ನವೆಂಬರ್ 2, ನಮ್ಮ ದೇಶದ ಒಬ್ಬ ಖ್ಯಾತ ಸಸ್ಯಶಾಸ್ತ್ರಜ್ಞ, ಮದ್ರಾಸ್ ನ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜಿನ ಸಸ್ಯಶಾಸ್ತ್ರದ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾoಶುಪಾಲರಾಗಿ ದಶಕಗಳ ಕಾಲ ಕರ್ತವ್ಯ ನಿರ್ವಹಿಸುವುದರೊಂದಿಗೆ ಸಾಹಿತ್ಯ ಕೃಷಿ ಕಾಯಕವನ್ನು ಸಹ ಕೈಗೊಂಡು, ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ ಶ್ರೀ ಬಿ ಜಿ ಎಲ್ ಸ್ವಾಮಿಯವರು ನಮ್ಮಿಂದ ಮರೆಯಾದ ದಿನ.

ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿಯವರು 1916 ರ ಫೆಬ್ರವರಿ 5 ರಂದು ಡಿ ವಿ ಗುಂಡಪ್ಪ ಮತ್ತು ಭಾಗೀರಥಮ್ಮ ದಂಪತಿಗಳಿಗೆ ಜನಿಸಿದರು. ಡಿ ವಿ ಜಿ ಯವರ ಏಕಮಾತ್ರ ಪುತ್ರರಾಗಿದ್ದ ಸ್ವಾಮಿಯವರು ಕೇವಲ ಐದು ವರ್ಷದ ಎಳೆಯ ಬಾಲಕನಿದ್ದಾಗಲೇ ಅವರಿಗೆ ಮಾತೃ ವಿಯೋಗವಾಯಿತು. ಸ್ವಾಮಿಯವರು ತಮ್ಮ ಆರಂಭಿಕ ಶಿಕ್ಷಣವನ್ನು ತಮ್ಮ ಕುಟುಂಬವು ವಾಸಿಸುತ್ತಿದ್ದ ಬಸವನಗುಡಿ ಬಡಾವಣೆಯಲ್ಲಿಯೇ ಇರುವ ನ್ಯಾಷನಲ್ ಹೈಸ್ಕೂಲ್ ನಲ್ಲಿ ಪಡೆದರು.

ನಂತರ ಬೆಂಗಳೂರಿನ ಪ್ರತಿಷ್ಠಿತ ಸೆಂಟ್ರಲ್ ಕಾಲೇಜಿಗೆ ಸೇರ್ಪಡೆಯಾದ ಸ್ವಾಮಿಯವರು ಅಲ್ಲಿ ಪದವಿಯ ಹಂತದಲ್ಲಿ ಸಸ್ಯಶಾಸ್ತ್ರವನ್ನು ತಮ್ಮ ಐಚ್ಚಿಕ ವಿಷಯವನ್ನಾಗಿ ಆಯ್ಕೆಮಾಡಿ, 1939 ರಲ್ಲಿ ಬಿ ಎ (ಆನರ್ಸ್) ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪೂರ್ಣಗೊಳಿಸಿದರು. ಬಳಿಕ ಸ್ವಾಮಿಯವರು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(Indian Institute of Science) ಹಾಗೂ ಆಗಷ್ಟೇ ಆರಂಭಗೊಂಡಿದ್ದ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ (Forest Research Institute) ಕೆಲಕಾಲ ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದರು.

ನಂತರ ಮನೆಯನ್ನೇ ಸಸ್ಯಶಾಸ್ತ್ರ ಸಂಶೋಧನಾಲಯವನ್ನಾಗಿ ಮಾಡಿಕೊಂಡ ಸ್ವಾಮಿಯವರು ಸಾಧಾರಣವಾದ ಉಪಕರಣಗಳನ್ನು ಬಳಸಿಕೊಂಡು, ಸಂಶೋಧನೆಯನ್ನು ಕೈಗೊಂಡು, ಅನೇಕ ಸಂಶೋಧನಾ ಲೇಖನಗಳನ್ನು ಬರೆದರು ಹಾಗೂ ಅವು ಹೊರದೇಶಗಳಲ್ಲೂ ಪ್ರಕಟವಾದವು. 1947 ರಲ್ಲಿ ಅವರು ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಡಿ.ಎಸ್ಸಿ ಪದವಿಯನ್ನು ಪಡೆದರು.

