ಜೀವನವೆಂಬ ಹಾದಿಯಲ್ಲಿ ಪ್ರತಿಯೊಬ್ಬರೂ ಆಸೆ, ಕನಸು ಹಾಗೂ ನಿರೀಕ್ಷೆಗಳೊಂದಿಗೆ ಹೆಜ್ಜೆ ಇಡುತ್ತಾರೆ. ಆದರೆ, ಈ ನಿರೀಕ್ಷೆಗಳ ಅತಿರೇಕವು ನೆಮ್ಮದಿಯನ್ನು ಕಸಿದುಕೊಂಡು, ಅಂತಿಮವಾಗಿ ತೀವ್ರ ನಿರಾಶೆ ಮತ್ತು ದುಃಖಕ್ಕೆ ಎಳೆದು ತರುತ್ತದೆ ಎಂಬುದು ಬದುಕಿನ ನಿತ್ಯ ಸತ್ಯ.
ಭಗವಾನ್ ಬುದ್ಧ ಅಂದಂತೆ, "ಆಸೆಯೇ ದುಃಖಕ್ಕೆ ಮೂಲ." ಇಲ್ಲಿ ಆಸೆ ಎಂದರೆ ವಸ್ತುಗಳ ವ್ಯಾಮೋಹ ಮಾತ್ರವಲ್ಲ, ಪರಿಸ್ಥಿತಿಗಳು ಮತ್ತು ವ್ಯಕ್ತಿಗಳು ನಮ್ಮ ಇಚ್ಛೆಯಂತೆ ನಡೆಯ -ಬೇಕೆಂಬ ನಿರೀಕ್ಷೆಯೂ ಹೌದು.
ಬದುಕಿನ ದೃಷ್ಟಾಂತಗಳು, ವೃತ್ತಿಪರ ನಿರೀಕ್ಷೆ: ಹಗಲಿರುಳು ಶ್ರಮಿಸುವ ಯುವಕನೊಬ್ಬ ತಕ್ಷಣದ ಬಡ್ತಿ ಹಾಗೂ ಪ್ರಶಂಸೆಯನ್ನು ಅತಿಯಾಗಿ ನಿರೀಕ್ಷಿಸುತ್ತಾನೆ. ಅದು ಸಿಗದಿದ್ದಾಗ ಉಂಟಾಗುವ ನಿರಾಶೆ ನೆಮ್ಮದಿಯನ್ನು ಹಾಳು ಮಾಡುತ್ತದೆ. ಇಲ್ಲಿ ಸಮಸ್ಯೆಯಿರುವುದು ಕೆಲಸದಲ್ಲಲ್ಲ, ಫಲಿತಾಂಶದ ಮೇಲಿನ ನಿರೀಕ್ಷೆಯಲ್ಲಿ.
ಸಂಬಂಧಗಳ ಜಗತ್ತು: ಪ್ರೀತಿ ಅಥವಾ ಸಹಾಯ ನೀಡಿದಾಗ, "ಅವರು ಕೂಡ ನಮಗೆ ಅದೇ ರೀತಿಯಲ್ಲಿ ಮರುಪ್ರತಿಫಲ ನೀಡಬೇಕು" ಎಂದು ನಿರೀಕ್ಷಿಸುತ್ತೇವೆ. ಈ ನಿರೀಕ್ಷೆ ಸುಳ್ಳಾದಾಗ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ.
ಪ್ರೀತಿ ನಿರೀಕ್ಷೆಗಳಿಲ್ಲದೆ ನೀಡುವ ಕೊಡುಗೆಯಾಗಿದ್ದಾಗ ಮಾತ್ರ ಸುಂದರ. ನಾವೆಲ್ಲರೂ ಪ್ರಕೃತಿಯಿಂದ ಕಲಿಯಬೇಕಾದ ಪಾಠ: ಸೂರ್ಯ, ಗಾಳಿ, ನದಿ ಮತ್ತು ಮರಗಳು ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಹಗಲಿರುಳು ಎಡಬಿಡದೆ ತಮ್ಮ ಕರ್ಮ ಮಾಡುತ್ತವೆ. ಇವು ನಿಷ್ಕಾಮ ಕರ್ಮದ ಪ್ರತೀಕ.
ಆದರೆ ಮನುಷ್ಯ ಮಾತ್ರ ಪ್ರತಿಯೊಂದರಲ್ಲೂ ಲೆಕ್ಕಾಚಾರ ಹಾಕಿ, ಜಗತ್ತು ತನ್ನ ಊಹೆಯಂತೆ ನಡೆಯದಿದ್ದಾಗ ನೊಂದಿಕೊಳ್ಳುತ್ತಾನೆ. ಜೀವನವು ನಾವು ಅಂದುಕೊಂಡಂತೆ ನಡೆಯದೆ, ತನ್ನದೇ ನೈಸರ್ಗಿಕ ಗತಿಯಲ್ಲಿ ಸಾಗುತ್ತದೆ. ಆದ್ದರಿಂದ ಭಗವದ್ಗೀತೆಯಂತೆ ಕರ್ಮವನ್ನು ಶ್ರದ್ಧೆಯಿಂದ ಮಾಡಬೇಕು, ಫಲವನ್ನು ನಿರೀಕ್ಷಿಸಬಾರದು. ನಿರೀಕ್ಷೆಗಳೆಂಬ ಭಾರವಾದ ಕೈಚೀಲವು ಮನಶ್ಯಾಂತಿಯನ್ನು ನುಂಗಿಹಾಕಿ, ವರ್ತಮಾನದ ಸುಂದರ ಕ್ಷಣಗಳನ್ನು ಮರೆಸಿ ಭವಿಷ್ಯದ ಚಿಂತೆಯಲ್ಲಿ ಮುಳುಗಿಸುತ್ತದೆ. ಬದುಕಿನಲ್ಲಿ ನಿರಾಶೆಯಿಂದ ಮುಕ್ತರಾಗಲು ಇರುವ ಏಕೈಕ ದಾರಿ ನಿರೀಕ್ಷೆಗಳನ್ನು ಕೈಬಿಟ್ಟು, ಪ್ರತಿಯೊಂದು ಕ್ಷಣವನ್ನು ಇದ್ದ ಹಾಗೆ ಸ್ವೀಕರಿಸುವುದು. ಏಕೆಂದರೆ, ನಿರೀಕ್ಷೆಗಳಿಲ್ಲದ ಮನಸ್ಸಿಗೆ ಎಂದಿಗೂ ನಿರಾಶೆಯ ಸ್ಪರ್ಶವಿರುವುದಿಲ್ಲ, ಅಲ್ಲಿ ಕೇವಲ ಸ್ವಾನಂದದ ಬೆಳಕಷ್ಟೇ ಇರುತ್ತದೆ.
ಬರಹ: ‘ಜಾನಕೀ ತನಯ’ (ನಾಗರಾಜ ಬೆಳೆಯೂರು)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!