ನನ್ನದೊಂದು ಥಿಯರಿ ಏನೆಂದರೆ - ಯಾರೂ ಯಾವತ್ತೂ ಬದಲಾಗುವುದಿಲ್ಲ!

ಪ್ರತಿಯೊಬ್ಬರಿಗೂ ಅವರದೇ ಆದ ಒಂದು ಮೂಲ ಸ್ವಭಾವ ಇರುತ್ತದೆ. ಅದರ ವ್ಯತ್ಯಾಸಗಳು ಸಂದರ್ಭ, ಬಾಲ್ಯದ ಬೆಳವಣಿಗೆ, ಕುಟುಂಬ, ಸುತ್ತಮುತ್ತಲಿನ ವಾತಾವರಣ ಇವುಗಳಿಂದ ವ್ಯಕ್ತವಾಗುತ್ತವೆ. ಆದರೆ ಆಮೂಲಾಗ್ರ ಬದಲಾವಣೆ ಅಸಾಧ್ಯ ಎಂಬುದು ನನ್ನ ನಂಬಿಕೆ.

ಇದಕ್ಕೆ ವಿರುದ್ಧವಾಗಿ ಎಷ್ಟೊಂದು ಕತೆಗಳನ್ನು ಜನ ಹೇಳಬಹುದು, ಎಷ್ಟೊಂದು ಉದಾಹರಣೆಗಳನ್ನು ಕೊಡಬಹುದು. ಆದರೆ ನನ್ನ ನಂಬಿಕೆ ಸ್ಥಿರವಾಗಿದೆ. ಯಾರಾದರೂ ಒಂದು ನಂಬಬಹುದಾದ ಉದಾಹರಣೆ ಕೊಟ್ಟರೆ ನಾನು ಬದಲಾಗುತ್ತೇನೆ!

ಇತಿಹಾಸ ನೋಡಿದರೆ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದ ನಂತರ ಬದಲಾದರು ಎನ್ನಲಾಗುತ್ತದೆ. ವ್ಯಾಪಾರಿಯಾಗಿದ್ದ ಜಿಪುಣ ಶೆಟ್ಟಿ ಪತ್ನಿಯ ವಿಷ್ಣುಭಕ್ತಿಯಿಂದ ಪುರಂದರ ದಾಸರಾದರು ಎನ್ನುವ ಕಥೆಯಿದೆ. “ಏನೇ ಆಗಲಿ, ನಿನ್ನ ಗುಲಾಮನಾಗುವುದಿಲ್ಲ” ಎಂದು ಹೇಳುತ್ತಿದ್ದ ನಾಯಕ ಕನಕದಾಸರಾದರು ಎನ್ನಲಾಗುತ್ತದೆ. ಕನ್ನಡ ಪುಸ್ತಕವೆಂದರೆ ಗೃಹಿಣಿಯರು ಹೊರಗಾದಾಗ ಓದುವುದಕ್ಕಷ್ಟೇ ಸೀಮಿತ ಎಂದು ಹೇಳುತ್ತಿದ್ದ ಬೀಚಿ ಮುಂದೆ ಕನ್ನಡದ ಪ್ರಮುಖ ಹಾಸ್ಯಸಾಹಿತಿಯಾದರು.

ಹೀಗೆ ಹತ್ತು ಹಲವು ಉದಾಹರಣೆಗಳನ್ನು ಕೊಡಬಹುದು.

ಮೊದಲ ಉದಾಹರಣೆಯ ವಿಚಾರಕ್ಕೆ ಹೋಗುವುದಿಲ್ಲ. ಅಶೋಕನ ಜೀವನದ ಬಗ್ಗೆ ಇತಿಹಾಸದಲ್ಲಿ ಹಲವು ಭಿನ್ನ ಅಭಿಪ್ರಾಯಗಳಿವೆ. ಅದನ್ನು ಬದಿಗಿಟ್ಟು ಉಳಿದ ಉದಾಹರಣೆಗಳನ್ನು ನೋಡಿದರೂ ನನ್ನ ವಾದಕ್ಕೆ ಅವು ವಿರುದ್ಧವಾಗಿ ಕಾಣಿಸುವುದಿಲ್ಲ.