ಅದೇ ವರ್ಷ ಅಮೆರಿಕದಲ್ಲಿ ವಿಶ್ವವಿಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜಗತ್ಪ್ರಸಿದ್ಧ ಸಸ್ಯವಿಜ್ಞಾನಿ ಪ್ರೊಫೆಸರ್ ಇರ್ವಿಂಗ್ ಬೈಲಿಯ ಹತ್ತಿರ ಸಸ್ಯಶಾಸ್ತ್ರ ಅಧ್ಯಯನಕ್ಕೆ ಹೋಗಲು ಸ್ವಾಮಿಯವರಿಗೆ ಭಾರತ ಸರ್ಕಾರದ ಆರ್ಥಿಕ ನೆರವು ದೊರೆಯಿತು. ಹತ್ತು ತಿಂಗಳ ಅಧ್ಯಯನದ ನಂತರ ಅವರು ಭಾರತಕ್ಕೆ ಹಿಂದಿರುಗಿದಾಗ ಬೈಲಿ, “ನನ್ನ ನಲವತ್ತು ವರ್ಷಗಳ ಅನುಭವದಲ್ಲಿ ಪೂರ್ವದೇಶಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಸಮರ್ಥರು ಡಾ. ಸ್ವಾಮಿ” ಎಂದು ದಾಖಲಿಸಿದರು. ಅಲ್ಲಿಯವರೆಗೂ ಬೈಲಿ ಯಾರ ಹೆಸರನ್ನೂ ತಮ್ಮ ಸಂಶೋಧನೆಗಳೊಂದಿಗೆ ಸೇರಿಸಿರಲಿಲ್ಲ, ಆದರೆ ಆತ ಸ್ವಾಮಿಯ ಹೆಸರನ್ನು ಸೇರಿಸಿದ್ದು ಮಾತ್ರ ವಿಶೇಷವಾಗಿತ್ತು.

ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಯನ್ನು ಪೂರ್ಣಗೊಳಿಸಿದ ಸ್ವಾಮಿಯವರಿಗೆ ಅಮೇರಿಕಾದ ಹಲವು ವಿಶ್ವವಿದ್ಯಾನಿಲಯಗಳಿಂದ ಆಹ್ವಾನ ಬಂದರೂ ಸಹ ಅವರು ತಮ್ಮ ತಂದೆ ಡಿ ವಿ ಜಿ ಯವರ ಆಶಯದಂತೆ 1950 ರಲ್ಲಿ ಭಾರತಕ್ಕೆ ಹಿಂದಿರುಗಿದರು. ಆದರೆ, ದುರದೃಷ್ಟವಶಾತ್ ಸ್ವದೇಶಕ್ಕೆ ಹಿಂದಿರುಗಿದ ಸ್ವಾಮಿಯವರ ಪ್ರತಿಭೆಯನ್ನು ಗುರುತಿಸಿ ನಮ್ಮ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಅಂದಿನ ಕಾಲಕ್ಕೆ ಯಾವುದೇ ಉದ್ಯೋಗಾವಕಾಶಗಳು ದೊರೆಯಲಿಲ್ಲ ಎಂಬುದು ನಿಜಕ್ಕೂ ಒಂದು ವಿಪರ್ಯಾಸದ ಸಂಗತಿ.

ಈ ಮಧ್ಯೆ ಮದ್ರಾಸ್ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜಿನ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಯಿತು. ಆ ಹುದ್ದೆಗೆ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದರೂ ಸ್ವಾಮಿಯವರು ಅದಕ್ಕೆ ಅರ್ಜಿಯನ್ನು ಸಲ್ಲಿಸಲಿಲ್ಲ. ಆಗ ಸ್ವಾಮಿಯವರ ಪ್ರತಿಭೆಯನ್ನು ಅರಿತಿದ್ದ ಮದ್ರಾಸ್ ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿಗಳಾಗಿದ್ದ ಆರ್ಕಾಟ್ ಲಕ್ಷ್ಮಣಸ್ವಾಮಿ ಮೊದಲಿಯಾರ್ ರವರು ಸ್ವಾಮಿಯವರಿಗೆ ತಾವೇ ಖುದ್ದಾಗಿ ಪತ್ರವೊಂದನ್ನು ಬರೆದು, ಅವರ ಅರ್ಜಿಯನ್ನು ಕಳುಹಿಸುವಂತೆ ಸೂಚಿಸುತ್ತಾರೆ. ಸ್ವಾಮಿಯವರ ಅರ್ಜಿಯು ಮದ್ರಾಸ್ ವಿಶ್ವವಿದ್ಯಾನಿಲಯವನ್ನು ತಲುಪುವ ವೇಳೆಗೆ ಅರ್ಜಿಗಳಿಗೆ ನಿಗದಿಪಡಿಸಿದ್ದ ಕೊನೆಯ ದಿನಾಂಕವು ಅಂತ್ಯವಾಗಿತ್ತು. ಆಗ ಮೊದಲಿಯಾರ್ ರವರು ಖುದ್ದಾಗಿ ವಿಶ್ವವಿದ್ಯಾನಿಲಯದ ಸೆನೆಟ್ ನಲ್ಲಿ ವಿಶೇಷ ಅನುಮತಿಯನ್ನು ಪಡೆದು, ಸ್ವಾಮಿಯವರ ಅರ್ಜಿಯನ್ನು ವಿಶ್ವವಿದ್ಯಾನಿಲಯವು ಪರಿಗಣಿಸುವಂತೆ ವಿಶೇಷ ಮುತುವರ್ಜಿಯನ್ನು ವಹಿಸಿದರು.

