ಭೂಮಿಯ ಅತ್ಯಂತ ವಿಶೇಷ ಎಂದರೆ ಜೀವಚೇತನ. ನಮಗೆ ಇಲ್ಲಿಯ ವರೆಗೆ ತಿಳಿದಿರುವುದು ಏನೆಂದರೆ ಈ ವಿಶ್ವದಲ್ಲಿ ಜೀವಚೇತನವಿರುವ ಒಂದೇ ಒಂದು ಗ್ರಹ ಭೂಮಿ. ಪರಿಸರ ನಾಶ ವಿಪರೀತವಾಗಿದ್ದರೂ ಭೂಮಿಯ ಎಲ್ಲೆಡೆಗಳಲ್ಲಿ ಜೀವಚೇತನವಿದೆ - ಉದಾಹರಣೆಗೆ ನೀರಿನ ಆಳದಲ್ಲಿ, ಕಲ್ಪಿಸಲಾಗದಷ್ಟು ಅತಿರೇಕದ ಪರಿಸರದಲ್ಲಿ (ತೀವ್ರ ಶೀತ ಅಥವಾ ಉಷ್ಣ ಇರುವಲ್ಲಿಯೂ).

ಆದರೆ ಇದೆಲ್ಲ ಯಾಕಾಯಿತು? ಭೂಮಿಯಲ್ಲಿ ಜೀವ ಉತ್ಪತ್ತಿ ಹೇಗಾಯಿತು? ಪಕ್ಷಿಗಳು, ಪ್ರಾಣಿಗಳು, ಕೀಟಗಳು, ಅಮೀಬಾ, ನೀವು ಮತ್ತು ನಾನು ಸೃಷ್ಟಿಯಾಗಲು ಕಾರಣವಾದ ಘಟನೆಗಳ ಸರಣಿ ಯಾವುದು?

ಭೂಮಿಯಲ್ಲಿ ಜೀವಚೇತನ ಹೇಗೆ ಉಂಟಾಯಿತು ಎಂಬುದರ ಹುಡುಕಾಟವು ಈ ಜಗತ್ತಿನ ಇತಿಹಾಸದ ಪತ್ತೆಯಾಗದ ಅಧ್ಯಾಯಗಳನ್ನು ಭರ್ತಿ ಮಾಡುವುದಕ್ಕಿಂತ ಬಹಳ ದೊಡ್ಡದು. ಈ ಭೂಮಿಯಲ್ಲಿ ಜೀವಚೇತನದ ಉಗಮದ ಶೋಧದಲ್ಲಿ ಬಹಳ ದೊಡ್ಡ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಯಾವುದೇ ಗ್ರಹದಲ್ಲಿ ಜೀವಚೇತನ ಸೃಷ್ಟಿಯಾಗುವುದು ಎಷ್ಟು ಅಪರೂಪ? ಯಾವುದೇ ಗ್ರಹದಲ್ಲಿ ಜೀವಚೇತನ ಸೃಷ್ಟಿಯಾಗುವುದು ಎಷ್ಟರ ಮಟ್ಟಿಗೆ ಅಸಾಧ್ಯ?

ಈ “ಕತೆ”ಯನ್ನು ಸಂಪೂರ್ಣವಾಗಿ ಹೇಳಲು ಅಗತ್ಯವಾದ ಎಲ್ಲ ಮಾಹಿತಿ ನಮಗೆ ತಿಳಿದಿಲ್ಲ. ಆದರೆ ನಮಗೆ ಗೊತ್ತಿರುವ ಸಂಗತಿಗಳು ಪ್ರಾಚೀನ ಕಾಲಮಾನದಲ್ಲಿ ಭೂಮಿಯಲ್ಲಿ ಜೀವಚೇತನ ಉಗಮವಾದ ಅಸಾಧಾರಣ ಕತೆಯನ್ನು ಹೇಳುತ್ತವೆ.

1)ಭೂಮಿಗೆ ನೀರು ಎಲ್ಲಿಂದ ಬಂತು?

ಈ ಕತೆ ಶುರುವಾಗುವುದೇ ನೀರಿನಿಂದ. ಯಾಕೆಂದರೆ ಭೂಮಿಯಲ್ಲಿರುವ ಎಲ್ಲ ಜೀವಿಗಳಿಗೂ ನೀರು ಬೇಕೇ ಬೇಕು. ವಿವಿಧ ಜೀವಿಗಳು ತೀವ್ರವಾಗಿ ಭಿನ್ನವಾದ ಆಹಾರ ಸೇವಿಸಿ ಬದುಕಬಲ್ಲವು. ಆದರೆ ನೀರಿಲ್ಲದೆ ಬದುಕಲಾರವು.

