ಲೇಖಕ, ಕವಿ ರಾಜಕುಮಾರ ಮಡಿವಾಳರ ಇವರು ‘ನೆಲದ ಕಾವು ಮುಗಿಲ ತಾಕಿ ಎನ್ನುವ ಪುಟ್ಟ ಕವನ ಸಂಕಲನವನ್ನು ಹೊರತಂದಿದ್ದಾರೆ. ಈ ಕವನ ಸಂಕಲನಕ್ಕೆ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿಯವರು ಬಹಳ ತೂಕದ ಮುನ್ನುಡಿಯನ್ನು ಬರೆದಿದ್ದಾರೆ. ಆ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಪ್ರತಿ ಕವಿ, ಪ್ರತಿ ವ್ಯಕ್ತಿಯಂತೆ ಭಿನ್ನ ಮತ್ತು ವಿಶಿಷ್ಟ. ಕೆಲವರಿಗೆ ಲಯ ಪ್ರಾಪ್ತಿಯಾದರೆ, ಇನ್ನು ಕೆಲವರಿಗೆ ಧ್ವನಿ, ವಸ್ತು, ಅದರ ವಿನ್ಯಾಸ, ರೂಪಕ ಪ್ರತಿಮೆಗಳ ಕಟ್ಟುವ ಕಲೆ ಪ್ರಾಪ್ತಿಯಾಗಿರುತ್ತದೆ. ಹೀಗೆಲ್ಲ ಹೊಳೆದದ್ದು ಕವಿ ರಾಜಕುಮಾರ ಮಡಿವಾಳರವರ ಕವನ ಸಂಕಲನ ಓದಿದಾಗ,
ಇಲ್ಲಿಯ ಕವಿತೆಗಳಿಗೆ ಹೊಸ ರುಚಿಯೊಂದಿದೆ. ಸಾಲದೇ ಸತ್ವ ಕೂಡ. ಲಯದ ಎಳೆಯಲ್ಲಿ ತನ್ನ ಕಾವ್ಯದ ತೇರು ಎಳೆದಿರುವ ರಾಜಕುಮಾರ ಇಷ್ಟ ಆಗುವುದು ತಮ್ಮದೇಯಾದ ಸಣ್ಣ, ಸರಳ, ಸಹಜ, ತೆಳು ಅನುಭವಗಳನ್ನು ಕಾವ್ಯ ಕಸೂತಿಯಾಗಿಸುವ ಕಾರಣಕ್ಕಾಗಿ.
ಈ ಕವಿತೆಗಳನ್ನು ಓದಿದಾಗ ಕೆ.ಎಸ್.ಎನ್ ರ ದಾಂಪತ್ಯ ಪ್ರೀತಿ, ಬೇಂದ್ರೆ ಅವರ ಭಾಷಾ ಗತ್ತು, ಕಂಬಾರರ ಜನಪದಿಯ ಕಥಾನಕಗಳು ನೆನಪಾಗದೇ ಇರುವುದಿಲ್ಲ. ಆದರೆ ಇವರನ್ನೆಲ್ಲ ಅದುಮಿ, ತಮ್ಮತನದ ಈಜುಗಾರಿಕೆಯನ್ನು ಮಡಿವಾಳರ ಕಲಿತಿದ್ದಾರೆ. ಕಾವ್ಯ ಪರಂಪರೆ ಪ್ರತಿ ಕವಿಯನ್ನು ಬೆನ್ನಟ್ಟುತ್ತದೆ. ದತ್ತಿ ದೇಣಿಗೆಯನ್ನು ನೀಡುತ್ತಲೇ ಇರುತ್ತದೆ. ಕೊನೆಗೂ ನಮ್ಮ ಹೆಜ್ಜೆ ಗುರುತುಗಳು ಬೇರೆಯವೇ ಆಗಿರಬೇಕು. ಈ ಮಾತಿನಂತೆ ರಾಜಕುಮಾರ ಗೆದ್ದಿದ್ದಾರೆ. ತುಸು ತೆಳು ಛಾಯೆ ಬಿಟ್ಟರೆ ಯಾರ ಹಂಗಿನ ನೆರಳಲ್ಲಿಲ್ಲ. ಬಾನ ಸ್ವತಂತ್ರ ಹಕ್ಕಿಯಂತೆ ಈ ನೆಲದ ಗಾಳಿ ಬೆಳಕು ಸಂವೇದನೆಗಳಲ್ಲಿ ಈಜು ಹೊಡೆದಿದ್ದಾರೆ.
