ಸಾಗುವಾನಿ, ಬೀಟಿ, ಓಕ್, ಮೇಪಲ್ ಇತ್ಯಾದಿ ಕೆಲವು ಮರಗಳ ಮೋಪು ಗಡಸುತನಕ್ಕೆ ಹೆಸರುವಾಸಿ. ಆದರೆ, ವಿಜ್ಞಾನಿಗಳ ಅನುಸಾರ, ಸರಳ ಹಾಗೂ ತೀರಾ ಕಡಿಮೆ ವೆಚ್ಚದ ಕೆಲವು ಪ್ರಕ್ರಿಯೆಗಳ ಮೂಲಕ ಯಾವುದೇ ಮರದ ಮೋಪನ್ನು ಉಕ್ಕಿಗಿಂತ ಗಡುಸು ಆಗಿಸಬಹುದು. ಇದನ್ನು ಕಟ್ಟಡ ಮತ್ತು ವಾಹನಗಳ ನಿರ್ಮಾಣಕ್ಕೆ ಬಳಸಬಹುದು. ಮಾತ್ರವಲ್ಲ, ಮನುಷ್ಯರ ಬುಲೆಟ್-ನಿರೋಧಕ ರಕ್ಷಾಕವಚದ ತಯಾರಿಗೂ ಬಳಸಬಹುದು!
ಕಬ್ಬಿಣದ ಅದುರಿಗೆ ಹೋಲಿಸಿದಾಗ ಮರಗಳ ಮೋಪು ಬೇಕಾದಷ್ಟು ಲಭ್ಯವಿದೆ. ಸಾವಿರಾರು ವರುಷಗಳಿಂದ ಕಟ್ಟಡಗಳು, ಮನೆಗಳು, ಪೀಠೋಪಕರಣಗಳು, ಕೃಷಿ ಉಪಕರಣಗಳು ಇತ್ಯಾದಿ ಹತ್ತುಹಲವು ಉದ್ದೇಶಗಳಿಗೆ ಮರಗಳ ಮೋಪು ಬಳಕೆಯಾಗುತ್ತಿದೆ. ಅದೇನಿದ್ದರೂ, ಕಟ್ಟಡ ನಿರ್ಮಾಣದಲ್ಲಿ ಬಳಸುವ ಲೋಹಗಳಿಗೆ ಹೋಲಿಸಿದಾಗ ಪರಿಷ್ಕರಣೆಗೆ ಒಳಗಾಗದ ಮೋಪಿನ ಗಡಸುತನ ಕಡಿಮೆ.
ಸಂಶೋಧಕರು ಹಲವು ಶತಮಾನಗಳಿಂದ ಮೋಪನ್ನು ಒತ್ತಿ (ಕಂಪ್ರೆಸ್) ಅದರ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದೆನ್ನುತ್ತಾರೆ ಕಾಲೇಜ್ ಪಾರ್ಕಿನ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಮೆಟೀರಿಯಲ್ ವಿಜ್ಞಾನಿ ಲಿಯಾಂಗ್ಬಿಂಗ್ ಹು. ಆದರೆ, ಹಾಗೆ ಪರಿವರ್ತಿಸಿದ ಮೋಪು ಮುಖ್ಯವಾಗಿ ತೇವಾಂಶಭರಿತ ಹವಾಮಾನದಲ್ಲಿ ದುರ್ಬಲವಾಗಿ, ಮುಂಚಿನ ಅಳತೆ ಮತ್ತು ಆಕಾರ ಮತ್ತೆ ಪಡೆಯುತ್ತದೆ ಎಂಬುದೇ ಸಮಸ್ಯೆ ಎನ್ನುತ್ತಾರೆ ಅವರು.
ಇದೀಗ ಹು ಮತ್ತು ಅವರ ಸಂಗಡಿಗರು ಮೋಪನ್ನು ಕಂಪ್ರೆಸ್ ಮಾಡಲು ಹೊಸ ವಿಧಾನವೊಂದನ್ನು ಅಭಿವೃದ್ಧಿ ಪಡಿಸಿದ್ದು, ಅದನ್ನು “ನೇಚರ್" ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಆ ವಿಧಾನ ಹೀಗಿದೆ: ಮೊದಲಾಗಿ, ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಸೋಡಿಯಂ ಸಲ್ಫೈಟ್ ದ್ರಾವಣದಲ್ಲಿ ಮೋಪನ್ನು ಕುದಿಸಬೇಕು. ಕಾಗದ ತಯಾರಿಗಾಗಿ ಮರಗಳ ಪಲ್ಪನ್ನು ಮೊದಲ ಹಂತದಲ್ಲಿ ಹೀಗೇಯೇ ಕುದಿಸಲಾಗುತ್ತದೆ. ಈ ಪ್ರಕ್ರಿಯೆ ಮೋಪಿನ ಕೋಶಭಿತ್ತಿಗಳನ್ನು ಗಡುಸುಗೊಳಿಸುವ ನೈಸರ್ಗಿಕ ಪಾಲಿಮರ್-ಗಳಾದ ಲಿಗ್ನಿನ್ ಮತ್ತು ಹೆಮಿಸೆಲ್ಯೂಲೋಸನ್ನು ಭಾಗಶಃ ತೆಗೆದು ಹಾಕುತ್ತದೆ.