ಗಮನಿಸಿ: ಭೂಮಿಯ ಮೇಲ್ಮೈಯ ಮೂರನೇ ಎರಡು ಭಾಗದಲ್ಲಿ ನೀರು ತುಂಬಿಕೊಂಡು, ಜೀವದ ಉಗಮಕ್ಕೆ ಅತ್ಯಗತ್ಯವಾದ ಮೊಟ್ಟಮೊದಲ ಷರತ್ತನ್ನು ಹೇಗೆ ಪೂರೈಸಿತು ಎಂಬುದನ್ನು ವಿಜ್ಞಾನಿಗಳು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ.

ಈ ಸಂಗತಿ ಸರಳವಾಗಿದೆ. ರೂಪುಗೊಳ್ಳುತ್ತಿರುವ ಸಮಯದಲ್ಲಿ ಈ ಭೂಮಿ ವಿಪರೀತ ಬಿಸಿಯಾಗಿತ್ತು. ಆದ್ದರಿಂದ ಆ ಸಮಯದಲ್ಲಿ ಭೂಮಿಯಲ್ಲಿ ಇದ್ದಿರಬಹುದಾದ ನೀರು ಸಂಪೂರ್ಣ ಆವಿಯಾಗಲೇ ಬೇಕಾಗಿತ್ತು.

ಇದರ ಬಗ್ಗೆ ವಿಜ್ಞಾನಿಗಳು ಕೆಲವು ವಿವರಣೆಗಳನ್ನು ಸೂಚಿಸುತ್ತಾರೆ. ಭೂಮಿಗೆ ಅಪ್ಪಳಿಸಿದ ಧೂಮಕೇತುವಿನಿಂದ ಭೂಮಿ ನೀರು ಪಡೆಯಿತೇ? ಬೇರೊಂದು ಸೌರವ್ಯೂಹದಿಂದ ಗುರು ಗ್ರಹದಂತಹ ಆಕಾಶಕಾಯ ಸೂರ್ಯನ ಕಡೆಗೆ ತೂರಿ ಬಂದ ಕಾರಣ ಭೂಮಿಯಲ್ಲಿ ಬೃಹತ್ ಪ್ರಮಾಣದ ನೀರು ಶೇಖರವಾಯಿತೇ? ಅಥವಾ ಆಗಷ್ಟೇ ರೂಪುಗೊಂಡಿದ್ದ ಭೂಮಿಯೊಳಗೆ ಅದು ಹೇಗೋ ಆಳದಲ್ಲಿ ನೀರು ಸಂಗ್ರಹವಾಯಿತೇ?

2)ನೀರಿನಲ್ಲಿ ಜೀವದ ಉಗಮ ಹೇಗಾಯಿತು?

ಒಂದೇ ಜೀವಕೋಶದ ಜೀವಿಯೂ ಜಟಿಲವಾಗಿರಬಹುದು. ಹಾಗಿರುವಾಗ ಭೂಮಿಯಲ್ಲಿ ಮೊಟ್ಟಮೊದಲ ಜೀವಿ ರೂಪುಗೊಂಡದ್ದು ಹೇಗೆ?

ಭೂಮಿಯಲ್ಲಿ ನೀರಿದೆ ಎಂದಾದಾಗ ಅದು ಹೇಗೋ ಜೀವಚೇತನ ಉಗಮವಾಯಿತು. ಜೀವಿಯ ಉಗಮ ಭೂಮಿಯಲ್ಲಿ ಆಗಲಿಲ್ಲ ಎಂಬುದು ನಿಜವಾಗಿರಬಹುದು. ಆದರೆ ಭೂಮಿಯಲ್ಲೇ ಜೀವಚೇತನ ಉಗಮವಾಯಿತು ಎಂದು ವಿಜ್ಞಾನಿಗಳು ಯೋಚಿಸಲು ಕಾರಣಗಳಿವೆ.

