ನಮ್ಮ ಪರಿಸರದಲ್ಲೇ ಸಿಗುವ ಹಲವಾರು ವಸ್ತುಗಳು ನಮಗೆ ಮನೆ ಬಳಕೆಗೆ, ಕಾಯಿಲೆಗೆ ಬಳಕೆಯಾಗುತ್ತವೆ. ಆದರೆ ನಾವು ಇಂದು ಅದರ ಮಹತ್ವವನ್ನು ಮರೆತು ಬಿಟ್ಟಿದ್ದೇವೆ. ಮನೆಯ ಎದುರೇ ಇರುವ ನುಗ್ಗೆ ಸೊಪ್ಪು ಬಳಸದೇ ಮಾರುಕಟ್ಟೆಯಲ್ಲಿ ದುಬಾರಿ ದರದಲ್ಲಿ ಸಿಗುವ ಮೊರಿಂಗಾ (ನುಗ್ಗೆ) ಪೌಡರ್ ತಂದು ಬಳಸುತ್ತೇವೆ. ಮನೆಯ ಹಿತ್ತಲಿನಲ್ಲೇ ಅರಳುವ ದಾಸವಾಳವನ್ನು ಉಪಯೋಗ ಮಾಡದೇ ಅದರಿಂದಲೇ ತಯಾರಿಸಿದ ರಾಸಾಯನಿಕ ಮಿಶ್ರಿತ ಕ್ರೀಮ್ ಅಥವಾ ಹುಡಿಯನ್ನು ಆನ್ ಲೈನ್ ನಿಂದ ತರಿಸಿ ಬಳಸುತ್ತೇವೆ. ಹೀಗೆ ಹತ್ತು ಹಲವಾರು ನೈಸರ್ಗಿಕವಾಗಿ ಬೆಳೆಯುವ ವಸ್ತುಗಳು ನಮ್ಮ ನೆರೆಕರೆಯಲ್ಲೇ ಇವೆ. ಒಂದೆಲಗ, ತುಳಸಿ, ಮಾವಿನ ಮರ, ಪಪ್ಪಾಯಿ ಗಿಡ, ಶಂಖಪುಷ್ಪ, ದೊಡ್ಡ ಪತ್ರೆ, ಗರಿಕೆ, ಬಿಲ್ವಪತ್ರೆ, ಅರಸಿನ, ಶುಂಠಿ, ಮಾವಿನ ಶುಂಠಿ ಹೀಗೆ ನೂರಾರು ಸಸ್ಯ ಸಂಪತ್ತು ನಮ್ಮ ಕೈ ಅಳತೆಯಲ್ಲೇ ಇವೆ. ಆದರೆ ಅದನ್ನು ನಾವು ನೋಡಲು ಸಹಾ ಹೋಗದೇ ಮಾರುಕಟ್ಟೆಯಿಂದ ‘ಆರ್ಗಾನಿಕ್’ ರಾಸಾಯನಿಕ ಮುಕ್ತ ಎಂಬ ಲೇಬಲ್ ಹಚ್ಚಿ ಬರುವ ವಸ್ತುಗಳನ್ನು ಬಳಸುತ್ತೇವೆ. ಈ ಪದ್ಧತಿ ಬದಲಾಗಬೇಕು, ನಮ್ಮ ಮನೆಯಂಗಳದ ವಸ್ತುಗಳನ್ನೇ ಮೊದಲು ಬಳಸುವ ಪರಿಪಾಠ ಪ್ರಾರಂಭವಾಗಬೇಕು.

ಇತ್ತೀಚಿನ ದಿನಗಳಲ್ಲಿ ವಯಸ್ಸಿಗಿಂತ ಮುಂಚೆಯೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಕೇವಲ ವಯಸ್ಸಾದವರಲ್ಲದೆ ಯುವಕರು ಮತ್ತು ಯುವತಿಯರಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಜೀವನಶೈಲಿ ಬದಲಾವಣೆ, ಒತ್ತಡ, ಪೋಷಕಾಂಶಗಳ ಕೊರತೆ, ನಿದ್ರಾಹೀನತೆ ಹಾಗೂ ರಾಸಾಯನಿಕ ಉತ್ಪನ್ನಗಳ ಅತಿಯಾದ ಬಳಕೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ದೇಹದಲ್ಲಿ ಮೆಲನಿನ್ ಪ್ರಮಾಣ ಕಡಿಮೆಯಾದಾಗ ಕೂದಲು ತನ್ನ ನೈಸರ್ಗಿಕ ಕಪ್ಪು ಬಣ್ಣವನ್ನು ಕಳೆದುಕೊಂಡು ಬಿಳಿಯಾಗಲು ಆರಂಭಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದಕ್ಕಾಗಿ ಅನೇಕರು ಹೇರ್ ಡೈ ಹಾಗೂ ಕೆಮಿಕಲ್ ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಇವುಗಳಿಂದ ಕೂದಲಿನ ಆರೋಗ್ಯ ಇನ್ನಷ್ಟು ಹಾಳಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ನೈಸರ್ಗಿಕ ವಿಧಾನಗಳೇ ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.

