ಇವತ್ತು ನಮ್ಮನ್ನು ಭೇಟಿ ಮಾಡಲು ಶಲ್ಲಕೀ ಕಲಿಕಾ ಕೇಂದ್ರಕ್ಕೆ ಬಂದಿದ್ದ ಡಾಕ್ಟರ್‌ಗಳಲ್ಲಿ ಒಬ್ಬರು, "ಸರ್, Sustainable ಮನೆಗಳನ್ನು ಕಟ್ಟುವುದು ಹೇಗೆ? ಎಲ್ಲಿಂದ ಪ್ರಾರಂಭ ಮಾಡುವುದು?" ಎಂದು ಕೇಳಿದಾಗ, ನನಗೆ ಒಂದು ಕ್ಷಣ ಗೋಜಲಾಯಿತು.

ಮೊದಲಾಗಿ, ಮನೆ ಕಟ್ಟುವುದು ಎಂಬುದೇ ಸುಲಭದ ಕೆಲಸವಲ್ಲ. 'ಮನೆ ಕಟ್ಟಿ ನೋಡು…’ ಎಂಬ ಗಾದೆ ಮಾತನ್ನು ಕೇಳಿದ್ದೇವಲ್ಲವೇ? ಇನ್ನು, ಪರಿಸರಕ್ಕೆ ಹೆಚ್ಚು ಹಾನಿ ಮಾಡದೆ, ಸಹಜವಾಗಿ ಸಿಗುವ ಮೇಟಿರಿಯಲ್ಲುಗಳನ್ನು ಉಪಯೋಗಿಸಿ ವಿದ್ಯುತ್ ಹಾಗೂ ನೀರಿನ ಮಟ್ಟಿಗೆ Self-reliant ಆಗುವುದು (ಸ್ವಾವಲಂಬನೆ ತರುವುದು) ಬಹಳ ಕಷ್ಟದ ಕೆಲಸ. ಮುಂಚಿನ ಕಾಲದಲ್ಲಿ ಎಲ್ಲ ಮನೆಗಳನ್ನೂ ಪರಿಸರಸ್ನೇಹಿಯಾಗಿಯೇ ಕಟ್ಟುತ್ತಿದ್ದರು; ಸುತ್ತಲೂ ಸಿಗುತ್ತಿದ್ದ ಕಲ್ಲನ್ನು ಉಪಯೋಗಿಸಿ ಗೋಡೆಗಳನ್ನು ಕಟ್ಟಿ, ಅದಕ್ಕೆ ಸುಣ್ಣದ ಗಾರೆ ಬಳಸಿ ಮುಚ್ಚುತ್ತಿದ್ದರು. ಇನ್ನು ಹಲವೆಡೆ ಹುಲ್ಲು-ಮಣ್ಣೇ ಕಟ್ಟಡಕ್ಕೆ ಬೇಕಾಗಿರುವ ಮೂಲ ಸಾಮಗ್ರಿಯಾಗಿದ್ದವು.