ನೀರು ತುಂಬಿದ್ದ ಆರಂಭಿಕ ದಿನಗಳ ಭೂಮಿಯ ಪರಿಸ್ಥಿತಿಯನ್ನು ಪ್ರಯೋಗಾಲಯದಲ್ಲಿ ಪುನರ್-ಸೃಷ್ಟಿಸಲು ಹಲವು ದಶಕಗಳಿಂದ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಅದು ಸಾಧ್ಯವಾದರೆ, ಹಲವಾರು ಬಿಲಿಯನ್ ವರುಷಗಳ ಹಿಂದೆ, ಭೂಮಿಯಲ್ಲಿ ರೂಪುಗೊಂಡ ಸರಳ ಜೀವಕೋಶಗಳಂತಹ ಜೀವಚೇತನವನ್ನು ಸೃಷ್ಟಿಸಲು ವಿಜ್ಞಾನಿಗಳಿಗೆ ಸಾಧ್ಯ ಆದೀತು. ಅದರಿಂದ ಶುರು ಮಾಡಿ, ಭೂಮಿಯಲ್ಲಿ ಜೀವದ ಉಗಮ ಹೇಗಾಯಿತು ಎಂಬ ಕತೆ ಹೆಣೆಯಲು ವಿಜ್ಞಾನಿಗಳಿಗೆ ಸಾಧ್ಯ.

ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆ ವಿಜ್ಞಾನಿಗಳಿಗೆ ಆಶ್ಚರ್ಯಕರ ಫಲಿತಾಂಶಗಳನ್ನು ನೀಡಿದೆ. 1950ರ ದಶಕದಲ್ಲಿ, ಗ್ಲೈಸೀನ್ ಎಂಬ ಅಮಿನೋ ಆಮ್ಲವನ್ನು ತಯಾರಿಸಲು ಸಾಧ್ಯವೆಂದು ವಿಜ್ಞಾನಿಗಳಾದ ಹರೋಲ್ಡ್ ಉರೇ ಮತ್ತು ಸ್ಟಾನ್ಲೇ ಮಿಲ್ಲರ್ ತೋರಿಸಿಕೊಟ್ಟರು (ಅದು ಜೀವಿಗಳ ಮೂಲಭೂತ ರಚನಾ ಘಟಕಗಳಲ್ಲೊಂದು). ಇದಕ್ಕಾಗಿ, ಉಷ್ಣ ಮತ್ತು ಕೃತಕ ಬೆಳಕನ್ನು ಬಳಸಿ, ಮಿಲಿಯಗಟ್ಟಲೆ ವರುಷಗಳ ಹಿಂದೆ ವಾತಾವರಣದಲ್ಲಿ ತುಂಬಿದ್ದ ಕೆಲವು ಅನಿಲಗಳನ್ನು ಮಿಶ್ರ ಮಾಡಿದ್ದರು.

ಅನಂತರ, ಜೀವಕೋಶ ಪೊರೆಯಂತೆಯೇ ಕಾಣುವ ಲಿಪಿಡ್ ಹನಿಗಳನ್ನು ತಯಾರಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ. ಅದಲ್ಲದೆ, ಸರಳೀಕೃತ ಡಿ.ಎನ್.ಎ.ಯಂತಿರುವ ಆರ್.ಎನ್.ಎ. ಅಣುಗಳನ್ನು ವಿಜ್ಞಾನಿಗಳು ರೂಪಿಸಿದ್ದಾರೆ. ಆದರೆ, ಜೀವಚೇತನದ ಈ ಎಲ್ಲ ಉಪಾಂಗಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಿ, ಅವನ್ನು ಜೋಡಿಸಿ, ಸರಳ ಜೀವಕೋಶವೊಂದನ್ನು ಸೃಷ್ಟಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ.

ಈ ಪ್ರಯೋಗಗಳಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿ, ಒಂದು ಬಾಟಲಿಯಲ್ಲಿ ಜೀವಚೇತನ ಸೃಷ್ಟಿಸಿದರೆ, ಏನಾದೀತು? ಭೂಮಿಯಲ್ಲಿ ಜೀವ ಉಗಮದ ಕತೆಯನ್ನು ತಿಳಿದುಕೊಳ್ಳುವುದಲ್ಲದೆ, ವಿಶ್ವದಲ್ಲಿ ಜೀವಚೇತನ ಎಷ್ಟರ ಮಟ್ಟಿಗೆ ಪ್ರಚಲಿತವಾಗಿದೆ ಎಂಬುದರ ಬಗ್ಗೆ ತೀರ್ಮಾನಕ್ಕೆ ಬರಲು ಸಾಧ್ಯ.

3)ಜೀವಚೇತನ ಎಂದರೇನು?

