ಜಗತ್ತಿನ ಅತಿ ದೊಡ್ಡ ಕಪ್ಪೆ: ಕ್ಯಾಮರೂನ್ ದೇಶದ ಗೋಲಿಯಾತ್ ಕಪ್ಪೆ. ಕ್ಯಾಮರೂನಿನ ಪ್ರಜೆ ಸೆಡ್ರಿಕ್ ಫೋಗ್ವಾನ್ ಮೊದಲ ಬಾರಿ ಗೋಲಿಯಾತ್ ಕಪ್ಪೆ ಕಂಡಾಗ ಅದರ ಭಾರೀ ಗಾತ್ರ ಅವನನ್ನು ದಂಗು ಬಡಿಸಿತ್ತು. ಗಾತ್ರದಲ್ಲಿ ಅದೊಂದು ಬೆಕ್ಕಿನಂತೆ ಕಾಣಿಸಿತು! ಕಾರಣ: ಬಲಿತ ಗೋಲಿಯಾತ್ ಕಪ್ಪೆಗಳ ಉದ್ದ 32 ಸೆಮೀ (13 ಇಂಚು) ಮತ್ತು ತೂಕ 3.25 ಕಿಗ್ರಾ!

“ಅದನ್ನು ಕೈಗಳಲ್ಲಿ ಎತ್ತಿಕೊಂಡಾಗ ಒಂದು ಮಗುವನ್ನು ಎತ್ತಿಕೊಂಡಂತೆ ಅನಿಸಿತು” ಎಂದು ಅವನು ನೆನಪು ಮಾಡಿಕೊಳ್ಳುತ್ತಾನೆ. ಆಗಲೇ ಭೂಮಿಯ ಅತ್ಯಪರೂಪದ ಈ ಪ್ರಾಣಿಯನ್ನು ಉಳಿಸಲಿಕ್ಕಾಗಿ ಕ್ಯಾಮರೂನ್ ದೇಶದ ಈ ಪ್ರಾಣಿಸಂರಕ್ಷಕ ಒಂದು ಯೋಜನೆಯನ್ನೇ ಆರಂಭಿಸಿದ.

ಸ್ಥಳೀಯ ಜನರು ಭಗವಂತನ ಕರುಣೆಯಿಂದಾಗಿ ತಮ್ಮ ಪ್ರದೇಶದಲ್ಲಿ ಈ ಕಪ್ಪೆ ಇದೆಯೆಂದು ಹೇಳುತ್ತಾರೆ ಮತ್ತು ಸಾಂಸ್ಕೃತಿಕವಾಗಿ ಅದನ್ನು ಗೌರವಿಸುತ್ತಾರೆ.

ಅದೇನಿದ್ದರೂ ಈ ಕಪ್ಪೆಯನ್ನು ಕೊಂದು ಮಾಂಸವನ್ನು ಆಹಾರವಾಗಿ ಬಳಸಲಾಗುತ್ತದೆ. ಅದಲ್ಲದೆ ಕೆಲವರು ಇದನ್ನು “ಮುದ್ದಿನ ಪ್ರಾಣಿ”ಯಾಗಿ ಸಾಕುತ್ತಾರೆ. ಈ ಎರಡು ಉದ್ದೇಶಗಳಿಗಾಗಿ ಕ್ಯಾಮರೂನ್ ಮತ್ತು ಗಿನಿಯಾಗಳಲ್ಲಿ ಇದನ್ನು ಅತಿರೇಕವಾಗಿ ಬೇಟೆಯಾಡಲಾಗಿದೆ. ಅಲ್ಲಿನ ನದಿಗಳು ಮತ್ತು ತೊರೆಗಳ ಹತ್ತಿರದ ಗೋಲಿಯಾತ್ ಕಪ್ಪೆಗಳ ಆವಾಸ ಸ್ಥಳಗಳು ವೇಗವಾಗಿ ನಾಶವಾಗುತ್ತಿದೆ. ಆದ್ದರಿಂದ “ಅಧಿಕೃತ ಅಳಿವಿನ ಜೀವಿಗಳ ಕೆಂಪು ಪಟ್ಟಿ”ಯಲ್ಲಿ (ಒಫಿಸಿಯಲ್ ಎಕ್ಸ್-ಟಿಂಕ್-ಷನ್ ರೆಡ್ ಲಿಸ್ಟ್) ಇದನ್ನು “ಅಳಿವಿನಂಚಿನ ಪ್ರಾಣಿ” ಎಂದು ಗುರುತಿಸಲಾಗಿದೆ.

