ಇವರ ಮನೆಗೆ ಬರುತ್ತಾಳೆ. ಆ ಮಗುವಿಗೆ ವಿಪರೀತ ನಿತ್ರಾಣವಾಗಿ, ತನ್ನ ಗೊಣನ್ನೆತ್ತಲು ಅಸಮರ್ಥವಾಗಿತ್ತು. ಕೂಸನ್ನು ತಕ್ಷಣವೇ ತಾನು ಕೆಲಸ ಮಾಡುತ್ತಿದ್ದ ದೊಡ್ಡ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿಗೆ ಕರೆದುಕೊಂಡು ಹೋಗಲು ಸಲಹೆ ನೀಡುತ್ತಾರೆ.
ಅನಂತರ, ಆಸ್ಪತ್ರೆಯಲ್ಲಿ ತನ್ನ ಎಲ್ಲ ರೋಗಿಗಳನ್ನು ಪರೀಕ್ಷಿಸಿ ಎಂದಿನಂತೆ ಕ್ಯಾಂಟೀನಿಗೆ ಹೊರಟಾಗ, ಬೆಳಗ್ಗೆ ಗಂಗಮ್ಮಳಿಗೆ ಇತ್ತ ವಾಗ್ದಾನ ಅವರಿಗೆ ನೆನಪಾಯಿತು. ತಕ್ಷಣ ಎರಡನೇ ಮಹಡಿಯ ಮಕ್ಕಳ ವಾರ್ಡಿಗೆ ಹೋದರು. ಅಲ್ಲಿ ಗಂಗಮ್ಮ ಹಾಸಿಗೆಯಲ್ಲಿ ಮಲಗಿಸಿದ್ದ ಮಗುವನ್ನು ಶೂನ್ಯ ದೃಷ್ಟಿಯಿಂದ ನೋಡುತ್ತಿದ್ದಳು. ಮುಂಗೈನಲ್ಲಿ ಚುಚ್ಚಿದ್ದ ನಳಿಕೆಯ ಮೂಲಕ ಮಗುವಿಗೆ ಗ್ಲುಕೋಸ್ ದ್ರಾವಣ ಹನಿಹನಿಯಾಗಿ ಹೋಗುತ್ತಿತ್ತು. ಮಗುವಿನ ಪುಟ್ಟ ಕೈ ಬೆರಳುಗಳ ಉಗುರುಗಳು ದಟ್ಟ ನೀಲಿ ಛಾಯೆಗೆ ತಿರುಗಿದ್ದನ್ನು ಮತ್ತು ಮಗುವಿನ ಉಸಿರಾಟ ನಿಂತು ಹೋಗಿದ್ದನ್ನು ರಾಧಾರಮೇಶ ಗಮನಿಸಿದರು. ತತ್-ಕ್ಷಣವೇ ಮಗುವಿಗೆ ಕೃತಕ ಶ್ವಾಸೋಚ್ವಾಸ ಆರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಡ್ಯೂಟಿ ಡಾಕ್ಟರ್ ಮತ್ತು ಡ್ಯೂಟಿ ನರ್ಸ್ ಮಗುವಿಗೆ ಆಕ್ಸಿಜನ್ ಕೊಡಲು ಆರಂಭಿಸಿದರು. ಕೆಲವೇ ನಿಮಿಷಗಳಲ್ಲಿ ಉಸಿರಾಟ ಶುರುವಾಗಿ, ಸಾವನ್ನಪ್ಪುತ್ತಿದ್ದ ಮಗುವಿಗೆ ಪುನರ್ಜನ್ಮ ಬಂತು.