ನಂತರ ತಮ್ಮ ಪ್ರತಿಭೆಯ ಆಧಾರದ ಮೇಲೆ ಪ್ರೆಸಿಡೆನ್ಸಿ ಕಾಲೇಜಿನ ಸಸ್ಯಶಾಸ್ತ್ರ ಅಧ್ಯಯನ ವಿಭಾಗಕ್ಕೆ ಪ್ರಾಧ್ಯಾಪಕರಾಗಿ 1953 ರಲ್ಲಿ ಆಯ್ಕೆಯಾದ ಸ್ವಾಮಿಯವರು ಸತತವಾಗಿ ಎರಡೂವರೇ ದಶಕಗಳ ಧೀರ್ಘ ಕಾಲ ಅಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾoಶುಪಾಲರಾಗಿ ಸೇವೆಸಲ್ಲಿಸಿ, 1978 ರಲ್ಲಿ ನಿವೃತ್ತಿಹೊಂದಿದರು. ಹೀಗೆ ನಮ್ಮ ಕನ್ನಡ ಮಣ್ಣಿನಲ್ಲಿ ಜನಿಸಿದ ಪ್ರತಿಭಾವಂತ ಸಸ್ಯಶಾಸ್ತ್ರಜ್ಞರೊಬ್ಬರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಅಂದು ಅಸ್ತಿತ್ವದಲ್ಲಿದ್ದ ನಮ್ಮ ನಾಡಿನ ವಿಶ್ವವಿದ್ಯಾನಿಲಯಗಳು ವಿಫಲವಾದ ಕಾರಣ, ಅದೇ ಅವಕಾಶವನ್ನು ಬಳಸಿಕೊಂಡು, ನಮ್ಮ ನೆರೆಯ ರಾಜ್ಯವಾದ ತಮಿಳುನಾಡು ಆ ಪ್ರತಿಭೆಯ ಲಾಭವನ್ನು ಪಡೆದಿದ್ದು ಈಗ ಇತಿಹಾಸ.

ಪ್ರೆಸಿಡೆನ್ಸಿ ಕಾಲೇಜಿನ ಎರಡೂವರೇ ದಶಕಗಳ ತಮ್ಮ ಕಾರ್ಯಾವಧಿಯಲ್ಲಿ ಸ್ವಾಮಿಯವರು ಸಸ್ಯಶಾಸ್ತ್ರದಲ್ಲಿ ಸಂಶೋಧನೆಯನ್ನು ಮುಂದುವರೆಸಿ, ಅಮೆರಿಕ, ರಷ್ಯ ಮೊದಲಾದ ದೇಶಗಳಲ್ಲೂ ಕೀರ್ತಿ ಪಡೆದರು. ಆಡಳಿತಕ್ಕಿಂತ ಅಧ್ಯಾಪನವೇ ಸ್ವಾಮಿಯವರಿಗೆ ಹೆಚ್ಚು ಪ್ರಿಯವಾಗಿದ್ದರಿಂದ, ಮೂರು ವರ್ಷಗಳ ಕಾಲ ಪ್ರಾoಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಅವರು ನಂತರ ತಮ್ಮ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹುದ್ದೆಗೆ ಮರಳಿದರು. ತಮ್ಮ ಸೇವಾವಧಿಯಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಆದರ್ಶ ಪ್ರಾಧ್ಯಾಪಕ ಮತ್ತು ಸಂಶೋಧಕ ಎಂಬ ಹೆಸರು ಗಳಿಸಿದರು.

ಸ್ವಾಮಿಯವರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಜ್ಞಾನದ ಸಂಶೋಧನೆಗಳನ್ನು ಕುರಿತು ಅತ್ಯಂತ ಪ್ರೌಢವಾದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವೆಲ್ಲಾ ಹಲವಾರು ಪ್ರಸಿದ್ಧ ನಿಯತಕಾಲಿಕೆ ಹಾಗೂ ಪತ್ರಿಕೆಗಳಲ್ಲಿ ದಾಖಲಾಗಿವೆ.

ಆಗಿನ ಕಾಲದ, ಭಾರತದ ಪ್ರಮುಖ ಸಸ್ಯಶಾಸ್ತ್ರ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದ ಸ್ವಾಮಿಯವರು ಹಲವು ಗೌರವಗಳಿಗೆ ಪಾತ್ರರಾಗಿದ್ದರು.

ಹಾರ್ವರ್ಡ್ ವಿಶ್ವವಿದ್ಯಾನಿಲಯದ `ಅಸೋಸಿಯೇಟ್ ಪ್ರೊಫೆಸರ್' ಎಂಬ ಗೌರವ.

1960 ರಲ್ಲಿ ‘ಅಮೇರಿಕಾದಲ್ಲಿ ನಾನು’ ಕೃತಿಗೆ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

1974 ರಲ್ಲಿ ರಷ್ಯದ 'ಲೆನಿನ್‌ಗ್ರಾಡ್‌ನ ಅಂತರಾಷ್ಟ್ರೀಯ ಸಸ್ಯವಿಜ್ಞಾನ ಸಮ್ಮೇಳನ'ದ ಉಪಾಧ್ಯಕ್ಷರಾಗಿದ್ದರು.

