ನಿಮ್ಮ ಫ್ಯಾನ್ ಅಥವಾ ಮಿಕ್ಸರ್ ಅಥವಾ ಮೊಬೈಲ್ ಫೋನ್ ಸರಿಯಾಗಿ ಕೆಲಸ ಮಾಡದಿದ್ದರೆ, ಅದನ್ನು ರಿಪೇರಿ ಮಾಡುವವನಿಗೆ ಕೊಟ್ಟು ನೀವು ಈ ಪ್ರಶ್ನೆಗಳನ್ನು ಕೇಳುತ್ತೀರಿ. “ಇದಕ್ಕೆ ಏನಾಗಿದೆ? ಯಾವ ಭಾಗ ಕೆಟ್ಟಿದೆ? ರಿಪೇರಿ ಮಾಡಲು ಎಷ್ಟು ಸಮಯ ಬೇಕು? ರಿಪೇರಿಯ ಖರ್ಚು ಎಷ್ಟಾದೀತು?”

ನಿಮ್ಮ ಶರೀರದ ವ್ಯವಸ್ಥೆಯಲ್ಲಿ ಏರುಪೇರಾಗಿ ಆರೋಗ್ಯ ಕೆಟ್ಟಾಗ, ಅದರ ರಿಪೇರಿಗೆ ವೈದ್ಯರೊಬ್ಬರ ಸಹಾಯ ಬೇಕಾದಾಗ, ಬಹುಶಃ ನೀವು ಇಂತಹ ಪ್ರಶ್ನೆಗಳನ್ನು ಕೇಳುತ್ತೀರಾ? ತಮ್ಮ ಜೀವವೇ ಆಪತ್ತಿನಲ್ಲಿದ್ದರೂ ವಾಸ್ತವ ತಿಳಿಯುವ ಗೋಜಿಗೆ ಹೋಗುವವರು ವಿರಳ!

ಈ ಪ್ರವೃತ್ತಿ ಗಂಡಾಂತರಕಾರಿ ಎಂಬುದಕ್ಕೆ ಉದಾಹರಣೆ: ಸುಪ್ರಸಿದ್ಧ ವೈದ್ಯರೊಬ್ಬರನ್ನು ಮಹಿಳೆಯೊಬ್ಬಳು ಮತ್ತೆಮತ್ತೆ ಭೇಟಿಯಾದಳು - ತನ್ನ ಸ್ತನದಲ್ಲಿ ಬಿದ್ದಿದ್ದ ಗಂಟಿನ ಪರೀಕ್ಷೆಗಾಗಿ. ಪ್ರತಿ ಬಾರಿಯೂ ಆ ಪರಿಣತ ವೈದ್ಯರು “ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ಇದು ತೀರಾ ಸಾಮಾನ್ಯ ಗಂಟು ಇದು ಬೇಗ ಕರಗುತ್ತದೆ” ಎಂದು ಆಶ್ವಾಸನೆ ನೀಡಿ ಸಾಗ ಹಾಕಿದರು.

ಒಂಭತ್ತು ತಿಂಗಳ ನಂತರ, ಆ ಮಹಿಳೆಗೆ ಸಂಶಯ ಜಾಸ್ತಿಯಾಗಿ, ಆ ಗಂಟಿನ “ಜೀವಕೋಶ ಪರೀಕ್ಷೆ” ಮಾಡಿಸಿದಳು. ಆಗ ತಿಳಿಯಿತು: ಅದು ಕ್ಯಾನ್ಸರ್ ಗಡ್ಡೆ ಎಂದು! ಆಕೆ ಒಂಭತ್ತು ತಿಂಗಳ ಮುಂಚೆಯೇ ಆ ವೈದ್ಯರನ್ನು ನೇರಾನೇರ ಪ್ರಶ್ನಿಸಿದ್ದರೆ…

ವೈದ್ಯರ ಜೊತೆ ಮಾತನಾಡಲಾಗದ “ರೋಗ”