ಈಗ ಹಾಗಲ್ಲ; ಕಟ್ಟಡ ಕಟ್ಟುವುದಕ್ಕೆ ಹತ್ತಾರು ವಿಧಾನಗಳಿವೆ. ಕನ್ವೆನ್ಷನಲ್ ವಿಧಾನಗಳನ್ನು ಅನುಸರಿಸಿದರೆ 3 ತಿಂಗಳಿಗೆ ಹಠಾತ್ ಮನೆ ಎಬ್ಬಿಸಿಬಿಡಬಹುದು. ಬಹುತೇಕ ಕಟ್ಟಡದ ಮಾಲೀಕರು ಹಾಗೂ ಲ್ಯಾಂಡ್ ಲಾರ್ಡ್‌ಗಳು ಇದೇ ರೀತಿ ಮನೆಗಳನ್ನು ಕಟ್ಟಿಸುತ್ತಾರೆ. ಕೆಲವೇ ದಿನಗಳಲ್ಲಿ ಜೆಸಿಬಿ ಹಿಡಿದು ನಿವೇಶನದಲ್ಲಿ ಬೇಗ ಬೇಗನೆ ಗುಂಡಿ ತೋಡಿಸಿ, ಫೌಂಡೇಶನ್ ಹಾಕಿಸಿಬಿಡುತ್ತಾರೆ. ಫೌಂಡೇಶನ್‌ನಿಂದ ಎದ್ದ ಪಿಲ್ಲರ್‌ಗಳು ಮೇಲೆ ಏಳುತ್ತಿದ್ದಂತೆಯೇ ಸುತ್ತಲೂ ಪ್ಲಿಂತ್ ಬೀಮ್‌ಗಳು ಹಾಗೂ ಗೋಡೆಗಳು ಕಾಣತೊಡಗುತ್ತವೆ. ಈ ಕಂಬಗಳ ನಡುವೆ ಸಿಮೆಂಟಿನ ಇಟ್ಟಿಗೆ ಬಳಸಿ ಗೋಡೆ ಕಟ್ಟಿಬಿಡುತ್ತಾರೆ. ಆರ್ಕಿಟೆಕ್ಟ್‌ಗಳು ಕೂಡ ಎಲ್ಲೆಡೆ ಬಳಸುವಂತಹ ಸರ್ವೇ ಸಾಮಾನ್ಯ ಡಿಸೈನುಗಳನ್ನೇ ಕೊಟ್ಟುಬಿಡುತ್ತಾರೆ. ಈ ರೀತಿಯ ಮನೆಗಳಲ್ಲಿ ಖರ್ಚೇನು ಕಡಿಮೆಯಾಗುವುದಿಲ್ಲವಾದರೂ, ಬಹುತೇಕ ಬೇಗ ನಿರ್ಮಾಣವಾಗಿಬಿಡುತ್ತದೆ. ಇದರಲ್ಲಿ ಸಸ್ಟೇನಬಲ್ ಎಂದೆಲ್ಲಾ ನಿರೀಕ್ಷಿಸುವಂತಿಲ್ಲ. ಇದು ಕಡಿಮೆ ಖರ್ಚಿನಲ್ಲಿ ಬೇಗ ಮನೆ ಕಟ್ಟಿಸಿ, ಅದನ್ನು ಬಾಡಿಗೆಗೆ ಕೊಟ್ಟು ಪ್ರಾಫಿಟ್ ಮಾಡಿಕೊಳ್ಳಲು ಬಯಸುವವರಿಗೊಂದು ದಾರಿ.

ಇನ್ನು ಕೆಲವರು—ಅಂದರೆ ಖರ್ಚು ಮಾಡಲು ಹಿಂದೆ-ಮುಂದೆ ನೋಡದವರು—ಒಳ್ಳೆಯ ಆರ್ಕಿಟೆಕ್ಟ್ ಹಿಡಿದು ಡ್ಯೂಪ್ಲೆಕ್ಸ್ ಮನೆ ಅಥವಾ ಸ್ವಲ್ಪ ವಿಭಿನ್ನವಾದ ಮನೆ ಬೇಕು ಎಂದು ಚಿಂತನೆ ನಡೆಸಿ, ಸುಂದರವಾದ ಡಿಸೈನ್‌ಗಳನ್ನು ತಯಾರಿಸಿಕೊಳ್ಳುತ್ತಾರೆ. ಈ ರೀತಿಯ ಮನೆಗಳ ಖರ್ಚು ನಾನು ಹಿಂದೆ ಹೇಳಿದ ವಿಧಾನಕ್ಕಿಂತ ಸ್ವಲ್ಪ ಹೆಚ್ಚಾಗುತ್ತದೆ. ಇನ್ನು ಅತಿಯಾಗಿ ಖರ್ಚು ಮಾಡಲು ತಯಾರಿರುವವರ ಕಥೆ ಇಲ್ಲಿ ಬೇಡ; ಏಕೆಂದರೆ ಅದರಲ್ಲಿ ಮಾಡರ್ನ್ ಮನೆಗೆ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಹಾಕಿಬಿಡುತ್ತಾರೆ. ಅದು ಬಹುಶಃ ಎಂದಿಗೂ 'ಸಸ್ಟೇನಬಲ್' ಆಗಲು ಸಾಧ್ಯವಿಲ್ಲ.

