ಪಾದಚಾರಿ ಮಾರ್ಗವಿಲ್ಲದ ರಸ್ತೆಯಲ್ಲಿ ತಂದೆಯೊಡನೆ ಹೊರಟಿದ್ದ ಐದು ವರ್ಷದ ಬಾಲಕನೊಬ್ಬ ಟ್ರಕ್ಗೆ ಬಲಿಯಾದ ಕರುಣಾಜನಕ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ''ಗುರುತಿಸಲಾದ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಸಂವಿಧಾನದ ವಿಧಿ ೧೯ ಮತ್ತು ೨೧ರ ಅಡಿಯಲ್ಲಿ ರಕ್ಷಿಸಲಾದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು,'' ಎಂದು ಅತ್ಯಂತ ಸ್ಪಷ್ಟವಾಗಿ ತಿಳಿಹೇಳಿದೆ. ವಾಹನಗಳ ಭರಾಟೆಯಲ್ಲಿ ಮನುಷ್ಯನ ಜೀವಕ್ಕೆ, ಆತನ ಹೆಜ್ಜೆಗೆ ಬೆಲೆಯೇ ಇಲ್ಲದಂತಾಗಿರುವ ಇಂದಿನ ನಗರ ಯೋಜನೆಗಳ ಕರಾಳ ಮುಖವನ್ನು ನ್ಯಾಯಪೀಠವು ನಿರ್ದಾಕ್ಷಿಣ್ಯವಾಗಿ ವಿಮರ್ಶಿಸಿದೆ. ಎಲ್ಲಿ ರಸ್ತೆ ಇರುತ್ತದೆಯೋ, ಅಲ್ಲಿಪಾದಚಾರಿ ಮಾರ್ಗ ಇರಲೇಬೇಕು; ಅದನ್ನು ನಿರ್ಮಿಸಿ, ನಿರ್ವಹಿಸಿ, ಜನರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವುದು ಸ್ಥಳೀಯ ಆಡಳಿತಗಳ ಕಡ್ಡಾಯ ಜವಾಬ್ದಾರಿ ಎಂದು ನ್ಯಾಯಾಲಯ ಎಚ್ಚರಿಸಿದೆ. ಇಂದಿನ ನಗರಾಭಿವೃದ್ಧಿ ಎಂದರೆ ಕೇವಲ ಪ್ರೈಓವರ್ಗಳು, ಅಂಡರ್ಪಾಸ್ಗಳ ನಿರ್ಮಾಣ ಎಂಬ ಭ್ರಮೆಗೆ ಆಡಳಿತ ವ್ಯವಸ್ಥೆ ಸಿಲುಕಿರುವುದರಿಂದ, ರಸ್ತೆ ಅಗಲೀಕರಣದ ನೆಪದಲ್ಲಿ ಮೊದಲ ಬಲಿಯಾಗುತ್ತಿರುವುದೇ ಪಾದಜಾರಿ ಮಾರ್ಗಗಳು ಎಂಬಂಥ ಸ್ಥಿತಿ ದೇಶದುದ್ದಗಲವಿದೆ.
ಈಗಿನ ನಗರಗಳ ದುಸ್ಥಿತಿಯನ್ನು ನೋಡಿದಾಗ, ಶತಮಾನದ ಹಿಂದಿನ ನಮ್ಮದೇ ನೆಲದ ದೂರದೃಷ್ಟಿಯ ನಾಯಕರು ನೆನಪಾಗುತ್ತಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನಲ್ಲಿ ೧೦೦ ಅಡಿ ಅಗಲದ ರಸ್ತೆಗಳನ್ನು ನಿರ್ಮಿಸುವಾಗಲೇ, ವಾಹನಗಳಿಗಿಂತ ಮನುಷ್ಯನಿಗೆ ಹೆಚ್ಚಿನ ಆದ್ಯತೆ ನೀಡಿ, ಪಾದಚಾರಿಗಳಿಗಾಗಿ ಅತ್ಯಂತ ವಿಶಾಲವಾದ ಪಥವನ್ನು ರೂಪಿಸಿದ್ದರು. ಆದರೆ, ಆ ಕಾಲದ ಆಡಳಿತಗಾರರಿಗಿದ್ದ ಜನಪರ ಕಾಳಜಿಯನ್ನು ಇಂದಿನ ವ್ಯವಸ್ಥೆ ಮರೆತಂತಿದೆ. ವಾಹನ ದಟ್ಟಣೆ ಕಡಿಮೆ ಮಾಡುವ ನೆಪದಲ್ಲಿ ಉಳಿದುಕೊಂಡಿರುವ ಪುಟ್ಟಪಾದಚಾರಿ ಮಾರ್ಗಗಳೂ ಅತಿಕ್ರಮಣಕ್ಕೋ ಅಥವಾ ಒತ್ತುವರಿಗೋ ಬಲಿಯಾಗಿವೆ. ಪರಿಣಾಮವಾಗಿ, ಮಕ್ಕಳು, ವೃದ್ಧರು, ಗರ್ಭಿಣಿಯರು ರಸ್ತೆಯ ಬದಿಯಲ್ಲಿ ಜೀವ ಕೈಯಲ್ಲಿ ಹಿಡಿದು ವಾಹನಗಳ ನಡುವೆಯೇ ನಡೆಯುವಂಥ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗರಿಕರಿಗೆ ನೆಮ್ಮದಿಯಿಂದ ಕಾಲಿಡಲು ಜಾಗ ನೀಡದಿರುವುದು ಆಡಳಿತ ಯಂತ್ರದ ಅಮಾನವೀಯತೆಗೆ ಸಾಕ್ಷಿಯಾಗಿದೆ.