ಪುರಂದರ ದಾಸರಾಗಲಿ, ಕನಕದಾಸರಾಗಲಿ - ತಮ್ಮ ಪೂರ್ವಾಶ್ರಮದ ಜೀವನದಲ್ಲಿ ಅವರು ತಮ್ಮದೇ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದವರು. ಆದರೆ ಮೂಲತಃ ಅವರೊಳಗೆ ಒಂದು ಬಗೆಯ ಅತೃಪ್ತಿ ಇದ್ದಿರಬಹುದು. ಯಾವಾಗ ಹರಿ ಭಕ್ತಿಯಲ್ಲಿ ಅದರ ಪರಿಹಾರ ಕಂಡುಕೊಂಡರೋ, ಆಗ ತಮ್ಮಲ್ಲಿದ್ದ ಅದೇ ಸಂಪೂರ್ಣ ಸಮರ್ಪಣೆಯನ್ನು ಭಕ್ತಿಯ ಕಡೆಗೆ ತಿರುಗಿಸಿದರು.

ಅವರು ಬದಲಾಗಲಿಲ್ಲ; ಅವರ ಬದುಕಿನ ದಿಕ್ಕು ಬದಲಾಯಿತು.

ಬೀಚಿಯವರ ವಿಚಾರವೂ ಹಾಗೆಯೇ. ಕನ್ನಡದ ಮಹಿಮೆಯನ್ನು ಅನಕೃ ಅವರ ಸಂಧ್ಯಾರಾಗ ಕೃತಿಯಿಂದ ಅರಿತುಕೊಂಡೆ ಎಂದು ಅವರೇ ಹೇಳಿಕೊಂಡಿದ್ದಾರೆ. ನಂತರ ತಮ್ಮ ವಿಡಂಬನೆಯನ್ನು ವ್ಯಕ್ತಪಡಿಸಲು ಭಾಷೆ ಕನ್ನಡವಾಯಿತು; ವಿಡಂಬನೆಯನ್ನೇ ಅವರು ಕನ್ನಡದಿಂದ ಕಲಿಯಲಿಲ್ಲ. ಎಷ್ಟೇ ಇಂಗ್ಲಿಷ್ ಓದಿದ್ದರೂ ಕನ್ನಡ ಅವರೊಳಗೇ ಇತ್ತು. ಅನಕೃ ಅವರ ಕೃತಿ ಅದನ್ನು ಹೊರಗೆ ತಂದಿತು ಅಷ್ಟೇ.

ಹಾಗಾದರೆ ಮನುಷ್ಯನಲ್ಲಿ ಬದಲಾವಣೆ ಎಂಬುದು ಏನು?

ನನ್ನ ಪ್ರಕಾರ, ಮೂಲ ಪ್ರವೃತ್ತಿ ಬದಲಾಗುವುದಕ್ಕಿಂತ ಅದರ ಅಭಿವ್ಯಕ್ತಿ ಬದಲಾಗುತ್ತದೆ.

ಒಬ್ಬನೊಳಗೆ ನಾಯಕತ್ವದ ಗುಣವಿದ್ದರೆ ಅದು ಒಂದು ಕಾಲದಲ್ಲಿ ಅಧಿಕಾರದ ರೂಪದಲ್ಲಿ ಕಾಣಬಹುದು; ಮತ್ತೊಂದು ಸಂದರ್ಭದಲ್ಲಿ ಸೇವೆಯ ರೂಪದಲ್ಲಿ ಕಾಣಬಹುದು. ಒಬ್ಬನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಗುಣವಿದ್ದರೆ ಅದು ವ್ಯಾಪಾರದಲ್ಲಿ ಕಾಣಬಹುದು, ಮತ್ತೊಂದು ಹಂತದಲ್ಲಿ ಕಲೆಯಲ್ಲಿ ಅಥವಾ ಭಕ್ತಿಯಲ್ಲಿ ಕಾಣಬಹುದು.