ಹೀಗೆ ರೋಗಿಯನ್ನು ಮೃತ್ಯುವಿನ ಬಾಯಿಂದ ಹೊರಗೆಳೆಯುವ ಅವಕಾಶ ವೈದ್ಯನಿಗೆ ಸಿಗುವುದು ಬಹಳ ಅಪರೂಪ. ಆ ದಿನ ಅಂತಹ ಅವಕಾಶ ಸಿಕ್ಕಿದ್ದಕ್ಕಾಗಿ ರಾಧಾರಮೇಶ ಅವರಿಗೆ ಹರುಷವಾಗಿತ್ತು. ಆದರೆ, ಮೂರು ತಿಂಗಳ ನಂತರ, ಗಂಗಮ್ಮಳ ಬಳಿ ಆ ಮಗುವಿನ ಆರೋಗ್ಯದ ವಿವರ ತಿಳಿದಾಗ ಅವರಲ್ಲಿ ಆ ಭಾವ ಉಳಿಯಲಿಲ್ಲ. ಯಾಕೆಂದರೆ ಮಗುವಿನ ಮಿದುಳಿಗೆ ಹಾನಿಯಾಗಿತ್ತು. ಇದನ್ನು ರಾಧಾರಮೇಶ ಹೀಗೆ ವಿವರಿಸಿದ್ದಾರೆ: “ಮಾನವನ ಉಸಿರಾಟ ಮತ್ತು ರಕ್ತ ಪರಿಚಲನೆ ನಿಂತು ಮೂರು ನಿಮಿಷಗಳ ನಂತರ ಮಿದುಳು ಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತದೆ. ಅಷ್ಟರೊಳಗೆ ರೋಗಿಯನ್ನು ಪುನಶ್ಚೇತನಗೊಳಿಸಬೇಕು. ತಡವಾದಲ್ಲಿ ಮಿದುಳು ನಿಷ್ಕ್ರಿಯಗೊಂಡು, ಆ ರೋಗಿಯ ಸಾವು ಖಚಿತವಾಗುತ್ತದೆ. ಆ ಮೂರು ನಿಮಿಷಗಳ ನಂತರ, ಸಾವು ಬರುವ ಮುಂಚೆ ರೋಗಿಯ ಉಸಿರಾಟ ಮತ್ತು ರಕ್ತ ಪರಿಚಲನೆ ಪುನಃ ಸ್ಥಾಪಿಸಿದರೆ, ಆ ರೋಗಿ ಬದುಕಿ ಉಳಿಯುತ್ತಾನೆ. ಆದರೆ, ರೋಗಿಯ ಮಿದುಳಿಗೆ ಆಗಲೇ ಸಾಕಷ್ಟು ಹಾನಿಯುಂಟಾಗಿ, ಪಾರ್ಶ್ವವಾಯು, ಬುದ್ಧಿಹೀನತೆ ಮುಂತಾದ ಪ್ರಮಾದ ಸಂಭವಿಸಿ ಮುಂದಿನ ಜೀವನವನ್ನು ಜೀವಚ್ಛವದಂತೆ ಕಳೆಯಬೇಕಾಗುತ್ತದೆ.”
“ವೈದ್ಯಕೀಯ ವೃತ್ತಿಯಲ್ಲಿ ಎರಡೂವರೆ ದಶಕಗಳಷ್ಟು ಕಾಲದ ಅನುಭವ ಗಳಿಸಿದ ನಂತರ, ಈ ಘಟನೆಯ ಸಹಿತ ಅನೇಕ ಪ್ರಕರಣಗಳ ಕಡೆ ಹಿನ್ನೋಟ ಹಾಯಿಸಿದಾಗ ಬೇರೊಂದು ಬಗೆಯ ದ್ವಂದ್ವ ನನ್ನನ್ನು ಕಾಡಲಾರಂಭಿಸಿದೆ. ಜೀವನದ ಪ್ರತಿಯೊಂದು ಹಂತದಲ್ಲೂ ಸೋಲನ್ನೋ, ಗೆಲುವನ್ನು ಅನುಭವಿಸುತ್ತೇವೆ. ಸೋಲಾದಾಗ ದುಃಖಿಸಿ, ಗೆಲುವಾದಾಗ ಸಂತೋಷಿಸಿ ತಕ್ಕುದಾಗಿ ಪ್ರತಿಕ್ರಿಯಿಸುತ್ತೇವೆ. ಆದರೆ ಸರಪಣಿಯಂತೆ ಒಂದಕ್ಕೊಂದು ಬೆಸಿದುಕೊಂಡಂತಹ ಅನುಭವಗಳಾದಾಗ ಯಾವ ರೀತಿ ಪ್ರತಿಕ್ರಿಯಿಸಬೇಕು? .... ಈ ಮಗುವಿನ ಘಟನೆಯಲ್ಲಿ, ಯಾವ ಹಂತದಲ್ಲಿ ಹರ್ಷಿಸಬೇಕಿತ್ತು ಇಲ್ಲವೇ ವ್ಯಥೆ ಪಡಬೇಕಿತ್ತು? ಅಥವಾ ಪ್ರತಿಕ್ರಿಯೆಯನ್ನೇ ತೋರದೇ ಜಡಭರತನಂತೆ ಇರಬೇಕಾಗಿತ್ತೆ?” ಎಂದು ಪ್ರಶ್ನಿಸುತ್ತಾರೆ ರಾಧಾರಮೇಶ.
