ಒಬ್ಬ ಅಪ್ಪ ತನ್ನ ಕುಟುಂಬಕ್ಕಾಗಿ ಹಗಲು-ರಾತ್ರಿ ದುಡಿಯುತ್ತಲೇ ಇದ್ದ. ತನ್ನ ಹೆಂಡತಿಗೂ, ತನ್ನ ಮಗುವಿಗೂ ಸಮಯ ನೀಡದೆ ನಿರಂತರವಾಗಿ ದುಡಿಯುತ್ತಿದ್ದ, ಹೀಗೆ ಒಂದು ದಿನ ಅವನ ಪುಟ್ಟ ಮಗಳು ಬಂದು, ‘ಅಪ್ಪ, ನೀನು ಇಷ್ಟೆಲ್ಲಾ ನಮಗಾಗಿ ಹಗಲೂ ರಾತ್ರಿ ಎನ್ನದೆ ದುಡಿತಾ ಇದ್ದಿಯಲ್ಲಪ್ಪ? ಹಾಗಾದರೆ ನೀನು ಒಂದು ಗಂಟೆಗೆ ಎಷ್ಟು ಹಣ ಸಂಪಾದನೆ ಮಾಡುತ್ತೀಯಾ?' ಎಂದು ಕೇಳಿದಳು.

ಆ ಪುಟ್ಟ ಮಗುವಿನ ಮಾತನ್ನು ಕೇಳಿದ ಅವಳಪ್ಪ ಹೆಮ್ಮೆಯಿಂದ ಗಂಟೆಗೆ ನಾನು 100-150 ರು.ದುಡಿಯುತ್ತೇನೆ ಮಗಳೇ ಎಂದು ಖುಷಿಯಿಂದ ಹೇಳಿದ. ಅದಕ್ಕೆ ಆ ಮಗು ತಕ್ಷಣವೇ ಎದ್ದು ಓಡಿ ಹೋಗಿ ಗೋಲಕವನ್ನು (ಹುಂಡಿ) ತೆಗೆದುಕೊಂಡು ಬಂದು ಅದನ್ನು ಹೊಡೆದು, ಕೂಡಿಸಿ ಇಟ್ಟಿದ್ದ ಎಲ್ಲಾ ಹಣವನ್ನು ಜೋಡಿಸಿ, ಎಣಿಸಿ ಅಪ್ಪ ಅಪ್ಪ ಇದರಲ್ಲಿ 200 ರು. ಇದೆ. ನೀನು ಒಂದು ಗಂಟೆಗೆ ದುಡಿಯುವುದಕ್ಕಿಂತ ಸ್ವಲ್ಪ ಜಾಸ್ತಿನೇ ಇದೆ. ಇದನ್ನು ತಗೊಂಡು ನನಗೆ ಅಂತ ನಿನ್ನ ಒಂದು ಗಂಟೆ ಟೈಮ್ ಕೊಡಪ್ಪ' ಅಂತ. ಕೇಳಿದಾಗ ಮಗು ಏನು ಮಾಡುತ್ತಿದೆ? ಎಂದು ಕುತೂಹಲದಿಂದ ನೋಡುತ್ತಿದ್ದ ಅವನ ಕಂಗಳು ದಿಢೀರನೆ ಒದ್ದೆಯಾಗಿಬಿಟ್ಟವು.