ಇಲ್ಲಿ ಕವಿ ಅಗೋಚರ, ಕಾವ್ಯ ಮಾತ್ರ ಗೋಚರಿಸುತ್ತದೆ. ಪಿಸುಮಾತು, ಅಂತರಾಳದ ತವಕಗಳು ತೆರೆ ತೆರೆಯಾಗಿ ಮನಕ್ಕೆ ತಾಗುತ್ತವೆ. ಈ ಬಗೆಯ ಕಾವ್ಯ ಹಿಂದೆ ಎಲ್ಲಾದರೂ ಬಂದಿರಬಹುದೇ? ಎಂದು ಯೋಚಿಸಿದೆ. ನವಿರು ಬಂಧದ ಅಪ್ಪಟ ಉತ್ತರ ಕರ್ನಾಟಕದ ಪ್ರಾದೇಶಿಕ ಸೊಗಡನ್ನು ಹುಡುಕಾಟ ಮಾಡುವಾಗ ಥಟ್ಟನೇ ನೆನಪಾದವರು ಡಾ. ಸೋಮಶೇಖರ ಇಮ್ರಾಪೂರರ 'ಗಂಡಾ ಹೆಂಡಿರ ಜಗಳ...' ಸಿದ್ದಲಿಂಗ ದೇಸಾಯಿ ಅವರ 'ಚಿಗಳಿ', ಬಿ.ಆರ್. ಪೊಲೀಸ ಪಾಟೀಲ, ಶ್ರೀರಾಮ ಇಟ್ಟಣ್ಣನವರ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮುಂತಾದವರ ಕಾವ್ಯ ಲಹರಿ ನೆನಪಾದವು.
ಆದರೆ ಕವಿ ರಾಜಕುಮಾರ ಮಡಿವಾಳರ ಕಾವ್ಯಕ್ಕೆ ತನ್ನದೇಯಾದ ಘಮಲು ಇದೆ. ಕಾಲ ಸಂವೇದನೆಗಳ ಜೀರ್ಣಭಾವ ಸಂಸ್ಕಾರ, ಪ್ರತ್ಯೇಕತೆಯ ತಾಕತ್ತೂ ಇದೆ.
ಇಲ್ಲಿತ್ತು ಈಗಿನ್ನ ಎಲ್ಲಿ ತೇಲಿ ಹೋಯ್ತೊ?
ಕರಿನೀರ ಹೊಳೆಯಲ್ಲಿ ತೇಲಿ
ಬಂದ ತೆಪ್ಪ-ಚಂದಪ್ಪ!
ಈ ನಾಲ್ಕು ಸಾಲುಗಳಲ್ಲಿ ಕಾವ್ಯದನೇಕ ಪಟ್ಟುಗಳಿವೆ. ಪ್ರತಿಮೆ, ರೂಪಕ, ಕಾವ್ಯದ ವಿಸ್ಮಯ ಹೀಗೆಲ್ಲ ಬಳಸುತ್ತ ಕರಿನೀರ ಹೊಳೆಯಲ್ಲಿ ಮತ್ತು ತೆಪ್ಪ ಚೆಂದಪ್ಪ ರೂಪಕಗಳೇ ಸಾಕು ಇಡೀ ಕವಿತೆಗೆ ಅನೇಕ ಆಯಾಮಗಳ ಕೊಡಲು. ಬೇಂದ್ರೆ ಅವರ 'ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!' ಎಂಬ ಸಾಲಿಗೆ ಮತ್ತೊಂದು ಭಿನ್ನ ಚಹರೆ ಚಿತ್ರಿಸಿದ ಈ ಎರಡು ಸಾಲುಗಳು.