ನಮ್ಮಲ್ಲಿ ಹಲವರನ್ನು ಬಾಧಿಸುವ ರೋಗ: ವೈದ್ಯರ ಜೊತೆ ನೇರಾನೇರ ಮಾತನಾಡಲಾಗದ ರೋಗ! ಈ “ರೋಗ”ದ ರೋಗಲಕ್ಷಣಗಳು ಯಾವುವು? ಈ ಕೆಳಗಿನ ಯಾವುದೇ ಆತಂಕ ಆಗಿರಬಹುದು:

1)ನಿಮ್ಮ ವೈದ್ಯರು ಹೇಳಿದ ಫೈಬ್ರಾಯ್ಡ್, ಇಡಿಮಾ ಅಥವಾ ಬೇರಾವುದೇ ವೈದ್ಯಕೀಯ ಶಬ್ದದ ಅರ್ಥ ಕೇಳಿದರೆ, ಅವರು ನಿಮ್ಮನ್ನು ದಡ್ಡರೆಂದು ಭಾವಿಸುತ್ತಾರೆ.

2)ನಿಮ್ಮ ರೋಗ ಯಾವುದೆಂದು ನಿಮ್ಮ ವೈದ್ಯರು ಹೇಗೆ ನಿರ್ಧರಿಸಿದರೆಂದು ಕೇಳಿದರೆ, ತನ್ನ ತೀರ್ಮಾನವನ್ನು ಪ್ರಶ್ನಿಸುತ್ತಿದ್ದಾರೆಂದು ವೈದ್ಯರು ಭಾವಿಸುತ್ತಾರೆ.

3)ನಿಮ್ಮ ವೈದ್ಯರು ಸೂಚಿಸಿದ ಔಷಧೋಪಚಾರಗಳ ಅಡ್ಡ-ಪರಿಣಾಮಗಳ ಬಗ್ಗೆ ತಿಳಿಸಿದರೆ, ನಿಮಗೆ ಯಾವುದರಿಂದಲೂ ಸಮಾಧಾನ ಆಗದೆಂದು ವೈದ್ಯರು ಭಾವಿಸುತ್ತಾರೆ.

4)ನೀವು ಇನ್ನೊಬ್ಬ ವೈದ್ಯರಿಂದಲೂ ಸಲಹೆ ಪಡೆಯುತ್ತಿದ್ದೀರಿ ಅಥವಾ ನಿಮ್ಮ ರೋಗ ಯಾವುದೆಂದು ವೈದ್ಯರು ನಿರ್ಧರಿಸಿದ ನಂತರ ನೀವು ಹೋಮಿಯೋಪಥಿ ಅಥವಾ ಆಯುರ್ವೇದ ಚಿಕಿತ್ಸೆ ಪಡೆಯಲು ಇಚ್ಛಿಸುತ್ತೀರಿ ಎಂದು ಅವರಿಗೆ ತಿಳಿಸಿದರೆ, ನಿಮಗೆ ಚಿಕಿತ್ಸೆ ನೀಡಲು ಅವರು ನಿರಾಕರಿಸಬಹುದು.

ಈ ಮೇಲಿನ ನಿಮ್ಮ ಎಲ್ಲಾ ಆತಂಕ ತಪ್ಪಾಗಿರಬಹುದು. ಅವುಗಳಲ್ಲಿ ಯಾವುದೇ ಆತಂಕ ನಿಜವಾಗಿದ್ದರೆ, ಅಂತಹ ವೈದ್ಯರ ಸಲಹೆಯಿಂದ ನಿಮಗೆ ನಿಜಕ್ಕೂ ಪ್ರಯೋಜನ ಇದೆಯೇ? ಎಂದು ಬೇಗನೇ ನಿರ್ಧರಿಸುವುದು ಒಳ್ಳೆಯದು, ಅಲ್ಲವೇ?