ಹೊರಗಿನಿಂದ ನೋಡಿದವರಿಗೆ ಮಾತ್ರ “ಅವನು ಸಂಪೂರ್ಣ ಬದಲಾಗಿದ್ದಾನೆ” ಎಂದು ಕಾಣುತ್ತದೆ.

ಮನುಷ್ಯನ ಮೂಲ ಸ್ವಭಾವದ ಮೇಲೆ ಅವನ ಬೆಳೆದು ಬಂದ ವಾತಾವರಣ, ತಂದೆ-ತಾಯಿ, ಸಂಬಂಧಿಕರು, ಶಿಕ್ಷಣ ಮತ್ತು ಸಂಸ್ಕಾರಗಳು ಹಲವು ಪದರಗಳನ್ನು ಕಟ್ಟುತ್ತವೆ. ಮದುವೆಯಾದಾಗ ಸಂಗಾತಿಯ ಜೊತೆಗಿನ ಬದುಕಿನಲ್ಲಿ ಆ ಪದರಗಳ ಕೆಲವು ಕಳಚಬಹುದು; ಒಳಗೆ ಇದ್ದ ಕೆಲವು ಗುಣಗಳು ಹೊರಗೆ ಬರಬಹುದು. ಮತ್ತೊಂದು ಕೆಲವು ಗುಣಗಳು ಒತ್ತಡಕ್ಕೆ ಒಳಗಾಗಬಹುದು.

ಆಗ ಇತ್ತ ಹೆತ್ತವರಿಗೆ “ನಮ್ಮ ಮಗ ಬದಲಾಗಿಬಿಟ್ಟ” ಎಂದು ಅನಿಸುತ್ತದೆ. ಅತ್ತ ಕೈ ಹಿಡಿದವರಿಗೆ “ಮದುವೆಗೆ ಮುಂಚೆ ನೀನು ಹೀಗಿರಲಿಲ್ಲ” ಎಂದು ಅನಿಸುತ್ತದೆ.

ಬದಲಾವಣೆ ಬಹುಶಃ ವ್ಯಕ್ತಿತ್ವದ ಪುನರ್‌ನಿರ್ಮಾಣವಲ್ಲ; ವ್ಯಕ್ತಿತ್ವದ ಅನಾವರಣ.

ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಎಂದು ಆಶ್ಚರ್ಯವಾಗಬಹುದು.

ಕಾರಣ ಸರಳ.

ಮನುಷ್ಯನನ್ನು ಬದಲಿಸಲು ಪ್ರಯತ್ನಿಸುವುದಕ್ಕಿಂತ, ಅವನೊಳಗಿರುವುದನ್ನು ಹೊರತರಲು ಪ್ರಯತ್ನಿಸುವುದು ಹೆಚ್ಚು ಫಲಪ್ರದ.

ಅದರರ್ಥ “ಮನುಷ್ಯ ಬದಲಾಗುವುದಿಲ್ಲ, ಆದ್ದರಿಂದ ಹಾಗೆಯೇ ಬಿಟ್ಟುಬಿಡಿ” ಎಂದಲ್ಲ.

ಬದಲಾಗಿ - ಅವನ ಮೂಲ ಪ್ರವೃತ್ತಿ ಏನು ಎಂದು ತಿಳಿದುಕೊಳ್ಳಿ. ಅದನ್ನು ಸರಿಯಾದ ದಿಕ್ಕಿಗೆ ಕೊಂಡೊಯ್ಯಲು ಬೇಕಾದ ವಾತಾವರಣವನ್ನು ಕೊಡಿ. ಅವನಲ್ಲಿರುವ ಶಕ್ತಿಗೆ ತಕ್ಕ ಅವಕಾಶವನ್ನು ಕೊಡಿ.

