ಮಕ್ಕಳ ಮನಸ್ಸಿನ ಮೇಲೆ ತಂದೆ-ತಾಯಿಗಳ ಪ್ರಭಾವದ ಕುರಿತು ಅಸಂಖ್ಯಾತ ಸಂಶೋಧನೆ,ಸಂವಾದ,ಸಾಹಿತ್ಯದ ರೂಪದಲ್ಲಿ ಪ್ರಕಟಣೆ ಆಗಿ ಇತಿಹಾಸದಲ್ಲಿ ದಾಖಲಾಗಿದೆ - ನಾವು,ನೀವೂ ಕೂಡ ಈ ಬಗ್ಗೆ ಅನೇಕ ಬಾರಿ ಕೇಳಿದ್ದೇವೆ,ಓದಿಕೊಂಡೂ ಇದ್ದೇವೆ.
ಆದರೆ ಕಾರ್ಲ್ ಯಂಗ್ ಎಂಬ ಸ್ವಿಟ್ಜರ್ಲೆಂಡಿನ ಪ್ರಖ್ಯಾತ ಮನೋವಿಜ್ಞಾನಿ ಹೇಳಿದ್ದು ಮಾತ್ರ ಸ್ವಲ್ಪ ವಿಭಿನ್ನವಾಗಿದೆ.
ಮಕ್ಕಳ ಮನಸ್ಸಿನ ಮೇಲೆ ಅತ್ಯಂತ ಪ್ರಭಾವ ಬೀರುವುದು ಅವರ ತಂದೆ-ತಾಯಿ ಬದುಕಿದ ಬದುಕಲ್ಲ ಬದಲಾಗಿ ಅವರು ಬದುಕದೇ ಉಳಿಸಿಬಿಟ್ಟ ಬದುಕು ಎಂದು ಪ್ರತಿಪಾದಿಸುತ್ತಾರೆ. ತಂದೆ-ತಾಯಿ ಅಷ್ಟೇ ಅಲ್ಲ ಅವರ ಹಿಂದಿನ ತಲೆಮಾರೂ ಇದರಲ್ಲಿ ಸೇರುತ್ತದೆ ಎನ್ನುತ್ತಾರೆ.ಹಿರಿಯರು ಮಾಡಿದ ಪಾಪ ಮಕ್ಕಳಿಗೆ ತಟ್ಟುತ್ತೆ ಅನ್ನುವದು ಇದೇ ಸೂಕ್ಷ್ಮವನ್ನು ಹೇಳುತ್ತದೆ ಅನಿಸುತ್ತದೆ ಅಲ್ಲವೇ?
ಹಾಗಂತ ಅವರು ಬದುಕದೇ ಇದ್ದ ಎಲ್ಲ ಭಾಗವೂ ಪ್ರಭಾವ ಬೀರುತ್ತದೆ ಎಂದು ಅರ್ಥವಲ್ಲ - ಬದುಕಲು ಸಾಧ್ಯವಿದ್ದ ಯಾವುದನ್ನು ಬದುಕಲಿಲ್ಲವೋ? ಬದುಕಲು ಇದ್ದ ಆ ದಾರಿಯನ್ನು ಅಲ್ಲಗಳೆದು ಕುಂಟು ನೆಪ ಹೇಳಿ ಬದುಕು ಮಾಡಲಾಗದ ಹಿರಿಯರ ಆ ಭಾಗಗಳು ಮಾತ್ರ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರುತ್ತವೆ.
ಬಡತನ,ಅನಾರೋಗ್ಯ,ಜವಾಬ್ದಾರಿ ಇವುಗಳಿಂದ ಬದುಕಲು ತೊಂದರೆ ಆದರೆ,ಸಾಧ್ಯ ಆಗದೇ ಹೋಗಿದ್ದರೆ ಆ ಭಾಗ ಬೇರೆ. ಅದನ್ನು ಮನಸ್ಸು ಕೂಡ ಶಾಂತ ರೀತಿಯಿಂದ ಸ್ಮರಿಸುತ್ತದೆ.ಬದುಕಿನುದ್ದಕ್ಕೂ ಯಾವುದರಿಂದ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದನೋ ಆ ಭಾಗ ಮಾತ್ರ ಬೇರೆ-ಅದೇ ವಿಷ ಬೀಜವನ್ನು ಬಿತ್ತುವುದು,ಬೆಳೆದು ಹೆಮ್ಮರ ಆಗುವಂತೆ ಮಾಡುವುದು.
