ವಯಸ್ಕರಿಗೆ ಹೋಲಿಸಿದರೆ ಮಕ್ಕಳು ಮತ್ತು ಹದಿಹರೆಯದವರು ತಂಬಾಕು ಹಾಗೂ ನಿಕೋಟಿನ್ ಉತ್ಪನ್ನಗಳಿಗೆ ಆಕರ್ಷಿತರಾಗುವ ಸಾಧ್ಯತೆ ಬರೋಬ್ಬರಿ ೯ ಪಟ್ಟು ಹೆಚ್ಚಾಗಿದೆ ಎಂಬ ಆರೋಗ್ಯ ತಜ್ಞರ ಇತ್ತೀಚೆಗಿನ ಎಚ್ಚರಿಕೆ ಇಡೀ ಸಮಾಜವೇ ತಲೆತಗ್ಗಿಸುವಂತಹ ಮತ್ತು ತೀವ್ರ ಆತಂಕ ಮೂಡಿಸುವಂತಹ ಸಂಗತಿ ಮುಗ್ಧ ಮನಸ್ಸಿನ ಮಕ್ಕಳನ್ನೇ ಗುರಿಯಾಗಿಸಿಕೊಂಡು ತಂಬಾಕು ಉದ್ಯಮವು ತನ್ನ ಮಾರುಕಟ್ಟೆ ತಂತ್ರಗಳನ್ನು ರೂಪಿಸುತ್ತಿರುವುದು ಇಂದು ಬಹಿರಂಗ ಸತ್ಯ. ಆಕರ್ಷಕ ಬಣ್ಣದ ಪ್ಯಾಕೇಜಿಂಗ್, ಚಾಕೊಲೇಟ್ ಅಥವಾ ಸ್ಟ್ರಾಬೆರಿಯಂತಹ ವಿವಿಧ ಫ್ಲೇವರ್ ಗಳ ಇ-ಸಿಗರೇಟ್ ಗಳು ಮತ್ತು ಸುಲಭ ಲಭ್ಯತೆಗಳು ಮಕ್ಕಳನ್ನು ಈ ಮಾರಕ ವ್ಯಸನದತ್ತ ವ್ಯವಸ್ಥಿತವಾಗಿ ತಳ್ಳುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ, ವಿಶ್ವಾದ್ಯಂತ ೧೩ರಿಂದ ೧೫ ವರ್ಷ ವಯಸ್ಸಿನ ಕನಿಷ್ಠ ೪ ಕೋಟಿ ಮಕ್ಕಳು ಈಗಾಗಲೇ ಯಾವುದಾದರೊಂದು ರೂಪದ ತಂಬಾಕು ಉತ್ಪನ್ನಕ್ಕೆ ದಾಸರಾಗಿದ್ದಾರೆ. ಭಾರತದ 'ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ 'ಗ್ಲೋಬಲ್ ಯೂತ್ ಟೊಬ್ಯಾಕೊ ಸರ್ವ ವರದಿಯ ಪ್ರಕಾರ, ಭಾರತದಲ್ಲಿ ೧೩-೧೫ ವರ್ಷದೊಳಗಿನ ಶೇ. ೮.೫ರಷ್ಟು ವಿದ್ಯಾರ್ಥಿಗಳು ಧೂಮಪಾನ ಅಥವಾ ಜಗಿಯುವ ತಂಬಾಕನ್ನು ಬಳಸುತ್ತಿದ್ದಾರೆ. ಹೆಣ್ಣುಮಕ್ಕಳಲ್ಲಿ ಇ-ಸಿಗರೇಟ್ ಬಳಕೆ ಹೆಚ್ಚುತ್ತಿರುವುದು ಮತ್ತೊಂದು ಆತಂಕಕಾರಿ ಬೆಳವಣಿಗೆ ನಿಕೋಟಿನ್ ರಾಸಾಯನಿಕವು ರಾಸಾಯನಿಕವು ಮಕ್ಕಳ ಮೆದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸುವುದಲ್ಲದೆ, ಅವರ ಏಕಾಗ್ರತೆ ಮತ್ತು ಕಲಿಕಾ ಸಾಮರ್ಥ್ಯವನ್ನು ಶಾಶ್ವತವಾಗಿ ಕುಂದಿಸುತ್ತದೆ.