1976 ರಲ್ಲಿ ಅವರಿಗೆ ‘ಬೀರಬಲ್ ಸಾಹನಿ ಸುವರ್ಣಪದಕ’ ದ ಗೌರವ ಲಭಿಸಿತು.

1978 ರಲ್ಲಿ ‘ಹಸುರು ಹೊನ್ನು’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಪುರಸ್ಕೃತಗೊಂಡರು.

ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ

‘ಕಾಲೇಜುರಂಗ’ ಕ್ಕೆ ಕ್ರಿಶ್ಚಿಯನ್ ಲಿಟರೇಚರ್ ಸೊಸೈಟಿ ಪ್ರಶಸ್ತಿ ಸಿಕ್ಕರೆ, ಅವರ ‘ಸಂತಾನ ರಹಸ್ಯ’ ಕೃತಿಗೆ ದೇವರಾಜ್ ಬಹಾದುರ್ ಪ್ರಶಸ್ತಿ ದೊರಕಿತು.

ಸ್ವಾಮಿಯವರ ಚಿತ್ರವನ್ನು ಅಮೇರಿಕಾದ ಪ್ರತಿಷ್ಠಿತ ಮ್ಯೂಜಿಯಮ್ ಒಂದರಲ್ಲಿ ಗೌರವಪೂರ‍್ವಕವಾಗಿ ಇರಿಸಲಾಗಿದೆ ಹಾಗೂ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿನ ಭಾರತಿದಾಸನ್ ವಿಶ್ವವಿದ್ಯಾಲಯದಲ್ಲಿ ಸ್ವಾಮಿಯವರ ಗೌರವಾರ್ಥ ‘ದಿ ಸ್ವಾಮಿ ಬೊಟಾನಿಕಲ್ ಕ್ಲಬ್’ ಸ್ಥಾಪಿಸಲಾಗಿದೆ.

ಆದರೆ ತಾವಾಯಿತು ತಮ್ಮ ಸಂಶೋದನೆಯಾಯಿತು ಎಂದುಕೊಂಡು ದಣಿವರಿಯದೆ ದುಡಿದ ಸ್ವಾಮಿರವರಿಗೆ ಈ ಬಗೆಯ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಎಳ್ಳಷ್ಟೂ ಒಲವು ಇರಲಿಲ್ಲ.

ತಮ್ಮ ಬದುಕಿನಾದ್ಯಂತ ವಿಜ್ಞಾನ, ಸಾಹಿತ್ಯ, ಸಂಗೀತದೊಟ್ಟಿಗೆ ಸುತ್ತಲಿನ ಎಲ್ಲಾ ಕೌತುಕದ ವಿಷಯಗಳ ಕುರಿತು ತಿಳಿದುಕೊಳ್ಳುತ್ತಾ, ಎಲ್ಲರಿಗೂ ತಿಳಿ ಹೇಳುತ್ತಾ ತುಂಬಿದ ಕೊಡ ಎಂದೆನಿಸಿಕೊಂಡಿದ್ದ ಸ್ವಾಮಿರವರ ವ್ಯಕ್ತಿತ್ವ ಬಹು ಅಪರೂಪವಾದದ್ದು ಎಂದೇ ಹೇಳಬೇಕು. ವಿಜ್ಞಾನ- ಸಾಹಿತ್ಯ-ಕಲೆಗಳ ತ್ರಿವೇಣಿ ಸಂಗಮವೆಂದೇ ಜನ ಅವರನ್ನು ಗುರುತಿಸಿದರೂ, ಅವರು ಮಾತ್ರ ‘ನನ್ನ ಒಲವು ಎಂದಿದ್ದರೂ ವಿಜ್ಞಾನವೇ’ ಎಂದು ಹೇಳುತ್ತಿದ್ದರು. ತಮ್ಮ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಓದುವುದು ಮಾತ್ರ ಗುರಿಯಾಗಬಾರದು, ಎಲ್ಲರೂ ವೈಜ್ಞಾನಿಕ ಮನೋಬಾವವನ್ನು ಬೆಳೆಸಿಕೊಳ್ಳಬೇಕು ಎಂದು ಸದಾ ಹೇಳುತ್ತಿದ್ದರು. ಸ್ವಾಮಿಯವರನ್ನು ಹತ್ತಿರದಿಂದ ಕಂಡ ವಿಜ್ಞಾನಿಯೊಬ್ಬರು ಅವರ ಬಗ್ಗೆ ಹೆಮ್ಮೆ ಹಾಗೂ ಆಶ್ಚರ್ಯದಿಂದ ಈ ರೀತಿ ಹೇಳಿದ್ದಾರೆ.

“He represented the very best of Indian thought and civilisation. He had the face of an intellectual, the mind of a philosopher and the heart of a revolutionary and concealing scientist”.

