ನಿಲುಕದ ನಕ್ಷತ್ರ

ಗ್ರಾಮೀಣ ಪ್ರದೇಶದಿಂದ ಮೂಡಿ ಬಂದ ಸಾಹಿತ್ಯ ಲೋಕದ ದೈತ್ಯ ಶಕ್ತಿಯೇ ಡಾ. ಸುಮತಿಯವರು. 'ತುಂಬಿದ ಕೊಡ ತುಳುಕುವುದಿಲ್ಲ' ಎಂಬಂತೆ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವ. ಅವರ ನಿರಂತರ ಪ್ರಯತ್ನ, ದೃಢ ನಿರ್ಧಾರಗಳಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದೆಂದು ತೋರಿಸಿಕೊಟ್ಟವರು. ಆದರ್ಶ ಗೃಹಿಣಿಯಾಗಿ, ನೆಚ್ಚಿನ ಉಪನ್ಯಾಸಕಿಯಾಗಿ, ಎಲ್ಲಕ್ಕಿಂತ ಮಿಗಿಲಾಗಿ ಶಿಸ್ತು ಬದ್ಧ ಜೀವನವನ್ನು ತನ್ನದಾಗಿಸಿಕೊಂಡವರು ಡಾ. ಸುಮತಿಯವರು. ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. "ನಿಲುಕದ ನಕ್ಷತ್ರ" ಇವರ ಆರನೆಯ ಕೃತಿಯಾಗಿದೆ. ಇದು ೨೮ ಸಣ್ಣ ಕಥೆಗಳನ್ನು ಒಳಗೊಂಡಿದೆ. ಎಲ್ಲಾ ಕಥೆಗಳಲ್ಲಿಯೂ ಇಂದಿನ ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಕಾಣಬಹುದು. ತಂದೆ-ತಾಯಿ-ಮಕ್ಕಳ ಬಾಂಧವ್ಯ, ಪ್ರೀತಿ-ಪ್ರೇಮಗಳಲ್ಲಾಗುವ ಪ್ರಮಾದಗಳು, ಕುಡಿತದಿಂದಾಗುವ ದುಷ್ಪರಿಣಾಮಗಳು ಅತ್ಯಂತ ಸುಂದರವಾಗಿ ಮೂಡಿಬಂದಿವೆ.

ಹೊರ ನೋಟದಿಂದ ಯಾವ ವ್ಯಕ್ತಿಯ ವ್ಯಕ್ತಿತ್ವವನ್ನೂ ಅಳೆಯಬಾರದು - ಎಂಬುವುದು 'ಆಪದ್ಭಾಂಧವ' ಕಥೆಯಲ್ಲಿ ನಿರೂಪಿತವಾಗಿದೆ. " ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು" ಎಂಬುವುದಕ್ಕೆ " ತಂಗಿಯ ಪ್ರೀತಿ'''ಕಥೆ ಉತ್ತಮ ಉದಾಹರಣೆಯಾಗಿದೆ. ಸಜ್ಜನರ ಸಹವಾಸದಿಂದ ಏನು ಲಾಭವಿದೆ? ಅಹಂಕಾರಕ್ಕೆ ಉದಾಸೀನವೇ ಮದ್ದು ಹೆಣ್ಣು ಮಕ್ಕಳ ಪ್ರಾಮುಖ್ಯತೆ, ಸ್ತ್ರೀ ಶಿಕ್ಷಣ, ಏಪ್ರಿಲ್ ಫೂಲ್ ನ ಎಡವಟ್ಟು ಎಲ್ಲವೂ ಸಹಜವಾಗಿ ಕಥೆಗಳಲ್ಲಿ ಮೂಡಿಬಂದಿದೆ. "ವಿದಾಯ" ಕಥೆಯಲ್ಲಿ ಸೈನಿಕ ಮತ್ತು ಅವರ ಮಗಳ ಭಾವನೆಗಳು ಹೃದಯಸ್ಪರ್ಶಿಯಾಗಿವೆ.

ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಆಳ್ವಾಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಹರೀಶ್ ಟಿ ಜಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ,..”ಡಾ. ಸುಮತಿ ಪಿ. ಯವರ ‘ನಿಲುಕದ ನಕ್ಷತ್ರ’, ಮಳೆಗಾಲದ ಆ ರಾತ್ರಿ, ಕಾಣೆಯಾದ ಶಾಂತಿ ಸಿಕ್ಕಿದಳು. ಆಗಂತುಕವೇ ಮೊದಲಾದ ಕತೆಗಳಲ್ಲಿ ನಮಗೆ ವಸ್ತುವಿನ ನಿರ್ವಹಣೆಯಲ್ಲಿ ಹೊಸತನ ಕಾಣುತ್ತದೆ.

ಇಲ್ಲಿನ ಬಹುತೇಕ ಕತೆಗಳು ಸಮಾಜಕ್ಕೆ ಒಂದು ಮೌಲ್ಯದ ಸಂದೇಶವನ್ನು ಕೊಡಲು ಹೊರಟು ಅದರಲ್ಲಿ ಯಶಸ್ವಿಯಾಗಿರುವುದು ಕಾಣುತ್ತದೆ. ಧ್ರುವತಾರೆ ಎಂಬ ಕತೆಯನ್ನು ಇಲ್ಲಿ ಉದಾಹರಣೆಗೆ ನೋಡಬಹುದು. "ಜೀವನವೆಂದರೆ ಹೀಗೇ ಕಷ್ಟ ಸುಖಗಳ ಸಮ್ಮಿಶ್ರಣ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿರುತ್ತದೆ, ಅದನ್ನು ಕಂಡುಕೊಳ್ಳುವ ಜವಾಬ್ದಾರಿ ನಮ್ಮದಾಗಿರುತ್ತದೆ, ಯಾವುದಕ್ಕೂ ಹೆದರಬಾರದು"

ಈ ಮಾತುಗಳು ಇಡೀ ಸಂಕಲನದಲ್ಲಿ ಪ್ರತಿಧ್ವನಿಸುತ್ತವೆ. ನವೋದಯ ಕಾವ್ಯ ಸಂಪ್ರದಾಯದ ಬಹುಮುಖ್ಯ ಆಶಯವೇ "ಬಾಳು ಸ್ವೀಕಾರಾರ್ಹ". ಈ ಧೈಯವಾಕ್ಯವನ್ನು ಧ್ರುವತಾರೆ ಕತೆ ಪ್ರತಿಬಿಂಬಿಸುತ್ತದೆ. ಇದು ಮಾತ್ರವಲ್ಲ, ಇನ್ನುಳಿದಂತೆ ಎಲ್ಲವುಗಳ ಆಶಯವೂ ಅದೇ. ಈ ಕತೆಗಳಲ್ಲಿ ಗಂಡನ ಅಸಹಕಾರ, ಆತನ ಕುಡುಕತನ, ನಿವೃತ್ತಿಯ ಅಂಚಿಗೆ ಬಂದ ತಾಯಿಯ ಕಷ್ಟ. ಮನೆಯ ಆಧಾರಸ್ತಂಭವಾದ ದುಡಿಯುವ ಮಗಳು, ಅಸಹಾಯಕ ಮಗುವಿಗೆ ಬೆಂಬಲವಾಗಿ ನಿಲ್ಲುವ ಯುವಕ... ಮುಂತಾದ ಪಾತ್ರಗಳನ್ನು ನೋಡಿದರೆ ಕತೆಗಾರ್ತಿಗೆ ಬದುಕಿನಲ್ಲಿ ಭರವಸೆಯಿರುವುದೂ, ನಾಳೆ ಎಲ್ಲರಿಗೂ ಒಳ್ಳೆಯದಾಗುತ್ತದೆಂಬ ನಂಬಿಕೆಯಿರುವುದೂ ತಿಳಿಯುತ್ತದೆ. ಇದೇ ಕಾರಣಕ್ಕಿರಬೇಕು ಈ ಸಂಕಲನದ ಎಲ್ಲಾ ಕತೆಗಳೂ ಸುಖಾಂತ್ಯವಾಗಿರುವುದು.