ಈ ಬಗೆಯ ನಾನಾ ಛಾಯಾ ಚಿತ್ರಗಳನ್ನು ಕಟ್ಟುವ ಚಿತ್ರಕಶಕ್ತಿ ಮಡಿವಾಳರದ್ದು. ನಮ್ಮ ಕಾಲದ ಬಹುಮುಖ್ಯ ಕವಿಗಳ ಅತಿರಂಜಿತ- ಕಲ್ಪನಾತೀತ ರೂಪಕಗಳನ್ನು ಮರಳಿ ಮುರಿದು ಕಟ್ಟುವ ಕೆಲಸ ಮಾಡಿದ್ದಾರೆ. ಇದು ಸುಲಭದ್ದಲ್ಲ. ಸವಾಲಿನದು. ಅಂತಹ ಅಂತಃಸತ್ವ ಸೃಜನಶಕ್ತಿ ಕವಿಗಿದೆ.
ಧ್ವನಿ, ಕಾವ್ಯದ ಬಲು ದೊಡ್ಡ ಶಕ್ತಿ. ಜನನುಡಿಯಲ್ಲಿ ಅಡಗಿರುವ ಹಳತು ಶಬ್ದಗಳನ್ನು ಹೊಸ ಸಂವೇದನೆಗಳಿಗೆ ತಂದು, ಮರು ಸೃಷ್ಟಿಸಿರುವ ಪದಲಾಲಿತ್ಯ ಕವಿಗೆ ದಕ್ಕಿದೆ. ನಿಗಚಬ್ಯಾಡ, ಕಿಯ್ಯಾಂವ (ನವಿಲು ದನಿ), ಇಳಿಝಾಪಿನ್ಯಾಗ, ಹುಲ್ಲಿಲ್ಲಲೇ, ಜೋಡಗೈ ಇಂತಹ ಪದ ಪ್ರಾಪ್ತಿ ಓದಿನ ರುಚಿ ಭಿನ್ನವಾಗಿಸುತ್ತ ಕಾವ್ಯಕ್ಕೆ ನಾಟೀಕರಣ ಸಿಗುವಂತೆ ಮಾಡಿದ್ದಾರೆ.
ಜೋಡಗೈ ಮುಗದ ನಿಂತೇನಿ
ಆಳೆತ್ತರ ಬಿಳಿಜ್ವಾಳದಾಗ
***
ಹರಿದ ಸರ ಚೆಲ್ಲಿದಂಗ,
ಮಾರಿತುಂಬ ಮುತ್ತ
***
ತೆನೆ ಬಾಯಿ ಮುತ್ತು!
ಜಗದ ನಗೆ
***
ಗಾಳಿ ತುಟಿ ತುಂಬ ಉಲಿವ ಕೊಳಲು
***
ನದಿ ಎದಿಯಿಂದ ಮುಗಿಲ
ತುದಿ ತನಕ ಹಸಿರು ತೋರಣ
***
ನಡ, ಹೊಸೆವ ಮಣಿಯಿಂದಿಳಿವ ಶ್ಯಾವಿಗಿ
***
ಹೊಸ ಮಳೆಗೆ ಊರಾಚೆ ಹೆಸರಿಲ್ಲದ ಹೊಳಿ
***
ಚಿಕ್ಕಿ ಮಲ್ಗೊಂಡ ರೆಕ್ಕಿ
ಉದುರಿ ಬಿದ್ದಾಂಗ ನೆಲ ತುಂಬ ಹೂವ್ವ
***
ಇಂತಹ ಅನೇಕ ಸಾಲುಗಳನ್ನು ಓದುತ್ತ ಹೋದಂತೆ ಒಂದು ಕಾವ್ಯ ಕುಣಿತ ಕಣ್ಣೆದುರು ನಿಲ್ಲುತ್ತದೆ. ಇಷ್ಟು ಸಾಕು ಈ ಹಿಂದೆ ಹೇಳಿದ ಮಾತುಗಳಿಗೆ ಸಾಕ್ಷಿಯಾಗಿ. ಮುದವಿದೆ, ಹದವಿದೆ, ಶಬ್ದ ಬಳಕೆಗೆ ಹೊಸ ಅರ್ಥ ಚಿಮ್ಮಿಸುವ, ಕಣ್ಮನಕೆ ಹಿತ ಕೊಟ್ಟು ಶಬ್ದಗಳ ಕರಗಿಸಿ ಹೊಸ ಶಬ್ದ ಸೃಷ್ಟಿಸುವ ಕಲೆ ಕವಿಗೆ ಸಹಜವಾಗಿ ಸಿಕ್ಕಿದೆ.