ಇಂದಿನ ದಿನಗಳಲ್ಲಿ ಕನ್ಸ್ಟ್ರಕ್ಷನ್ ಇಂಡಸ್ಟ್ರಿಯಲ್ಲಿ ಬಳಸುವಷ್ಟು ರಾಸಾಯನಿಕ ಹಾಗೂ ವಿಷಕಾರಿ ಮೆಟೀರಿಯಲ್ಲುಗಳು ಬಹುಶಃ ಇನ್ನೆಲ್ಲೂ ಬಳಕೆಯಾಗುತ್ತಿಲ್ಲ! ನೀವು ಕಟ್ಟುವ ಮನೆಯಲ್ಲಿ ಅದೆಷ್ಟು ವಿಷಕಾರಿ ರಾ ಮೆಟೀರಿಯಲ್ಲುಗಳು ಬಿದ್ದಿರುತ್ತವೆ ಎಂಬುದು ಮನೆ ಕಟ್ಟಿಸುವಾಗ ಮಾತ್ರ ತಿಳಿಯುತ್ತದೆ. ಉದಾಹರಣೆಗೆ, ಟೈಲುಗಳ ನಡುವೆ ಹಾಕುವ 'ಗ್ರೌಟ್' ಎಂಬ ಸಾಮಗ್ರಿ. ಮುಂಚಿನ ಕಾಲದಲ್ಲಿ ಗಾರೆ ಎಳೆದು ಮುಗಿಸುತ್ತಿದ್ದರು. ದೇವಸ್ಥಾನಗಳಲ್ಲಿ ಕಲ್ಲುಗಳ ನಡುವೆ ಹಾಕಿರುವ ಗಾರೆಯನ್ನು ನೋಡಿದರೆ, 200-300 ವರ್ಷಗಳಾದರೂ ಅದು ಹೊರಬಂದಿಲ್ಲದಿರುವುದು ಕಾಣಸಿಗುತ್ತದೆ. ಆದರೆ ಈಗಿನ ಕಾಲದ ಗ್ರೌಟ್ ಪದೇ ಪದೇ ಹೊರಬರುತ್ತಲೇ ಇರುತ್ತದೆ; ಅದನ್ನು ಮತ್ತೆ ಮತ್ತೆ ಹಾಕಿಸುತ್ತಲೇ ಇರಬೇಕು. ಈ ಗ್ರೌಟ್ ಸಿಂಥೆಟಿಕ್ ರೆಸಿನ್‌ನಿಂದ ಮಾಡಲ್ಪಡುತ್ತದೆ. ಇದೇ ರೀತಿಯ ಹಲವು ವಿಷಕಾರಿ ಕಚ್ಚಾ ವಸ್ತುಗಳು ಕ್ಯಾನ್ಸರ್ ಪಿಡುಗನ್ನು ಹೆಚ್ಚಿಸಿರುವ ಸಾಧ್ಯತೆಗಳು ಇವೆ.