ಎಲ್ಲಾ ಋತುಗಳಲ್ಲಿ ಸುಲಭವಾಗಿ ಸಿಗುವ ಮಾವಿನ ಎಲೆಗಳು ಬಿಳಿ ಕೂದಲಿನ ಸಮಸ್ಯೆಗೆ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಸಾಮಾನ್ಯವಾಗಿ ಮಾವಿನ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಅದರ ಎಲೆಗಳಲ್ಲಿಯೂ ಅನೇಕ ಔಷಧೀಯ ಗುಣಗಳಿವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಮಾವಿನ ಎಲೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಮೆಗ್ನಿಸಿಯಮ್. ಪೊಟ್ಯಾಸಿಯಮ್ ಹಾಗೂ ತಾಮ್ರ ಸಮೃದ್ಧವಾಗಿವೆ. ಇವು ಕೂದಲಿನ ಬೇರುಗಳಿಗೆ ಪೋಷಣೆ ನೀಡುವುದರ ಜೊತೆಗೆ ಕೂದಲು ದುರ್ಬಲವಾಗುವುದನ್ನು ತಡೆಯಲು ಸಹಕಾರಿ ಎಂದು ತಜ್ಞರು ತಿಳಿಸಿದ್ದಾರೆ. ಇದಲ್ಲದೆ ಮಾವಿನ ಎಲೆಗಳಲ್ಲಿ ಫಿನಾಲ್ ಎಂಬ ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್ ಅಂಶವೂ ಇದ್ದು, ಇದು ಕೂದಲು ಬೇಗ ಬಿಳಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಮಾವಿನ ಎಲೆಗಳಲ್ಲಿರುವ ನೈಸರ್ಗಿಕ ಪೋಷಕಾಂಶಗಳು ಕೂದಲಿನ ಬುಡವನ್ನು ಬಲಪಡಿಸಿ ಮೆಲನಿನ್ ಉತ್ಪಾದನೆಯನ್ನು ಉತ್ತೇಜಿಸಲು ನೆರವಾಗುತ್ತವೆ ಎಂದು ಹೇಳಲಾಗುತ್ತಿದೆ. ಇದರಿಂದ ಕೂದಲು ನಿಧಾನವಾಗಿ ತನ್ನ ನೈಸರ್ಗಿಕ ಕಪ್ಪು ಬಣ್ಣವನ್ನು ಮರಳಿ ಪಡೆಯಲು ಸಹಾಯವಾಗಬಹುದು.