ಸ್ವಾಮಿಯವರ ಎಲ್ಲಾ ಪ್ರತಿಭೆಯನ್ನು, ಜ್ಞಾನವನ್ನು, ಕೊಡುಗೆಯನ್ನು ಒಟ್ಟು ಮಾಡಿರುವ ಈ ಮೇಲಿನ ಸಾಲುಗಳು ಓದುಗರ ಮೈನವಿರೇಳಿಸದೇ ಇರದು. ಎಳವೆಯಲ್ಲಿ ತಂದೆ ದಿಗ್ಗಜ ಡಿ ವಿ ಜಿ ರವರ ನೆರಳಲ್ಲಿದ್ದರೂ, ಬದುಕು ಹಾಗೂ ಬರಹದ ಮೂಲಕ ತಮ್ಮದೇ ಬಗೆಯಲ್ಲಿ ಹೆಮ್ಮರವಾಗಿ ಬೆಳೆದು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಸ್ವಾಮಿರವರ ಸಾಧನೆ ಅವರನ್ನು ಕನ್ನಡದ ಶ್ರೇಷ್ಠ ಸಾಹಿತಿಗಳ ಸಾಲಿನಲ್ಲಿ ನಿಲ್ಲಿಸುತ್ತದೆ.

ಅಸಾಧಾರಣ ಜ್ಞಾನದ ಹಸಿವು, ಅಸಾಮಾನ್ಯ ಪ್ರತಿಭೆ, ಶಿಷ್ಯರಿಗೆ ಮಾರ್ಗದರ್ಶನ ಮಾಡುವುದರಲ್ಲಿ ಅನನ್ಯ ಶ್ರದ್ಧೆ, ಆಸಕ್ತಿಗಳನ್ನು ಹೊಂದಿದ್ದ ಸ್ವಾಮಿಯವರದು ಹಲವು ರೀತಿಗಳಲ್ಲಿ ಅಸಾಧಾರಣ ವ್ಯಕ್ತಿತ್ವ ಎಂದರೆ ಅದು ಅತಿಶಯೋಕ್ತಿಯಾಗಲಾರದು.

ಬಿ ಜಿ ಎಲ್ ಸ್ವಾಮಿಯವರ ಬಗ್ಗೆ ಹಾ ಮಾ ನಾಯಕರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ - "ಬಿ ಜಿ ಎಲ್ ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ನಿಜವಾದ ಕವಿಯಿದ್ದ ಎಂಬುದನ್ನು ಅವರನ್ನು ಓದುವ ಯಾರೇ ಆದರೂ ಕಂಡುಕೊಳ್ಳಬಹುದು. ಅವರೊಡನೆ ಮಾತನಾಡುತ್ತಿರುವಾಗಂತೂ ಇದು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿತ್ತು”. ಸ್ವಾಮಿಯವರ ವರ್ಣನೆಗಳು, ಅವರ ವ್ಯಕ್ತಿ ಚಿತ್ರಗಳು, ಅವರ ನಿರೂಪಣೆ, ಶೈಲಿ - ಇವೆಲ್ಲವೂ ಈ ಹೇಳಿಕೆಯನ್ನು ದೃಢಪಡಿಸುತ್ತವೆ. ಒಟ್ಟಿನಲ್ಲಿ ಸ್ವಾಮಿಯವರ ಯಾವುದೇ ಬರಹವಾದರೂ ಓದುಗರಿಗೆ ಸಾಹಿತ್ಯದ ಅನುಭವವನ್ನು ಕೊಡುತ್ತದೆ ಎಂಬುದು ಮುಖ್ಯವಾದ ಮಾತು.

ತಮ್ಮ ಪ್ರಸಿದ್ಧವಾದ 'ಹಸುರು ಹೊನ್ನು' ಕೃತಿಯಲ್ಲಿ ಸ್ವಾಮಿಯವರು ಮಾಡಿಕೊಡುವ ಗಿಡಮರಗಳ ವೈಶಿಷ್ಟ್ಯಪೂರ್ಣ ಪರಿಚಯವು ಒಂದು ರೀತಿಯಿಂದ ಸಸ್ಯಶಾಸ್ತ್ರ ಸಾಹಿತ್ಯವಾಗಿ ಮಾರ್ಪಟ್ಟಿದೆ. ಇವುಗಳೊಂದಿಗೆ ವ್ಯಂಗ್ಯ, ವಿಡಂಬನೆ ಹಾಗೂ ತಿಳಿಯಾದ ಹಾಸ್ಯಮಿಶ್ರಿತ ಚೌಕಟ್ಟಿನಲ್ಲಿ ಸ್ವಾಮಿಯವರು ಒಂದು ಸ್ವಾರಸ್ಯಕರ ವಾತಾವರಣವನ್ನು ಸೃಷ್ಟಿಸುತ್ತಾರೆ. ಈ ಸೃಷ್ಟಿಯಲ್ಲಿ ಕವಿ, ಕಥೆಗಾರ, ವ್ಯಕ್ತಿ ಚಿತ್ರಕಾರ ಮತ್ತು ಪ್ರಬಂಧಕಾರ ಇವರೆಲ್ಲ ಸೇರಿಕೊಳ್ಳುತ್ತಾರೆ. ಇದೆಲ್ಲದರ ಫಲವಾಗಿ ಓದುಗರಿಗೆ ಸಸ್ಯಶಾಸ್ತ್ರವು ಬುದ್ಧಿಯ ಬಲವನ್ನು ಅವಲಂಬಿಸದೆ ಹೃದಯದ ಮಾಧುರ್ಯಕ್ಕೆ ಒಲಿಯುತ್ತದೆ.