ನಾನು ಕೊಲ್ಲಾಪುರದ ಬಳಿಯ ಒಂದು ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಅಲ್ಲಿ ಗ್ರೌಟ್ ಹಾಕಲೆಂದೇ ಒಂದು ತಂಡವನ್ನು ನೇಮಿಸಿಬಿಟ್ಟಿದ್ದರು! ನಾನು ಅದರ ಮಾಲೀಕರ ಬಲಗೈ ಬಂಟನಂತಿದ್ದ ಡ್ರೈವರ್‌ಗೆ, "ಸರಿ, ಇವರು ಇಲ್ಲಿ ಕೆಲಸ ಮುಗಿಸಿದ ತಕ್ಷಣ ಮುಂದೇನು?" ಎಂದು ಕೇಳಿದೆ. ಅದಕ್ಕವರು, "ಸಾರ್, ನಮ್ಮದು ಹತ್ತಾರು ಕಟ್ಟಡಗಳಿವೆ. ಇಲ್ಲಿ ಮುಗಿದ ತಕ್ಷಣ ಮತ್ತೊಂದು ಕಟ್ಟಡಕ್ಕೆ ಹೋಗುತ್ತಾರೆ. ವರ್ಷವಿಡೀ ಇವರಿಗೆ ಗ್ರೌಟ್ ಹಾಕುವುದೇ ಕೆಲಸ!" ಎಂದರು. ನನಗೆ ಆಶ್ಚರ್ಯವಾಯಿತು.

ಇದೇ ಕಾರಣಕ್ಕಾಗಿ ನಾನು ನಮ್ಮ ಹೊಸ ಕಟ್ಟಡದಲ್ಲಿ ಟೈಲುಗಳ ನಡುವೆ ಗ್ರೌಟ್ ಹಾಕಿಸಲಿಲ್ಲ. ನಮ್ಮ ಟೈಲ್ ಕೆಲಸ ಮಾಡುವ ತಿರುಮೊಗಂಗೆ, "ತಿರುಮೊಗಂ, ಟೈಲುಗಳ ನಡುವೆ ಬರಿಯ ಸಿಮೆಂಟ್ ಹಾಕಿ ಜೋಡಿಸಬಹುದೇ?" ಎಂದು ಕೇಳಿದೆ. ತಮಿಳುನಾಡಿನವನಾದ ತಿರುಮೊಗಂ, ದೇವಸ್ಥಾನಗಳಲ್ಲಿ ಕೆಲಸ ಮಾಡಿದ ಶ್ರೇಷ್ಠ ಕಲ್ಲಿನ ಕೆಲಸ ಮಾಡುವ ಕುಟುಂಬದಿಂದ ಬಂದವನು. ಇವನಿಗೆ ಅಸಾಧ್ಯವೆನ್ನುವುದು ಯಾವುದೂ ಇಲ್ಲ; ಆದರೆ ಯಾರಾದರೂ ಕೆಲಸ ಚೆನ್ನಾಗಿ ಆಗಿಲ್ಲ ಎಂದರೆ ಬಹಳ ದಿನ ಬೇಸರ ಮಾಡಿಕೊಂಡು ಕುಳಿತುಬಿಡುತ್ತಾನೆ. ಇವನ ಕೂಲಿ ಕಡಿಮೆಯೇನೂ ಇಲ್ಲ, ಆದರೆ ಅವನು ಮಾಡುವ ಕೆಲಸ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಹೀಗಾಗಿ ಕೆಲಸಕ್ಕೆ ತಕ್ಕಂತೆ ಸಂಭಾವನೆ ಬಯಸುತ್ತಾನೆ. ನನಗಂತೂ ಇವನಿಗೆ ಕೊಟ್ಟ ದುಡ್ಡು ವೃಥಾ ಖರ್ಚಾಯಿತು ಎಂದು ಅನಿಸಲೇ ಇಲ್ಲ. ಏಕೆಂದರೆ ಯಾವುದಾದರೂ ಒಂದು ಕೆಲಸ ಸರಿಯಾಗಿ ಆಗಿಲ್ಲವೆಂದರೆ, ಅದನ್ನು ತೆಗೆದು ಬೇಸರಿಸದೆ ಮತ್ತೊಮ್ಮೆ ನೀಟಾಗಿ ಮಾಡಿಕೊಡುತ್ತಾನೆ. ಸ್ವಲ್ಪ ಮೆಟೀರಿಯಲ್ ಹಾಳಾಗಬಹುದು, ಆದರೆ ಕೊನೆಗೆ ಕೆಲಸ ಸರಿಯಾಗಿ ಮಾಡಿಕೊಡುವ ಜವಾಬ್ದಾರಿ ಅವನದ್ದು. ಆದಷ್ಟು ಹತ್ತಿರ ನಿಂತು ನೋಡಿಕೊಳ್ಳುತ್ತಿದ್ದರೆ ಕೆಲಸ ಪರ್ಫೆಕ್ಟ್ ಆಗಿ ಮುಗಿಯುತ್ತದೆ.