ಜೀವದ ಉಗಮ ಹೇಗೆಯೇ ಆಗಿರಲಿ, ಈಗ ಭೂಮಿಯಲ್ಲಿ ಜೀವಿಗಳು ತುಂಬಿವೆ. ಜೀವಚೇತನವನ್ನು ಕಂಡಾಗ ಅದನ್ನು ನಾವು ಗುರುತಿಸಬಲ್ಲೆವು. ಆದರೆ ಮೂಲಭೂತವಾಗಿ ಜೀವಚೇತನ ಎಂದರೇನೆಂದು ನಮಗೆ ತಿಳಿದಿದೆಯೇ? ಇಲ್ಲ.

ವಿಜ್ಞಾನ ಸಾಹಿತ್ಯದಲ್ಲಿ ವಿಜ್ಞಾನಿಗಳೇ ದಾಖಲಿಸಿದ ಜೀವಚೇತನ ಎಂದರೇನೆಂಬ ನೂರಾರು ವ್ಯಾಖ್ಯಾನಗಳಿವೆ. ಆದರೆ ಅದನ್ನು ಯಾರೂ ಸರಿಯಾಗಿ ವ್ಯಾಖ್ಯಾನಿಸಿಲ್ಲ.

ಮೇಲ್ನೋಟಕ್ಕೆ “ಜೀವಚೇತನ ಎಂದರೇನು?” ಎಂಬ ಪ್ರಶ್ನೆಯನ್ನು ಶಾಲಾ ಮಕ್ಕಳೂ ಉತ್ತರಿಸಬಹುದು ಎನಿಸುತ್ತದೆ. ಆದರೆ, ಜೀವಚೇತನದ ಯಾವುದೇ ವ್ಯಾಖ್ಯಾನವನ್ನು ಪರಿಶೀಲಿಸಿದರೂ ವಿಜ್ಞಾನಿಗಳು ಅದಕ್ಕೊಂದು ವಿನಾಯಿತಿಯನ್ನು ತೋರಿಸಬಲ್ಲರು.

ಉದಾಹರಣೆ: ಜೀವಚೇತನಕ್ಕೆ “ನಾಸಾ”ದ ವ್ಯಾಖ್ಯಾನ ಹೀಗಿದೆ: “ಜೀವಚೇತನವು ಡಾರ್ವಿನ್ ವಿವರಿಸಿದ ವಿಕಾಸದ ಸಾಮರ್ಥ್ಯವುಳ್ಳ ಸ್ವಯಂ-ಸುಸ್ಥಿರ ರಾಸಾಯನಿಕ ವ್ಯವಸ್ಥೆ.” ಆದರೆ, ಈ ವ್ಯಾಖ್ಯಾನದಲ್ಲಿ ವೈರಸುಗಳು ಸೇರಿಕೊಳ್ಳುವುದಿಲ್ಲ. ಯಾಕೆಂದರೆ, ಅವು “ಸ್ವಯಂ-ಸುಸ್ಥಿರ” ಜೀವಿಗಳಲ್ಲ. ಕಾರಣ: ಇನ್ನೊಂದು ಜೀವಿಯೊಳಗೆ ಸೇರಿಕೊಂಡರೆ ಮಾತ್ರ ಅವು ಬದುಕಿ ಉಳಿಯಬಲ್ಲವು ಮತ್ತು ಪುನರುತ್ಪತ್ತಿ ಮಾಡಬಲ್ಲವು.

ಇತರ ಗ್ರಹಗಳು ಮತ್ತು ಚಂದ್ರಗಳಲ್ಲಿ ನಾವು ಜೀವಚೇತನವನ್ನು ಹುಡುಕುತ್ತಿರುವಾಗ ನಮಗೆ ಜೀವಚೇತನದ ವ್ಯಾಖ್ಯಾನದಿಂದ ಸಹಾಯವಾಗುತ್ತದೆ. ಯಾಕೆಂದರೆ, ಅಲ್ಲೆಲ್ಲಾದರೂ ಜೀವಚೇತನ ಪತ್ತೆಯಾದರೆ ಅದನ್ನು ಗುರುತಿಸಲು ಸಾಧ್ಯವಾದೀತು. ಆದರೆ, ನಮ್ಮ ಈಗಿನ ಜ್ಞಾನಮಿತಿಯ ಆಧಾರದಿಂದ ಜೀವಚೇತನವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಫೋಟೋ: ಬಾಹ್ಯಾಕಾಶದಿಂದ ಭೂಮಿಯ ನೋಟ … ಕೃಪೆ: ಅಡೋಬ್ ವೆಬ್-ಸೈಟ್