ಈ ಕಪ್ಪೆ ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ತಿನ್ನುತ್ತದೆ. ಇದರ ಇಂತಹ ಪರಿಸರಸ್ನೇಹಿ ಪ್ರಯೋಜನಗಳ ಬಗ್ಗೆ ತವರು ದೇಶವಾದ ಕ್ಯಾಮರೂನಿನಲ್ಲಿಯೇ ಬಹಳ ಜನರಿಗೆ ತಿಳಿದಿಲ್ಲ.

ಗೋಲಿಯಾತ್ ಕಪ್ಪೆಯ ಸಂರಕ್ಷಣಾ ತಂಡವು ಇದರ ಬೇಟೆಗಾರರು “ನಾಗರಿಕ ವಿಜ್ಞಾನಿ”ಗಳಾಗಲು ಅವರನ್ನು ಪ್ರೇರೇಪಿಸುತ್ತಿದೆ. ಅಂದರೆ, ಅದನ್ನು ಕೊಂದು ತಿನ್ನುವ ಬದಲಾಗಿ, ಅದು ಕಾಣಿಸಿದಾಗೆಲ್ಲ ಆ ಬಗ್ಗೆ ವರದಿ ಮಾಡಬೇಕೆಂದು ಸಲಹೆ ನೀಡುತ್ತಿದೆ. ಜೊತೆಗೆ ಇವನ್ನು ಆಹಾರವಾಗಿ ಬಳಸುವ ಬದಲಾಗಿ, ಆಹಾರಕ್ಕಾಗಿ ಬಸವನ ಹುಳಗಳನ್ನು ಬೆಳೆಸುವ ಯೋಜನೆ ಕಾರ್ಯಗತಗೊಳಿಸಲು ಶ್ರಮಿಸುತ್ತಿದೆ.

ಹಿಂದೆ ಗೋಲಿಯಾತ್ ಕಪ್ಪೆಗಳನ್ನು ಬೇಟೆಯಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆಯವನು ಈ ಕಪ್ಪೆಯೊಂದನ್ನು ಹಿಡಿದದ್ದನ್ನು ಫೋನ್ ಕರೆ ಮೂಲಕ ವರದಿ ಮಾಡಿದ್ದು ಕಪ್ಪೆಗಳ ಸಂರಕ್ಷಣೆಯ ಹೋರಾಟದ ಬಗ್ಗೆ ಆಶಾಭಾವನೆ ಮೂಡಿಸಿದೆ. ಪರ್ವತ ನೋನಾಕೋ ಸಂರಕ್ಷಿತ ಪ್ರದೇಶದ ನದಿಗಳಲ್ಲಿ ಹಲವು ವರುಷಗಳ ನಂತರ ಗೋಲಿಯಾತ್ ಕಪ್ಪೆಗಳು ಕಾಣಿಸಿಕೊಂಡಿರುವುದು ಇವುಗಳ ಸಂರಕ್ಷಣಾ ಯೋಜನೆ ಫಲ ನೀಡುತ್ತಿದೆ ಎಂಬುದರ ಸೂಚನೆ.

ಗೋಲಿಯಾತ್ ಕಪ್ಪೆಗಳ ಸಂರಕ್ಷಣಾ ಯೋಜನೆಗೆ ಫಾನಾ ಆಂಡ್ ಫ್ಲೋರಾ ಇಂಟರ್-ನ್ಯಾಷನಲ್, ಬರ್ಡ್ ಲೈಫ್ ಇಂಟರ್-ನ್ಯಾಷನಲ್ ಮತ್ತು ವೈಲ್ಡ್ ಲೈಫ್ ಕನ್-ಸರ್-ವೇಷನ್ ಸೊಸೈಟಿ ನಡೆಸುತ್ತಿರುವ ಕನ್-ಸರ್-ವೇಷನ್ ಲೀಡರ್-ಶಿಪ್ ಪ್ರೋಗ್ರಾಮ್ ಬೆಂಬಲ ನೀಡುತ್ತಿದೆ.

ಫೋಟೋ: ಗೋಲಿಯಾತ್ ಕಪ್ಪೆ…. ಕೃಪೆ: ಸ್ಕೋಲಾಸ್ಟಿಕ್ ನ್ಯೂಸ್ ವೆಬ್-ಸೈಟ್