ನಾನು ಹೇಳಿದಂತೆ, ನಾವು ಬಳಸಿದ ಮಣ್ಣಿನ ಟೈಲುಗಳ ನಡುವೆ ಬರಿಯ ಸಿಮೆಂಟ್ ಹಾಕಿ ಕೆಲಸ ಮುಗಿಸಿಯೇ ಬಿಟ್ಟ ತಿರುಮೊಗಂ! ಅಲ್ಲಿಗೆ ನಮ್ಮದೊಂದು 'ಸಸ್ಟೈನಬಲ್ ಮೈಲ್ಸ್ಟೋನ್' ತಲುಪಿದಂತಾಯಿತು. ವಿಶೇಷವೆಂದರೆ, ನಮ್ಮ ಮನೆಯಿಂದ ಹತ್ತಾರು ಕಿಲೋಮೀಟರ್ ದೂರದಲ್ಲೇ ಪಿಡಿಲೈಟ್ ಕಂಪನಿಯವರ ವಿವಾದಾತ್ಮಕ ಸಿಂಥೆಟಿಕ್ ಗ್ರೌಟ್‌ಗಳ ಫ್ಯಾಕ್ಟರಿ ಇದೆ! ವಿವಾದಾತ್ಮಕ ಎಂದು ಯಾಕೆ ಹೇಳುತ್ತೇನೆಂದರೆ, ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಈ ಫ್ಯಾಕ್ಟರಿ ಅಲ್ಲಿ ಶುರುವಾಗುವುದು ಇಷ್ಟವಿರಲಿಲ್ಲ. ಫ್ಯಾಕ್ಟರಿ ಶುರುವಾಗಿದ್ದೇ ತಡ, ಇಡೀ ದಕ್ಷಿಣ ಭಾರತಕ್ಕೆ ಗ್ರೌಟ್‌ಗಳು ತಯಾರಾಗಿ ತಲುಪುವ ಕೆಲಸವೂ ಆರಂಭವಾಯಿತು. ನಾವು ಮಾತ್ರ ಅಲ್ಲಿಂದ ಬರುವ ಗ್ರೌಟ್ ಬಳಸಲಿಲ್ಲ!

ಸಸ್ಟೈನಬಲ್ ಮನೆ ಕಟ್ಟುವುದು ಎಷ್ಟು ಸವಾಲಿನದ್ದು ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ; ಹೀಗೆ ಹೇಳುವುದಕ್ಕೆ ನೂರಾರು ವಿಷಯಗಳಿವೆ. ಇದೇ ಕಾರಣಕ್ಕೆ ಇವತ್ತು ನಮ್ಮ ಕಟ್ಟಡಕ್ಕೆ ಬಂದಿದ್ದ ಡಾಕ್ಟರ್‌ ಕೇಳಿದ ಪ್ರಶ್ನೆಗೆ, "ಈ ವಿಷಯವಾಗಿ ನಮ್ಮಿಬ್ಬರಿಗೂ ಬಿಡುವಿದ್ದಾಗ ಕುಳಿತು ನಿಧಾನವಾಗಿ ಮಾತನಾಡೋಣ" ಎಂದು ಹೇಳಿದೆ.