ಈ ಮನೆಮದ್ದು ತಯಾರಿಸುವ ವಿಧಾನವೂ ಬಹಳ ಸುಲಭವಾಗಿದೆ. ಮೊದಲು ತಾಜಾ ಮಾವಿನ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಬೇಕು. ನಂತರ ಅವನ್ನು ರುಬ್ಬಿ ಗಟ್ಟಿಯಾದ ಪೇಸ್ಟ್ ತಯಾರಿಸಬೇಕು. ಈ ಪೇಸ್ಟ್ ಅನ್ನು ಕೂದಲಿನ ಬುಡದಿಂದ ತುದಿವರೆಗೂ ಚೆನ್ನಾಗಿ ಹಚ್ಚಿ ಸುಮಾರು ಅರ್ಧ ಗಂಟೆ ಹಾಗೆಯೇ ಬಿಡಬೇಕು. ನಂತರ ತಣ್ಣನೆಯ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆಯಬೇಕು. ವಾರದಲ್ಲಿ ಎರಡು ಅಥವಾ ಮೂರು ಬಾರಿ ಹೀಗೆ ನಿಯಮಿತವಾಗಿ ಬಳಸುವುದರಿಂದ ಕೆಲವು ವಾರಗಳಲ್ಲೇ ಬಿಳಿ ಕೂದಲು ಕಡಿಮೆಯಾಗುತ್ತಿರುವ ಬದಲಾವಣೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ. ಇನ್ನೊಂದು ಪರಿಣಾಮಕಾರಿ ವಿಧಾನವೆಂದರೆ ಮಾವಿನ ಎಲೆಗಳ ಜೊತೆ ಪೇರಳೆ ಎಲೆಗಳನ್ನು ಬಳಸಿ ತಯಾರಿಸುವ ಕಷಾಯ. ಮಾವಿನ ಎಲೆ ಮತ್ತು ಕೆಲವು ಪೇರಳೆ ಎಲೆಗಳನ್ನು ಒಂದು ಪಾತ್ರೆಯಲ್ಲಿ ನೀರಿನೊಂದಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನೀರಿನ ಬಣ್ಣ ಬದಲಾಗುತ್ತಿದ್ದಂತೆಯೇ ಅದನ್ನು ಕೆಳಗಿಳಿಸಿ ತಣ್ಣಗಾಗಲು ಬಿಡಬೇಕು. ನಂತರ ಈ ನೀರನ್ನು ಕೂದಲಿನ ಬುಡಕ್ಕೆ ಹಚ್ಚಿ ಕೆಲ ಸಮಯ ಬಿಟ್ಟು ತಲೆ ಸ್ನಾನ ಮಾಡಬಹುದು. ನಿಯಮಿತವಾಗಿ ಈ ವಿಧಾನ ಅನುಸರಿಸುವುದರಿಂದ ಕೂದಲು ಕಪ್ಪಾಗುವುದರ ಜೊತೆಗೆ ಹೊಸದಾಗಿ ಬಿಳಿ ಕೂದಲು ಬೆಳೆಯುವ ಪ್ರಮಾಣವೂ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ.

ಆರೋಗ್ಯ ತಜ್ಞರ ಪ್ರಕಾರ, ಹೊರಗಿನಿಂದ ಮಾತ್ರ ಆರೈಕೆ ಮಾಡುವುದು ಸಾಕಾಗುವುದಿಲ್ಲ. ಕೂದಲಿನ ಆರೋಗ್ಯಕ್ಕಾಗಿ ಪೋಷಕಾಂಶಯುಕ್ತ ಆಹಾರ ಸೇವನೆಯೂ ಬಹಳ ಮುಖ್ಯವಾಗಿದೆ. ಹಸಿರು ತರಕಾರಿಗಳು, ಹಣ್ಣುಗಳು, ಬೇಳೆಕಾಳುಗಳು, ಒಣಹಣ್ಣುಗಳು ಹಾಗೂ ಪ್ರೋಟೀನ್ ಸಮೃದ್ಧ ಆಹಾರಗಳನ್ನು ಸೇವಿಸುವುದರಿಂದ ಕೂದಲು ಒಳಗಿನಿಂದಲೇ ಬಲವಾಗುತ್ತದೆ. ಜೊತೆಗೆ ಹೆಚ್ಚು ಒತ್ತಡ ತಪ್ಪಿಸುವುದು, ಸಮರ್ಪಕ ನಿದ್ರೆ ಪಡೆಯುವುದು ಹಾಗೂ ರಾಸಾಯನಿಕ ಉತ್ಪನ್ನಗಳ ಬಳಕೆ ಕಡಿಮೆ ಮಾಡುವುದು ಕೂಡ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕರು ನೈಸರ್ಗಿಕ ಮನೆಮದ್ದುಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಸುಲಭವಾಗಿ ದೊರೆಯುವ ಮಾವಿನ ಎಲೆಗಳಂತಹ ನೈಸರ್ಗಿಕ ವಿಧಾನಗಳು ಕೂದಲಿನ ಆರೋಗ್ಯ ಕಾಪಾಡಲು ಸಹಾಯಕವಾಗಬಹುದು. ಆದರೆ ಯಾರಿಗಾದರೂ ಅಲರ್ಜಿ ಅಥವಾ ತಲೆಚರ್ಮದ ಸಮಸ್ಯೆಗಳಿದ್ದರೆ ವೈದ್ಯರು ಅಥವಾ ತಜ್ಞರ ಸಲಹೆ ಪಡೆದು ಬಳಸುವುದು ಉತ್ತಮ ಎಂದು ಪರಿಣಿತರು ಸೂಚಿಸಿದ್ದಾರೆ.

(ಆಧಾರ)

ಚಿತ್ರ ಕೃಪೆ: ಅಮೆಜಾನ್ ಜಾಲ ತಾಣ