ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರು ತೆಲುಗು ಭಾಷೆಯಲ್ಲಿ ಬರೆದ ಅವರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್. ಬ್ರಹ್ಮಾನಂದಂ ಅವರದ್ದು ತೆಲುಗು ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಹೆಸರು. ಅವರ ಮ್ಯಾನರಿಸಂ, ಡೈಲಾಗ್ ಹೇಳುವ ಪರಿ, ನಟನೆ ಎಲ್ಲರಿಗೂ ಇಷ್ಟವಾಗುತ್ತದೆ. ತೆಲುಗು ಭಾಷೆ ಗೊತ್ತಿಲ್ಲದವರೂ ಅವರ ನಟನೆಯನ್ನು ನೋಡಿ ಮನಸಾರೆ ನಗಬಹುದು. ಮೂಲತಃ ತೆಲುಗು ಭಾಷೆಯ ಈ ಕೃತಿ ಇಂಗ್ಲೀಷ್ ಗೆ ಅನುವಾದ ಗೊಂಡು ಅಲ್ಲಿಂದ ಕನ್ನಡಕ್ಕೆ ವಿಶ್ವೇಶ್ವರ ಭಟ್ ಮೂಲಕ ಅನುವಾದಗೊಂಡಿದೆ.
ಅನುವಾದಕರಾದ ವಿಶ್ವೇಶ್ವರ ಭಟ್ ಅವರು ಬರೆಯುತ್ತಾರೆ… “ಬ್ರಹ್ಮಾನಂದಂ ಎನ್ನುವುದು ಕೇವಲ ಒಬ್ಬ ನಟನ ಹೆಸರಲ್ಲ; ಅದು ಮನುಷ್ಯನ ಮುಖಭಾವಗಳ ಮೇಲೆ ಅಕಸ್ಮಾತ್ ಬಿದ್ದ ಒಂದು ಮಳೆಬಿಲ್ಲು. ಅವರ ಮುಖವನ್ನೇ ಒಮ್ಮೆ ಗಮನಿಸಿ, ಅಲ್ಲಿ ಕ್ಷಣಕ್ಷಣಕ್ಕೆ ಬದಲಾಗುವ ಸ್ನಾಯುಪಟಗಳಿವೆ. ಆ ಕಣ್ಣಿನ ಮಿಟುಕಿನಲ್ಲಿ ಒಬ್ಬ ಅಸಹಾಯಕ ಮನುಷ್ಯನ ಮುಗ್ಧತೆಯಿದೆ, ಹುಬ್ಬಿನ ಏರಿಳಿತದಲ್ಲಿ ಸೋತು ಸುಣ್ಣವಾದವನ ನವಿರಾದ ಅಹಂಕಾರವಿದೆ. ಅವರ ಅಸಹಾಯಕತೆಯೇ ಒಂದು ದೊಡ್ಡ ಸಂಭ್ರಮ.
ತೆಲುಗಿನ ಬೆಳ್ಳಿತೆರೆಯ ಮೇಲೆ ಅವರು ಪ್ರತ್ಯಕ್ಷರಾದಾಗ, ಅಲ್ಲಿ ಕೇವಲ ಒಬ್ಬ ಹಾಸ್ಯನಟನಷ್ಟೇ ಇರುವುದಿಲ್ಲ. ಬದಲಿಗೆ, ನಮ್ಮೊಳಗಿನ ಅಸಂಖ್ಯಾತ ಪೆದ್ದುತನಗಳು ಅರಳುತ್ತವೆ. ಒಬ್ಬ ಸಾಮಾನ್ಯ ಶಿಕ್ಷಕನಾಗಿದ್ದ ಮನುಷ್ಯ, ಬದುಕಿನ ಕರಾಳ ಹಸಿವು ಮತ್ತು ಅವಮಾನಗಳನ್ನು ಗುಟ್ಟಾಗಿಟ್ಟುಕೊಂಡು ಜಗತ್ತನ್ನು ನಗಿಸಲು ಹೊರಟ ಪರಿಯೇ ಒಂದು ಅನನ್ಯಗಾಥೆ. ಅವರು ತೆರೆಯಲ್ಲಿ ಪೆಟ್ಟು ತಿಂದಾಗ ನಮಗೆ ನೋವಾಗುವುದಿಲ್ಲ, ಬದಲಿಗೆ ನಮ್ಮೊಳಗಿನ ಭಾರವೆಲ್ಲ ಕರಗಿ ಹಗುರವಾಗುತ್ತದೆ. ಸೋಲನ್ನೂ ಕೂಡ ಇಷ್ಟು ಹಾಸ್ಯಮಯವಾಗಿ ಉಣಬಡಿಸಬಹುದು ಎಂದು ತೋರಿಸಿಕೊಟ್ಟವರು ಬ್ರಹ್ಮಾನಂದಂ!