ಪಾದಚಾರಿ ಮಾರ್ಗಗಳಿಲ್ಲದ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ಅಥವಾ ಮೂಲಭೂತ ಹಕ್ಕಿನ ಉಲ್ಲಂಘನೆಯಾದರೆ, ಅದಕ್ಕೆ ನೇರವಾಗಿ ಸ್ಥಳೀಯ ಆಡಳಿತದ ಅಧಿ ಕಾರಿಗಳೇ ಹೊಣೆಗಾರರಾಗುತ್ತಾರೆ ಮತ್ತು ಅವರಿಂದಲೇ ಪರಿಹಾರ ವಸೂಲಿ ಮಾಡಬಹುದು ಎಂಬ ಸುಪ್ರೀಂ ಕೋರ್ಟಿನ ನಿಲುವು ನಿಜಕ್ಕೂ ನ್ಯಾಯಯುತ. ನಗರಗಳು ಇರುವುದು ಮನುಷ್ಯರ ಬದುಕಿಗಾಗಿ ಮತ್ತು ಅವರ ಸುರಕ್ಷಿತ ಓಡಾಟಕ್ಕಾಗಿಯೇ ಹೊರತು, ಕೇವಲ ಯಂತ್ರಗಳ ಓಟಕ್ಕಲ್ಲ ಎಂಬ ಕಣ್ಣೆರೆಸುವ ಸಂಗತಿಯನ್ನು ಈ ತೀರ್ಪು ಎತ್ತಿ ಹಿಡಿದಿದೆ. ಈ ಸಂದರ್ಭದಲ್ಲಿ ಸಾಹಿತಿ ಡಾ. ಯು.ಆರ್. ಅನಂತಮೂರ್ತಿಯವರು ಒಮ್ಮೆ ಸುಸ್ಥಿರ ಅಭಿವೃದ್ಧಿಯ ಕುರಿತು ಆಡಿದ ಮಾತೊಂದು ನೆನಪಾಗುತಿದೆ: "ಅಭಿವೃದ್ಧಿಯೆಂದರೆ ಗಂಟೆಗೆ ನೂರಾರು ಕಿ.ಮೀ. ವೇಗದಲ್ಲಿ ಚಲಿಸುವ ರಸ್ತೆಗಳನ್ನು ನಿರ್ಮಿಸುವುದಲ್ಲ; ಯಾವ ನಗರದ ಮಾರ್ಗದಲ್ಲಿ ಪಾದಚಾರಿ ನಿರ್ಭೀತನಾಗಿ ನಡೆಯುತ್ತಾನೋ, ಅದೇ ನೈಜ ಅಭಿವೃದ್ಧಿ''! ಈ ಮಾತು ಪ್ರಸ್ತುತವಾಗುವುದು ಎಂದು? ಕಡೇಪಕ್ಷ ಸುಪ್ರೀಂ ಕೋರ್ಟ್ ಈಗ ಬೀಸಿದ ಚಾಟಿಯಿಂದಲಾದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು, ಮನುಷ್ಯನ ನಿರ್ಭೀತ ಹೆಜ್ಜೆಗೆ ಬೆಲೆ ಕೊಡುವ ಮೂಲಕ ನೈಜ ಅಭಿವೃದ್ಧಿಯತ್ತ ಮುಖ ಮಾಡಬೇಕಿದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೦-೦೬-೨೦೨೬
ಚಿತ್ರ ಕೃಪೆ: AI ನಿರ್ಮಿತ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!