ವೈದ್ಯರು ಪವಾಡ ಪುರುಷರಲ್ಲ

ವೈದ್ಯರಿಗೆ ವೈದ್ಯವಿಜ್ಞಾನದ ಬಗ್ಗೆ ನಿಮಗಿಂತ ಜಾಸ್ತಿ ತಿಳಿದಿದೆ ಎಂಬುದು ನಿಜ. ವೈದ್ಯರನ್ನು ಪ್ರಶ್ನಿಸುವ ರೋಗಿಗಳು ವಿರಳ ಎಂಬುದೂ ನಿಜ. ಆದರೆ, ಅದಕ್ಕಾಗಿ ನಿಮ್ಮ ವೈದ್ಯರನ್ನು ಪ್ರಶ್ನಿಸದೆ ಇರುವುದು ಸರಿಯಲ್ಲ. ನಿಮ್ಮ ವೈದ್ಯರು ನಮ್ಮ-ನಿಮ್ಮಂತಹ ಸಾಮಾನ್ಯ ಮನುಷ್ಯರೇ ಅಲ್ಲವೇ? ಆದ್ದರಿಂದ ಅವರಿಂದಲೂ ತಪ್ಪುಗಳು ಆಗುವ ಸಂಭವ ಇದೆ.

ಗಮನಿಸಿ: ಇತ್ತೀಚೆಗೆ “ಸಂಪದ”ದಲ್ಲಿ ನಾನು ಪ್ರಕಟಿಸಿದ “ಮೂಕಂ ಕರೋತಿ ವಾಚಾಲಂ” ಲೇಖನ (21-5-2026ರಂದು) ಮತ್ತು “ನನ್ನರಿವಿನ ನೇಪಥ್ಯದಲ್ಲಿ” ಪುಸ್ತಕ ಪರಿಚಯ (22-5-2026ರಂದು) - ಇವುಗಳಲ್ಲಿರುವ ಲೇಖಕರಾದ ಡಾ. ರಾಧಾರಮೇಶ್ ಪ್ರಸ್ತಾಪಿಸಿದ ವೈದ್ಯಕೀಯ ಪ್ರಕರಣಗಳು ಈ ಮಾತಿಗೆ ಪುರಾವೆ.

ವೈದ್ಯರ ಜೊತೆ ನಿಮ್ಮ ಮಾತುಕತೆಯೆಲ್ಲ ನೀವು ಅನಾರೋಗ್ಯದಿಂದ ಮತ್ತು ಆತಂಕದಿಂದ ಬಳಲುತ್ತಿರುವ ಸಮಯದಲ್ಲೇ ನಡೆಯುತ್ತದೆ. ಅಂತಹ ಮನಃಸ್ಥಿತಿಯಲ್ಲಿ ನೀವು ಅವರನ್ನು ಪವಾಡ ಪುರುಷರೆಂದು ಭಾವಿಸಿ, ಅವರು ನಿಮ್ಮ ಕಾಯಿಲೆಯನ್ನು ಖಂಡಿತವಾಗಿ ಗುಣ ಪಡಿಸುತ್ತಾರೆಂದು ನಂಬುವ ಸಾಧ್ಯತೆಗಳಿವೆ.

ನಿಮ್ಮ ವೈದ್ಯರ ಮೇಲೆ ನಂಬಿಕೆ ಅಗತ್ಯ. ಆದರೆ ಅವರನ್ನು ಪವಾಡ ಪುರುಷರೆಂದು ಆರಾಧಿಸುವ ಪ್ರವೃತ್ತಿ ಸರಿಯಲ್ಲ. “ನಿಮ್ಮ ವೈದ್ಯರಿಗೆ ಎಲ್ಲ ಗೊತ್ತಿದೆ” ಎಂಬ ನಿಮ್ಮ ಧೋರಣೆಯಂತೂ ಅಪಾಯಕ್ಕೆ ಆಹ್ವಾನ. ಹಾಗಾಗಿ ನೆನಪಿರಲಿ: ಪ್ರತಿಯೊಬ್ಬ ರೋಗಿಗೆ ವೈದ್ಯರನ್ನು ಪ್ರಶ್ನಿಸುವ ಹಕ್ಕು ಇದೆ ಮತ್ತು ತನ್ನನ್ನು ಬಾಧಿಸುತ್ತಿರುವ ರೋಗದ ಬಗ್ಗೆ ವಿವರವಾಗಿ ತಿಳಿದುಕೊಳ್ಳುವ ಹಕ್ಕು ಇದೆ.