ವಿಶೇಷವಾಗಿ ಮಕ್ಕಳ ವಿಷಯದಲ್ಲಿ ಇದು ಬಹಳ ಮುಖ್ಯ.

ಮಕ್ಕಳನ್ನು ಹೊಡೆದು, ಬಡಿದು, ಗದರಿಸಿ ನಮ್ಮ ದಾರಿಗೆ ತರುವ ಬದಲು ಅವರ ಮೂಲ ಗುಣವೇನು ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದರೆ ಹೇಗೆ?

ಯಾರೋ ಮಾತನಾಡುವುದರಲ್ಲಿ ಚೆನ್ನಾಗಿರುತ್ತಾರೆ. ಯಾರೋ ಒಂಟಿಯಾಗಿ ಕುಳಿತು ಆಲೋಚಿಸುವುದರಲ್ಲಿ. ಯಾರಿಗೋ ನಾಯಕತ್ವ ಇಷ್ಟ. ಮತ್ತೊಬ್ಬರಿಗೆ ಕೈಯಲ್ಲಿ ಏನನ್ನಾದರೂ ಸೃಷ್ಟಿಸುವುದರಲ್ಲಿ ಸಂತೋಷ. ಒಬ್ಬರಿಗೆ ಸ್ಪರ್ಧೆ ಬೇಕು; ಮತ್ತೊಬ್ಬರಿಗೆ ಸ್ವಾತಂತ್ರ್ಯ.

ಪ್ರತಿಯೊಬ್ಬರನ್ನೂ ಒಂದೇ ಅಚ್ಚಿನಲ್ಲಿ ಹಾಕಿ “ನಾನು ಹೇಳಿದ ಹಾಗೆ ಆಗು” ಎನ್ನುವುದಕ್ಕಿಂತ, “ನಿನ್ನೊಳಗಿರುವುದು ಏನು? ಅದನ್ನು ಅರಿತು ನೀನು ಒಂದು ಸಾರ್ಥಕ ಬದುಕು ಕಟ್ಟಿಕೊಳ್ಳಲು ನಾನು ಏನು ಮಾಡಬಹುದು?” ಎಂದು ಕೇಳುವುದು ಬಹುಶಃ ಉತ್ತಮ ಪೋಷಕತ್ವ.

ಹಾಗೆ ಮಾಡಿದರೆ ಮುಂದೆ ಒಂದು ದಿನ,

“ಅಯ್ಯೋ, ನನ್ನ ಸಂತಾನ ಬದಲಾಗಿಬಿಟ್ಟಿದೆ. ಈಗ ನನ್ನ ಮಾತೇ ಕೇಳುವುದಿಲ್ಲ”

ಎಂಬ ವಿಷಾದವೂ ಇರದು.

ಬದಲಾಗಿ,

“ಅವನೊಳಗೆ ಏನಿತ್ತೋ ಅದನ್ನು ಅವನು ಕಂಡುಕೊಂಡ. ಅದನ್ನು ಬೆಳೆಸಲು ನಾನು ಸಾಧ್ಯವಾದಷ್ಟು ಸಹಾಯ ಮಾಡಿದೆ.”

ಎಂಬ ಸಂತೋಷ ಇರಬಹುದು.

ನಿಮಗೆನ್ನಿಸುತ್ತದೆ? ಕಾಮೆಂಟ್ ಮಾಡಿ ಇಲ್ಲವೇ ಅರಳಿಕಟ್ಟೆಗೆ ಬನ್ನಿ ಅಲ್ಲಿ ಸಂವಾದ ಮಾಡೋಣ! ಸಂವಾದದಿಂದ ನಾನೂ ಬದಲಾಗಬಹುದು, ಯಾರಿಗೆ ಗೊತ್ತು!