ಎಂದಿನಂತೆ ಈ ಶೈಕ್ಷಣಿಕ ವರ್ಷವು ಆರಂಭವಾಯಿತು. ಮಕ್ಕಳ ಲವಲವಿಕೆ, ಸಂತಸ ಹಾಗೂ ಸಿದ್ಧತಾ ಚಟುವಟಿಕೆಗಳ ಮೂಲಕ ನನ್ನ ತರಗತಿ ಪ್ರಾರಂಭವಾಯಿತು. ಒಂದೊಂದು ಮಗುವು ಒಂದೊಂದು ಗಿಡದಲ್ಲಿರುವ ವಿವಿಧ ರೀತಿಯ ಹೂಗಳಂತೆ ನನ್ನ ಮಡಿಲಿಗೆ ಬಂದು ಸೇರಿದ್ದವು. ನನ್ನ ತರಗತಿಯಲ್ಲೂ ವಿಭಿನ್ನ ಸ್ವಭಾವದ ಮಕ್ಕಳಿದ್ದರು. "ಎಲ್ಲಾ ಮಕ್ಕಳಿಗೂ ಅವರದೇ ಆದ ವಿಶೇಷ ಗುಣಗಳಿರುತ್ತವೆ" ಎಂಬ ಮಾತು ಯಾವಾಗಲೂ ನನ್ನ ಮನದಲ್ಲಿರುತ್ತಿತ್ತು. ನಮ್ಮ ಶಿಕ್ಷಕರ ಜೀವನದಲ್ಲಿ ಹಲವು ರೀತಿಯ ಅನುಭವಗಳು ಎದುರಾಗುತ್ತವೆ. ಹಾಗೆಯೇ ನನ್ನದೊಂದು ಸುಂದರ ಅನುಭವವನ್ನು ನಿಮ್ಮ ಮುಂದಿಡುತ್ತಿದ್ದೇನೆ.

​ಮುಂಜಾನೆ ತರಗತಿಯ ಹಾಜರಾತಿ ದಾಖಲಿಸಿ, ಪ್ರವೇಶ ಚಟುವಟಿಕೆಯ ಮೂಲಕ ಪಾಠದ ಕಡೆಗೆ ಸಾಗುವುದೇ ತಡ; ಸಿಡಿಮಿಡಿಗೊಳ್ಳುತ್ತಾ, ಗದ್ದಲ ಮಾಡುತ್ತಾ, ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಾ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದಳು ಇವಳು ನನ್ನ ತರಗತಿಯ ರಾಣಿ 'ಪವಿತ್ರ'.

​ಲವಲವಿಕೆಯ ನಗುಮುಖದೊಂದಿಗೆ ತನ್ನ ಗೆಜ್ಜೆಯ ಸದ್ದಿನಿಂದ ತರಗತಿಯಲ್ಲೆಲ್ಲಾ ಓಡಾಡುತ್ತಿದ್ದಳು. ಗೆಳೆಯರೆಲ್ಲಾ 'ನಾಗವಲ್ಲಿ' ಎಂದೇ ಟೀಕಿಸುವಾಗಲೂ, ಎಲ್ಲರನ್ನೂ ತನ್ನ ಕೋಪದ ಕಣ್ಣುಗಳಿಂದ ಹೆದರಿಸುತ್ತಿದ್ದಳು. ಗೆಳತಿಯರೆಲ್ಲ ಮೌನವಾಗಿದ್ದರೂ, ತನ್ನ ತುಂಟತನದಿಂದ ಪ್ರತಿಯೊಬ್ಬರ ಗಮನವನ್ನೂ ಸೆಳೆಯುತ್ತಿದ್ದಳು. ಕ್ಷಣಾರ್ಧದಲ್ಲೇ ಮುಖ ತಿರುಗಿಸಿ ಬೆದರಿಸುವ ಈ ತಂಟೆ ರಾಣಿ—ಕೋಪ, ಕಿರುನಗು, ಬೇಸರ, ಖುಷಿ, ಅಳು ಎಂಬ ನವರಸಗಳನ್ನು ಒಟ್ಟಾಗಿ ತನ್ನ ಭಾವನೆಗಳಲ್ಲಿ ವ್ಯಕ್ತಪಡಿಸುತ್ತಿದ್ದಳು. ಹೀಗಿರುವಾಗ ಇವಳಿಂದಲೇ ನನ್ನ ತರಗತಿಯ ಆರಂಭ ಹಾಗೂ ಮುಕ್ತಾಯವಾಗುತ್ತಿತ್ತು. 