ಸ್ವಾಮಿಯವರ ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋದನೆಗಳೆಲ್ಲಾ ಕ್ಲಾಸಿಕಲ್ ರಿಸರ್ಚ್ ಆದ ‘ಅಂಗರಚನಾಶಾಸ್ತ್ರ', 'ಹೊರ ರಚನಾಶಾಸ್ತ್ರ', ‘ವರ್ಗೀಕರಣಶಾಸ್ತ್ರ', 'ಭ್ರೂಣವಿಜ್ಞಾನ’ಕ್ಕೆ ಸೀಮಿತವಾಗಿವೆ. ಆಧುನಿಕ ವಿಭಾಗಗಳಾದ, 'Cytology', 'Genetics', 'Plant Physiology' ಶಾಸ್ತ್ರಗಳಲ್ಲಿ ಅವರು ಹೆಚ್ಚಿನ ಆಸಕ್ತಿಯನ್ನು ತೋರಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣವಿಷ್ಟೆ. ತಮಗೆ ಮನೆಯಲ್ಲಿ ಸಿಕ್ಕ ಅನುಕೂಲತೆಗಳು ಸೀಮಿತವಾಗಿದ್ದರಿಂದ, ಸಿಕ್ಕಿದ್ದಷ್ಟರಲ್ಲೇ ಸ್ವಾಮಿಯವರು ಸಾಧ್ಯವಾದಷ್ಟು ಉನ್ನತ ಸಂಶೋಧನೆಯನ್ನು ಮಾಡಿದರು.

ಸ್ವಾಮಿಯವರ ಆಸಕ್ತಿ ವಿಜ್ಞಾನಕ್ಕಷ್ಟೇ ಸೀಮಿತವಾಗಿರಲಿಲ್ಲ. ಅವರು ಸಂಗೀತ, ಚಿತ್ರಕಲೆಗಳಲ್ಲಿ ಆಳವಾದ ಪರಿಶ್ರಮವನ್ನು ಹೊಂದಿದ್ದು, ಸ್ವತಃ ಚಿತ್ರಗಳನ್ನು ರಚಿಸುತ್ತಿದ್ದರು ಎಂಬುದು ಒಂದು ವಿಶೇಷ ಸಂಗತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾದ ಅವರ `ಹಸುರು ಹೊನ್ನು' ಕೃತಿಗೆ ರೇಖಾ ಚಿತ್ರಗಳನ್ನು ಅವರೇ ರಚಿಸಿದ್ದರು. ಇದಲ್ಲದೇ ಕನ್ನಡ ಸಾಹಿತ್ಯ ಪರಿಷತ್ತಿನ ವಾರಪತ್ರಿಕೆಯಾದ ‘ಕನ್ನಡ ನುಡಿ’ಯಲ್ಲಿ ವಿಜ್ಞಾನಲೇಖನ ಹಾಗೂ ವಿಜ್ಞಾನ ವಿಹಾರ ಶೀರ್ಷಿಕೆಯಡಿಯಲ್ಲಿ ದಾಖಲಾಗಿರುವ ಸ್ವಾಮಿಯವರ ನಾಲ್ಕು ಪ್ರಮುಖ ಲೇಖನಗಳು ಇಲ್ಲಿ ಉದ್ಧರಿಸಲು ಯೋಗ್ಯವಾಗಿವೆ.

'ಪ್ರಣಯ ಪ್ರಸಂಗ' (ಕನ್ನಡ ನುಡಿ, ಸೆಪ್ಟೆಂಬರ್ 9,1941)

'ಪ್ಲಾಟಿಪಸ್' (ಕನ್ನಡ ನುಡಿ, ಅಕ್ಟೋಬರ್ 3, 1941)

'ಜೇಡನ ಚರಕ' (ಕನ್ನಡ ನುಡಿ, ಅಕ್ಟೋಬರ್ 31, 1941)

'ಹಸಿವಿನ ಬಳ್ಳಿ' (ಕನ್ನಡ ನುಡಿ, ನವೆಂಬರ್ 28, 1941)

