ನನ್ನ ಅಜ್ಜಿ ಮನೆ ಶಿವಮೊಗ್ಗ. ನಾನು ಶಿವಮೊಗ್ಗದ ಸುತ್ತ ಮುತ್ತಲಿನ ಸ್ಥಳಗಳನ್ನು ತಕ್ಕ ಮಟ್ಟಿಗೆ ಸುತ್ತುತ್ತಿರುತ್ತೇನೆ

ನನ್ನ ಕಾರಿನಲ್ಲಿ ರಾತ್ರಿವೇಳೆ ಪ್ರಯಾಣ ಮಾಡುವಾಗ ಮಲೆನಾಡಿನ ದಟ್ಟ ಅರಣ್ಯದ ಮದ್ಯೆ ಸಿಗುವ ಸಣ್ಣ ಸಣ್ಣ ಹಳ್ಳಿಗಳು ನನನಲ್ಲಿ ಹಲವಾರು ಭಾವನೆಗಳನ್ನು ಮೂಡಿಸುತ್ತವೆ

ದೂರದಲ್ಲಿ ಅಲ್ಲೊಂದು ಇಲ್ಲೊಂದು ಮನೆಯಿಂದ ಬರುವ ದೀಪದ ಬೆಳಕು. ಸುತ್ತಲು ಕಗ್ಗತ್ತಲು ಹಾಗೂ ನೀರವ ಮೌನದ ನಡುವೆ ಕ್ರಿಮಿ ಕೀಟಗಳ ಸದ್ದು .ಊರಿನ ಅಂಚಲ್ಲಿ ಒಂದು ಸಣ್ಣ ಕಿರಾಣಿ ಅಂಗಡಿ ಹಾಗೂ ಅಲ್ಲಿ ಕೂತಿರುವ ನಾಲ್ಕೈದು ಜನ. ಹೊರ ಜಗತ್ತಿನ ಸಂಪರ್ಕವೇ ಇಲ್ಲವೆನೋ ಅನ್ನುವಂತಿರುವ ಊರು. ಅಲ್ಲಿಯ ಬಸ್ ಸ್ಟಾಪ್ ಕೂಡ ಕಾಡಿನ ಮಧ್ಯೆ ಒಂದು ಸಣ್ಣ ಹಂಚಿನ ಗೂಡು. ಅದರ ಮೇಲೇ ಪೊದೆ ಬೆಳೆದಿರುತ್ತದೆ… ಹಾಗೂ ಬಸ್ ಸ್ಟಾಪ್ ನ ಸುತ್ತ ಮುತ್ತಲು ಒಂದು ನರ ಪಿಳ್ಳೆ ಇರುವುದಿಲ್ಲ.

ಈ ರೀತಿಯ ಊರನ್ನು ಹಾದು ಹೋಗುವಾಗ ನನ್ನಲ್ಲಿ ನಾನಾ ಪ್ರಶ್ನೆಗಳು ಹಾಗೂ ಮನಸಿನಲ್ಲಿ ಒಂದು ರೀತಿಯ ಭಯ. ಜನ ಇಲ್ಲಿ ಹೇಗೆ ಬದುಕುತ್ತಾರೋ.. ಧೋ ಎಂದು ಮಳೆ ಸುರಿದರೆ ಏನು ಗತಿ…. ಈ ರೀತಿ ಒಂಟಿ ಮನೆಯಲ್ಲಿ ಕಾಡಿನ ನಡುವೆ ಹೇಗೆ ಇರುತ್ತಾರೆ ಅನ್ನುವ ಯೋಚನೆ . ಈ ಪುಟ್ಟ ಊರಲ್ಲಿ ಜನರ ದಿನಚರಿ ಏನು… ಅವರ ಕೆಲ್ಸ ಮುಗಿದ ನಂತರ ಹೇಗೆ ಸಮಯ ಕಳೆಯುತ್ತಾರೆ.. ಅಲ್ಲಿಯ ಜನರಿಗೆ ಪ್ರಪಂಚದಿಂದ ಬೇರ್ಪಟ್ಟಿರುವ ಭಾವನೆ ಮೂಡುತ್ತದೆಯೇ?