ಇಡೀ ಸಂಕಲನದ ಕವಿತೆಗಳೊಳಗೆ ಚಲನೆಯೊಂದಿದೆ. ಈ ಚಲನೆಯಲ್ಲಿ ಗಂಡು-ಹೆಣ್ಣಿನ ಮಿಲನ, ಬದುಕಿನ ಹಸಿತನ, ಜೀವ ಜಿಗುಟು, ಯಾವ ಅರಿವು ಮೀರಿದ ಏಕಾಂತ, ಪಿಸು ನುಡಿ, ಹಸಿಹಸಿ ಅನ್ನಬಹುದಾದ ದೇಹ ಮನಸುಗಳ ಆಟ ಕೂಟ ಸಂಕಲನವನ್ನು ಆವರಿಸಿವೆ.
ಇಲ್ಲಿ ಜನಪದರ ಶೈಲಿಯಲ್ಲಿ ಬರುವ ಅನೇಕ ಕೊಂಡಿ ಸಾಲುಗಳು ಮುದ ಕೊಡುವುದರ ಜೊತೆಗೆ ಹೊಸ ಬಗೆಯ ರುಚಿ ಕೊಡುವುವು. ಈ 'ಲಿಂಕ್ ಲೈನ್' ಗಳು ಕವಿತೆಯನ್ನು ತೂಗಿ ತೂಗಿ ನಿಲ್ಲಿಸಿಗೊಡುವುದಿಲ್ಲ. ಜೀವ ಚಡಪಡಿಕೆಯ ಸಾಲುಗಳು ಕವಿತೆಯ ಕುದಿಯನ್ನು ಆರಗೊಡುವುದಿಲ್ಲ.
ಮಳಿಯಂಬೋದು ಬಡವರ ಮನೆಯ ಹೊರಗಿಲ್ಲ
***
ಹುಲಿಲ್ಲಲೆ ತಮ್ಮ ಸೋತವರ ಬಲದಾಗ
***
ಬಂದಿ ನೀ ಇದೆಂಥ ದಿನದಾಗ
***
ಬಡವರ ಬಾಳೇವು ಹೂಡಿದಲ್ಲೆ ಒಲೆಯು
***
ಇಂತಹ ಸಾಲುಗಳು ಜಾನಪದದ ಕಟ್ಟು ಕುಣಿಕೆಗಳಾಗಿದ್ದವು. ಹೊಸ ತಲೆಮಾರಿನ ಬಳಕೆಯಲ್ಲಿ ಜಾರಿ ಹೋದ ಈ ಬಗೆಯ ಸಾಲು ಸಂಪತ್ತುಗಳನ್ನು ರಾಜಕುಮಾರ ಮಡಿವಾಳರ ತಮ್ಮ ಜೀವನಾನುಭವಗಳ ಜೊತೆಗೆ ಮರುಸೃಷ್ಟಿ ಮಾಡಿದ್ದಾರೆ.
ಮುನ್ನುಡಿಗೊಂದು ಮಿತಿ ಇದೆ. ಅದು ವಿಮರ್ಶೆಯಾಗಬಾರದು. ಕವಿ, ಕವನ ಸಂಕಲನಕ್ಕೆ ಅಂದಗಾಣಿಸುವ, ತಿದ್ದಿ ಹೇಳುವ ನುಡಿ ತೋರಣವಾಗಿರಬೇಕು. ಈ ಅರಿವಿನೊಂದಿಗೆ ಕವಿ ರಾಜಕುಮಾರ ಮಡಿವಾಳರ ಕಾವ್ಯದ ಒಟ್ಟು ಇತಿಮಿತಿ ಗುರುತಿಸುವುದಾದರೆ, ಬೇಂದ್ರೆ, ಕಂಬಾರ, ಕುವೆಂಪು ಹಾಗೂ ಕೆ.ಎಸ್.ಎನ್ ತುಳಿದ ಹಾದಿಯಿಂದ ಸ್ವಂತದ ಕಿರು ದಾರಿಯನ್ನು ಮಡಿವಾಳರ ಕಂಡುಕೊಡಿದ್ದಾರೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!