ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ಆಂಗ್ಲ ಭಾಷೆಯ ಕಿರುಚಿತ್ರವೊಂದನ್ನು ನೋಡಿದೆ. ಅದರಲ್ಲಿ ನಾಲ್ಕು ಮೊಂಬತ್ತಿಗಳು (ಕ್ಯಾಂಡಲ್) ಪರಸ್ಪರ ಮಾತನಾಡಿಕೊಳ್ಳುವಂತೆ ಚಿತ್ರಿಸಲಾಗಿತ್ತು. ಆ ಚಿತ್ರದ ಭಾವನೆಗಳು ನನಗೆ ಇಷ್ಟ ಆದವು. ನಿಮ್ಮ ಜೊತೆ ಹಂಚಿಕೊಳ್ಳೋಣ ಎಂದು ಅದನ್ನು ಕನ್ನಡೀಕರಿಸಿ ಬರಹ ರೂಪದಲ್ಲಿ ಪ್ರಕಟ ಮಾಡಿರುವೆ.
ಒಂದು ಕತ್ತಲಿನ ಕೋಣೆಯಲ್ಲಿ ನಾಲ್ಕು ಮೊಂಬತ್ತಿಗಳನ್ನು ಹಚ್ಚಿ ಇಡಲಾಗಿತ್ತು. ಆ ನಾಲ್ಕೂ ಮೊಂಬತ್ತಿಗಳು ಪ್ರಕಾಶಮಾನವಾಗಿ ಉರಿಯುತ್ತಾ ಇದ್ದುದರಿಂದ ಕೋಣೆಯಲ್ಲಿ ಕತ್ತಲೆಗೆ ಜಾಗವಿರಲಿಲ್ಲ. ಆ ಕೋಣೆಯಲ್ಲಿ ನಾಲ್ಕು ಮೊಂಬತ್ತಿಗಳನ್ನು ಹೊರತು ಪಡಿಸಿ ಬೇರೆ ಯಾರೂ ಇರಲಿಲ್ಲ. ತುಂಬಾ ನಿಶ್ಯಬ್ಧವಿತ್ತು. ಆಗ ಒಂದು ಮೊಂಬತ್ತಿ ಉಳಿದ ಮೊಂಬತ್ತಿಗಳ ಬಳಿ ಮಾತನಾಡಲು ಪ್ರಾರಂಭ ಮಾಡಿತು.
“ನನ್ನ ಹೆಸರು ಶಾಂತಿ. ಒಂದು ಕಾಲವಿತ್ತು ನನಗೆ ಎಲ್ಲರೂ ಗೌರವ ಕೊಡುತ್ತಿದ್ದರು. ಪರಸ್ಪರ ಶಾಂತಿ ಸಹಬಾಳ್ವೆಯಿಂದ ಬದುಕುತ್ತಿದ್ದರು. ಈ ಜನರಿಗೆ ಶಾಂತಿಯೇ ಬೇಡವಾಗಿದೆ. ಒಬ್ಬರ ಮೇಲೊಬ್ಬರು ದ್ವೇಷ ಕಾರುತ್ತಾ ಬದುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹೆಚ್ಚು ಸಮಯ ಬದುಕುವುದಿಲ್ಲ ಎಂದು ಅನಿಸುತ್ತದೆ” ಎನ್ನುತ್ತಾ ಆ ಶಾಂತಿ ಮೊಂಬತ್ತಿ ಆರಿ ಹೋಯಿತು.
ಶಾಂತಿ ಮೊಂಬತ್ತಿಯ ಹತ್ತಿರವೇ ಇದ್ದ ಇನ್ನೊಂದು ಮೊಂಬತ್ತಿ ಬಹಳ ನೋವಿನಿಂದ ಮಾತನಾಡಲು ಪ್ರಾರಂಭ ಮಾಡಿತು.