“ನನ್ನ ವೈದ್ಯಕೀಯ ವೃತ್ತಿಜೀವನದ ಅನುಭವಗಳನ್ನು ನಿರ್ವಿಕಾರ ಮನೋಭಾವದಿಂದ ವಿಮರ್ಶಿಸಿ, ವಿಶ್ಲೇಷಿಸಿದಾಗ, ನನ್ನ ಅರಿವಿನ ಮಿತಿಯಲ್ಲಿ ನನಗೆ ಗೋಚರವಾದ ಮಾನವ ಜೀವನದ ವಿವಿಧ ಆಯಾಮಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ವಾರಸ್ಯಕರವಾಗಿ ನಿರೂಪಿಸಬೇಕೆಂಬ ನನ್ನ ಹಂಬಲ ಮತ್ತು ಹೀಗೆ ಮಾಡಲೇಬೇಕೆಂದು ನನ್ನನ್ನು ನಲ್ಮೆಯಿಂದ ಒತ್ತಾಯಿಸಿದ ನನ್ನ ಪತ್ನಿ, ಪುತ್ರ, ಪುತ್ರಿ ಮತ್ತು ಬಂಧು ಬಳಗದವರ ಅಪೇಕ್ಷೆಯ ಮೇರೆಗೆ ಈ ಲೇಖನ ಮಾಲೆಯನ್ನು ಬರೆಯಲು ಯತ್ನಿಸಿದ್ದೇನೆ. … ನನ್ನ ಅನುಭವಗಳನ್ನು ವಿಶ್ಲೇಷಿಸುವಾಗ, ಅದರಲ್ಲಿಯೂ ನನ್ನ ಉಪಚಾರ ಪಡೆದ ವ್ಯಕ್ತಿಗಳ ಉಳಿವಿಗೆ ಅಥವಾ ಅಳಿವಿಗೆ ನನ್ನ ಕೊಡುಗೆ ಎಷ್ಟು ಮತ್ತು ಆ ಅಗೋಚರ ಶಕ್ತಿಯ ಕೊಡುಗೆಯೆಷ್ಟು ಎಂಬ ಅಂಶದ ಬಗ್ಗೆ ಹೆಚ್ಚು ಒತ್ತು ನೀಡಿದ್ದೇನೆ” ಎಂದು ಲೇಖಕ ರಾಧಾರಮೇಶ ಸ್ಪಷ್ಟಪಡಿಸಿದ್ದಾರೆ.