ಈ ಘಟನೆಯಲ್ಲಿ ಬರುವ ಅಪ್ಪನ ಪಾತ್ರವನ್ನು ಈ ಲೇಖನವನ್ನು ಓದುತ್ತಿರುವ ನಾವು ಎಂದು ಕಲ್ಪಿಸಿಕೊಳ್ಳೋಣ, ಹಾಗೆಯೇ ಈ ಕಥೆಯಲ್ಲಿ ಬರುವ ಆ ಅಪ್ಪನ ಪುಟ್ಟ ಮಗಳನ್ನು ನಮ್ಮ ತಂದೆ-ತಾಯಿ, ಅಕ್ಕ-ತಮ್ಮ ಅಣ್ಣ-ತಂಗಿ, ಮಗಳು-ಹೆಂಡತಿ, ಮಗ-ಅಪ್ಪ, ಆತ್ಮೀಯ ಸ್ನೇಹಿತರು-ಸ್ನೇಹಿತೆಯರು ಹೀಗೆ ಒಟ್ಟಾರೆಯಾಗಿ ನಮ್ಮ ಪ್ರೀತಿಪಾತ್ರರು ಎಂದು ಎಂದು ಕಲ್ಪಿಸಿಕೊಳ್ಳೋಣ. ಈ ಕಥೆ ಓದುವಾಗಲೇ ನಮಗೊಂದು ಪ್ರಶ್ನೆ ಮೂಡುತ್ತದೆ, 'ನನ್ನ ಪ್ರೀತಿಪಾತ್ರರಿಗೆ ನಾನೆಷ್ಟು ಸಮಯ ಕೊಡುತ್ತಿದ್ದೇನೆ' ಖಂಡಿತವಾಗಿಯೂ ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳುವಂತಹ ಸಮಯ ಅನಿವಾರ್ಯವಾಗಿ ಈಗ ಬಂದುಬಿಟ್ಟಿದೆ. 'ಪ್ರಸ್ತುತ, ಯಾಂತ್ರಿಕ ಜೀವನದಲ್ಲಿ ದುಡ್ಡು-ದುಡ್ಡು ಅಂತ ನಾವೆಲ್ಲರೂ ಓಡುತ್ತಲೇ ಇದ್ದೇವೆ. ಎಲ್ಲಿಗೆ ಓಡುತ್ತಿದ್ದೇವೆ? ಏಕೆ ಓಡುತ್ತಿದ್ದೇವೆ? ಯಾವುದೂ ಗೊತ್ತಿಲ್ಲ, ಒಟ್ಟಿನಲ್ಲಿ ದುಡ್ಡಿನ ಹಿಂದೆ ಕುದುರೆಗಳಂತೆ ಓಡುತ್ತಿದ್ದೇವೆ. ಯಾಕೆ ಎಂದು ಕೇಳಿದರೆ ನಮ್ಮ ಪ್ರೀತಿಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳಲು. ನಮ್ಮ ಹಾಗೂ ನಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಚೆನ್ನಾಗಿ ರೂಪಿಸಲು ಎಂದು ಹೇಳಿಬಿಡುತ್ತೇವೆ. ಹಣವೇ ಎಲ್ಲಕ್ಕೂ ದಾರಿಯಾದರೆ ಆ ಜೀವನವೇ ಯಾಂತ್ರಿಕ ಅಲ್ಲವೇ...?

ಕೊನೆಯದಾಗಿ ನಾವು ಅರ್ಥಮಾಡಿಕೊಳ್ಳಬೇಕಾಗಿರೊದು ಒಂದೇ, ದುಡ್ಡು ಎಲ್ಲದಕ್ಕೂ ಬೇಕು. ಹೊಟ್ಟೆಗೆ-ಬಟ್ಟೆಗೆ ಅಷ್ಟೇ ಅಲ್ಲಾ ಜೀವನದ ಪ್ರತಿ ಮೂಲೆಯನ್ನೂ ಆರಾಮದಾಯಕವಾಗಿ ಜೀವಿಸಲು ಹಣ ಬೇಕೇ ಬೇಕು. ಆದರೆ ಹಣದಿಂದ ಕೆಲವೊಂದನ್ನು ಕೊಂಡುಕೊಳ್ಳಲು ಅಗುವುದಿಲ್ಲ. ಜೀವನವೆಲ್ಲ ದುಡಿದು ದುಡಿದು ಕೋಟ್ಯಂತರ ಹಣ ಸಂಪಾದನೆ ಮಾಡಿ ನಾವು ಸಾಯುವ ಹೊತ್ತಿಗೆ ನಮ್ಮ ಪ್ರೀತಿಪಾತ್ರರು ಸುಖವಾಗಿರಲಿ ಎಂದು ಆ ಹಣವನ್ನೆಲ್ಲಾ ಅವರಿಗೆ ಧಾರೆ ಎರೆದು ಹೊರಟುಬಿಟ್ಟರೆ ಅವರ ಭಾವನೆಗಳನ್ನು ಅರ್ಥೈಸಿಕೊಳ್ಳುವವರ್ಯಾರು?

-ನಾಗೇಂದ್ರ ಶಿವಮೊಗ್ಗ

ಚಿತ್ರ ಕೃಪೆ: ಇಂಟರ್ನೆಟ್ ಜಾಲ