ಮಕ್ಕಳನ್ನು ಈ ವಿಷವರ್ತುಲದಿಂದ ರಕ್ಷಿಸಲು ಕೇವಲ ಮೇಲ್ನೋಟದ ಪ್ರಚಾರಗಳು ಸಾಕಾಗುವುದಿಲ್ಲ. ಇಲ್ಲಿ ಬಹುಮುಖಿ ಸವಾಲು ಎದುರಿಸಲು ಸರಕಾರ ಮತ್ತು ಸಮಾಜ ಮುಂದಾಗಬೇಕಿದೆ. ಶಾಲಾ-ಕಾಲೇಜುಗಳ ೧೦೦ ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವ 'ಕೊಟ್ಟಾ' ಕಾಯ್ದೆ ಕಾಗದದ ಮೇಲಷ್ಟೇ ಉಳಿದಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ನಿಯಮ ಉಲ್ಲಂಘಿಸುವ ಅಂಗಡಿ ಮುಂಗಟ್ಟುಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು ಮತ್ತು ಭಾರೀ ದಂಡ ವಿಧಿಸಬೇಕು. ಈ ವಿಷಯದಲ್ಲಿ ಪೊಲೀಸರು ಯಾವುದೇ ಲಾಬಿ, ಆಮಿಷಗಳಿಗೆ ಬಗ್ಗದೆ ಕಾನೂನನ್ನು ಕಠಿನವಾಗಿ ಜಾರಿಗೊಳಿಸಬೇಕು.
ಕೇವಲ ಪಠ್ಯಪುಸ್ತಕದ ಒಂದು ಪುಟಕ್ಕೆ ಜಾಗೃತಿಯನ್ನು ಸೀಮಿತಗೊಳಿಸದೆ, ಶಾಲಾ ಆಡಳಿತ ಮಂಡಳಿಗಳು ತಂಬಾಕಿನ ದುಷ್ಪರಿಣಾಮಗಳ ಕುರಿತು ಸಾಕ್ಷ್ಯಚಿತ್ರಗಳು ಮತ್ತು ಪ್ರತ್ಯಕ್ಷ ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಬೇಕು. ಇದಕ್ಕಾಗಿ ಸಮುದಾಯ ಆರೋಗ್ಯ ಕೇಂದ್ರಗಳು, ಸರಕಾರೇತರ ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳ ನೆರವು ಅಥವಾ ಸಹಭಾಗಿತ್ವ ಪಡೆಯಬಹುದಾಗಿದೆ. ಶಾಲೆಯಿಂದ ಮನೆಗೆ ಬರುವ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಗಳನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು.
ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಉತ್ಪಾದಕರು ಕೇವಲ ತಮ್ಮ ಲಾಭಾಂಶವನ್ನು ಹೆಚ್ಚಿಸಿಕೊಳ್ಳುವ ಕಡೆ ಗಮನ ಹರಿಸದೆ, ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಯನ್ನು ಮನಗಾಣಬೇಕು. ಅಪ್ರಾಪ್ತ ವಯಸ್ಕರನ್ನು ಸೆಳೆಯುವಂತಹ ಪರೋಕ್ಷ ಜಾಹೀರಾತುಗಳು ಮತ್ತು ಪ್ರಭಾವಿಗಳನ್ನು ಬಳಸಿ ಮಾಡುವ ಪ್ರಚಾರ ತಂತ್ರಗಳನ್ನು ತತ್ ಕ್ಷಣವೇ ನಿಲ್ಲಿಸಬೇಕು.
ಇಂದಿನ ಮಕ್ಕಳೇ ನಾಳಿನ ದೇಶದ ಪ್ರಜೆಗಳು ಮತ್ತು ಸದೃಢ ಭಾರತದ ನಿರ್ಮಾತೃಗಳು, ಅವರ ಆರೋಗ್ಯದ ಮೇಲೆ ಹೂಡುವ ಬಂಡವಾಳ ದೇಶದ ಭವಿಷ್ಯದ ಮೇಲಿನ ಹೂಡಿಕೆಯಾಗಿದೆ. ತಂಬಾಕು ಮುಕ್ತ ಬಾಲ್ಯವನ್ನು ನಿರ್ಮಿಸುವುದು ಕೇವಲ ಸರಕಾರದ ಕೆಲಸವಲ್ಲ; ಅದು ಪೋಷಕರು, ಶಿಕ್ಷಕರು. ನಾಗರಿಕ ಸಮಾಜ ಮತ್ತು ಉದ್ಯಮ ರಂಗ ಎಲ್ಲರೂ ಒಟ್ಟಾಗಿ ನಿರ್ವಹಿಸಬೇಕಾದ ಪವಿತ್ರ ಕರ್ತವ್ಯವಾಗಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಪೀಳಿಗೆಯ ಆರೋಗ್ಯ ತಲ್ಲಣಕ್ಕೆ ನಾವೇ ನೇರ ಹೊಣೆಗಾರರಾಗಬೇಕಾಗುತ್ತದೆ
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೨-೦೬-೨೦೨೬
ಚಿತ್ರ ಕೃಪೆ: ಇಂಡಿಯಾ ಟುಡೇ ಜಾಲತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!