ಸಸ್ಟೈನಬಲ್ ಮನೆ ಕಟ್ಟುವುದೊಂದು ಸುಂದರ ಕನಸು. ಆದರೆ ಅದರ ಕುರಿತಾಗಿ ಸಂಪೂರ್ಣ ತಿಳಿವಳಿಕೆ ಇಲ್ಲದೆ ಕಾಲಿಟ್ಟರೆ ದುಡ್ಡು ಮತ್ತು ನೆಮ್ಮದಿ ಎರಡನ್ನೂ ಕಳೆದುಕೊಳ್ಳುತ್ತೀರಿ! ಹಾಗೆಂದು "ಇದೆಲ್ಲ ತಲೆನೋವು, ಮಾಮೂಲಿನಂತೆ ಕಟ್ಟೋಣ" ಎಂದು ಹೋಗುವುದನ್ನೂ ನಾನು ಪ್ರೋತ್ಸಾಹಿಸುವುದಿಲ್ಲ. ಯಾಕೆ ಗೊತ್ತಾ? ನಾವು ಕಟ್ಟುವ ಮನೆ ನಮಗಷ್ಟೇ ಅಲ್ಲ, ಮುಂದಿನ ಪೀಳಿಗೆಗೂ ವಿಷರಹಿತ ಜೀವನವನ್ನು ನೀಡಬೇಕು.

ಮನೆ ಕಟ್ಟುವಾಗ ಬಳಸುವ ರಾಸಾಯನಿಕಗಳ ಪಟ್ಟಿ ಮಾಡುತ್ತಾ ಹೋದರೆ ಅದೊಂದು ದೊಡ್ಡ ಪುಸ್ತಕವೇ ಆಗುತ್ತದೆ—ಹಚ್ಚುವ ಪೇಂಟ್, ಲಪ್ಪಾ, POP ಫಾಲ್ ಸೀಲಿಂಗ್, ವಾರ್ನಿಷ್, ಪೇಂಟ್‌ಗಳು ಹಾಗೂ ಬಳಸುವ ಅಂಟುಗಳು... ಇವೆಲ್ಲವೂ ಪಾಲಿಮರ್‌ಗಳನ್ನು ಒಳಗೊಂಡ ಸಾಮಗ್ರಿಗಳು! ಇದೆಲ್ಲದರ ಕುರಿತು ಮತ್ತೊಮ್ಮೆ ಬರೆಯುವೆ, ಇವತ್ತಿಗೆ ಇಷ್ಟಿರಲಿ.

ಸಸ್ಟೈನಬಲ್ ಮನೆ ಕಟ್ಟುವ ಕನಸನ್ನು ಕಟ್ಟಿಕೊಂಡಿದ್ದರೆ ಅದನ್ನು ಬಿಡಬೇಡಿ; ಆದರೆ ಎಲ್ಲವನ್ನು ತಿಳಿದುಕೊಂಡು ಹೆಜ್ಜೆ ಇಡಿ. ಮಾಮೂಲಿಯಾಗಿ ಮನೆ ಕಟ್ಟುವುದು ನಿಮ್ಮ ಜೀವಮಾನಕ್ಕೆ ಸಾಕಾಗುವ ಒಂದು ಮನೆಯಾಗಬಹುದು ಅಷ್ಟೇ. ಆ ರೀತಿಯ ಮನೆ ಮೇಂಟೆನೆನ್ಸ್‌ಗಾಗಿ ಸಿಕ್ಕಾಪಟ್ಟೆ ಖರ್ಚು ಮಾಡಿಸುತ್ತದೆ!

ಹೀಗಾಗಿ ಸರಿಯಾಗಿ ಯೋಚನೆ ಮಾಡಿ, ತಿಳಿದುಕೊಂಡು ನಿರ್ಧಾರ ತಗೊಳ್ಳಿ. ಮುಂದಿನ ಕಂತುಗಳಲ್ಲಿ ಇನ್ನಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತೇನೆ.