ನಮ್ಮ ಶಾಲೆ ನೂತನ ವಿದ್ಯಾಲಯ, ಕಲಬುರ್ಗಿಯಲ್ಲಿ ಒಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆ. ಸಾವಿರದ ಒಂಭೈನೂರಾ ಐದರಿಂದ ಇಲ್ಲಿಯವರೆಗೆ ಒಳ್ಳೆಯ ಹೆಸರು ಉಳಿಸಿಕೊಂಡಿದೆ. ನಾವು ಹೈ ಸ್ಕೂಲ್ ಓದಬೇಕಾದರೆ ಒಬ್ಬರಿಗಿಂತ ಒಬ್ಬ ಪ್ರತಿಭಾನ್ವಿತ ಅಧ್ಯಾಪಕರು ಅಲ್ಲಿದ್ದರು.
ಯಾವ ಕಕ್ಷೆಯೋ ನೆನಪಿಲ್ಲ, ನಮಗೆ ವಿಜ್ಞಾನದಲ್ಲಿ ಅವಾಗ ಮೂತ್ರಕೋಶದ ಬಗ್ಗೆ ಪಾಠ ಇತ್ತು. ನಮ್ಮ ಸರ್ ಕಲಿಸಿಕೊಡುವ ರೀತಿಯೇ ಬಲು ಸೊಗಸು. ಪಾಠ ಹೇಳುತ್ತಾ, ಮೂತ್ರಕೋಶದ ಚಿತ್ರ ನಮಗೆ ಕಲಿ ಸಬೇಕಿತ್ತು. ನಮಗೋ ಮೂತ್ರಕೋಶ ಅಂದರೆ ಸಾಕು ಮುಸಿ ಮುಸಿ ನಗು ಬರೋದು. ದೇಹದ ಒಳಗೆ ಇರುತ್ತೆ ಅಂತಾನೂ ಎಷ್ಟೋ ಜನಕ್ಕೆ ಗೊತ್ತಿರಲಿಲ್ಲ. ಬೇರೆ ಏನನ್ನೋ ಕಿಡ್ನಿ ಅಂತಾ ತಿಳಿದುಕೊಂಡಿದ್ರು.
"ಈಗ ಎಲ್ಲರೂ ನಿಮ್ಮ ನಿಮ್ಮ ಪುಸ್ತಕ ತಗೀರಿ" ಎಂದರು ಸರ್. ಎಲ್ಲರೂ ಈಗ ಮೂತ್ರಕೋಶದ ಚಿತ್ರ ಬರೀಬೇಕು ಅಂದರು.
ಈಗಿನ ಕಾಲವಾದರೆ ಎಲ್ಲರ ಬಳಿ ತಮ್ಮದೇ ಪುಸ್ತಕ ಇರುತ್ತದೆ ಅವಾಗ ಎಷ್ಟೋ ಜನ ಕ್ಲಾಸ್ ಗೆ ಪುಸ್ತಕ ತರುತ್ತಲೇ ಇರಲಿಲ್ಲ. ಹೀಗಾಗಿ ಒಂದು ಪುಸ್ತಕ ನೋಡಿ ಮೂರು ನಾಲ್ಕು ಜನ ಚಿತ್ರ ಬಿಡಿಸುತ್ತಾ ಇದ್ವಿ. ನಮ್ಮಲ್ಲಿ ಎಲ್ಲರೂ ಕಲಾಕಾರರೇ! ಒಬ್ಬೊಬ್ಬರ ಚಿತ್ರ ಒಂದೊಂದು ಥರ ಬಿಡಿಸಲಾರಂಭಿಸಿದರು.
ಸರ್ ಹಿಂದೆ ಕೈ ಕಟ್ಟಿ ಒಬ್ಬೊಬ್ಬರ ಬೆಂಚ್ ಹತ್ತಿರ ಬಂದು ಹೇಗೆ ಬಿಡಿಸುತ್ತಾ ಇದ್ದೀವಿ ಅಂತ ನೋಡಲು ಆರಂಭಿಸಿದರು. ಒಬ್ಬೊಬ್ಬರ ಕಲಾ ವೈಖರಿ ನೋಡಿ ಅಡ್ಡಡ್ಡ ತಲೆ ಆಡಿಸಿದರು.
ಸರ್ ಗೆ ಯಾವ ಚಿತ್ರವೂ ಅಷ್ಟಾಗಿ ಹಿಡಿಸಲಿಲ್ಲ. "ಎಲ್ಲರೂ ತರಬೇಕಾಪಾ ಪುಸ್ತಕಾನ. ನೋಡ್ರಿ ಇಲ್ಲಿ ಹೆಂಗ ಬಿಡಸಿರಿ!" "ಅದಕ್ಕೆ ಹೇಳಿದೆ ನಿಮ್ಮ ನಿಮ್ಮದು ನೋಡ್ಕೊಂಡು ಇಳಸ್ರಿ ಅಂತ" ಅಂದು ಬಿಟ್ಟರು.
ಅವರು ಹೇಳಿದ್ದೆ ತಡ.. ಹುಡುಗರು ಒಮ್ಮೆಲೇ ಜೋರಾಗಿ ನಗುವುದಕ್ಕೆ ಶುರು ಹಚ್ಚಿಕೊಂಡರು. ಯಾಕೆ ನಗುತ್ತಿದ್ದಾರೆ ಅನ್ನೋದು ಸರ್ ಗೆ ಒಂದು ಕ್ಷಣ ಅರ್ಥ ಆಗಲಿಲ್ಲ. ಆಮೇಲೆ ಅರ್ಥವಾಗಿ ಹೇಳಿದರು.. "ನಿಮ್ಮ ನಿಮ್ಮದು ಅಂದರೆ ನಿಮ್ಮ ನಿಮ್ಮ ಪುಸ್ತಕ ನೋಡಿ ಅಂದೆ, ನೀವೇನು ಅಂದುಕೊಂಡಿರಿ" ಅಂದು ಎಲ್ಲರ ಜೊತೆ ಅವರೂ ಜೋರಾಗಿ ನಗೋದಕ್ಕೆ ಆರಂಭಿಸಿದರು.
ಪ್ರತಿಕ್ರಿಯೆ (2)
😀😀
ನೀವೂ ಭಾರೀ...
😁