ವೈದ್ಯರ ಜೊತೆ ಮಾತಾಡಲು ಸೂತ್ರಗಳು

ನಿಮ್ಮ ವೈದ್ಯರ ಜೊತೆ ಯಾವ ವಿಷಯದ ಬಗ್ಗೆ, ಯಾವಾಗ ಮತ್ತು ಹೇಗೆ ಮಾತಾಡಬೇಕು ಎಂದು ಕಲಿತುಕೊಂಡರೆ, ನಿಮ್ಮ ಚಿಕಿತ್ಸೆಯ ಗುಣಮಟ್ಟವನ್ನು ನೀವು ಉತ್ತಮಪಡಿಸಿಕೊಳ್ಳ ಬಹುದು.

ವೈದ್ಯರನ್ನು ಭೇಟಿ ಆಗುವ ಮುನ್ನ ಮಾಡಬೇಕಾದ್ದು:

-ನಿಮ್ಮ ರೋಗಲಕ್ಷಣಗಳು ಯಾವ ಕ್ರಮದಲ್ಲಿ ದೇಹದಲ್ಲಿ ಮೂಡಿ ಬಂದವೋ ಅದೇ ಕ್ರಮದಲ್ಲಿ ಅವನ್ನು ಬರೆಯಿರಿ.

-ನೀವು ಕಳೆದ ಒಂದು ವರುಷದ ಅವಧಿಯಲ್ಲಿ ಯಾವುದೇ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದರೆ, ಅದರ ಎಲ್ಲ ವರದಿಗಳನ್ನು ವೈದ್ಯರಿಗೆ ತೋರಿಸಲಿಕ್ಕಾಗಿ ತೆಗೆದಿಟ್ಟುಕೊಳ್ಳಿ.

-ನಿಮಗೆ ಜ್ವರ ಬರುತ್ತಿದ್ದರೆ, ಉಷ್ಣತಾಮಾಪಕದಿಂದ ಶರೀರದ ಉಷ್ಣತೆಯನ್ನು ಗಂಟೆಗೊಮ್ಮೆ ಅಳೆದು, ಬರೆದಿಟ್ಟುಕೊಳ್ಳಿ.

ವೈದ್ಯರನ್ನು ಭೇಟಿಯಾದಾಗ:

*ನಿಮ್ಮ ಮತ್ತು ನಿಮ್ಮ ಕುಟುಂಬದ ವೈದ್ಯಕೀಯ ಚರಿತ್ರೆ, ಬಹಿರಂಗಪಡಿಸಲು ನಾಚಿಕೆಯಾಗುವಂತಹ ನಿಮ್ಮ ರೋಗಗಳು, ನೀವು ಸೇವಿಸುವ ನಿಷಿದ್ಧ ವಸ್ತುಗಳು (ಶಕ್ತಿವರ್ಧಕಗಳು, ಮದ್ಯಪಾನ, ಧೂಮಪಾನ, ಮಾದಕವಸ್ತುಗಳು) ವಿವೇಚನಾರಹಿತವಾಗಿ ಬಳಸುವ ಔಷಧಿಗಳು - ಇವುಗಳ ಬಗ್ಗೆ ವೈದ್ಯರಿಗೆ ಪೂರ್ಣ ವಿವರ ನೀಡಿರಿ.

*ವೈದ್ಯರ ಬಳಿ ಮುಚ್ಚುಮರೆ ಮಾಡಬೇಡಿ. ನಿಮಗೆ ನಿದ್ದೆ ಬರಲು ತೊಂದರೆ ಆಗುತ್ತಿದ್ದರೆ, ನೀವು ತೀವ್ರ ದುಃಖ ಅಥವಾ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ - ಎಲ್ಲವನ್ನೂ ವೈದ್ಯರಿಗೆ ತಿಳಿಸಿ. ಚಿಕಿತ್ಸೆಗಾಗಿ ಬರುವ ರೋಗಿಗಳ ಹಲವು ದೈಹಿಕ ಸಮಸ್ಯೆಗಳಿಗೆ ಮಾನಸಿಕ ಒತ್ತಡದ ಹಿನ್ನೆಲೆ ಇರುತ್ತದೆ.