“ಏನಿದೇನಿ ಅದ್ಭುತಂ!” (10ನೇ) ಅಧ್ಯಾಯದಲ್ಲಿ ಕೆಲವು ಕುತೂಹಲಕಾರಿ ಪ್ರಕರಣಗಳನ್ನು ಲೇಖಕರು ದಾಖಲಿಸಿದ್ದಾರೆ. ಈ ಪ್ರಕರಣಗಳು ನಡೆದಿದ್ದ ಕಾಲಘಟ್ಟದಲ್ಲಿ (1980 -1990 ದಶಕ) ಭಾರತದ ಜಿಲ್ಲೆಗಳ ಕೆಂದ್ರಗಳಲ್ಲಿಯೂ ಆಧುನಿಕ ಚಿಕಿತ್ಸಾ ವಿಧಾನಗಳು ಲಭ್ಯವಿರಲಿಲ್ಲ. ಅವನ್ನು ಪಡೆಯಲು ಮುಂಬಯಿ, ಮದ್ರಾಸ್, ಬೆಂಗಳೂರು ಇಂತಹ ಮಹಾನಗರಗಳಿಗೆ ಹೋಗಬೇಕಾಗುತ್ತಿತ್ತು. ಬಡವನಂತೆ ಕಂಡು ಬಂದ ಅನಂತಯ್ಯ ಎಂಬ ರೋಗಿಯನ್ನು ಪರೀಕ್ಷಿಸಿದ ಡಾ. ರಾಧಾರಮೇಶ್ ಆತನಿಗೆ ಕಂಪ್ಲೀಟ್ ಹಾರ್ಟ್ ಬ್ಲಾಕ್ ಎಂಬ ಸ್ಥಿತಿ ಇದೆಯೆಂದು ತಿಳಿದುಕೊಂಡರು. ಅಂದರೆ ಪ್ರತಿ ನಿಮಿಷಕ್ಕೂ 70ರಿಂದ 80 ಶಾಲಾ ಇರಬೇಕಾದ ಹೃದಯದ ಗತಿ 40ಕ್ಕೂ ಕಡಿಮೆ ಸಲ ಬಡಿದುಕೊಳ್ಳುತ್ತಿತ್ತು. ಅವನಿಗೆ ಹೃದಯದಲ್ಲಿ ತೊಂದರೆ ಇದೆ ಎಂದು ತಿಳಿಸಿ, ಬಹಳ ಕಡಿಮೆ ಬೆಲೆಯ ಔಷಧಿಯೊಂದನ್ನು ಬರೆದುಕೊಟ್ಟರು.
ಆ ಔಷಧಿಯನ್ನು ಹತ್ತಿರದ ಮೆಡಿಕಲ್ ಷಾಪಿನಲ್ಲಿ ಖರೀದಿಸಿದ ಅನಂತಯ್ಯ ಸ್ವಲ್ಪ ಹೊತ್ತಿನಲ್ಲಿ ಪುನಃ ಇವರ ಬಳಿಗೆ ಬಂದ. “ನೀವು ಬರೆದುಕೊಟ್ಟ ಮಾತ್ರೆಗಳ ಬೆಲೆ ಹತ್ತು ರೂಪಾಯಿ ಕೂಡ ಆಗಿಲ್ಲ. ಇದಕ್ಕಿಂತಲೂ ಒಳ್ಳೆ ಔಷಧಿ ಇಲ್ವೇ…” ಎಂದು ಕೇಳಿದ. ಡಾ. ರಾಧಾರಮೇಶ್ ಅಂತಹ ಚಿಕಿತ್ಸೆಗೆ ಕೆಲವು ಸಾವಿರ ರೂಪಾಯಿಯಾಗ್ತದೆ… ಅದೊಂದು ಚಿಕ್ಕ ಶಸ್ತ್ರಚಿಕಿತ್ಸೆ…ಮದ್ರಾಸಿಗೆ ಹೋಗಬೇಕಾಗ್ತದೆ…” ಎಂದಾಗ ಆ ರೋಗಿ ಅಲ್ಲಿನ ಆಸ್ಪತ್ರೆಯ ವಿಳಾಸ ಬರೆಸಿಕೊಂಡು ಹೋದ. ಅನಂತರ ಡಾಕ್ಟರಿಗೆ ಆ ರೋಗಿ ನೂರಾರು ಎಕರೆ ಫಲವತ್ತಾದ ಜಮೀನಿನ ಮಾಲೀಕ ಎಂದು ತಿಳಿದು ಬಂತು.