ಬಣ್ಣದ ಲೋಕದ ಅಬ್ಬರದ ನಡುವೆಯೂ ಬ್ರಹ್ಮಾನಂದಂ ಒಬ್ಬ ಅಪ್ಪಟ 'ಸ್ಥಿತಪ್ರಜ್ಞ'. ಕೆಮರಾ ಎದುರು ಅವರು ಮಾಡುವ ಆ ತಮಾಷೆಯ ಆರ್ಭಟಗಳ ಹಿಂದೆ, ಏಕಾಂತದಲ್ಲಿ ಕುಳಿತು ಮಣ್ಣಿನ ಮೂರ್ತಿ ಕೆತ್ತುವ ಅಥವಾ ಪೆನ್ಸಿಲ್ನಲ್ಲಿ ರೇಖಾಚಿತ್ರ ಬಿಡಿಸುವ ಒಬ್ಬ ಧ್ಯಾನಸ್ಥ ಕಲಾವಿದನಿದ್ದಾನೆ. 'ನನ್ನ ಹಾಸ್ಯ ಜನರಿಗಾಗಿ, ಆದರೆ ನನ್ನ ಮೌನ ನನಗಾಗಿ' ಎನ್ನುವ ಅವರ ಮಾತು ಜೀವನದ ದೊಡ್ಡ ತತ್ವಜ್ಞಾನದಂತೆ ಕೇಳಿಸುತ್ತದೆ.
ಬ್ರಹ್ಮಾನಂದಂ ಸಾವಿರ ಚಿತ್ರಗಳಲ್ಲಿ ನಟಿಸಿ ಗಿನ್ನೆಸ್ ದಾಖಲೆ ಬರೆದಿರಬಹುದು, ಆದರೆ ಅವರ ನಿಜವಾದ ಸಾಧನೆ ಇರುವುದು ಪ್ರತಿಯೊಬ್ಬ ಪ್ರೇಕ್ಷಕನ ಅಂತರಂಗದಲ್ಲಿ 'ಆಪ್ತ ಸ್ನೇಹಿತ'ನಂತೆ ನೆಲೆಸಿರುವುದರಲ್ಲಿ, ಅವರ ಮುಖ ಕಂಡ ತಕ್ಷಣ ಅರಳುವ ನಗು ಇದೆಯಲ್ಲ, ಅದು ಭಾಷೆ ಮತ್ತು ಗಡಿಗಳನ್ನು ಮೀರಿದ ಒಂದು 'ವಿಶ್ವಭಾಷೆ'. ಅವರ ಬದುಕು ನಮಗೆ ಕಲಿಸುವುದು ಇಷ್ಟೇ-ಯಶಸ್ಸು ಎನ್ನುವುದು ದೈವಿಕ ಕೃಪೆ ಮತ್ತು ಮನುಷ್ಯನ ಪ್ರಾಮಾಣಿಕ ಶ್ರಮದ ನಡುವೆ ಅರಳುವ ಒಂದು ಪುಟ್ಟ ಹೂವು. ಆ ಹೂವಿನ ಪರಿಮಳವೇ ಬ್ರಹ್ಮಾನಂದಂ!”
ಸಾವಿರ ಚಿತ್ರಗಳಲ್ಲಿ ನಟಿಸಿ ಗಿನ್ನೆಸ್ ದಾಖಲೆಯನ್ನು ತನ್ನದಾಗಿಸಿಕೊಂಡ ಖ್ಯಾತ ನಟ ಬ್ರಹ್ಮಾನಂದಂ ಯಾವತ್ತು ಖ್ಯಾತಿಯ ಅಹಂಕಾರ ತಲೆಗೆ ಹತ್ತಲು ಬಿಡಲಿಲ್ಲ. ಈಗಲೂ ಸರಳತೆಯಿಂದ ಬದುಕುತ್ತಿದ್ದಾರೆ. ಅಭಿಮಾನಿಗಳನ್ನು ಕಂಡರೆ ಅವರಿಗೆ ಅತ್ಯಂತ ಪ್ರೀತಿ. ಅವರು ತಮ್ಮ ಸಾಧನೆಯ ಬಗ್ಗೆ ಹೇಳುವುದು ಹೀಗೆ…”ಎಲ್ಲವೂ ದೇವರ ಕೃಪೆ, ಎಲ್ಲವೂ ಅವನ ಇಚ್ಛೆ ಎಂದು ನಂಬುವುದು ಆಸ್ತಿಕತೆ. ಇನ್ನೊಂದೆಡೆ, ಎಲ್ಲವೂ ನನ್ನ ಕಠಿಣ ಪರಿಶ್ರಮ, ನನ್ನ ಜಾಣ್ಮ ಮತ್ತು ನನ್ನ ಆಲೋಚನಾ ಶಕ್ತಿಯ ಫಲ ಎಂದು ಭಾವಿಸುವುದು ನಾಸ್ತಿಕತೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. 'ನನ್ನ ದಾರಿಯೇ ಸರಿ' ಎಂದು ನಂಬುವ ಆಸ್ತಿಕನಾಗಲಿ ಅಥವಾ ಅದೇ ರೀತಿ ಹಠ ಹಿಡಿಯುವ ನಾಸ್ತಿಕನಾಗಲಿ, ಯಾರೊಬ್ಬರೂ ಸರಿಯಾದ ಫಲಿತಾಂಶವನ್ನು ಪಡೆಯಲಾರರು. ನಾವು ಬಯಸಿದ ಗುರಿ ನಮಗೆ ದಕ್ಕುವುದಿಲ್ಲ.
