ನೂತನ ಶೈಕ್ಷಣಿಕ ವರ್ಷದ ಆರಂಭ ಸನ್ನಿಹಿತವಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳ ಮೇಲೆ ಮತ್ತದೇ ಪಠ್ಯಪುಸ್ತಕ ವಿಳಂಬದ ಕಾರ್ಮೋಡ ಆವರಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆಯ ಭರವಸೆಗಳ ಹೊರತಾಗಿಯೂ, ಗಣನೀಯ ಪ್ರಮಾಣದ ಪಠ್ಯಪುಸ್ತಕಗಳು ಇನ್ನೂ ಮುದ್ರಣಾಲಯಗಳಲ್ಲಿಯೇ ಸಿಲುಕಿಕೊಂಡಿವೆ ಎಂಬ ವರದಿಗಳು ಕೇಳಿಬಂದಿವೆ. ಇನ್ನೂ ಕೆಲವೆಡೆ ವಿತರಣಾ ಹಂತದಲ್ಲಿ ಸವಾಲು ಎದುರಾಗಿದೆ. ವಿಶೇಷವಾಗಿ ಸರಕಾರಿ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳೇ ಜ್ಞಾನದ ಏಕೈಕ ಮೂಲವಾಗಿದ್ದು, ಶಾಲೆಯ ಗಂಟೆ ಬಾರಿಸಿದರೂ ಅವರ ಕೈಯಲ್ಲಿ ಪುಸ್ತಕಗಳು ಸಿಗುವುದು ಅನುಮಾನ ಎನ್ನುವಂತಾಗಿದೆ. ಸರಕಾರಿ ಶಾಲೆಗಳಿಂದ ಮಕ್ಕಳು ವಿಮುಖರಾಗುತ್ತಿ ರುವ ಹೊತ್ತಲ್ಲಿ ಪಠ್ಯಪುಸ್ತಕ ವಿಳಂಬದಂಥ ಸಮಸ್ಯೆಗಳಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆಯಷ್ಟೆ. ಅಲ್ಲದೆ, ಖಾಸಗಿ ಹಾಗೂ ಸರಕಾರಿ ಶಾಲೆಗಳ ನಡುವಿನ ಕಲಿಕೆಯ ಅಂತರವು ಕಂದಕದಂತೆ ಬೆಳೆಯುತ್ತಾ ಹೋಗುವ ಸಾಧ್ಯತೆ ಇದೆ. ಶಾಲಾ ಪುಸ್ತಕಗಳ ಜತೆಗೆ ಪಿಯು ಕಾಲೇಜು ಪಠ್ಯಪುಸ್ತಕಗಳ ಮುದ್ರಣದ ಜವಾಬ್ದಾರಿಯೂ ಈ ಬಾರಿ ಕರ್ನಾಟಕ ಪಠ್ಯಪುಸ್ತಕ ಸಂಘದ ಮೇಲೆ ಬಿದ್ದಿದೆ. ಸಂಘವು ಕಡಿಮೆ ಸಮಯದಲ್ಲಿ ಯಾವುದೇ ಲೋಪದೋಷ ಇಲ್ಲದಂತೆ ತನ್ನ ಎಲ್ಲಾ ಜವಾಬ್ದಾರಿ ನಿರ್ವಹಿಸುವುದೇ ಎನ್ನುವ ಪ್ರಶ್ನೆಯೂ ಮೂಡಿದೆ.
ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ತಲುಪಿಸುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ಇದು ಸಮಾನ ಶಿಕ್ಷಣ ವ್ಯವಸ್ಥೆಯ ಮೂಲಾಧಾರ. ಮಗುವಿನ ಪಾಲಿಗೆ ಪಠ್ಯಪುಸ್ತಕವು ಕೇವಲ ಕಾಗದದ ಕಟ್ಟಲ್ಲ. ಅದು ಇಡೀ ವರ್ಷದ ಶೈಕ್ಷಣಿಕ ನಕ್ಷೆ ಮತ್ತು ಸ್ವತಂತ್ರ ಕಲಿಕೆಯ ಸಾಧನ. ಪಠ್ಯಪುಸ್ತಕಗಳು ಇಲ್ಲದಿದ್ದಾಗ, ಶಿಕ್ಷಕ ಮತ್ತು ವಿದ್ಯಾರ್ಥಿ ನಡುವಿನ ಕಲಿಕಾ ಪ್ರಕ್ರಿಯೆಯು ಕುಂಠಿತಗೊಳ್ಳುತ್ತದೆ. ತರಗತಿಗಳು ಔಪಚಾರಿಕವಾಗಿ ನಡೆಯುತ್ತವೆ. ಇದರಿಂದ ಮಕ್ಕಳ ಮೇಲಾಗುವ ಮಾನಸಿಕ ಪರಿಣಾಮವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಗತ್ಯ ಪರಿಕರಗಳಿಲ್ಲದೆ ಕಲಿಕೆ ಪ್ರಾರಂಭಿಸುವುದು ಮಕ್ಕಳಲ್ಲಿ ಶಾಲಾ ಶಿಕ್ಷಣ ಕುರಿತು ಅಲಕ್ಷ್ಯದ ಭಾವನೆಯನ್ನು ಮೂಡಿಸುತ್ತದೆ.
ರಾಜ್ಯ ಸರಕಾರವು ಈ ವಿಳಂಬವನ್ನು ಸಹಿಸಿಕೊಳ್ಳಬಾರದು. ನಮ್ಮ ವಿದ್ಯಾರ್ಥಿಗಳು ಸರಕಾರದ ವೈಫಲ್ಯದಿಂದಾಗಿ ಕುಂಟುತ್ತಾ ಸಾಗುವಂತಾಗಬಾರದು. ಪಠ್ಯವುಸ್ತಕ ವಿಳಂಬವು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ. ಇದು ಶಿಕ್ಷಣ ಕ್ಷೇತ್ರದ ಕುರಿತ ಅಸಡ್ಡೆಯೂ ಹೌದು. ಇಲಾಖೆಯು ಅಧಿಕಾರಶಾಹಿ ವಿಳಂಬವನ್ನು ಬದಿಗಿಟ್ಟು ಟೆಂಡರ್ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು ಮತ್ತು ವಿಳಂಬಕ್ಕೆ ತೊಡಕಾಗುವವರನ್ನು ಗುರುತಿಸಿ ಹೊಣೆಗಾರರನ್ನಾಗಿ ಮಾಡಬೇಕು. ಪ್ರತಿಯೊಂದು ಮಗುವಿನ ಕೈಗೆ ಪುಸ್ತಕ ತಲುಪಿಸುವುದು ಸರಕಾರದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಮಕ್ಕಳ ಭವಿಷ್ಯವು ಮುದ್ರಣಾಲಯಗಳಿಂದ, ಆಡಳಿತಾತ್ಮಕ ಬೇಜವಾಬ್ದಾರಿತನದಿಂದ ಕುಂಠಿತಗೊಳ್ಳುವಂತಾಗಬಾರದು. ಈ ಸಮಸ್ಯೆ ಶೀಘ್ರ ಪರಿಹಾರಗೊಳ್ಳಲಿ. ಮಕ್ಕಳ ಭವಿಷ್ಯದ ಜತೆ ಆಟ ಬೇಡ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೭-೦೪-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!