ಬಹುತೇಕ ಈ ಓಡುವಿಕೆಗೆ ಒಂದು ಪವಿತ್ರ ಮುಖವಾಡ ಇರುತ್ತದೆ.ಆ ಮುಖವಾಡದ ಮಾತುಗಳು ನಮಗೆಲ್ಲ ಪರಿಚಿತವೇ “ನಿಮಗಾಗಿ ನಾನು ಎಲ್ಲವನ್ನೂ ಬಿಟ್ಟೆ!”, “ಇಡೀ ಸಂಸಾರವೇ ನಾನು ಹೊರಬೇಕಾಯ್ತು”, “ಜವಾಬ್ದಾರಿ ನಾನೇ ಹೊರಬೇಕಾಯ್ತು”,”ಆಗ ಪರಿಸ್ಥಿತಿ ಸರಿ ಇರಲಿಲ್ಲ” ಇತ್ಯಾದಿ,ಇತ್ಯಾದಿ.
ಈ ಮಾತುಗಳಲ್ಲಿ ಕೆಲವು ನಿಜವೇ! ಆದರೆ ಎಲ್ಲವೂ ಅಲ್ಲ! ಕೆಲವಂತೂ ತ್ಯಾಗದ ಮುಖವಾಡದಲ್ಲಿ ಮುಚ್ಚಿಟ್ಟ ಹೆದರಿಕೆಗಳೇ! ಮತ್ತು ಈ ವ್ಯತ್ಯಾಸಗಳು ದೊಡ್ಡವರಿಗಿಂತ ಚಿಕ್ಕವರಿಗೇ ಬೇಗ ಅರ್ಥ ಆಗುತ್ತವೆ.
ಈ ಗೊತ್ತಾದ ವ್ಯತ್ಯಾಸ ಸುಮ್ಮನೇ ಕೊಡುವುದಿಲ್ಲ ಅದು ಮನೆಯೊಳಗೆ ಬೇರೆಯೇ ರೂಪ ತಾಳುತ್ತದೆ.ಡಾಕ್ಟರ್ ಆಗದ ಅಪ್ಪ ಮಗನ ಅಂಕಪಟ್ಟಿಯನ್ನು ದುರ್ಗುಟ್ಟಿ ನೋಡುತ್ತಾನೆ.ಹಾಡು ಕಲಿಯಲಾಗದ ಅಮ್ಮ ಮಗಳನ್ನು ಸಂಗೀತ ಕಲಿಯಲು ದೂಡುತ್ತಾಳೆ. ಇಲ್ಲಿ ಯಾರೂ ಕೆಟ್ಟವರಲ್ಲ ಆದರೆ ಮಗುವಿನ ಹೆಗಲ ಮೇಲೆ ಇಳಿಯುತ್ತಿರುವುದು ಮಗುವಿನ ಕನಸಲ್ಲ - ಅದು ಪೂರೈಸದೇ ಉಳಿದ ಇನ್ನೊಬ್ಬರ ಬಾಕಿ.
ಈ ಬಾಕಿ ಎಂದಿಗೂ ಬಾಯಿ ಬಿಟ್ಟು ಹೇಳುವುದಿಲ್ಲ! ಒಂದು ನಿಟ್ಟುಸಿರೊ,ಒಂದು ಮೌನವೋ,ಒಂದು ಸಿಡಿಮಿಡಿಯೋ ಆಗಿ ಅದು ದಾಟುತ್ತದೆ. ಮಗು ಶಬ್ದಗಳಲ್ಲಿಯೂ ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ.ಆದರೆ ಒಳಗೊಳಗೆ ತಿಳಿಯುತ್ತಲೇ ಹೋಗುತ್ತದೆ. ಈ ಒತ್ತಡ ಯಾರದ್ದು? ನನ್ನದೋ-ನನ್ನಪ್ಪನದೋ ಎಂಬುದು ಕೊನೆಗೂ ಅರ್ಥವೇ ಆಗುವುದಿಲ್ಲ.
ಮಕ್ಕಳ ಮಾನಸಿಕ ಗೊಂದಲಗಳ ಮುಖ್ಯ ಮೂಲ ಪ್ರಾಣ ತಂದೆ-ತಾಯಿಗಳೇ ಎಂಬುದನ್ನು ತಂದೆ-ತಾಯಿ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!