ಒಂದೆಡೆ, ನೀವು ಮಾಡುವ ಕೆಲಸವನ್ನು ಸಂಪೂರ್ಣ ಸಮರ್ಪಣಾ ಮನೋಭಾವ, ಪ್ರಾಮಾಣಿಕತೆ ಮತ್ತು ಹೊಸತನದೊಂದಿಗೆ ಮಾಡಬೇಕು. ಮತ್ತೊಂದೆಡೆ, ಆ ದೈವಿಕ ಕೃಪೆಯನ್ನು ವಿನಮ್ರವಾಗಿ ಒಪ್ಪಿಕೊಳ್ಳಬೇಕು. ಈ ಎರಡೂ ಅಂಶಗಳು ಸಮ್ಮಿಳಿತಗೊಂಡಾಗ ಮಾತ್ರ ಜೀವನದ ಪಯಣ ಸಾರ್ಥಕವಾಗುತ್ತದೆ ಎಂಬುದು ನನ್ನ ನಂಬಿಕೆ. ಭಗವದ್ಗೀತೆ ಇರಲಿ, ಪ್ರವಾದಿ ಮೊಹಮ್ಮದ್ ಇರಲಿ, ಜೈನ ಧರ್ಮ ಅಥವಾ ಬೌದ್ಧ ಧರ್ಮವೇ ಇರಲಿ... ಎಲ್ಲವೂ ಹೇಳುವುದು ಒಂದೇ - 'ಪರಿಶ್ರಮ ಪಡು, ಫಲವನ್ನು ನಿರೀಕ್ಷಿಸಬೇಡ'. ನೀವು ಪ್ರಾಮಾಣಿಕವಾಗಿ ಶ್ರಮಿಸಿದರೆ, ಆ ಭಗವಂತ ಅದಕ್ಕೆ ತಕ್ಕ ಫಲಿತಾಂಶವನ್ನು ನೀಡುತ್ತಾನೆ. ನಾನು ಈ ಪುಸ್ತಕ ಬರೆದ ಉದ್ದೇಶದ ಸಾರವೂ ಇದೇ ಆಗಿದೆ.
ಹಾಗಂತ, ಈ ಪುಸ್ತಕವು ನನ್ನ ಕಷ್ಟ ಅಥವಾ ಸಂಕಷ್ಟಗಳನ್ನು ಹಂಚಿಕೊಂಡು ಜನರ ಅನುಕಂಪ ಗಳಿಸಲಿಕ್ಕಾಗಿ ಬರೆದಿದ್ದಲ್ಲ ಅಥವಾ ನಾನು ಸಾಧಿಸಿದ ವಿಜಯ ಮತ್ತು ಯಶಸ್ಸಿನ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಲು ಬರೆದಿದ್ದೂ ಅಲ್ಲ. ನಾನು ಎಂಥಾ ದಯನೀಯ ಸ್ಥಿತಿಯಿಂದ ಬಂದೆ ಎಂದು ತೋರಿಸಿಕೊಳ್ಳುವುದು ಅಥವಾ ನಾನು ಎಷ್ಟು ದೊಡ್ಡವನು ಎಂದು ಸಾರುವುದು ಇದರ ಉದ್ದೇಶವಲ್ಲ. ನಿಮ್ಮ ಪರಿಶ್ರಮವು ದೈವಿಕ ಕೃಪೆಯೊಂದಿಗೆ ಬೆರೆತಾಗ ಮಾತ್ರ ಅದು ಫಲಪ್ರದವಾಗುತ್ತದೆ ಎಂಬುದನ್ನು ಒತ್ತಿ ಹೇಳುವುದೇ ಈ ಪುಸ್ತಕದ ಮುಖ್ಯ ಆಶಯ.”