*ವೈದ್ಯರು ಹೇಳಿದ ವಿಷಯಗಳು ಮತ್ತು ಚಿಕಿತ್ಸೆಯ ವಿವರಗಳು ನಿಮಗೆ ಸ್ಪಷ್ಟವಾಗಿ ಅರ್ಥವಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿರಿ. ನಿಮ್ಮ ಸಮಸ್ಯೆ ಏನು ಹಾಗೂ ಅದರ ಪರಿಹಾರಕ್ಕಾಗಿ ನೀವು ಮಾಡಬೇಕಾದ್ದೇನು - ಇದನ್ನು ವೈದ್ಯರೆದುರೇ ಬರೆದುಕೊಳ್ಳುವುದು ಅತ್ಯುತ್ತಮ.

*ವೈದ್ಯರು ಸೂಚಿಸಿದ ಔಷಧಿಗೆ ಅಡ್ಡ-ಪರಿಣಾಮಗಳು ಇವೆಯೇ ಎಂದು ಪ್ರಶ್ನಿಸಿರಿ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಕೇಳಿ ತಿಳಿದುಕೊಳ್ಳಿರಿ. (ವೈದ್ಯರು ಸೂಚಿಸಿದ ಔಷಧಿಯಿಂದಾಗಿ ಅಡ್ಡ-ಪರಿಣಾಮಗಳು ಉಂಟಾದರೆ ತಕ್ಷಣವೇ ವೈದ್ಯರಿಗೆ ತಿಳಿಸಿ. ಈಗಂತೂ ಮೊಬೈಲ್ ಫೋನಿನಲ್ಲಿ ತಿಳಿಸಬಹುದು.)

ಇನ್ನೊಬ್ಬ ಪರಿಣತ ವೈದ್ಯರ ಅಭಿಪ್ರಾಯ ಯಾವಾಗ ಪಡೆಯಬಹುದು?

“ಬಳಕೆದಾರರ ರಕ್ಷಣಾ ಕಾಯಿದೆ” ಅನುಸಾರ, ವೈದ್ಯರ “ಸೇವೆ” ಪಡೆಯುವ ಪ್ರತಿಯೊಬ್ಬರೂ ವೈದ್ಯಕೀಯ ಸೇವೆಯ ಬಳಕೆದಾರರು. ಆದ್ದರಿಂದ ನಿಮಗೆ ಸುರಕ್ಷಿತ ಸೇವೆ ಪಡೆಯುವ ಹಕ್ಕು ಇದೆ. ಈ ಕೆಳಗೆ ಸೂಚಿಸಿದ ಸಂದರ್ಭಗಳಲ್ಲಿ, ನೀವು ಇನ್ನೊಬ್ಬ ಪರಿಣತ ವೈದ್ಯರ ಅಭಿಪ್ರಾಯ ಪಡೆಯಬಹುದು:

1.ಮೂರು ಪರೀಕ್ಷಾ ಸಂದರ್ಶನಗಳ ನಂತರವೂ ರೋಗ ಲಕ್ಷಣಗಳು ಹಾಗೇ ಇದ್ದು, ನಿಮ್ಮ ವೈದ್ಯರಿಗೆ ರೋಗ ಪತ್ತೆ ಮಾಡಲಾಗದಿದ್ದಲ್ಲಿ.

2.ನಿಮಗೆ ಕ್ಯಾನ್ಸರಿನಂತಹ ಗಂಭೀರ, ತೀವ್ರ ಮತ್ತು ಪ್ರಾಣಾಂತಿಕ ರೋಗವಿದೆ ಎಂದು ನಿಮ್ಮ ವೈದ್ಯರು ಹೇಳಿದಾಗ.

3.ವೈದ್ಯರು ಗುರುತಿಸಿದ ನಿಮ್ಮ ರೋಗ “ಅಪರೂಪದ ರೋಗ” ಎಂದು ತಿಳಿಸಿದಾಗ.

4.ನಿಮ್ಮ ರೋಗಕ್ಕೆ ಮಾನಸಿಕ ಕಾರಣವಿದೆ ಎಂದು ವೈದ್ಯರು ಹೇಳಿದಾಗ.