ವಿಜ್ಞಾನಿಯಾಗಿ ಅವರ ಸಂಶೋಧನೆಯ ಸಾಕಷ್ಟು ಭಾಗ ಸಾಹಿತ್ಯ, ಸಂಸ್ಕೃತಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿತ್ತು. ಉದಾಹರಣೆಗೆ, ಉಪನಿಷತ್ತುಗಳಲ್ಲಿ ಪ್ರಸ್ತಾಪವಾದ ಸಸ್ಯಗಳು, ಕನ್ನಡ ಕವಿಗಳು ವರ್ಣಿಸಿರುವ ಸಸ್ಯಗಳು ಇವೆಲ್ಲವನ್ನು ಸ್ವಾಮಿಯವರು ಅಧ್ಯಯನ ಮಾಡುತ್ತಿದ್ದರು. ‘ಹಸುರು ಹೊನ್ನು’ ಪುಸ್ತಕದುದ್ದಕ್ಕೂ ಅವರು ಪ್ರಸ್ತಾಪಿಸಿದ ಮರಗಿಡಗಳು ಹಣ್ಣು ಹೂಗಳನ್ನು ಬೇರೆ ಬೇರೆ ಭಾಷೆಗಳ ಸಾಹಿತ್ಯಗಳಲ್ಲಿ ಕವಿಗಳು ಹೇಗೆ ವರ್ಣಿಸಿದ್ದಾರೆ ಎಂದು ಸ್ವಾಮಿಯವರು ಪ್ರಸ್ತಾಪಿಸಿದ್ದಾರೆ.

ಸ್ವಾಮಿಯವರು ಕನ್ನಡದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮತ್ತು ಅವರ ಬದುಕಿಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಷಯಗಳನ್ನು ಸರಳವಾಗಿ ತಿಳಿಸಿಕೊಟ್ಟರು. ಅವರ `ಹಸುರು ಹೊನ್ನು' ಕೃತಿ ಇದಕ್ಕೆ ಉತ್ತಮ ನಿದರ್ಶನ. ಇದಲ್ಲದೆ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ' ಎಂಬ ಕೃತಿಯಲ್ಲಿ ಸ್ವಾಮಿಯವರು ಆ ದೇಶದಿಂದ ಬಂದ ಸಸ್ಯಗಳನ್ನು ಕುರಿತು ಅತ್ಯಂತ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. `ಸಾಕ್ಷಾತ್ಕಾರದ ದಾರಿಯಲ್ಲಿ' - ವೀಳ್ಯದೆಲೆ, ಅಡಿಕೆ, ಆಫೀಮು ಮೊದಲಾದವುಗಳ ಬಳಕೆಯನ್ನು ಕುರಿತ ಸ್ವಾರಸ್ಯವಾದ ಪುಸ್ತಕ. `ಕಾಲೇಜು ರಂಗ', `ಪ್ರಾಧ್ಯಾಪಕನ ಪೀಠದಲ್ಲಿ', `ತಮಿಳು ತಲೆಗಳ ನಡುವೆ' ಮೊದಲಾದ ಕೃತಿಗಳಲ್ಲಿ ಸ್ವಾಮಿಯವರು ತಾವು ಪ್ರಾಧ್ಯಾಪಕರಾಗಿದ್ದಾಗಿನ ಅವಧಿಯ ತಮ್ಮ ಸ್ವಾರಸ್ಯಕರ ಅನುಭವಗಳನ್ನು ಅತ್ಯಂತ ರಂಜನೀಯವಾಗಿ ನಿರೂಪಿಸಿದ್ದಾರೆ.

ಸ್ವಾಮಿಯವರ ಕೃತಿಗಳಲ್ಲಿ ವಸ್ತು ಹಾಗೂ ದೃಷ್ಟಿ ಎರಡೂ ಗಂಭೀರ, ಆದರೂ ಅವುಗಳಲ್ಲಿ ಹಾಸ್ಯ ಮತ್ತು ವಿಡಂಬನೆ ಹಾಸುಹೊಕ್ಕಾಗಿರುವುದು ಒಂದು ವಿಶೇಷತೆ. ಸ್ವಾಮಿಯವರ ಕೃತಿಯಾದ `ಕಾಲೇಜು ರಂಗ' ವನ್ನು ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರು ತಮ್ಮ ನಿರ್ದೇಶನದಲ್ಲಿ ಬೆಳ್ಳಿತೆರೆಯ ಮೇಲೆ ತಂದರು. ಸ್ವಾಮಿಯವರ ತಂದೆಯವರಾಗಿದ್ದ ಕನ್ನಡದ ಪ್ರಖ್ಯಾತ ಲೇಖಕ ಶ್ರೀ ಡಿ ವಿ ಗುಂಡಪ್ಪನವರು ಹಾಗೂ ಸ್ವಾಮಿಯವರು ಇಬ್ಬರೂ ಸಹ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಪುರಸ್ಕೃತಗೊಂಡರು. ತಂದೆ ಮಗನ ಜೋಡಿ ಈ ರೀತಿ ಪ್ರಶಸ್ತಿಗೆ ಭಾಜನರಾಗಿದ್ದು ಭಾರತದಲ್ಲಿ ಪ್ರಥಮ ಬಾರಿ ಎಂಬುದು ಒಂದು ಗಮನಾರ್ಹ ಸಂಗತಿ.