ಮಳೆಗಾಲದ ರಾತ್ರಿ, ಆಪದ್ಭಾಂಧವ, ಭಯದ ನೆರಳಿನಲ್ಲಿ ಈ ಕತೆಗಳ ಸೊಬಗು ಇನ್ನೊಂದು ಬಗೆಯದು. ಇವು ಕೊಂಚ ಭಿನ್ನ ಜಾಡಿನಲ್ಲಿ ಸಾಗುತ್ತವೆ. ಆಪದ್ಭಾಂಧವ ಕತೆಯ ಭಾಷೆಯಂತೂ ಕಥಾನಾಯಕಿಯ ಭಯ, ತಳಮಳ ತಲ್ಲಣವನ್ನು ಸಶಕ್ತವಾಗಿ ಕಟ್ಟಿಕೊಡುತ್ತದೆ. ಅಷ್ಟೊಂದು ಚಿತ್ರಕ ಶಕ್ತಿ ಈ ಕತೆಗಿದೆ. -ಮಳೆಗಾಲದ ರಾತ್ರಿ ಕತೆಯಲ್ಲಿ ನಡೆದ ಕೊಲೆ, ಕೊಲೆಯ ರಹಸ್ಯವನ್ನು ಭೇದಿಸುವ ನಡೆ ಚಾಣಾಕ್ಷತನದಿಂದ ಕೂಡಿ ಸೊಗಸಾಗಿದೆ.

ಈ ಸಂಕಲನದ ಕತೆಗಳ ಶೀರ್ಷಿಕೆಯನ್ನು ನೋಡಿದರೆ ಕತೆಗಳ ಜಾಡು ಅರಿವಾಗುತ್ತದೆ, ಉದಾಹರಣೆಗೆ ನಿಲುಕದ ನಕ್ಷತ್ರ, ತಂಗಿಯ ಪ್ರೀತಿ, ಕನಸಿನ ಹುಡುಗಿ, ಪ್ರೇಮಪಲ್ಲವಿ, ಜೀವನ ಗೆಲುವು... ಇಂತಹ ಕತೆಗಳು ಸಮಾಜಕ್ಕೆ ನೀಡುವ ಒಳ್ಳೆಯ ಸಂದೇಶಗಳು ಕತೆಯನ್ನು ಓದಿದಾಗ ಅರಿವಿಗೆ ಬರುತ್ತದೆ.” ಲೇಖಕಿ ತಮ್ಮ ಅನಿಸಿಕೆಗಳನ್ನು ಮನದಾಳದ ಮಾತಿನಲ್ಲಿ ಬರೆದಿದ್ದಾರೆ. ಮಾಲತಿ ವಸಂತರಾಜ್ ಅವರು ಬೆನ್ನುಡಿ ಬರೆದು ಹಾರೈಸಿದ್ದಾರೆ. 

೧೨೦ ಪುಟಗಳ ಈ ಸಣ್ಣ ಕಥೆಗಳ ಸಂಕಲನವನ್ನು ಲೇಖಕಿ “ಬದುಕಿನಲ್ಲಿ ಪ್ರೀತಿ ಮಮತೆಯಿಂದ ಸಂಸ್ಕಾರ ನೀಡಿ, ಜೀವನವನ್ನು ಕಲಿಸಿಕೊಟ್ಟ ನನ್ನ ತೀರ್ಥರೂಪರಾದ ದಿ. ರಾಮಯ್ಯ ನಾಯಕ್ ಹಾಗೂ ಮಾವನವರಾದ ದಿ. ಕೃಷ್ಣ ಪ್ರಭುರವರ ಸವಿನೆನಪಿಗಾಗಿ’ ಅರ್ಪಣೆ ಮಾಡಿದ್ದಾರೆ. ಪುಟ್ಟ ಪುಟ್ಟ ಕಥೆಗಳನ್ನು ಓದಲು ಆಸಕ್ತಿ ಇದ್ದವರಿಗೆ ಈ ಪುಸ್ತಕದ ಓದು ತುಂಬಾ ಖುಷಿಕೊಡುವುದರಲ್ಲಿ ಎರಡು ಮಾತಿಲ್ಲ.