ಒಂದು ದಿನ ಚಟುವಟಿಕೆಯನ್ನು ನಡೆಸಲು ಆರಂಭಿಸಿದಾಗ, ಇವಳ ಗದ್ದಲವೇ ಮೊದಲಾಯಿತು. ಮೊದಲು ಇವಳ ಹೆಸರು ಕರೆಯಲಿಲ್ಲವೆಂದು, ಪ್ರಶ್ನೆ ಕೇಳಲಿಲ್ಲವೆಂದು, ಚಪ್ಪಾಳೆ ತಟ್ಟಲಿಲ್ಲವೆಂದು ಒಂದಾದ ಮೇಲೊಂದು ದೂರುಗಳ ಪಟ್ಟಿಯನ್ನೇ ತರಲಾರಂಭಿಸಿದಳು. ​ಮೊದಲಿಗೆ ನಾನು ಗದರಿಸಿದರೂ, ನಂತರ ಅವಳ ರಸಭಾವಗಳು ಒಂದಾದ ಮೇಲೊಂದು ಬದಲಾಗುತ್ತಾ ಹೋದವು. ಕೋಪ ಹೆಚ್ಚಾದರೆ ಕೈಯಲ್ಲಿದ್ದ ಪುಸ್ತಕವನ್ನು ಬಿಸಾಡುವುದು, ಅತಿಯಾದ ಬೇಸರವಾದರೆ ಪುಸ್ತಕವನ್ನು ಬ್ಯಾಗಿನಲ್ಲಿಟ್ಟು ತಲೆ ಕೆಳಗೆ ಹಾಕಿ ಕುಳಿತುಕೊಳ್ಳುವುದು ಇವಳ ಅಭ್ಯಾಸವಾಗಿತ್ತು. ಸ್ವಲ್ಪ ಹೊತ್ತು ಕಳೆದ ನಂತರ ನಾನು ತಾಳ್ಮೆಯಿಂದ, ಪ್ರೀತಿಯಿಂದ ಮಾತನಾಡಿಸುತ್ತಾ ಅವಳನ್ನು ನನ್ನ 'ಟ್ರ್ಯಾಕ್' ಗೆ ತರಲು ಪ್ರಯತ್ನಿಸುತ್ತಿದ್ದೆ. ಎಷ್ಟು ಸಮಾಧಾನದಿಂದ ನೋಡಿಕೊಂಡರೂ ಅವಳ ಸ್ವಭಾವ ಮಾತ್ರ ಬದಲಾಗುತ್ತಿರಲಿಲ್ಲ. ಗಳಿಗೆಗೊಮ್ಮೆ ಬದಲಾಗುವ ಅವಳ ಅವತಾರಕ್ಕೆ ಹೆಸರಿಡಲು ನನಗಾಗುತ್ತಿರಲಿಲ್ಲ!

​ಅವಳ ಸಮಸ್ಯೆ ಏನೆಂದರೆ, ತರಗತಿಯಲ್ಲಿ ತಾನೇ ಮುಂಚೂಣಿಯಲ್ಲಿರಬೇಕು, ಇಡೀ ತರಗತಿಯ ಗಮನ ತನ್ನ ಮೇಲೆಯೇ ಇರಬೇಕೆಂದು ಬಯಸುತ್ತಿದ್ದಳು. ಎಷ್ಟೋ ಮಕ್ಕಳ ಮನಸ್ಸಿನಲ್ಲಿ ಅಡಗಿರುವ ಸಣ್ಣ ಆಸೆ ಇದೇ ಆಗಿರುತ್ತದೆ; ಇವಳು ಅದನ್ನು ಬಹಿರಂಗವಾಗಿ ತೋರ್ಪಡಿಸುತ್ತಿದ್ದಳು. ​ದಿನದಿಂದ ದಿನಕ್ಕೆ ಇವಳ ತುಂಟಾಟ ಹೆಚ್ಚಾಗುತ್ತಿದ್ದರೂ, ನಾನು ತಕ್ಷಣಕ್ಕೆ ಗದರದೆ ಪ್ರೀತಿಯಿಂದ ವಿಚಾರಿಸಿಕೊಳ್ಳುತ್ತಿದ್ದೆ. ಮಗುವಿನ ಮನಸ್ಸಿನ ಸಣ್ಣ ಸಣ್ಣ ಆಸೆಗಳನ್ನು ಅರ್ಥೈಸಿಕೊಳ್ಳುತ್ತಾ, ದಿನವೂ ಉತ್ಸಾಹ ತುಂಬುವ ಚಟುವಟಿಕೆಗಳು ಹಾಗೂ ಆಟಗಳ ಮೂಲಕ ಅವಳನ್ನು ತೊಡಗಿಸಿಕೊಂಡೆ. ನಾನು ತರಗತಿಗೆ ತಡವಾಗಿ ಬಂದಾಗ "ಏಕೆ ತಡವಾಯಿತು?" ಎಂದು ಪ್ರೀತಿಯಿಂದ ಪ್ರಶ್ನಿಸುತ್ತಿದ್ದಳು. ನಾನು ತರಗತಿಗೆ ಬರದಿದ್ದರೆ ಕರೆ ಮಾಡಿ ವಿಚಾರಿಸುತ್ತಿದ್ದಳು. ನನ್ನ ತಾಳ್ಮೆಗೆ ಸವಾಲೆಸೆಯುವ ವ್ಯಕ್ತಿತ್ವ ಇವಳದ್ದು!

ಆದರೆ ನನ್ನ ಆ ತಾಳ್ಮೆಯೇ ನನ್ನ ತರಗತಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿತ್ತು ಎಂದರೆ ತಪ್ಪಾಗಲಾರದು. ನಮ್ಮಿಬ್ಬರ ಈ ಸುಂದರ ಬಂಧ ಹೀಗೆ ಮುಂದುವರಿಯುತ್ತಿದೆ — ನಾನು ಮತ್ತು ನನ್ನವಳು 'ಪವಿತ್ರ'.

-ಭವ್ಯಶ್ರೀ ನಾಗರಕಟ್ಟೆ, ಕಾಸರಗೋಡು 

ಚಿತ್ರ ಕೃಪೆ: ಇಂಟರ್ನೆಟ್ ತಾಣ