ಸ್ವಾಮಿಯವರ ಪ್ರಮುಖ ಸಾಹಿತ್ಯ ಕೃತಿಗಳು

ಸಾಕ್ಷಾತ್ಕಾರದ ಹಾದಿಯಲ್ಲಿ

ಸಸ್ಯಪುರಾಣ

ತಮಿಳು ತಲೆಗಳ ನಡುವೆ

ಕಾಲೇಜು ರಂಗ

ಕಾಲೇಜು ತರಂಗ

ಪಂಚಕಲಶ ಗೋಪುರ

ಹಸುರು ಹೊನ್ನು

ಅಮೇರಿಕಾದಲ್ಲಿ ನಾನು

ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ

ಪ್ರಾಧ್ಯಾಪಕನ ಪೀಠದಲ್ಲಿ

ದೌರ್ಗಂಧಿಕಾಪಹರಣ

ಮೈಸೂರು ಡೈರಿ

ಬೆಳದಿಂಗಳಲ್ಲಿ ಅರಳಿದ ಮೊಲ್ಲೆ (ತಮಿಳು ಮೂಲ: ಉ.ವೇ.ಸ್ವಾಮಿನಾಥ ಅಯ್ಯರ್)

ಜ್ಞಾನರಥ (ತಮಿಳು ಮೂಲ: ಸುಬ್ರಹ್ಮಣ್ಯ ಭಾರತಿ)

ಬೃಹದಾರಣ್ಯಕ

ಫಲಶ್ರುತಿ

ಶಾಸನಗಳಲ್ಲಿ ಗಿಡಮರಗಳು

ಸಸ್ಯಜೀವಿ ಪ್ರಾಣಿಜೀವಿ

ಮೀನಾಕ್ಷಿಯ ಸೌಗಂಧ

ನಡೆದಿಹೆ ಬಾಳೌ ಕಾವೇರಿ (ಅನುವಾದ)

ಸ್ವಾಮಿಯವರು ಮದ್ರಾಸ್ ವಿಶ್ವವಿದ್ಯಾನಿಲಯದ ತಮ್ಮ ಹುದ್ದೆಯಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲಸಿದ ಮೇಲೂ ಬಿಡುವು ಇಲ್ಲದೆ ಸಂಶೋಧನೆಯನ್ನು ಕೈಗೊಂಡರು. 1979 ರಲ್ಲಿ ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡರು.

ತಮ್ಮ ಅಸಾಧಾರಣ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ಸಸ್ಯಶಾಸ್ತ್ರಜ್ಞರಾಗಿ ಹಾಗೂ ತಮ್ಮ ಸೃಜನಶೀಲ ಬರಹಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಒಬ್ಬ ವಿಶಿಷ್ಟ ಲೇಖಕರಾಗಿ ತಮ್ಮ ಛಾಪು ಮೂಡಿಸಿದ್ದ ಶ್ರೀ ಬಿ ಜಿ ಎಲ್ ಸ್ವಾಮಿಯವರು ತಮ್ಮ 64 ನೇ ವಯಸ್ಸಿನಲ್ಲಿ 1980 ರ ನವೆಂಬರ್ 2 ರಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೈಸೂರಿನಲ್ಲಿ ಹಠಾತ್ತನೆ ಕೊನೆಯುಸಿರೆಳೆಯುವುದರೊಂದಿಗೆ ಒಬ್ಬ ಅಸಾಮಾನ್ಯ ವಿಜ್ಞಾನಿ ಹಾಗೂ ಅಸಾಧಾರಣ ಲೇಖಕನನ್ನು ಕನ್ನಡ ನಾಡು ಕಳೆದುಕೊಂಡಿತ್ತು.

ಒಬ್ಬ ಸಸ್ಯಶಾಸ್ತ್ರಜ್ಞನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುವುದರೊಂದಿಗೆ ತಮ್ಮ ವೈಶಿಷ್ಟ್ಯಪೂರ್ಣ ಬರವಣಿಗೆಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆಯನ್ನು ನೀಡಿ, ಕನ್ನಡ ಸಾಹಿತ್ಯಾಸಕ್ತರ ಮನಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಕಣ್ಮರೆಯಾದ ದಿವಂಗತ ಬಿ ಜಿ ಎಲ್ ಸ್ವಾಮಿಯವರ 46 ನೇ ವರ್ಷದ ಸಂಸ್ಮರಣಾ ದಿನವಾದ ನವೆಂಬರ್ 2 ರ ಈ ಸಂದರ್ಭದಲ್ಲಿ ಅವರು ಒಬ್ಬ ವಿಜ್ಞಾನಿಯಾಗಿ ಹಾಗೂ ಸೃಜನಶೀಲ ಲೇಖಕನಾಗಿ ನಮ್ಮ ನಾಡಿಗೆ ಸಲ್ಲಿಸಿದ ಅಪ್ರತಿಮ ಕೊಡುಗೆಯನ್ನು ಸ್ಮರಿಸಿ ಅವರಿಗೆ ನಮ್ಮ ಹೃದಯಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸೋಣ.

“ಜೈ ಕನ್ನಡ ಭುವನೇಶ್ವರಿ”