ಇದನ್ನು ಓದಿದಾಗಲೇ ಬ್ರಹ್ಮಾನಂದಂ ಅವರ ಬಗ್ಗೆ ಅಭಿಮಾನ ಮೂಡಲು ಪ್ರಾರಂಭವಾಗುತ್ತದೆ. ಅನುವಾದಕರಾದ ವಿಶ್ವೇಶ್ವರ ಭಟ್ ಅವರು ಮಾಡಿರುವ ಸೊಗಸಾದ ಅನುವಾದದಿಂದ ಎಲ್ಲೂ ಬೇರೆ ಭಾಷೆಯಿಂದ ಅನುವಾದಗೊಂಡದ್ದು ಎಂಬ ಭಾವನೆ ಬರುವುದಿಲ್ಲ. ಬ್ರಹ್ಮಾನಂದಂ ಅವರೇ ಕನ್ನಡದಲ್ಲಿ ತಮ್ಮ ಆತ್ಮಕಥೆಯನ್ನು ಬರೆದಿದ್ದಾರೆ ಎನ್ನುವಂತೆ ಅನುಭವವಾಗುತ್ತದೆ. ಬ್ರಹ್ಮಾನಂದಂ ಅವರ ಬಾಲ್ಯ, ಜೀವನದ ರೋಚಕ ಪಯಣ, ಮತ್ತು ಚಲನಚಿತ್ರ ರಂಗದಲ್ಲಿ ಅವರು ಅನುಭವಿಸಿದ ಅನುಭವಗಳು ಹಾಗೂ ಜೀವನದ ಮೌಲ್ಯಗಳನ್ನು ಈ ಪುಸ್ತಕದಲ್ಲಿ ಸುಂದರವಾಗಿ ವಿವರಿಸಲಾಗಿದೆ. ಜೊತೆಗೆ ಈ ಪುಸ್ತಕದಲ್ಲಿ ಬ್ರಹ್ಮಾನಂದಂ ಜೀವನದ ಕುರಿತಾದ ಅಪರೂಪದ ಹಲವಾರು ಫೋಟೊಗಳಿವೆ. ಅವರ ಅತ್ಮೀಯರ ಅಭಿಪ್ರಾಯಗಳಿವೆ. ಸೊಗಸಾದ ಮುದ್ರಣದ ಈ ಹಾರ್ಡ್ ಬೈಂಡ್ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವುದೇ ಒಂದು ರಸಾನುಭೂತಿ.
ಸುಮಾರು ೨೮೦ ಪುಟಗಳ ಈ ಕೃತಿಯನ್ನು ಬ್ರಹ್ಮಾನಂದಂ ಅವರು ತಮ್ಮ ಹೆತ್ತವರಾದ ಕನ್ನೆಗಂಟಿ ನಾಗಲಿಂಗಾಚಾರಿ ಮತ್ತು ಲಕ್ಷ್ಮೀ ನರಸಮ್ಮ ಅವರಿಗೆ ಹಾಗೂ ಜೀವನದ ಶಿಲ್ಪಿಗಳಾದ ಸುನ್ನಮ್ ಆಂಜನೇಯುಲು ಮತ್ತು ಶಾರದಾ ಇವರುಗಳಿಗೆ ಅರ್ಪಣೆ ಮಾಡಿದ್ದಾರೆ. ಬದುಕಿನಲ್ಲಿ ಕಷ್ಟಗಳು ಬರುವುದು ಸರ್ವೇ ಸಾಮಾನ್ಯ. ಎಂತಹ ಕಷ್ಟಗಳು ಬಂದರೂ ಎದ್ದು ನಿಂತು ಅವುಗಳನ್ನು ಹಿಮ್ಮೆಟ್ಟಿಸಿ ಬದುಕು ಕಟ್ಟಿಕೊಳ್ಳುವುದು ಇದೆಯಲ್ಲಾ ಇದನ್ನು ಬ್ರಹ್ಮಾನಂದಂ ಎಂಬ ನಟನಿಂದ ಕಲಿತುಕೊಳ್ಳಬೇಕು. ಈ ಪುಸ್ತಕ ಕೇವಲ ಬ್ರಹ್ಮಾನಂದಂ ಅವರ ಆತ್ಮಕಥೆಯಲ್ಲ, ಓದುಗರ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಬಲ್ಲದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!