ಅನಂತಯ್ಯ ಮದ್ರಾಸಿಗೆ ಹೋಗಿ 25,000 ರೂಪಾಯಿಗಳ ಪೇಸ್ ಮೇಕರ್ ಅಳವಡಿಸಿಕೊಂಡು ಹಿಂತಿರುಗಿದ. ಅದಾಗಿ ಕೆಲವು ದಿನಗಳ ನಂತರ ಪುನಃ ಡಾ. ರಾಧಾರಮೇಶರನ್ನು ಭೇಟಿಯಾದ. ಯಾಕೆಂದರೆ ಅವನ ಬಲಭುಜ ನಾಡಿಮಿಡಿತಕ್ಕೆ ಅನುಗುಣವಾಗಿ ಕುಣಿಯುತ್ತಿತ್ತು! ಇದಕ್ಕೆ ಕಾರಣ ರೋಗಿಗೆ ಅಳವಡಿಸಿದ್ದ ಪೇಸ್-ಮೇಕರಿನಲ್ಲಿ ಆಗಿದ್ದ ತಾಂತ್ರಿಕ ತೊಂದರೆ. ಇದನ್ನು ಸರಿಪಡಿಸಲು ಮತ್ತೆ ಮದ್ರಾಸಿಗೇ ಹೋಗಬೇಕಾಗುತ್ತದೆಂದು ಆತನಿಗೆ ತಿಳಿಸಿದರು ಡಾ. ರಾಧಾರಮೇಶ್.
ಹೈಟೆಕ್ ಚಿಕಿತ್ಸಾ ವಿಧಾನಗಳನ್ನು ಬಳಸುವಾಗ, ವಿದ್ಯುತ್ ನಿಲುಗಡೆ ಆಗುವುದು ಇತ್ಯಾದಿ ತಾಂತ್ರಿಕ ತೊಂದರೆಗಳಿಂದಾಗಿ ಅನಾಹುತಗಳಾದ ಪ್ರಕರಣವನ್ನೂ ಈ ಅಧ್ಯಾಯದಲ್ಲಿ ಲೇಖಕರು ದಾಖಲಿಸಿದ್ದಾರೆ.
“ಮೃತ್ಯೋರ್ಮಾ ಅಮೃತಂಗಮಯ” (14ನೇ) ಅಧ್ಯಾಯದಲ್ಲಿ ಮರಣ ಸನ್ನಿಹಿತವಾದದ್ದನ್ನು ಅರಿತುಕೊಂಡ ವೃದ್ಧರೊಬ್ಬರು ತನ್ನನ್ನು ಕೊನೆಗಾಲದಲ್ಲಿ ಕಾಳಜಿಯಿಂದ ನೋಡಿಕೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಶಾಂತಚಿತ್ತದಿಂದ ಮೃತ್ಯುವಿಗೆ ಶರಣಾದ ಘಟನೆಯನ್ನು ಬರೆದಿದ್ದಾರೆ. “ಈ ಲೋಕದಿಂದ ಪಯಣಿಸುವ ಮುನ್ನ, ವಂದನಾರ್ಪಣೆಯ ಭಾಗವನ್ನು ಮುಗಿಸುವ ಭಾಗ್ಯ ಎಷ್ಟು ಜನರಿಗಿದೆ?” ಎಂದು ಪ್ರಶ್ನಿಸುತ್ತಾರೆ ಡಾ. ರಾಧಾರಮೇಶ್. ಇದೇ ಅಧ್ಯಾಯದಲ್ಲಿ My Living Will (ನನ್ನ ಜೀವಂತ ಉಯಿಲು), Physician Assisted Suicide (ವೈದ್ಯನ ಸಹಾಯದಿಂದ ಆತ್ಮಹತ್ಯೆ) ಮತ್ತು Euthanasia (ದಯಾಮರಣ) ಇವುಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಲೇಖಕರು.
