ಇರಬೇಕು ನನ್ನವನು

ಕಲ್ಮಶವಿಲ್ಲದ ಹೃದಯದವನು

ನೂರು ಸ್ತ್ರೀಯರ ನೋಟಕೆ

ಕಣ್ಣ ಸನ್ನೆಯ ಮಾಟಕೆ

ಬೆರಗಾದರೇನು.

ಎಂದೆಂದೂ ಅವನ

ಹೃದಯಕಮಲದಲಿ

ನನ್ನೇ ದೇವತೆ ಮಾಡಿ

ಆರಾಧಿಸುವವನು..

ಕೈಯಲ್ಲಿ ಕೈ ಸೇರಿಸಿ

ರಸ್ತೆ ದಾಟಿಸುವ ಗೆಳೆಯ

ಜೀವನದ ಪಥದಲ್ಲಿ

ಗುರಿಯೆಡೆಗೆ ಕರೆದೊಯ್ಯೋ ಇನಿಯ..

ಇರಬೇಕು ನನ್ನವನು

ನಿದ್ದೆ ಬರದಿರುವಾಗ

ಮನವು ಮರುಗಿರುವಾಗ

ಗಡಸು ದನಿಯಾದರೇನು

ಮನಸು ಮೃದು ಮಾಡಿ

ಮಲಗಿಸಬೇಕು ಲಾಲಿ ಹಾಡಿ...

ರಿಕ್ಷಾ ದ ಬೆನ್ನಲ್ಲಿ ಬರೆದ

ಸಾಲುಗಳ ಹಾಗಿದ್ದರೂ

ನನಗಾಗಿ ನೂರು ಕವಿತೆ

ಬರೆದು ಹಾಡುವವನು..

ಏಳೇಳು ಜನ್ಮಗಳ ಬಂಧ

ನೂರೇಳು ಜನ್ಮಗಳ ಅನುಬಂಧ

ಆಗಲಿ ಎಂದು ಆಶಿಸುವಂತೆ

ಮಾಡುವವನು..

ಸುಂದರನಲ್ಲದಿದ್ದರೂ

ಸುಂದರಮನಸಿನವನು

ಆಗಿರಬೇಕು ನನ್ನಮ್ಮನ ಅಳಿಯನು..

ಕಟ್ಟಕಡೆಗೆ...

ಕಣ್ಣೀರು ಒರೆಸದಿದ್ದರೂ

ನನ್ನ ಕಣ್ಣಲ್ಲಿ ನೀರು ಬರಿಸದಿರಲು

ತಾನೇ ಈರುಳ್ಳಿ ಹೆಚ್ಚುವ

ಚತುರನು

ನನ್ನಿನಿಯನು.. ನಮ್ಮಮ್ಮನ ಅಳಿಯನು..