ಎರಡನೆಯ ಹಂತವೂ ಮೊದಲನೆಯ ಹಂತದಂತೆಯೇ ಸರಳ. ಈ ಹಂತದಲ್ಲಿ, ಮೋಪಿನ ಕೋಶಗಳ ಭಿತ್ತಿಗಳು ಕುಸಿದು ಹೋಗುವ ತನಕ ಮೋಪನ್ನು ಒತ್ತಲಾಗುತ್ತದೆ. ಈ ಒತ್ತಡವನ್ನು ಉಳಿಸಿಕೊಂಡು, ಮೋಪನ್ನು ನಿಧಾನವಾಗಿ ಬಿಸಿ ಮಾಡಲಾಗುತ್ತದೆ. ಮೋಪಿನ ಸೆಲ್ಯುಲೋಸಿನ ನ್ಯಾನೋ-ಫೈಬರಿನಲ್ಲಿರುವ ದೊಡ್ಡ ಸಂಖ್ಯೆಯ ಜಲಜನಕ ಪರಮಾಣುಗಳು ಮತ್ತು ಅಕ್ಕಪಕ್ಕದ ಪರಮಾಣುಗಳ ನಡುವೆ ರಾಸಾಯನಿಕ ಬಂಧಗಳ ರಚನೆಯನ್ನು ಆ ಒತ್ತಡ ಮತ್ತು ಉಷ್ಣತೆ ಉತ್ತೇಜಿಸುತ್ತವೆ; ಇದರಿಂದಾಗಿ ಮೋಪಿನ ಶಕ್ತಿ ಗಣನೀಯವಾಗಿ ಹೆಚ್ಚುತ್ತದೆ.
ಇದರಿಂದಾಗಿ, ಈ ಮೋಪಿನ ಶಕ್ತಿಯು ಹೀಗೆ ಪರಿಷ್ಕರಿಸದ ಮೋಪಿನ ಶಕ್ತಿಗಿಂತ ಮೂರು ಪಟ್ಟು ಜಾಸ್ತಿಯಾಗುತ್ತದೆ. ಈ ಮೋಪನ್ನು ಸೀಳಲು ಪ್ರಯತ್ನಿಸಿದರೆ, ಅದು ಹತ್ತು ಪಟ್ಟು ಅಧಿಕ ಪ್ರತಿರೋಧ ಒಡ್ಡುತ್ತದೆ. ಜೊತೆಗೆ, ಇದು ಇಪ್ಪತ್ತು ಪಟ್ಟು ಜಾಸ್ತಿ ಗಡುಸಾಗಿರುತ್ತದೆ. ಆದ್ದರಿಂದ ಇದರ ಸ್ಕ್ರಾಚ್-ನಿರೋಧಕ ಮತ್ತು ಹೊಡೆತ-ನಿರೋಧಕ ಗುಣಗಳೂ ಜಾಸ್ತಿಯಾಗಿರುತ್ತವೆ. ಇದನ್ನು ಯಾವುದೇ ಆಕಾರಕ್ಕೆ ಬಾಗಿಸಬಹುದು. ಇದರ ಇನ್ನೊಂದು ವಿಶೇಷತೆ, ಅಧಿಕ ತೇವಾಂಶ ನಿರೋಧಕ ಗುಣ. ಹೀಗೆ ಪರಿಷ್ಕರಿಸಿದ ಮೋಪನ್ನು ಐದು ದಿನಗಳ ಅವಧಿ ನೀರಿನಲ್ಲಿ ಮುಳುಗಿಸಿ ಇಟ್ಟಾಗಲೂ ಅದರ ಗಾತ್ರ ಕೇವಲ ಶೇಕಡಾ 10ರಷ್ಟು ಹೆಚ್ಚಾಯಿತು. ಆದರೆ, ಪರಿಷ್ಕರಿಸಿದ ಮೋಪಿಗೆ ಒಂದು ಕೋಟಿಂಗ್ ಪೈಂಟ್ ಸವರಿದಾಗ, ಆ ಗಾತ್ರ-ಹೆಚ್ಚಳವೂ ಆಗಲಿಲ್ಲ.
ಫ್ಲೈವುಡ್ನಂತೆ ಪರಿಷ್ಕರಿಸಿದ ಮೋಪಿನ ಐದು-ಪದರಗಳ ಹಾಳೆಗೆ ಕೋವಿಯಿಂದ ಬುಲೆಟ್ ಹೊಡೆದಾಗ, ಆ ಹಾಳೆ ಬುಲೆಟನ್ನು ತಡೆಯಿತು! ಆದ್ದರಿಂದ, ಪರಿಷ್ಕರಿಸಿದ ಮೋಪನ್ನು ಬಳಸಿ ಬುಲೆಟ್-ನಿರೋಧಕ ರಕ್ಷಾಕವಚ ನಿರ್ಮಿಸಬಹುದು ಎನ್ನುತ್ತಾರೆ ಹು.