“ವೈದ್ಯರಾಜೋ ನಮಸ್ತುಭ್ಯಂ” (15ನೇ) ಅಧ್ಯಾಯದ ಮುಕ್ತಾಯದಲ್ಲಿ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಬಹಳ ಮುಖ್ಯವಾದ ಸಂಗತಿಯೊಂದನ್ನು ತಿಳಿಸುತ್ತಾರೆ ಡಾ. ರಾಧಾರಮೇಶ್: “…. ಎಲ್ಲಾ ದೇಶಗಳ, ಎಲ್ಲಾ ಬುಡಕಟ್ಟಿನ, ಎಲ್ಲಾ ಬಗೆಯ ಜಾತಿಗಳ ಮಾನವರ ದೇಹ ರಚನೆಯು ಒಂದೇ ಬಗೆಯದಾಗಿರುತ್ತಾದರೂ, ಪ್ರತಿಯೊಂದು ಮಾನವ ದೇಹವು ಇನ್ನೊಂದರಿಂದ ಸೂಕ್ಷ್ಮವಾಗಿ ಭಿನ್ನವಾಗಿರುತ್ತದೆ.” ಇದರಿಂದ ಅರ್ಥಮಾಡಿಕೊಳ್ಳಬೇಕಾದ ಸಂಗತಿ: ವಿಶ್ವದ ಜನಸಂಖ್ಯೆ ಎಷ್ಟಿದೆಯೋ ಅಷ್ಟೇ ಸಂಖ್ಯೆಯ ಮಾಡೆಲ್-ಗಳಷ್ಟು ಮಾನವರಿದ್ದಾರೆ. “ಈ ಮಿಲಿಯಗಟ್ಟಲೆ ಮಾಡೆಲುಗಳಲ್ಲಿ ಕೆಲವು ಸಾವಿರ ಮಾಡೆಲುಗಳನ್ನಾದರೂ ಅಭ್ಯಸಿಸಿದ್ದೇನೆಂದು ಎದೆತಟ್ಟಿ ಹೇಳಬಲ್ಲ ವೈದ್ಯನಾರೂ ಇಲ್ಲ” ಎನ್ನುತ್ತಾರೆ ಅವರು.
ಈ ವಿಷಯವನ್ನು ಸ್ಪಷ್ಟಪಡಿಸಲು ಅವರು ನೀಡುವ ಉದಾಹರಣೆ: “ಲಕ್ಷಗಟ್ಟಲೆ ಜನರಿಗೆ ಪೆನಿಸಿಲಿನ್ ಚುಚ್ಚುಮದ್ದನ್ನು ಭಾರೀ ಪ್ರಮಾಣದಲ್ಲಿ ನೀಡಿದರೂ ಯಾವುದೇ ದುಷ್ಪರಿಣಾಮ ಕಂಡುಬರದೇ ಇರಬಹುದು. ಅದರ ಬದಲು, ಅದೊಂದು ಅದ್ಭುತವಾದ ಜೀವರಕ್ಷಕ ಔಷಧಿಯಾಗಿ ಕೆಲಸಮಾಡಿದೆ. ಆದರೆ ಲಕ್ಷದಲ್ಲಿ ಒಬ್ಬ ಮಾನವನಿಗೆ ಇದನ್ನು ಅತ್ಯಂತ ಸೂಕ್ಷ್ಮ ಪ್ರಮಾಣದಲ್ಲಿ (Test Dose) ನೀಡಿದಾಗಲೇ, ಪ್ರಾಣಾಂತಿಕವಾದ ಪ್ರಕರಣಗಳಿವೆ. ಇದರಲ್ಲಿ ಪೆನಿಸಿಲಿನ್ ದೋಷವೇನಿಲ್ಲ. ಪೆನಿಸಿಲಿನ್-ನ ಅಣುಗಳಿಗೆ ಮಾನವನ ದೇಹ ಪ್ರತಿಕ್ರಿಯಿಸುವ ಕ್ರಿಯೆಯಲ್ಲಿ ದೋಷವಿರುವುದರಿಂದ ಹಾಗಾಗುತ್ತದೆ.”
“ಈ ಸೂಕ್ಷ್ಮಗಳನ್ನರಿಯಾದ ಅನೇಕರು, ವೈದ್ಯರು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರೂ, ದುರ್ಘಟನೆಗೆ ವೈದ್ಯನನ್ನೇ ದೂಷಿಸುವ ಅವಕಾಶ ಬಹಳಷ್ಟಿದೆ. ಹೀಗಾಗಿ, ಅತಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ವೈದ್ಯನಿಗೂ ಕೂಡ ತನ್ನ ಕಾರ್ಯ ನಿರ್ವಹಣೆಯಲ್ಲಿ ಆತಂಕ ಉಂಟಾಗುತ್ತದೆ” ಎಂಬ ಅವರ ಮಾತು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕಾದದ್ದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!