ಡಾ. ಕಿರಣ ಪೇಟಕರ್ ಇವರು ಬರೆದ ಕವನ ಸಂಕಲನ ‘ಬೆಳದಿಂಗಳೂರಿನ ಬೆಳಕು’. ಈ ಕವನ ಸಂಕಲನದ ಬಗ್ಗೆ ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಇವರು ಸುಂದರವಾದ ಬೆನ್ನುಡಿಯನ್ನು ಬರೆದಿದ್ದಾರೆ. ಅದರಲ್ಲಿನ ಕೆಲವು ಸಾಲುಗಳು…
“ಡಾ.ಕಿರಣ ಪೇಟಕರ್ ಅವರು ವೃತ್ತಿಯಿಂದ ಸುರೂಪಿಕಾ ಮತ್ತು ಸೌಂದರ್ಯವರ್ಧಕ ತಜ್ಞರು ಅಂದರೆ ಪ್ಲಾಸ್ಟಿಕ್ ಅಂಡ್ ಕಾಸ್ಟೆಟಿಕ್ ಸರ್ಜನ್! ಪದ್ಮಶ್ರೀ ಪುರಸ್ಕೃತರಾದ ಡಾ. ಪ್ರೇಮಾ ಧನರಾಜ್ ಅವರ ಗರಡಿಯಲ್ಲಿ ಪಳಗಿದವರು. ೨೦ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಮನುಕುಲ ಸೇವೆಯಲ್ಲಿ ತೊಡಗಿರುವವರು, ಬಿಡುವಿಲ್ಲದ ಕೆಲಸದ ನಡುವೆಯೂ ಸಮಯವನ್ನು ಮಾಡಿಕೊಂಡು, ಕವನವನ್ನು ಬರೆಯುತ್ತಿರುವ ಕಿರಣ್ ಅವರ ಬದ್ಧತೆಯನ್ನು ಮೆಚ್ಚಬೇಕು. ಮೂಲಭೂತವಾಗಿ, ಶ್ರೇಷ್ಠ ಕಾವ್ಯವು ವಿವಿಧ ಗುಣಲಕ್ಷಣಗಳ ಮಿಶ್ರಣವಾಗಿದೆ. ಇದು ಭಾವನೆ, ಲಯ, ಪ್ರತಿಮೆ, ರಚನೆ ಮತ್ತು ಸ್ವಂತಿಕೆಯ ಸಮತೋಲನವಾಗಿದೆ. ಪ್ರತಿಯೊಂದು ಕವಿತೆಯೂ ಒಂದು ವಿಶಿಷ್ಟ ಸೃಷ್ಟಿಯಾಗಿದ್ದು, ಕವಿಯ ಧ್ವನಿ ಮತ್ತು ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಇದು ಪದಗಳ ಶಕ್ತಿ ಮತ್ತು ಸೌಂದರ್ಯಕ್ಕೆ ಸಾಕ್ಷಿಯಾಗಿದೆ.
ಡಾ. ಕಿರಣ ಪೇಟಕರ್ ಅವರ ಕವನಗಳಲ್ಲಿ ಮೇಲ್ಕಂಡ ಅಂಶಗಳು ಸಾಕಷ್ಟಿವೆ. ಹಾಗಾಗಿ ಓದುಗನು ಒಂದೊಂದು ಕವನವನ್ನು ಪೆಪ್ಪರ್ಮೆಂಟಿನಂತೆ ಚಪ್ಪರಿಸುತ್ತಾ ಓದಬಹುದು. ಗೇಯ ಗೀತೆಗಳು, ಅನುವಾದಗಳು, ಒಂದಿಷ್ಟು ಗಜಲುಗಳು, ಮುಕ್ತ ಛಂದದ ಕವಿತೆಗಳು, ಭಕ್ತಿ, ಅಭಿಮಾನ ಹಾಗೂ ಚಮತ್ಕಾರಿ ಕಾವ್ಯಗಳು: ಈ ವೈವಿಧ್ಯಮಯ ಪ್ರಯೋಗಗಳ ನಡುವೆ ಕಿರಣ್ ತಮ್ಮದೇ ಆದ ವಿಶಿಷ್ಟ ಕಾವ್ಯಧ್ವನಿಯನ್ನು ಇನ್ನಷ್ಟು ಸ್ಪುಟಗೊಳಿಸಿಕೊಳ್ಳುವ ಹಾದಿಯಲ್ಲಿದ್ದಾರೆ ಎನಿಸುತ್ತದೆ. ಸುಮಾರು ೨೦೮ ಪುಟಗಳ ಈ ಕವನ ಸಂಕಲನವನ್ನು ಓದಿದರೆ ಮೋಸವೇನೂ ಆಗದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!