“ ನನ್ನ ಹೆಸರು ನಂಬಿಕೆ. ಶಾಂತಿಯ ಹಾಗೆಯೇ ನನ್ನನ್ನು ಒಂದು ಕಾಲದಲ್ಲಿ ಎಲ್ಲರೂ ನಂಬುತ್ತಿದ್ದರು. ಅಪನಂಬಿಕೆಗೆ ಜಾಗವೇ ಇರಲಿಲ್ಲ. ಆದರೆ ಈಗ ಏನಾಗಿದೆ ನೋಡಿ. ಯಾರ ಮೇಲೂ ಜನರಿಗೆ ನಂಬಿಕೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ಯಾವ ನಂಬಿಕೆಯಲ್ಲಿ ಬದುಕಲಿ?” ಎನ್ನುತ್ತಾ ನಂಬಿಕೆ ಮೊಂಬತ್ತಿಯು ನಂದಿ ಹೋಯಿತು.
ಎರಡೂ ಮೊಂಬತ್ತಿಗಳ ಸಾವನ್ನು ಗಮನಿಸಿದ ಮೂರನೇ ಮೊಂಬತ್ತಿ ಅತೀವ ವೇದನೆಯಿಂದ ತನ್ನ ಮಾತುಗಳನ್ನು ಹೇಳಲು ಶುರು ಮಾಡಿತು.
“ನನ್ನ ಹೆಸರು ಪ್ರೀತಿ. ಒಂದು ಕಾಲದಲ್ಲಿ ಪರಸ್ಪರ ಪ್ರೀತಿ ಇಲ್ಲದೆ ಜನರು ಬದುಕುತ್ತಲೇ ಇರಲಿಲ್ಲ. ರೋಮಿಯೋ ಜ್ಯೂಲಿಯಟ್ ನಿಂದ ಹಿಡಿದು ಇಂದಿನ ಕಾಲದ ಪ್ರೇಮಿಗಳ ದಿನದ ಪ್ರೇಮಿಗಳ ತನಕ ಎಲ್ಲರೂ ನನ್ನ ಪ್ರೀತಿಗಾಗಿ ಬದುಕುತ್ತಿದ್ದರು. ಆದರೆ ಈಗ ದ್ವೇಷಕ್ಕೇ ಮಹತ್ವ ಬಂದಿದೆ. ಪ್ರೀತಿಯನ್ನು ಎಲ್ಲರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬೇರೆಯವರನ್ನು ಪ್ರೀತಿಸುವ ಮಾತೇ ಈಗ ಯಾರೂ ಆಡುತ್ತಿಲ್ಲ. ಇಂತಹ ವಾತಾವರಣದಲ್ಲಿ ನಾನು ಯಾಕಾದರೂ ಬದುಕಬೇಕು?” ಎನ್ನುತ್ತಾ ಪ್ರೀತಿಯ ಜ್ವಾಲೆ ನಂದಿ ಹೋಯಿತು.
ಕೊನೆಗೆ ಉಳಿದದ್ದು ಒಂದೇ ಮೊಂಬತ್ತಿ. ಕೋಣೆಯಲ್ಲಿ ಬೆಳಕಿನ ಪ್ರಮಾಣವೂ ಕಡಿಮೆಯಾಗಿತ್ತು. ಆಗ ಒಬ್ಬ ಪುಟ್ಟ ಬಾಲಕ ಆ ಕೋಣೆಯೊಳಗೆ ಪ್ರವೇಶಿಸಿದ. ಉರಿಯುತ್ತಿದ್ದ ಒಂದು ಮೊಂಬತ್ತಿ ಹಾಗೂ ಆರಿ ಹೋದ ಮೂರು ಮೊಂಬತ್ತಿಗಳನ್ನು ನೋಡಿ ಆತನಿಗೆ ತುಂಬಾ ದುಃಖವಾಯಿತು. ಆತ ಅಳಲು ಪ್ರಾರಂಭಿಸಿದ. ಇನ್ನು ಸ್ವಲ್ಪ ಸಮಯ ಕಳೆದರೆ ನಾಲ್ಕನೇ ಮೊಂಬತ್ತಿಯೂ ಆರಿ ಹೋಗುತ್ತದೆ. ಕೋಣೆಯಲ್ಲಿ ಕತ್ತಲು ತುಂಬಿ ಹೋಗುತ್ತದೆ ಎಂಬ ಕಲ್ಪನೆಯಿಂದಲೇ ಆತ ಹೆದರಿ ಮತ್ತೂ ಜೋರಾಗಿ ಅಳಲಾರಂಭಿಸಿದ. ಆಗ ನಾಲ್ಕನೇ ಮೊಂಬತ್ತಿ ಹೇಳಿತು.