ಅಷ್ಟೇ ದಪ್ಪದ ಕೆವ್ಲಾರ್ ಹಾಳೆಯಷ್ಟು ಸಮರ್ಥವಾಗಿ ಇದು ರಕ್ಷಣೆ ಒದಗಿಸುವುದಿಲ್ಲ; ಆದರೆ, ಕೆವ್ಲಾರ್ ಹಾಳೆಗೆ ಹೋಲಿಸಿದಾಗ ಇದರ ವೆಚ್ಚ ಅದರ ಶೇಕಡಾ 5ರಷ್ಟು; ಅಂದರೆ, ಪರಿಷ್ಕರಿಸಿದ ಮೋಪು ತೀರಾ ಅಗ್ಗ. (ಕೆವ್-ಲಾರ್ ಹಾಳೆ ಅಂದರೆ ಸಿಂಥೆಟಿಕ್ ಅರಾಮಿಡ್ ಫೈಬರುಗಳಿಂದ ತಯಾರಿಸಿದ ಕಾಂಪೋಸಿಟ್ ಬೋರ್ಡ್. ತೂಕ ಮತ್ತು ಬಲದ ಅನುಪಾತದಲ್ಲಿ ಇದು ಉಕ್ಕಿನ ಹಾಳೆಗಿಂತ ಐದು ಪಟ್ಟು ಜಾಸ್ತಿ ಬಲಶಾಲಿ.)
ಈ ವಿಧಾನದಲ್ಲಿ ಪರಿಷ್ಕರಿಸಿದ ಮೋಪು ಹಗುರ ತೂಕದ ವಸ್ತುಗಳ ತಯಾರಿಗೆ ಸೂಕ್ತ. ಉದಾಹರಣೆಗೆ, ವಾಹನಗಳ ಉತ್ಪಾದಕರು ವಾಹನಗಳ ತೂಕ ಕಡಿಮೆ ಮಾಡಲಿಕ್ಕಾಗಿ ಹಗುರ ತೂಕದ ವಸ್ತುಗಳ ಹುಡುಕಾಟದಲ್ಲಿದ್ದಾರೆ. ಸಾಧಾರಣ ಉಕ್ಕಿನ ಬದಲಾಗಿ, ಅಧಿಕ-ಶಕ್ತಿಯ ಉಕ್ಕು, ಅಲ್ಯುಮಿನಿಯಮ್ ಅಲಾಯ್ ಅಥವಾ ಕಾರ್ಬನ್ ಫೈಬರ್ ಅನ್ನು ಬಳಸಲು ಅವರು ಪ್ರಯತ್ನಿಸಿದ್ದಾರೆ. ಆದರೆ, ಇವೆಲ್ಲ ಬದಲಿ ವಸ್ತುಗಳು ದುಬಾರಿ. ಆದ್ದರಿಂದ ಅವು ವಾಹನ ಉತ್ಪಾದಕರಿಗೆ ಸೂಕ್ತವಲ್ಲ.
ಈ ಪರಿಷ್ಕರಿಸಿದ ಮೋಪನ್ನು ಪಾರದರ್ಶಕವಾಗಿ ಮಾಡುವ ಬಗ್ಗೆ ಸಂಶೋಧನೆಗಳು ಜರಗುತ್ತಿವೆ. ಅದು ಸಾಧ್ಯವಾದರೆ, ಪರಿಷ್ಕರಿಸಿದ ಮೋಪು ಇನ್ನಷ್ಟು ಜನೋಪಯೋಗಿ ಆಗಲಿದೆ.
ಅಂತೂ ಪರಿಷ್ಕರಿಸಿದ ಮೋಪಿನ ಬಳಕೆಯ ಸಾಧ್ಯತೆಗಳು ಬಹಳ. ಮುಂದೊಂದು ದಿನ ನಮ್ಮ ಮನೆಗಳು ಸಂಪೂರ್ಣವಾಗಿ ಇಂತಹ ಪರಿಷ್ಕರಿಸಿದ ಮೋಪಿನಿಂದಲೇ ನಿರ್ಮಾಣವಾದರೆ ಅಚ್ಚರಿಯಿಲ್ಲ - ಮನೆಯ ನೆಲ, ಗೋಡೆಗಳು, ಚಾವಣಿ ಎಲ್ಲವನ್ನೂ ಇದರಿಂದಲೇ ತಯಾರಿಸಲು ಸಾಧ್ಯವಿದೆ. ಜೊತೆಗೆ, ಗ್ಯಾರೇಜಿನಲ್ಲಿರುವ ಕಾರಿನ ಚಾಸಿಸ್ ಮತ್ತು ಬಂಪರ್ ಕೂಡ ಪರಿಷ್ಕರಿಸಿದ ಮೋಪಿನಿಂದಲೇ ತಯಾರಾಗಬಹುದು!
ಪ್ರಾತಿನಿಧಿಕ ಫೋಟೋ: ಮರದ ದಿಮ್ಮಿಗಳು … ಕೃಪೆ:ಐಸ್ಟೋಕ್ ವೆಬ್-ಸೈಟ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!