5.ನಿಮಗೆ ಶಸ್ತ್ರಕ್ರಿಯೆ ಮಾಡಬೇಕೆಂದು ವೈದ್ಯರು ಸೂಚಿಸಿದಾಗ.

ವೈದ್ಯರು ಶಸ್ತ್ರಕ್ರಿಯೆ ಅಗತ್ಯ ಎಂದಾಗ ಏನು ಮಾಡಬೇಕು?

1)ಶಸ್ತ್ರಕ್ರಿಯೆಯ ಮುನ್ನ ಇತರ ಯಾವ ಚಿಕಿತ್ಸೆಗಳನ್ನು ಪ್ರಯತ್ನಿಸಬಹುದೆಂದು ಕೇಳಿರಿ.

2)ಸದ್ಯಕ್ಕೆ ಶಸ್ತ್ರಕ್ರಿಯೆ ಮಾಡದಿದ್ದರೆ ಏನಾದೀತೆಂದು ಕೇಳಿರಿ.

3)ಶಸ್ತ್ರಕ್ರಿಯೆಯಿಂದಾಗುವ ಅನುಕೂಲಗಳು ಯಾವ್ಯಾವು ಎಂದು ಕೇಳಿರಿ.

4)ಶಸ್ತ್ರಕ್ರಿಯೆಯ ಅಪಾಯಸಂಭವ (ರಿಸ್ಕ್) ಬಗ್ಗೆ ಕೇಳಿರಿ. ಅದರಿಂದಾಗುವ ತೊಡಕುಗಳು ಮತ್ತು ಮರಣ ಪ್ರಮಾಣ ಬಗ್ಗೆ ನಿರ್ದಿಷ್ಟವಾಗಿ ಕೇಳಿರಿ. (ಅಂತಹ ಪ್ರತೀ 100 ಶಸ್ತ್ರಚಿಕಿತ್ಸೆಯ ನಂತರ, ವೈದ್ಯವಿಜ್ಞಾನದ ದಾಖಲೆಗಳ ಪ್ರಕಾರ ಬದುಕಿ ಉಳಿಯುವ ರೋಗಿಗಳ ಸಂಖ್ಯೆ ಎಷ್ಟು?)

ಒಬ್ಬ ವೈದ್ಯರು ಶಸ್ತ್ರಕ್ರಿಯೆ ಆಗಲೇಬೇಕು ಎಂದಾಗ, ಇನ್ನೊಬ್ಬ ವೈದ್ಯರು ಆ ರೋಗಿಯನ್ನು ಔಷಧಿಗಳು, ಪಥ್ಯ, ವ್ಯಾಯಾಮ ಮತ್ತು/ ಅಥವಾ ವಿಶ್ರಾಂತಿಯಿಂದ ಗುಣ ಪಡಿಸಿದ ಸಾವಿರಾರು ಪ್ರಕರಣಗಳಿವೆ. ಆದ್ದರಿಂದ, ಬದಲಿ ಚಿಕಿತ್ಸೆಗಳ ಬಗ್ಗೆ ವಿವರವಾಗಿ ಮಾಹಿತಿ ಸಂಗ್ರಹಿಸಿ, ಅನಂತರ ಶಸ್ತ್ರಚಿಕಿತ್ಸೆಯ ಬಗ್ಗೆ ನಿರ್ಧರಿಸುವುದು ಅತ್ಯುತ್ತಮ.

ಕೊನೆಗೊಂದು ಮಾತು: ವೈದ್ಯರನ್ನು ಪ್ರಶ್ನಿಸುವ ನಿಮ್ಮ ಹಕ್ಕು ಚಲಾಯಿಸಿ, ಮುಂದೆ ಪಶ್ಚಾತ್ತಾಪ ಪಡೋದನ್ನು ತಪ್ಪಿಸಿಕೊಳ್ಳಿರಿ.

ಫೋಟೋ ಕೃಪೆ: ಷಟರ್ ಸ್ಟಾಕ್ ವೆಬ್-ಸೈಟ್