“ ಅಳ ಬೇಡ ಮಗು. ಭಯ ಪಡಬೇಡ. ನಾನು ಉರಿಯುತ್ತಿರುವ ತನಕ ನಿನಗೆ ಭಯ ಬೇಡ, ನಾನು ಆರಿ ಹೋಗುವ ಬೆಳಕಲ್ಲ”
“ಹಾಗಾದರೆ ನೀನು ಯಾರು” ಮಗು ಮರು ಪ್ರಶ್ನೆ ಹಾಕಿತು.
“ನಾನು ಭರವಸೆ. ನಾನು ಇದ್ದೇನೆ ಎಂಬ ಆಶಾ ಭಾವನೆಯಿಂದ ಪ್ರಪಂಚದಾದ್ಯಂತ ಜನರು ನೆಮ್ಮದಿಯಲ್ಲಿ ಬದುಕುತ್ತಿದ್ದಾರೆ. ಕಷ್ಟದಲ್ಲಿರುವವರೂ ನಾಳೆ ನಮಗೆ ನೆಮ್ಮದಿ, ಸುಖ ಸಿಗುತ್ತದೆ ಎನ್ನುವ ಭರವಸೆಯಲ್ಲಿ ದಿನ ದೂಡುತ್ತಿದ್ದಾರೆ. ನೀನು ಭರವಸೆ ಕಳೆದುಕೊಳ್ಳಬೇಡ ಮಗೂ..” ಎಂದಿತು ನಾಲ್ಕನೇ ಮೊಂಬತ್ತಿ.
ಆ ಪುಟ್ಟ ಬಾಲಕನಲ್ಲಿ ಭರವಸೆ ಹೊಸ ಹುಮ್ಮಸ್ಸನ್ನು ಮೂಡಿಸಿತು. ಆತ ಸಣ್ಣ ಕಡ್ಡಿಯೊಂದನ್ನು ಬಳಸಿ ಭರವಸೆಯ ಜ್ವಾಲೆಯ ಸಹಾಯದಿಂದ ಆರಿ ಹೋಗಿದ್ದ ಶಾಂತಿ, ನಂಬಿಕೆ, ಪ್ರೀತಿ ಮೊಂಬತ್ತಿಗಳನ್ನು ಮತ್ತೆ ಉರಿಸಿದ. ಮತ್ತೆ ನಾಲ್ಕೂ ಮೊಂಬತ್ತಿಗಳು ಮೊದಲಿನಂತೆಯೇ ಉರಿಯಲಾರಂಭಿಸಿ ಕೋಣೆ ಬೆಳಕಿನಿಂದ ಬೆಳಗಿತು. ಪುಟ್ಟ ಬಾಲಕನ ಮುಖವೂ ನಗುವಿನಿಂದ ಅರಳಿತು.
ಯಾವತ್ತೂ ನೀವು ಭರವಸೆಯನ್ನು ಕಳೆದುಕೊಳ್ಳಬೇಡಿ. ನೀವು ನಾಳಿನ ಉತ್ತಮ ಜೀವನದ ಭರವಸೆಯಿಂದ ಬದುಕಿದರೆ ಪ್ರೀತಿ, ಶಾಂತಿ ಹಾಗೂ ನಂಬಿಕೆಯ ಬದುಕು ನಿಮ್ಮದಾಗುವುದರಲ್ಲಿ ಸಂಶಯವಿಲ್ಲ. ಯಾವತ್ತಿನವರೆಗೆ ಭರವಸೆಯ ದೀಪ ಉರಿಯುತ್ತಿರುವುದೋ ಅಲ್ಲಿಯ ತನಕ ಕತ್ತಲಿಗೆ ಸ್ಥಾನವಿರುವುದಿಲ್ಲ.
(ಆಧಾರ)
ಚಿತ್ರ ಕೃಪೆ: AI ನಿರ್ಮಿತ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!